65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ; ಕನ್ನಡ ನಾಡಿಗೆ ಮೂರು ಗೌರವ

ಅರವತ್ತೈದನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಕನ್ನಡ ನಾಡಿಗೆ ಮೂರು ಪುರಸ್ಕಾರಗಳು ಲಭಿಸಿವೆ. ಅತ್ಯುತ್ತಮ ಪ್ರಾದೇಶಿಕ ಚಿತ್ರ ವಿಭಾಗದಲ್ಲಿ ‘ಹೆಬ್ಬೆಟ್‌ ರಾಮಕ್ಕ’ ಕನ್ನಡ ಚಿತ್ರ ಮತ್ತು ‘ಪಡ್ಡಾಯಿ’ ತುಳು ಚಿತ್ರ ಹಾಗೂ ಅತ್ಯುತ್ತಮ ಗೀತಸಾಹಿತ್ಯಕ್ಕೆ ‘22 ಮಾರ್ಚ್’ ಸಿನಿಮಾ ಗೌರವಕ್ಕೆ ಪಾತ್ರವಾಗಿವೆ

ಪ್ರತಿಷ್ಠಿತ 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಶುಕ್ರವಾರ ಪ್ರಕಟಿಸಿದ್ದು, ಈ ಬಾರಿ ಕನ್ನಡಕ್ಕೆ ಮೂರು ಪುರಸ್ಕಾರಗಳು ಲಭಿಸಿವೆ. ಎನ್ ಆರ್ ನಂಜುಂಡೇಗೌಡ ನಿರ್ದೇಶನದ 'ಹೆಬ್ಬೆಟ್‌ ರಾಮಕ್ಕ' ಅತ್ಯುತ್ತಮ ಪ್ರಾದೇಶಿಕ ಭಾಷಾ ಸಿನಿಮಾ ವಿಭಾಗದಲ್ಲಿ ಪ್ರಶಸ್ತಿಗೆ ಪಾತ್ರವಾಗಿದೆ. ಅನಕ್ಷರಸ್ತ ದಿಟ್ಟ ಮಹಿಳೆಯೊಬ್ಬರ ಕತೆಯಿದು. ಪ್ರಜಾಪ್ರಭುತ್ವದಲ್ಲಿ ಮಹಿಳಾ ರಾಜಕಾರಣಿಗಳ ಅಗತ್ಯತೆ, ಮಹಿಳಾ ಮೀಸಲಾತಿ, ಗ್ರಾಮೀಣ ಭಾಗದ ರಾಜಕಾರಣದ ಚಿತ್ರಣವನ್ನು ತೆಳು ಹಾಸ್ಯ, ವಿಡಂಬನೆಯೊಂದಿಗೆ ಚಿತ್ರದಲ್ಲಿ ನಿರ್ದೇಶಕರು ನಿರೂಪಿಸಿದ್ದಾರೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟಿ ತಾರಾ ಚಿತ್ರದ ಶೀರ್ಷಿಕೆ ಪಾತ್ರ ನಿರ್ವಹಿಸಿದ್ದಾರೆ. ದೇವರಾಜ್‌, ನಾಗರಾಜಮೂರ್ತಿ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

"ಇದು ನನ್ನ ವೃತ್ತಿ ಬದುಕಿನ ಪ್ರಮುಖ ಪಾತ್ರಗಳಲ್ಲೊಂದು. ಗಟ್ಟಿಯಾದ ಕತೆ ಇತ್ತಾದ್ದರಿಂದ ಪ್ರಶಸ್ತಿ ಸಿಗಬಹುದು ಎನ್ನುವ ನಿರೀಕ್ಷೆ ಇತ್ತು. ಮಹಿಳಾ ಸಬಲೀಕರಣದ ಬಗ್ಗೆ ಚರ್ಚಿಸುವ ಇಂತಹ ಸಿನಿಮಾಗಳು ಹೆಚ್ಚು ಜನರಿಗೆ ತಲುಪುವಂತಾಗಬೇಕು. ರಾಜಕೀಯದಲ್ಲಿನ ನನ್ನ ಅನುಭವಗಳೂ ಚಿತ್ರದ ನಟನೆಗೆ ನೆರವಾಗಿದ್ದು ಹೌದು. ಇದೊಂದು ಬ್ರಿಡ್ಜ್ ಸಿನಿಮಾ. ಪ್ರಶಸ್ತಿ ತುಂಬಾ ಖುಷಿ ಕೊಟ್ಟಿದೆ,” ಎನ್ನುತ್ತಾರೆ ಚಿತ್ರದ ನಟಿ ತಾರಾ.

ಅಭಯ್‌ ಸಿಂಹ ನಿರ್ದೇಶನದಲ್ಲಿ ತಯಾರಾಗಿರುವ ‘ಪಡ್ಡಾಯಿ’ ತುಳು ಸಿನಿಮಾಗೂ ಪ್ರಾದೇಶಿಕ ಚಿತ್ರ ವಿಭಾಗದಲ್ಲಿ ಗೌರವ ಲಭಿಸಿದೆ. ಮೀನುಗಾರ ಕುಟುಂಬವೊಂದರ ಕತೆಯ ಹಿನ್ನೆಲೆಯೊಂದಿಗೆ ಅವರ ವೃತ್ತಿಬದುಕಿನ ಏರಿಳಿತ, ತಲ್ಲಣಗಳು ಚಿತ್ರದಲ್ಲಿ ಅನಾವರಣಗೊಳ್ಳುತ್ತವೆ. ಗೀತಸಾಹಿತ್ಯ ವಿಭಾಗದಲ್ಲಿ ಕನ್ನಡಕ್ಕೆ ರಾಷ್ಟ್ರಪ್ರಶಸ್ತಿ ಸಿಕ್ಕಿರುವುದು ಈ ಬಾರಿಯ ವಿಶೇಷ. ಕೋಡ್ಲು ರಾಮಕೃಷ್ಣ ನಿರ್ದೇಶನದ 'ಮಾರ್ಚ್ 22' ಕನ್ನಡ ಚಿತ್ರದ ‘ಮುತ್ತುರತ್ನದ ಪ್ಯಾಟೆ’ ಗೀತಸಾಹಿತ್ಯಕ್ಕೆ ಪ್ರಶಸ್ತಿ ಲಭಿಸಿದೆ. ಪ್ರಹ್ಲಾದ್ ರಚಿಸಿರುವ ಈ ಗೀತೆಗೆ ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸಿದ್ದಾರೆ.

ಇದನ್ನೂ ಓದಿ : 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ; ಶ್ರೀದೇವಿ, ರಿದ್ಧಿ ಸೇನ್‌ ಶ್ರೇಷ್ಠ ನಟಿ-ನಟ

ಉತ್ತಮ ಗೀತಸಾಹಿತ್ಯಕ್ಕೆರಾಷ್ಟ್ರಪ್ರಶಸ್ತಿ ಪಡೆದ ‘ಮಾರ್ಚ್‌ 22’ ಚಿತ್ರದ ‘ಮುತ್ತುರತ್ನದ ಪ್ಯಾಟೆ ಛಿದ್ರವಾಗಿದೆ ಕೋಟೆ’ ವಿಡಿಯೋ ಹಾಡು

‘ಹೆಬ್ಬೆಟ್‌ ರಾಮಕ್ಕ’ ಚಿತ್ರದ ಹಾಡುಗಳು

‘ಪಡ್ಡಾಯಿ’ ತುಳು ಚಿತ್ರದ ವಿಡಿಯೋ ಹಾಡು

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More