ಕಾಸ್ಟಿಂಗ್‌ ಕೌಚ್‌; ಹೆಸರು ಬಹಿರಂಗಪಡಿಸಿ ಸಂಚಲನ ಸೃಷ್ಟಿಸಿದ ನಟಿ ಶ್ರೀರೆಡ್ಡಿ

ಟಾಲಿವುಡ್‌ನಲ್ಲಿ ಕಾಸ್ಟಿಂಗ್ ಕೌಚ್ ಬಲವಾಗಿ ಬೇರುಬಿಟ್ಟಿದೆ ಎಂದು ದೂರಿದ್ದ ಶ್ರೀರೆಡ್ಡಿ, ಒಂದೊಂದೇ ಹೆಸರು ಬಹಿರಂಗಪಡಿಸುತ್ತಿದ್ದಾರೆ. ನಾಲ್ವರ ಹೆಸರುಗಳು ಬಹಿರಂಗವಾಗಿದ್ದು, ಇನ್ನೂ ಕೆಲವರು ಪಟ್ಟಿಯಲ್ಲಿದ್ದಾರೆ ಎಂದಿದ್ದಾರವರು. ನಿರ್ದೇಶಕ ವರ್ಮಾ ಆಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ

ಹೈದರಾಬಾದ್‌ನಲ್ಲಿ ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಅರೆನಗ್ನ ಪ್ರತಿಭಟನೆ ನಡೆಸಿ ಸುದ್ದಿಯಾಗಿದ್ದ ಶ್ರೀರೆಡ್ಡಿ, ಈಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಕಾಸ್ಟಿಂಗ್ ಕೌಚ್‌ ಬಗ್ಗೆ ಪ್ರಸ್ತಾಪಿಸಿದ್ದ ನಟಿಯನ್ನು ಉದ್ಯಮ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆಕೆ ನಟ ರಾಣಾ ದಗ್ಗುಬಾಟಿ ಸಹೋದರ ಅಭಿರಾಮ್‌ ಜೊತೆಗಿನ ತಮ್ಮ ಫೋಟೋ ಬಿಡುಗಡೆಗೊಳಿಸುತ್ತಿದ್ದಂತೆ ಟಾಲಿವುಡ್‌ ಬೆಚ್ಚಿತು. ಇದಾದ ಮರುದಿನವೇ ಆಕೆ ಚಿತ್ರಸಾಹಿತಿ ಕೋನಾ ವೆಂಕಟ್‌ ಅವರು ತಮಗೆ ಕಳುಹಿಸಿದ್ದ ವಾಟ್ಸ್‌ ಆಪ್‌ ಸಂದೇಶಗಳನ್ನು ರಿಲೀಸ್‌ ಮಾಡಿದರು. ಇದೀಗ ಅವರು ಯುವಗಾಯಕ ಶ್ರೀರಾಮ್‌ ಮತ್ತು ಯೂಟ್ಯೂಬ್‌ ಸ್ಟಾರ್ ಎಂದೇ ಕರೆಸಿಕೊಳ್ಳುವ ವೈವಾ ಹರ್ಷ ವಿರುದ್ಧ ಕಾಸ್ಟಿಂಗ್ ಕೌಚ್ ಆರೋಪ ಮಾಡಿದ್ದಾರೆ.

"ಗಾಯಕ ಶ್ರೀರಾಮ್‌ ನೋಡಲು ಅಮಾಯಕನಿದ್ದಂತಿದ್ದಾರೆ. ಪ್ರತಿಭಾವಂತ ಗಾಯಕನನ್ನು ಎಲ್ಲರೂ ಇಂಡಿಯನ್ ಐಡಾಲ್‌ಗೆ ಆಯ್ಕೆ ಮಾಡಿದರು. ಆದರೆ ಶ್ರೀರಾಮ್‌ ಕೂಡ ಅದೇ ಚಾಳಿಯವನು,” ಎಂದಿರುವ ಶ್ರೀರೆಡ್ಡಿ, ಯೂಟ್ಯೂಬ್‌ ಸ್ಟಾರ್‌ ವೈವಾ ಹರ್ಷರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. "ಸಿನಿಮಾಗಳಲ್ಲಿ ನಟಿಸುವ ನಾವು ಕಿರುಚಿತ್ರಗಳಲ್ಲಿ ನಟಿಸಬಾರದು ಎಂದೇನಿಲ್ಲ. ಕಲಿಯುವುದಕ್ಕೆ ಯಾವ ಮಾಧ್ಯಮವಾದರೇನು? ಆದರೆ, ಆ ಕ್ಷೇತ್ರದಲ್ಲೂ ಕಾಸ್ಟಿಂಗ್ ಕೌಚ್‌ ಇರುವುದು ವಿಪರ್ಯಾಸ,” ಎಂದು ಹರ್ಷ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ. ನಟಿಯ ಈ ನಡಾವಳಿಗಳಿಂದ ಇರುಸುಮುರುಸು ಅನುಭವಿಸಿದ್ದ ಟಾಲಿವುಡ್, ತೆಲುಗು ಕಲಾವಿದರ ಸಂಘದಿಂದ ಆಕೆಯನ್ನು ನಿಷೇಧಿಸಿತ್ತು. ಚಿತ್ರಗಳಲ್ಲಿ ಆಕೆಗೆ ಅವಕಾಶ ನೀಡದಂತೆ ನಿರ್ಮಾಪಕರಿಗೆ ಮನವಿ ಮಾಡಲಾಗಿತ್ತು. ಕೊನೆಗೆ ಉದ್ಯಮದ ಹಿರಿಯರ ಸಲಹೆ ಮೇರೆಗೆ ಆಕೆಯ ಮೇಲಿನ ನಿಷೇಧ ತೆರವುಗೊಳಿಸಲಾಗಿದೆ.

ಇದನ್ನೂ ಓದಿ : ಟ್ರೈಲರ್‌ | ಕುತೂಹಲಕಾರಿ ಸಸ್ಪೆನ್ಸ್ ಕಾಮಿಡಿ ಸಿನಿಮಾ ‘ಕೆಲವು ದಿನಗಳ ನಂತರ’

ವರ್ಮಾ ಬೆಂಬಲ: ಕಾಸ್ಟಿಂಗ್ ಕೌಚ್‌ ಬಗ್ಗೆ ದಿಟ್ಟತನದಿಂದ ಮಾತನಾಡುತ್ತಿರುವ ತಮ್ಮ ನೆರವಿಗೆ ದೊಡ್ಡ ಹೀರೋಗಳು ಬರಬೇಕು ಎಂದು ಶ್ರೀರೆಡ್ಡಿ ಮನವಿ ಮಾಡಿದ್ದರು. ನಿರ್ಧಿಷ್ಟವಾಗಿ ಆಕೆ ನಟ, ರಾಜಕಾರಣಿಯೂ ಆಗಿರುವ ಪವನ್‌ ಕಲ್ಯಾಣ್‌ ಸಹಾಯ ಕೋರಿದ್ದರು. ಅವರಿಂದ ಇಲ್ಲಿಯವರೆಗೆ ಶ್ರೀರೆಡ್ಡಿ ಮನವಿಗೆ ಯಾವುದೇ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಆದರೆ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ನಟಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ‘ಚಿತ್ರರಂಗದಲ್ಲಿನ ಸಮಸ್ಯೆ ಬಗ್ಗೆ ಶ್ರೀರೆಡ್ಡಿ ಪ್ರಸ್ತಾಪಿಸಿದ್ದು, ಯುವನಟಿಯರನ್ನು ಎಚ್ಚರಿಸಿದ್ದಾರೆ. ತಮ್ಮ ಪುತ್ರಿ ಬಗ್ಗೆ ಶ್ರೀರೆಡ್ಡಿ ತಾಯಿ ಹೆಮ್ಮೆ ಪಡಬೇಕು. ಆಕೆಯೀಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ತೆಲುಗು ಸ್ಟಾರ್ ಪವನ್ ಕಲ್ಯಾಣ್‌ ಬಗ್ಗೆ ಗೊತ್ತಿರದ ಜನರು ಈಗ ಶ್ರೀರೆಡ್ಡಿ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ವರ್ಮಾ ಟ್ವೀಟ್ ಮಾಡಿದ್ದಾರೆ. ಆದರೆ ಈ ಟ್ವೀಟ್‌ ಪ್ರಾಮಾಣಿಕವೋ, ಕುಹಕದ್ದೋ ಎನ್ನುವ ಗೊಂದಲವಂತೂ ಇದೆ. ಕಾಸ್ಟಿಂಗ್‌ ಕೌಚ್‌ಗೆ ಸಂಬಂಧಿಸಿದಂತೆ ಇನ್ನೂ ತಮ್ಮ ಬತ್ತಳಿಕೆಯಲ್ಲಿ ಕೆಲವು ಹೆಸರುಗಳಿವೆ ಎಂದಿದ್ದಾರೆ ಶ್ರೀರೆಡ್ಡಿ. ಟಾಲಿವುಡ್ ಆಕೆಯ ಮುಂದಿನ ನಡೆಗಳನ್ನು ಕುತೂಹಲದಿಂದ ಎದುರುನೋಡುತ್ತಿದೆ.

ಸಂಜನಾ ಮನದ ಮಾತು | ‘ಸ್ವರ್ಣಖಡ್ಗಂ’ಗೆ ಜೀವನವನ್ನೇ ಮುಡಿಪಾಗಿಟ್ಟಿದ್ದೇನೆ
ವಿಡಿಯೋ ಸಾಂಗ್ | ‘ಟಗರು’ ಐವತ್ತು ದಿನದ ಸಂಭ್ರಮಕ್ಕೆ ‘ಯಾರೇ ನೀ ಚತುರೆ’
ಟ್ರೈಲರ್‌ | ತೆರೆಗೆ ಸಿದ್ಧವಾದ ‘ಜುರಾಸಿಕ್‌ ವರ್ಲ್ಡ್‌; ದಿ ಫಾಲನ್‌ ಕಿಂಗ್‌ಡಮ್‌’
Editor’s Pick More