“ಇದು ಕನ್ನಡ ಭಾಷೆಯಲ್ಲಿ ತಯಾರಾಗುತ್ತಿರುವ ಚಿತ್ರವಾದರೂ ಯೂನಿವರ್ಸಲ್ ಸಬ್ಜೆಕ್ಟ್. ಜಾಗತಿಕರಣದ ದಿನಗಳಲ್ಲಿ ಮಾನವೀಯ ಸಂಬಂಧಗಳು ತೆಳುವಾಗುತ್ತಿರುವ ಸಂದರ್ಭದಲ್ಲಿ ನಮ್ಮ ಚಿತ್ರವ ಕಥಾವಸ್ತು ಪ್ರಸ್ತುತವೆನಿಸುತ್ತದೆ. ನಮಗೇ ಅರಿವಿಲ್ಲದಂತೆ ಮಾಡುವ ತಪ್ಪುಗಳು ಎಂತಹ ಅನಾಹುತ ಸೃಷ್ಟಿಸುತ್ತವೆ ಎನ್ನುವುದನ್ನು ಇಲ್ಲಿ ಹೇಳುತ್ತಿದ್ದೇವೆ,” ಎನ್ನುತ್ತಾರೆ ‘ಕೆಲವು ದಿನಗಳ ನಂತರ’ ಚಿತ್ರದ ನಿರ್ದೇಶಕ ಶ್ರೀನಿ. ಚಿತ್ರದ ಕಥಾವಸ್ತವನ್ನು ಸ್ಥೂಲವಾಗಿ ಪರಿಚಯಿಸುವ ಅವರು ನಿರ್ದಿಷ್ಟವಾಗಿ ‘ಮನುಷ್ಯರು ಮಾಡುವ ಆ ತಪ್ಪುಗಳೇನು?’ ಎನ್ನುವ ಗುಟ್ಟನ್ನು ಬಿಟ್ಟುಕೊಡುವುದಿಲ್ಲ. “ಈ ಸಂಗತಿಗಳ ಬಗ್ಗೆ ಹೇಳುವಂತಿಲ್ಲ. ಈ ಗುಟ್ಟು ಬಿಟ್ಟುಕೊಟ್ಟರೆ ಚಿತ್ರದ ಥೀಮ್ ಬಿಟ್ಟುಕೊಟ್ಟಂತೆ. ಸಿನಿಮಾ ನೋಡಿದಾಗ ಪ್ರೇಕ್ಷಕರು ಕೂಡ ಈ ಕಾನ್ಸೆಪ್ಟ್ಗೆ ತಲೆದೂಗಲಿದ್ದಾರೆ,” ಎಂದು ಚಿತ್ರದ ಬಗ್ಗೆ ವಿಶ್ವಾಸದಿಂದ ಮಾತನಾಡುತ್ತಾರವರು.
ವಿಶೇಷವೆಂದರೆ, ಚಿತ್ರಕ್ಕಾಗಿ ಆರು ತಿಂಗಳ ತ್ರೀಡಿ ಹೆಣ್ಣುಮಗುವನ್ನು ಸೃಷ್ಟಿಸಿದ್ದಾರೆ. ಟ್ರೈಲರ್ನಲ್ಲಿ ಕಾಣಿಸುವ ಥ್ರೀಡಿ ಮಗು ಕಂಪ್ಯೂಟರ್ ಗ್ರಾಫಿಕ್ಸ್ ಎನಿಸದೆ ಸಹಜವಾಗಿ ಕಾಣಿಸುತ್ತದೆ. “ಚಿತ್ರದ ವಿಶೇಷ ಪಾತ್ರ ಈ ತ್ರೀಡಿ ಮಗು. ಗ್ರಾಫಿಕ್ ಸೃಷ್ಟಿಗೂ ಕಾರಣವಿದೆ. ಚಿತ್ರಕತೆ ಹೇಗಿದೆ ಅಂದರೆ, ಅರು ತಿಂಗಳ ಮಗು ವಯಸ್ಸಿಗೆ ಮೀರಿದ ಭಾವನೆಗಳನ್ನು ವ್ಯಕ್ತಪಡಿಸಬೇಕಿದೆ. ಹಾಗಾಗಿ ಸಹಜವಾಗಿ ಕಾಣಿಸುವಂತೆ ತ್ರೀಡಿ ಮಗು ಸೃಷ್ಟಿಸಿದ್ದೇವೆ. ಇಂತಹ ಹಲವು ಅಚ್ಚರಿಗಳು ಚಿತ್ರದಲ್ಲಿವೆ,” ಎನ್ನುತ್ತಾರೆ ನಿರ್ದೇಶಕ ಶ್ರೀನಿ. ನಟಿ ಶುಭಾ ಪೂಂಜಾ ಚಿತ್ರದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಪಾತ್ರ ನಿರ್ವಹಿಸುತ್ತಿದ್ದಾರೆ. ಸಿಗರೇಟು ಸೇದುವ ಹುಡುಗಿಯಾಗಿ ಅವರಿಗಿಲ್ಲಿ ಬೋಲ್ಡ್ ಪಾತ್ರವಿದೆಯಂತೆ. ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಲೋಕೇಶ್, ಶೋ ನಿರ್ದೇಶಕ ಶರಣಯ್ಯ, ‘ಮಜಾ ಟಾಕೀಸ್’ ಖ್ಯಾತಿಯ ಪವನ್ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿದ್ದಾರೆ. ‘ಹೋಮ್ಸ್ಟೇ’, ‘ರಿಕ್ತ’ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಶ್ರೀನಿ ಅವರ ಚೊಚ್ಚಲ ನಿರ್ದೇಶನದ ಚಿತ್ರವಿದು. ಮುರಲೀಧರ್ ಮತ್ತು ನವೀನ್ ಛಾಯಾಗ್ರಹಣ ಮಾಡಿದ್ದಾರೆ. ಸಸ್ಪೆನ್ಸ್ ಮಾದರಿಯಾದ್ದರಿಂದ ಹಿನ್ನೆಲೆ ಸಂಗೀತಕ್ಕೆ ಹೆಚ್ಚು ಸ್ಕೋಪ್ ಇದೆ. ಬಕ್ಕೇಶ್ ಮತ್ತು ವಿಜಯ್ ಈ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಮುತ್ತುರಾಜ್, ವಸಂತಕುಮಾರ್ ನಿರ್ಮಾಣದ ಚಿತ್ರ ಮೇ ತಿಂಗಳಲ್ಲಿ ಸಿನಿಮಾ ತೆರೆಕಾಣಲಿದೆ.