ಚಿತ್ರವಿಮರ್ಶೆ | ‘ಮರ್ಕ್ಯೂರಿ’ಯ ಕಾಲ್ಪನಿಕ ಭಾರಕ್ಕೆ ನಲುಗುವ ಪ್ರೇಕ್ಷಕ

ಕಾರ್ತಿಕ್ ಸುಬ್ಬರಾಜ್‌ ನಿರ್ದೇಶನದ ಸೈಲೆಂಟ್‌ ಥ್ರಿಲ್ಲರ್‌ ಸಿನಿಮಾ ‘ಮರ್ಕ್ಯೂರಿ.’ ಭಯದ ಥ್ರಿಲ್‌ ಅರಸಿ ಹೊರಟವರಿಗೆ ಪ್ರಯೋಗಶೀಲತೆ ಹಾಗೂ ಸಂದೇಶಗಳ ಹೆಸರಿನಲ್ಲಿ ‘ಮರ್ಕ್ಯೂರಿ’ ಭಯ ಹುಟ್ಟಿಸುತ್ತದೆ. ಮುಕ್ತ ಮನಸ್ಸಿನಿಂದ ನೋಡುವವರಿಗೆ ಈ ‘ಭಯ’ ಸಹನೀಯ ಆಗಬಹುದೇನೋ

‘ಝಾಂಬಿ (Zombie) ಹಾರರ್’ ಶೈಲಿಯ ಸಿನಿಮಾಗಳ ಟ್ರೆಂಡ್‌ ಹಾಲಿವುಡ್‌ನಲ್ಲಿ ಬಹಳ ಕಾಲದಿಂದಲೂ ಇದೆ. ಸತ್ತ ದೇಹಗಳು ತಮ್ಮ ನ್ಯೂನತೆಗಳೊಟ್ಟಿಗೇ ನಡೆದಾಡುವ, ಮೃಗೀಯ ಗುಣಗಳಿಂದ ವಿಧವಿಧವಾಗಿ ಕಾಡುತ್ತ ಹೆದರಿಕೆ ಹುಟ್ಟಿಸುವ ಹಾರರ್ ಶೈಲಿ ಇದು. ಕೆಲ ವರ್ಷಗಳ ಹಿಂದೆ ತೆರೆಗೆ ಬಂದ ಬ್ರಾಡ್‌ ಪಿಟ್‌ ಅಭಿನಯದ ‘World War Z’, ಇತ್ತೀಚಿನ ವರ್ಷಗಳಲ್ಲಿ ಈ ಶೈಲಿಯಲ್ಲಿ ಗಮನಸೆಳೆದ ಸಿನಿಮಾ. ಅದೇ ರೀತಿ, ‘ಮ್ಯೂಟೆಂಟ್‌ ಹಾರರ್‌’ ಸಿನಿಮಾಗಳ ಶೈಲಿ ಮತ್ತೊಂದು ಬಗೆಯದು. ಇಲ್ಲಿ ಮನುಷ್ಯರು ವಿವಿಧ ಕಾರಣಗಳಿಂದಾಗಿ ವೈಕಲ್ಯಗಳಿಗೆ ತುತ್ತಾಗಿ, ಭ್ರಮಿತರಾಗಿ, ಮೃಗೀಯವಾಗಿ ವರ್ತಿಸುತ್ತಾರೆ. ‘Hills Have Eyes‌’ ಸರಣಿ ಚಿತ್ರಗಳನ್ನು ಈ ಮಾದರಿಯಲ್ಲಿ ನೆನೆಯಬಹುದು. ಅಣು ವಿಕಿರಣ ಸೋರಿಕೆಯಿಂದ ವಿವಿಧ ರೀತಿಯ ಮಾನಸಿಕ, ದೈಹಿಕ ವೈಕಲ್ಯಗಳು, ಕುರೂಪಗಳಿಗೆ ತುತ್ತಾದ ಜನರಿರುವ ಪ್ರದೇಶದಲ್ಲಿ ಸಾಮಾನ್ಯ ನಾಗರಿಕರು ಸಿಲುಕಿದಾಗ ಉಂಟಾಗುವ ಭಯಾನಕ ಅನುಭವಗಳ ಹೂರಣ ಈ ಚಿತ್ರಗಳಲ್ಲಿ ಕಂಡುಬರುತ್ತದೆ. ಕಾರ್ತಿಕ್‌ ಸುಬ್ಬರಾಜ್‌ ನಿರ್ದೇಶನದ ‘ಮರ್ಕ್ಯೂರಿ’ ಈ ಎರಡೂ ಶೈಲಿಗಳನ್ನು ಭಾರತೀಯ ಸಾಂಪ್ರದಾಯಿಕ ಹಾರರ್‌ ಶೈಲಿಗೆ ಒಗ್ಗಿಸಲು ಪ್ರಯತ್ನಿಸಿರುವ ‘ಭಯಾನಕ’ ಚಿತ್ರ! ಈ ಚಿತ್ರವನ್ನು ಭಾರತೀಯ ಚಿತ್ರರಂಗದಲ್ಲಿ ಮೂಡಿಬಂದ ಯಶಸ್ವಿ ಮೂಕಿ ಚಿತ್ರ ‘ಪುಷ್ಪಕ ವಿಮಾನ’ದೊಟ್ಟಿಗೆ ಹೋಲಿಸಿ, ಪುಷ್ಪಕ ವಿಮಾನದ ನಂತರ ಭಾರತೀಯ ಚಿತ್ರರಂಗದಲ್ಲಿ ಮೂಡಿದ ಮಾತಿಲ್ಲದ ಚಿತ್ರವೆನ್ನಲಾಗಿದೆ. ಬಹುಶಃ ಈ ಹೋಲಿಕೆಯನ್ನು ಯಶಸ್ವಿ ಮಾರ್ಕೆಟಿಂಗ್‌ ತಂತ್ರ ಎಂದು ಮೆಚ್ಚಬಹುದು; ಆದರೆ, ಹೋಲಿಕೆ ಅಲ್ಲಿಗೇ ನಿಲ್ಲುತ್ತದೆ.

ಚಿತ್ರದಲ್ಲಿ ಮಾತಿಲ್ಲವಾದರೂ, ಮಾತನ್ನು ಮೀರುವ ಹಾಗೂ ಹಾರರ್ ಸಿನಿಮಾಗಳು ಬೇಡುವ ಹಿನ್ನೆಲೆ ಸಂಗೀತವಿದೆ. ಮೇಲಾಗಿ ಚಿತ್ರಕತೆಯೇ ಕಿವುಡುತನಕ್ಕೆ ತುತ್ತಾದ ನಾಲ್ವರು ಯುವಕ, ಓರ್ವ ಯುವತಿಯನ್ನೊಳಗೊಂಡ ಗೆಳೆಯರ ಗುಂಪು ಮತ್ತು ಕಣ್ಣು ಕಾಣದ ಓರ್ವ ಅಂಧನ ಸುತ್ತ ಸುತ್ತುವಂಥದ್ದು. ಹುಡುಗಾಟಿಕೆಯ ನಡುವೆಯೇ ಸಂಭವಿಸುವ ಅವಘಡ, ಏನೆಲ್ಲ ಭಯಾನಕ ತಿರುವು ಪಡೆಯುತ್ತ ಸಾಗುತ್ತದೆ ಎನ್ನುವುದು ಕತೆ. ಕಿವುಡುತನವಿರುವ ಈ ಐವರು ಗೆಳೆಯರ ತಂಡವು ಗಿರಿಧಾಮದಲ್ಲಿನ ಮುಚ್ಚಿಹೋದ ವಿಷಕಾರಿ ಕೈಗಾರಿಕೆಯೊಂದರಲ್ಲಿ ಸಿಲುಕಿದ್ದು ಏಕೆ? ಹುಡುಗಾಟಿಕೆಯ ಅಚಾತುರ್ಯ ಅವರನ್ನು ‘ಸಾವಿನ ಕೈಗಾರಿಕೆ’ಗೆ ಒಯ್ದ ನಂತರ ಸೃಷ್ಟಿಯಾಗುವ ಭಯಾನಕ ಸನ್ನಿವೇಶಗಳೇನು? ಅವರನ್ನು ಭಯಕ್ಕೆ ದೂಡಿದವರಾರು? ಇದೆಲ್ಲವನ್ನೂ ಎದುರಿಸುವಲ್ಲಿ ಅವರು ಸಫಲರಾಗುತ್ತಾರೆಯೇ? ಎನ್ನುವ ಅಂಶಗಳ ಸುತ್ತ ಚಿತ್ರ ಸಾಗುತ್ತದೆ. ಈ ಪ್ರಯೋಗಗಳೊಟ್ಟಿಗೇ ಕತೆಗೆ ಹಿನ್ನೆಲೆಯಾಗಿ ‘ವಿಷಕಾರಿ ಪಾದರಸ’ದಿಂದ ಜಗತ್ತಿನೆಲ್ಲೆಡೆ ಸಂಭವಿಸಿರುವ ಅವಘಡಗಳನ್ನು, ಇಲ್ಲಿನ ಪ್ರಮುಖ ಪಾತ್ರಧಾರಿಗಳೂ ಅಂತಹದ್ದೇ ವಿಪತ್ತಿಗೆ ತುತ್ತಾದವರು ಎನ್ನುವುದೊಂದು ಎಳೆಯನ್ನೂ ಇರಿಸಿಕೊಂಡು ಚಿತ್ರವನ್ನು ಕಟ್ಟಲು ಹೋಗಿರುವ ನಿರ್ದೇಶಕರ ಅತಿಯಾದ ಉತ್ಸಾಹ ಪ್ರೇಕ್ಷಕರ ಪಾಲಿಗೆ ‘ಭಯಾನಕ ಸಂದೇಶ’ದ ಚಿತ್ರವೊಂದನ್ನು ನೋಡಿದ ಅನುಭವ ಮೂಡಿಸುತ್ತದೆ! ಚಿತ್ರವನ್ನು ಅತ್ತ ಹಾರರ್‌ ಥ್ರಿಲ್ಲರ್‌ ಅಗಿಯೂ ಕಟ್ಟದೆ, ಇತ್ತ ಚಿತ್ರದ ಮೂಲಕ ಗಂಭೀರ ಸಂದೇಶವನ್ನೂ ನೀಡದೆ, ಮಾತುಗಳಿಲ್ಲದ ಮೌನದ ಲಾಭ ಪಡೆದು ಒಂದೇ ಚಿತ್ರದಲ್ಲಿ ಎಷ್ಟೆಲ್ಲವನ್ನೂ ಹೇಳಿದ್ದೇನೆ ಎಂದು ನಿರ್ದೇಶಕರು ಬೀಗಬಹುದೇನೋ; ಆದರೆ, ತಬ್ಬಿಬ್ಬಾಗುವುದು ಮಾತ್ರ ಪ್ರೇಕ್ಷಕನೇ.

ಅಭಿನಯದ ವಿಚಾರದಲ್ಲಿ ಯುವಪಡೆಯಾಗಿ ಅನೀಶ್‌ ಪದ್ಮನಾಭನ್‌, ದೀಪಕ್‌ ಪರಮೇಶ್‌, ಸನತ್‌ ರೆಡ್ಡಿ, ಶಶಾಂಕ್‌ ಪುರುಷೋತ್ತಮ್‌ ಹಾಗೂ ಇಂದೂಜ ಅವರ ನಟನೆ ಚಿತ್ರದ ಜೀವಾಳ. ಆದರೆ, ಚಿತ್ರದ ಆರಂಭದಲ್ಲಿ ಸಂಜ್ಞಾಭಾಷೆಯ ಸುತ್ತಲೇ ಗಿರಕಿ ಹೊಡೆಯುವ ಗೆಳೆಯರ ನಡುವಿನ ‘ಮಾತುಕತೆ’ಗಳು ಪ್ರೇಕ್ಷಕರ ಸಹನೆಯನ್ನು ಬೇಡುತ್ತವೆ. ಇನ್ನು, ಚಿತ್ರದ ಮತ್ತೊಂದು ಪ್ರಮುಖ ಪಾತ್ರಕ್ಕೆ ಪ್ರಭುದೇವ ಅವರೇ ಏಕಾಗಬೇಕಿತ್ತು ಎನ್ನುವುದಕ್ಕೆ ಪ್ರೇಕ್ಷಕನಿಗೆ ಉತ್ತರ ಸಿಗುವ ಸಾಧ್ಯತೆ ಕಡಿಮೆ. ಅದೇನಿದ್ದರೂ ಮಾರುಕಟ್ಟೆಯ ವಿಚಾರವೆಂದು ಹೇಳಬಹುದು. ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ ಹೀಗೆ ಎಲ್ಲ ಭಾಷೆಯ ಪ್ರೇಕ್ಷಕರಿಗೂ ಚಿರಪರಿಚಿತವಾದ ಮುಖವೊಂದನ್ನು ಇರಿಸಿಕೊಂಡು ಬಹುಭಾಷಾ ಪ್ರೇಕ್ಷಕರನ್ನು ತಟ್ಟುವ ವಾಣಿಜ್ಯ ಉದ್ದೇಶ ಇದ್ದಿರಬಹುದು. ಆದರೆ, ‘ಡಾನ್ಸ್‌‌ ಮ್ಯೂಸಿಕಲ್’‌ ಅಲ್ಲದ ಹಾರರ್‌ ಚಿತ್ರವೊಂದರಲ್ಲಿ ಪ್ರಭುದೇವ ಅವರಿಂದ ಏನು ನಿರೀಕ್ಷಿಸಬಹುದು ಎನ್ನುವ ಅರಿವಿಟ್ಟುಕೊಂಡು ಪ್ರೇಕ್ಷಕ ಚಿತ್ರಮಂದಿರ ಪ್ರವೇಶಿಸುವುದು ಉತ್ತಮ. ಅಷ್ಟರಮಟ್ಟಿಗಂತೂ ಪ್ರಭುದೇವ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಪ್ರಯತ್ನಿಸಿದ್ದಾರೆ.

ಇದನ್ನೂ ಓದಿ : 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ; ಶ್ರೀದೇವಿ, ರಿದ್ಧಿ ಸೇನ್‌ ಶ್ರೇಷ್ಠ ನಟಿ-ನಟ

ತಾಂತ್ರಿಕತೆಯ ವಿಷಯಕ್ಕೆ ಬರುವುದಾದರೆ, ಹಾರರ್‌ ಶೈಲಿ ಸಿನಿಮಾಗಳು ಬೇಡುವ ‘ಕಂಪಿಸುವ ಮೌನ ಹಾಗೂ ದಿಗಿಲು ಹುಟ್ಟಿಸುವ ಸದ್ದು’ಗಳ ಮಿಶ್ರಣವಾಗಬೇಕಿದ್ದ ಹಿನ್ನೆಲೆ ಸಂಗೀತ ಇಲ್ಲಿ ಕೆಲವೆಡೆ ಗಮನ ಸೆಳೆದರೆ, ಹಲವೆಡೆ ಹಳಿ ತಪ್ಪಿ ಕರ್ಕಶವಾಗುತ್ತದೆ (ಹಿನ್ನೆಲೆ ಸಂಗೀತ: ಸಂತೋಷ್‌ ನಾರಾಯಣನ್‌, ಧ್ವನಿ ವಿನ್ಯಾಸ: ಕುನಾಲ್‌ ರಾಜನ್). ಎಸ್ ತಿರು ಛಾಯಾಗ್ರಹಣ ನಿರ್ದೇಶಕರ ಅಣತಿಗೆ ಸೀಮಿತವಾಗಿದೆ ಎನಿಸುತ್ತದೆ. ಒಳಾಂಗಣ ಚಿತ್ರೀಕರಣವೇ ಹೆಚ್ಚಿರುವ ಸವಾಲನ್ನು ಸಮರ್ಥವಾಗಿ ಎದುರಿಸಿದ್ದಾರೆ ಎನ್ನಲು ಅಡ್ಡಿಯಿಲ್ಲ. ಆದರೆ, ಹಾರರ್ ಸಿನಿಮಾಗಳು ಮತ್ತಷ್ಟು ಕ್ಯಾಮೆರಾ ಕೈಚಳಕ ಬೇಡುತ್ತವೆ ಎನಿಸದೆ ಇರದು. ಸಮಸ್ಯೆ ಇರುವುದು ಚಿತ್ರಕತೆಯಲ್ಲಿ ಹಾಗೂ ಅದನ್ನು ಕಟ್ಟಿಕೊಡಲು ಮುಂದಾಗುವ ನಿರ್ದೇಶಕರಲ್ಲಿ. ಅತ್ತ ದೇಸೀ ಪ್ರೇತಾತ್ಮವೂ ಆಗದೆ, ಇತ್ತ ವಿದೇಶಿ ಝಾಂಬಿಯೂ ಆಗದೆ ನಿರ್ದೇಶಕರ ಅನುಕೂಲ, ಕಲ್ಪನೆಗೆ ತಕ್ಕಂತೆ ಬದಲಾಗುವ ಪ್ರಭುದೇವರ ಪಾತ್ರ ಮೌನದಲ್ಲಿಯೇ ಸೊರಗುತ್ತದೆ. ಪಾತ್ರದ ಚೀರಾಟಕ್ಕೆ ನಿರ್ದೇಶಕರ ಮೇಲಿನ ಕೋಪವೂ ಕಾರಣವಿರಬಹುದೇ ಎನಿಸದೆ ಇರಬಹುದು. ಚಿತ್ರಕತೆಯಲ್ಲಿನ ಇಂಥ ಅನುಕೂಲಕರ ಬದಲಾವಣೆಗಳನ್ನು ಹೊಸತನವೆನ್ನಲಾಗದು. ಭಯದ ಥ್ರಿಲ್‌ ಅರಸಿ ಹೊರಟ ಪ್ರೇಕ್ಷಕರಿಗೆ ಪ್ರಯೋಗಶೀಲತೆ ಹಾಗೂ ಸಂದೇಶಗಳ ಹೆಸರಿನಲ್ಲಿ ‘ಮರ್ಕ್ಯೂರಿ’ ಭಯ ಹುಟ್ಟಿಸುತ್ತದೆ. ಮುಕ್ತ ಮನಸ್ಸಿನಿಂದ ನೋಡುವವರಿಗೆ ಈ ‘ಭಯ’ ಹೆಚ್ಚು ಸಹನೀಯವಾಗಬಹುದೇನೋ.

ನಿರ್ದೇಶನ: ಕಾರ್ತಿಕ್ ಸುಬ್ಬರಾಜ್‌ ನಿರ್ಮಾಣ: ಕಾರ್ತಿಕೇಯನ್ ಸಂತಾನಂ ಸಂಗೀತ: ಸಂತೋಷ್ ನಾರಾಯಣನ್‌ ಛಾಯಾಗ್ರಹಣ: ಎಸ್‌ ತಿರು ತಾರಾಗಣ: ಪ್ರಭುದೇವ, ಸನಂತ್‌ ರೆಡ್ಡಿ, ದೀಪಕ್ ಪರಮೇಶ್‌, ಶಶಾಂಕ್ ಪುರುಷೋತ್ತಮ್‌, ಅನೀಶ್ ಪದ್ಮನಾಭನ್‌, ಇಂದೂಜಾ ಮತ್ತಿತರರು.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More