ನುಡಿನಮನ | ಬೆಳ್ಳಿತೆರೆ ಮೇಲೆ ಬಾಬಾ ಸಾಹೇಬರ ಬದುಕು, ವ್ಯಕ್ತಿತ್ವ, ಸಾಧನೆ

ಭಾರತೀಯ ಬೆಳ್ಳಿತೆರೆಯಲ್ಲಿ ಅಂಬೇಡ್ಕರ್‌ ಅವರ ಬದುಕು, ವ್ಯಕ್ತಿತ್ವ, ಸಾಧನೆಯ ಚಿತ್ರಣದ ಹಲವು ಸಿನಿಮಾ ಬಂದಿವೆ. ಅಂಬೇಡ್ಕರ್, ರಮಾಬಾಯಿ ವ್ಯಕ್ತಿಚಿತ್ರಗಳ ಪ್ರಯೋಗಗಳ ಜೊತೆಗೆ ಅವರ ಆಶಯಗಳನ್ನು ದಾಟಿಸುವ ಚಿತ್ರಗಳನ್ನೂ ನೋಡಬಹುದು. ಈ ಕುರಿತ ಕುತೂಹಲಕಾರಿ ಮಾಹಿತಿ ಇಲ್ಲಿದೆ

ರಂಗಕರ್ಮಿ, ಚಿತ್ರನಿರ್ದೇಶಕ ಜಬ್ಬಾರ್ ಪಟೇಲ್ ನಿರ್ದೇಶನದಲ್ಲಿ ತಯಾರಾಗಿರುವ ‘ಡಾ.ಬಾಬಾಸಾಹೇಬ್ ಅಂಬೇಡ್ಕರ್‌’ (2000) ಮಹತ್ವದ ಸಿನಿಮಾ. ದೊಡ್ಡ ಪ್ರಮಾಣದಲ್ಲಿ ತಯಾರಾಗಿದ್ದ ಈ ಇಂಗ್ಲಿಷ್ ಭಾಷೆಯ ಸಿನಿಮಾ, ಭಾರತದ ಒಂಬತ್ತು ಪ್ರಾದೇಶಿಕ ಭಾಷೆಗಳಿಗೆ ಡಬ್ ಅಗಿತ್ತು. ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಪರಿಶ್ರಮದ ಬಗೆಗಿನ ವಿಚಾರಕ್ಕೆ ಚಿತ್ರದಲ್ಲಿ ಹೆಚ್ಚಿನ ಒತ್ತು ನೀಡಲಾಗಿತ್ತು. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಮತ್ತು ಮಹಾರಾಷ್ಟ್ರ ಸರ್ಕಾರ ಚಿತ್ರನಿರ್ಮಾಣಕ್ಕೆ ಧನಸಹಾಯ ಒದಗಿಸಿದ್ದವು. ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ಖ್ಯಾತ ಮಲಯಾಳಂ ನಟ ಮುಮ್ಮೂಟಿ ಅಭಿನಯಿಸಿದ್ದರು. ಅತ್ಯುತ್ತಮ ಪ್ರಾದೇಶಿಕ ಭಾಷಾ ವಿಭಾಗದಲ್ಲಿ ಹಾಗೂ ಕಲಾನಿರ್ದೇಶನಕ್ಕಾಗಿ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿಗಳು ಒಲಿದಿದ್ದವು. ಅತ್ಯುತ್ತಮ ಅಭಿನಯಕ್ಕಾಗಿ ಮುಮ್ಮೂಟಿ ರಾಷ್ಟ್ರಪ್ರಶಸ್ತಿಗೆ ಭಾಜನರಾಗಿದ್ದರು. ರಮಾಬಾಯಿ ಪಾತ್ರದಲ್ಲಿ ನಟಿಸಿದ್ದ ಸೋನಾಲಿ ಕುಲಕರ್ಣಿ ವಿಮರ್ಶಕರ ಮೆಚ್ಚುಗೆಗೆ ಪಾತ್ರರಾಗಿದ್ದರು.

‘ಡಾ.ಬಾಬಾಸಾಹೇಬ್ ಅಂಬೇಡ್ಕರ್‌’ (2000) ಇಂಗ್ಲಿಷ್ ಚಿತ್ರದಲ್ಲಿ ಮುಮ್ಮೂಟಿ

ಜಬ್ಬಾರ್ ಪಟೇಲ್‌ ನಿರ್ದೇಶನದ ‘ಡಾ ಬಾಬಾಸಾಹೇಬ್ ಅಂಬೇಡ್ಕರ್‌’ ಸಂಶೋಧನೆ ನಡೆಸಿ ಮಾಡಿದ್ದ ಮಹತ್ವದ ಸಿನಿಮಾ. ಬಿಗಿಯಾದ ನಿರೂಪಣೆ ಇತ್ತು. ಪೂನಾ ಒಪ್ಪಂದದ ಬಗ್ಗೆ ಹಾಗೂ ಗಾಂಧಿ ಏಕೆ ಅಂಬೇಡ್ಕರ್ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ವಿಫಲರಾಗಿದ್ದರು ಎನ್ನುವುದು ಮನವರಿಕೆಯಾಗಿದ್ದು ಈ ಚಿತ್ರ ನೋಡಿದ ನಂತರವೇ. ಬಯೋಗ್ರಫಿಗಳನ್ನು ತೆರೆಗೆ ಅಳವಡಿಸುವ ನಿರ್ದೇಶಕರಿಗೆ ಈ ಸಿನಿಮಾ ಒಂದು ಶ್ರೇಷ್ಠ ಮಾದರಿ.
- ಕೆ ಪುಟ್ಟಸ್ವಾಮಿ, ಲೇಖಕರು

ಯುಗಪುರುಷ್‌ ಡಾ.ಬಿ ಅರ್ ಅಂಬೇಡ್ಕರ್‌: ಶಶಿಕಾಂತ್ ನಲವಾಡೆ ನಿರ್ದೇಶನದಲ್ಲಿ ತಯಾರಾಗಿದ್ದ ಈ ಮರಾಠಿ ಸಿನಿಮಾ 1993ರಲ್ಲಿ ತೆರೆಕಂಡಿತ್ತು. ಧನಂಜಯ್ ಕೀರ್‌ ರಚಿಸಿದ್ದ ಅಂಬೇಡ್ಕರ್ ಬಯೋಗ್ರಫಿ ಆಧರಿಸಿ ತಯಾರಾಗಿದ್ದ ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ಪ್ರೇಮ್‌ಲತಾ ಮಸ್ಟೇಕರ್‌ ಅಭಿನಯಿಸಿದ್ದರು.

ಇನ್ನು, ಪ್ರಕಾಶ್ ಜಾಧವ್ ನಿರ್ಮಾಣ, ನಿರ್ದೇಶನದಲ್ಲಿ ತಯಾರಾದ ‘ರಮಾಬಾಯಿ ಭೀಮರಾವ್ ಅಂಬೇಡ್ಕರ್‌’ ಮರಾಠಿ ಸಿನಿಮಾ ರಮಾಬಾಯಿ ಕುರಿತ ಒಳ್ಳೆಯ ಚಿತ್ರಣವಾಗಿ ಗಮನ ಸೆಳೆದ ಪ್ರಯೋಗ. ಅಂಬೇಡ್ಕರ್ ಸಾಧನೆಗೆ ಬೆನ್ನೆಲುಬಾಗಿ ನಿಂತು, ಮಹಿಳೆಯರಿಗೆ ಸ್ಫೂರ್ತಿಯಾದ ರಮಾಬಾಯಿ ಅವರ ಬಗೆಗಿನ ಒಂದೊಳ್ಳೆಯ ಸಿನಿಮಾ. ನಿಶಾ ಪರುಲೇಕರ್‌ ಶೀರ್ಷಿಕೆ ಪಾತ್ರ ನಿರ್ವಹಿಸಿದ್ದರು.

ಯಾವುದೇ ಒಂದು ಸಾಮಾಜಿಕ-ರಾಜಕೀಯ ವಸ್ತು ಪ್ರಭಾವಶಾಲಿಯಾಗಿ ತೆರೆ ಮೇಲೆ ಮೂಡಬೇಕೆಂದರೆ ನಿರ್ದೇಶಕರ ಬದ್ಧತೆ ಗಣನೆಗೆ ಬರುತ್ತದೆ. ಅವರು ಎಷ್ಟು ರಿಸ್ಕ್ ತೆಗೆದುಕೊಳ್ಳೋದಕ್ಕೆ ಸಿದ್ಧರಿದ್ದಾರೆ ಎನ್ನುವುದೂ ಮುಖ್ಯವಾಗುತ್ತದೆ. ‘ಡಾ ಬಾಬಾಸಾಹೇಬ್ ಅಂಬೇಡ್ಕರ್‌’ ನನಗೆ ತುಂಬಾ ಇಷ್ಟವಾಗಿತ್ತು. ಶೀರ್ಷಿಕೆ ಪಾತ್ರ ನಿರ್ವಹಿಸಿದ್ದ ಮುಮ್ಮೂಟಿಯವರು ಆ ಪಾತ್ರವನ್ನು ಜೀವಿಸಿದ್ದರು. ಈಗ ಅಂಬೇಡ್ಕರ್‌ರಿಂದ ಪ್ರಭಾವಿತರಾಗಿರುವ ಯುವ ನಿರ್ದೇಶಕರು ರೂಪಿಸುತ್ತಿರುವ ಸಿನಿಮಾಗಳು ಗಮನ ಸೆಳೆಯುತ್ತಿವೆ.
- ಬಿ ಎಂ ಗುರುರಾಜ್‌, ಚಿತ್ರನಿರ್ದೇಶಕ
ಇದನ್ನೂ ಓದಿ : 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ; ಶ್ರೀದೇವಿ, ರಿದ್ಧಿ ಸೇನ್‌ ಶ್ರೇಷ್ಠ ನಟಿ-ನಟ

ಭೀಮ್ ಘರ್ಜನಾ: ವಿಜಯ್ ಪವಾರ್ ನಿರ್ದೇಶನದಲ್ಲಿ ತಯಾರಾದ ‘ಭೀಮ್ ಘರ್ಜನಾ’ (1990) ಮರಾಠಿ ಸಿನಿಮಾ, ತೊಂಬತ್ತರ ದಶಕದ ಆರಂಭದಲ್ಲಿ ಗಮನ ಸೆಳೆದ ಪ್ರಯೋಗ. ಕೃಷ್ಣಾನಂದ್ ಮತ್ತು ಪ್ರಥಮಾ ದೇವಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು. 2016ರಲ್ಲಿ ತೆರೆಗೆ ಬಂದ ‘ಬೋಲೆ ಇಂಡಿಯಾ ಜೈ ಭೀಮ್‌’ ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ತಯಾರಾಗಿತ್ತು. ಚಿತ್ರದಲ್ಲಿ ಅಂಬೇಡ್ಕರ್ ಅವರ ಅನುಯಾಯಿ ಹರಿದಾಸ್‌ ಲಕ್ಷ್ಮಣ್ ರಾವ್‌ ನಗ್ರಾಲೆ ಅವರ ಮೇಲೆ ಬೆಳಕು ಚೆಲ್ಲಿದ್ದರು. ಸುಭೋದ್‌ ನಾಗ್‌ದೇವ್ ನಿರ್ದೇಶನದ ಚಿತ್ರದಲ್ಲಿ ಶ್ಯಾಂ ಭೀಮ್‌ಸರಿಯಾ ಅವರು ಅಂಬೇಡ್ಕರ್ ಪಾತ್ರ ನಿರ್ವಹಿಸಿದ್ದರು. ಎರಡೂವರೆ ಗಂಟೆಗಳ ಅವಧಿಯ ಚಿತ್ರದಲ್ಲಿ ಅಂಬೇಡ್ಕರ್‌ ಚಳವಳಿಗಳ ಬಗ್ಗೆ ಹೆಚ್ಚಿನ ಪ್ರಸ್ತಾಪವಿತ್ತು.

ಎಂ ರಂಗನಾಥ್ ನಿರ್ದೇಶನದ ‘ರಮಾಬಾಯಿ’ (2016)

ಬಾಲಕ ಅಂಬೇಡ್ಕರ್‌: ಅಂಬೇಡ್ಕರ್ ಕುರಿತಂತೆ ಕನ್ನಡದಲ್ಲಿ ಮೂರು ಚಿತ್ರಗಳು ತಯಾರಾಗಿವೆ. ಬಸವರಾಜ್ ಕೆಸ್ತೂರ್ ನಿರ್ದೇಶನದಲ್ಲಿ ತಯಾರಾಗಿದ್ದ ‘ಬಾಲಕ ಅಂಬೇಡ್ಕರ್‌’ (1991) ಚಿತ್ರದಲ್ಲಿ ಅಂಬೇಡ್ಕರ್ ಬಾಲ್ಯದ ಚಿತ್ರಣವಿತ್ತು. ಬಾಲಕ ಅಂಬೇಡ್ಕರ್ ಪಾತ್ರದಲ್ಲಿ ವಿಜಯ್ ನಟಿಸಿದ್ದ ಚಿತ್ರವನ್ನು ಹಿಂದಿಗೂ ಡಬ್ ಮಾಡಿದ್ದರು. ಶರಣ್‌ ಕಬ್ಬೂರು ನಿರ್ದೇಶನದಲ್ಲಿ ತಯಾರಾಗಿದ್ದ ‘ಡಾ ಬಿ ಆರ್ ಅಂಬೇಡ್ಕರ್‌’ (2005) ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ಬಿ ಜೆ ವಿಷ್ಣುಕಾಂತ್‌ ಅಭಿನಯಿಸಿದ್ದರು. ಕತೆ, ಚಿತ್ರಕತೆ ಮತ್ತು ನಿರ್ಮಾಣವೂ ಅವರದೇ. ತಾರಾ ಮತ್ತು ಭವ್ಯ ಪ್ರಮುಖ ಪಾತ್ರಗಳಲ್ಲಿದ್ದರು. ಅತ್ಯುತ್ತಮ ಚಿತ್ರ ರಾಜ್ಯಪ್ರಶಸ್ತಿ ಮತ್ತು ವಿಶೇಷ ಜ್ಯೂರಿ ಗೌರವಕ್ಕೆ ಈ ಸಿನಿಮಾ ಪಾತ್ರವಾಗಿತ್ತು. ಎಂ ರಂಗನಾಥ್ ನಿರ್ದೇಶನದಲ್ಲಿ ತಯಾರಾಗಿದ್ದ ‘ರಮಾಬಾಯಿ’ (2016) ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ಯಜ್ಞಾ ಶೆಟ್ಟಿ ನಟಿಸಿದ್ದರು. ಸಿದ್ದರಾಮ ಕಾರ್ಣಿಕ್ ಅವರು‌ ಅಂಬೇಡ್ಕರ್ ಪಾತ್ರ ನಿರ್ವಹಿಸಿದ್ದ ಚಿತ್ರಕ್ಕೆ ಕೆ ಕಲ್ಯಾಣ್ ಸಂಗೀತ ಸಂಯೋಜಿಸಿದ್ದರು.

ವಿಡಿಯೋ ಸಾಂಗ್‌ | ಶಿವ ರಾಜಕುಮಾರ್‌ ‘ಟಗರು’ ಶೀರ್ಷಿಕೆ ಹಾಡು ಬಿಡುಗಡೆ
ಟೀಸರ್‌ | ಸಂಜಯ್‌ ದತ್ ಬಯೋಪಿಕ್‌ ‘ಸಂಜು’ ಪಾತ್ರದಲ್ಲಿ ಮಿಂಚಿದ ರಣಬೀರ್
ರಾಜ್‌ ಜನುಮದಿನ | ರಾಜಕುಮಾರ್‌ ಕುಳಿತ ಎಮ್ಮೆಗೆ ಡಿಮಾಂಡ್ ಬಂತು!
Editor’s Pick More