ರಾಜೇಶ್‌ ಮನದ ಮಾತು | ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸಿದ ಅದೃಷ್ಟವಂತ ನಾನು

ಕನ್ನಡದ ಹಿರಿಯ ನಟ ರಾಜೇಶ್‌ ಇಂದು (ಏ.15) 85ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಸದಭಿರುಚಿಯ ಚಿತ್ರಗಳ ನಾಯಕನಟ, ಪೋಷಕ ಕಲಾವಿದನಾಗಿ ಅವರದು ಚಿತ್ರರಂಗದೊಂದಿಗೆ ಐದು ದಶಕಗಳಿಗೂ ಮೀರಿದ ಒಡನಾಟ. ಅವರೊಂದಿಗಿನ ‘ದಿ ಸ್ಟೇಟ್‌’ನ ಮಾತುಕತೆ ಇಲ್ಲಿದೆ

ಕನ್ನಡ ಸಿನಿಪ್ರೇಮಿಗಳು ನಟ ರಾಜೇಶ್ ಅವರನ್ನು ಪ್ರೀತಿಯಿಂದ ‘ಕಲಾ ತಪಸ್ವಿ’ ಎಂದು ಕರೆಯುತ್ತಾರೆ. ಅಂತೆಯೇ ರಾಜೇಶ್ ಅವರು ಕೂಡ ಅಭಿನಯ ಕಲೆಯನ್ನು ತಪಸ್ಸು ಎಂದೇ ಭಾವಿಸಿದವರು. ವೃತ್ತಿಬದುಕಿನ ಆರಂಭದಿಂದಲೂ ರಂಗಭೂಮಿ, ಸಿನಿಮಾ ಬಗ್ಗೆ ಪೂಜ್ಯ ಭಾವನೆ ಹೊಂದಿದ್ದರು. ನಟನೆ ಬಗ್ಗೆ ಅಪಾರ ಆಸ್ಥೆ ಇದ್ದ ಅವರು ಮನೆಯಲ್ಲಿ ಕಾಲೇಜಿಗೆ ಹೋಗುವುದಾಗಿ ಹೇಳಿ ನಾಟಕಗಳ ತಾಲೀಮಿಗೆ ಹಾಜರಾಗುತ್ತಿದ್ದರಂತೆ. ರಂಗಭೂಮಿ ನಂಟು ಅವರನ್ನು ಚಿತ್ರರಂಗಕ್ಕೆ ಕರೆತಂದಿತು. ಹುಣಸೂರು ಕೃಷ್ಣಮೂರ್ತಿಯವರು ತಮ್ಮ ‘ವೀರ ಸಂಕಲ್ಪ’ (1964) ಚಿತ್ರದಲ್ಲಿ ರಾಜೇಶ್‌ ಅವರನ್ನು ಬೆಳ್ಳಿತೆರೆಗೆ ಪರಿಚಯಿಸಿದರು. ಮೂರು ಪುಟ್ಟ ಪಾತ್ರಗಳ ನಂತರ ‘ನಮ್ಮ ಊರು’ (1968) ಚಿತ್ರದೊಂದಿಗೆ ನಾಯಕನಟನಾದರು. ಈ ಚಿತ್ರದ ಯಶಸ್ಸು ಚಿತ್ರರಂಗದಲ್ಲಿ ಅವರಿಗೆ ಉತ್ತಮ ಸ್ಥಾನ ಕಲ್ಪಿಸಿತು. ಮುಂದೆ ನಾಯಕನಟ, ವೈವಿಧ್ಯಮಯ ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾದರು. 130ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಶಿಸ್ತಿನ ನಟ ಎಂದೇ ಕರೆಸಿಕೊಳ್ಳುವ ರಾಜೇಶ್‌ ಸರಳ, ಸಜ್ಜನಿಕೆಯಿಂದಲೂ ಮಾದರಿಯಾಗುತ್ತಾರೆ.

ನೀವಿಂದು 86ಕ್ಕೆ ಕಾಲಿಡುತ್ತಿದ್ದೀರಿ, ಜನ್ಮದಿನದ ಶುಭಾಶಯಗಳು. ಈ ಸಂದರ್ಭದಲ್ಲಿ ನಿಮ್ಮ ಅಭಿಮಾನಿಗಳಿಗೆ ಏನು ಹೇಳಲು ಅಪೇಕ್ಷಿಸುತ್ತೀರಿ?

ಸಿನಿಪ್ರೇಮಿಗಳ ಆಶೀರ್ವಾದ, ಹಾರೈಕೆಯಿಂದಲೇ ನಾನು ಕಲಾವಿದನಾಗಿ ರೂಪುಗೊಳ್ಳಲು ಸಾಧ್ಯವಾಗಿದ್ದು. ಅವರ ಪ್ರೋತ್ಸಾಹದಿಂದ ದಶಕಗಳ ಕಾಲ ಚಿತ್ರರಂಗಕ್ಕೆ ಸೇವೆ ಸಲ್ಲಿಸಲು ಸಾಧ್ಯವಾಯ್ತು. ಈ ಸಂದರ್ಭದಲ್ಲಿ ಅವರನ್ನು ತುಂಬು ಹೃದಯದಿಂದ ಸ್ಮರಿಸುತ್ತೇನೆ.

ಚಿತ್ರರಂಗದಲ್ಲಿ ನೀವು ಶಿಸ್ತಿನ ನಟ ಎಂದೇ ಕರೆಸಿಕೊಳ್ಳುತ್ತೀರಿ. ನಿಮ್ಮಲ್ಲಿ ಈ ಶಿಸ್ತು ಬೆಳೆದದ್ದು ಹೇಗೆ?

ನಾನು ಹುಟ್ಟಿ ಬೆಳೆದದ್ದೆಲ್ಲ ಬೆಂಗಳೂರಿನ ಹೃದಯಭಾಗದಲ್ಲಿದ್ದ ಅಂಚೆ ಪೇಟೆಯಲ್ಲಿದ್ದ ಮನೆಯಲ್ಲಿ. ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ನನಗೆ ಸಿ ವಿ ಶಿವಶಂಕರ್‌ ನಿರ್ದೇಶನದ ‘ನಮ್ಮ ಊರು’ ಚಿತ್ರದಲ್ಲಿ ನಾಯಕನಾಗುವ ಅವಕಾಶ ಒದಗಿಬಂದಿತು. ಬೆಂಗಳೂರಿನ ಹೊರವಲಯದಲ್ಲಿ ಶೂಟಿಂಗ್‌. ನಾನು ನಸುಕಿನಲ್ಲಿ 3 ಗಂಟೆಗೆ ಎದ್ದು ನಿತ್ಯಕರ್ಮ, ವ್ಯಾಯಾಮಗಳನ್ನು ಮುಗಿಸಿ ಚಿತ್ರೀಕರಣಕ್ಕೆ ಸಿದ್ಧವಾಗಿಬಿಡುತ್ತಿದ್ದೆ. ಐದು ಗಂಟೆಗೆ ಮನೆಯ ಬಳಿ ಶೂಟಿಂಗ್ ಕಾರು ಬರುತ್ತಿತ್ತು. ಬೆಳಗ್ಗೆ ಆರೂವರೆ ಹೊತ್ತಿಗೆ ಚಿತ್ರೀಕರಣ ಶುರು. ಚಿತ್ರೀಕರಣದ ಇಪ್ಪತ್ತೂ ದಿನ ಈ ಪರಿಪಾಠ ತಪ್ಪಲಿಲ್ಲ. ಚಿತ್ರೀಕರಣ ಸುಗಮವಾಗಿ ಮುಗಿಯಿತಲ್ಲದೆ ಸಿನಿಮಾ ಯಶಸ್ಸನ್ನೂ ತಂದುಕೊಟ್ಟಿತು. ಮುಂದಿನ ದಿನಗಳಲ್ಲಿ ಇದೇ ಶಿಸ್ತು ಮೈಗೂಡಿತು. ನನ್ನಲ್ಲಿ ಶಿಸ್ತು ಬೆಳೆಯಲು ರಂಗಭೂಮಿ ಹಿನ್ನೆಲೆಯೂ ಕಾರಣ.

‘ಸೊಸೆ ತಂದ ಸೌಭಾಗ್ಯ’ ಚಿತ್ರದ ಗೀತೆ

ಇದನ್ನೂ ಓದಿ : ಜನುಮದಿನ | ನಟ ರಾಜೇಶ್ ಅಭಿನಯದ ಹತ್ತು ಮಧುರ ಹಾಡುಗಳ ವಿಡಿಯೋ

ವೃತ್ತಿ ಬದುಕಿನಲ್ಲಿ ನೀವು ತುಂಬಾ ಇಷ್ಟಪಡುವ ನಿಮ್ಮ ಅಭಿನಯದ ಮೂರು ಪಾತ್ರಗಳನ್ನು ನೆನಪು ಮಾಡಿಕೊಳ್ಳಿ...

ನಾಯಕನಟನಾಗಿ ಪರಿಚಯವಾದ ‘ಬೆಳವಲದ ಮಡಿಲಲ್ಲಿ’, ‘ದೇವರ ದುಡ್ಡು’ ಮತ್ತು ‘ಕಲಿಯುಗ’ ಚಿತ್ರಗಳ ಪಾತ್ರಗಳನ್ನು ನಾನು ಸ್ಮರಿಸುತ್ತೇನೆ. ‘ಬೆಳವಲದ ಮಡಿಲಲ್ಲಿ’ (1975) ಚಿತ್ರದಲ್ಲಿ ನನ್ನ ಪಾತ್ರ ಮೂರು ಛಾಯೆಗಳಲ್ಲಿದೆ. ಯುವಕ, ಮಧ್ಯವಯಸ್ಕ ಮತ್ತು ಇಳಿವಯಸ್ಸಿನ ವ್ಯಕ್ತಿಯಾಗಿ ನಟನಾಗಿ ನನಗೂ ಸವಾಲಿತ್ತು. ಪ್ರೇಕ್ಷಕರು ಈ ಚಿತ್ರವನ್ನು ಬಹುವಾಗಿ ಮೆಚ್ಚಿಕೊಂಡರು. ‘ದೇವರ ದುಡ್ಡು’ (1977) ಚಿತ್ರದಲ್ಲಿ ನನಗೆ ದೇವರೊಂದಿಗೆ ಸಂವಾದ ನಡೆಸುವ ಅಪರೂಪದ ಪಾತ್ರ. ಲೌಕಿಕ ಬದುಕಿನ ಆಗುಹೋಗುಗಳು, ಆಧ್ಯಾತ್ಮದ ವಿಚಾರಗಳ ಆಪ್ತ ಪ್ರಸ್ತಾಪವಿದೆ. ಈ ಪಾತ್ರ ನನ್ನ ಹೃದಯದಲ್ಲಿದೆ. ವೃತ್ತಿಬದುಕಿಗೆ ತಿರುವು ನೀಡಿದ ‘ಕಲಿಯುಗ’ (1984) ಚಿತ್ರದ ಪಾತ್ರವನ್ನು ನಾನು ತುಂಬಾ ಪ್ರೀತಿಸುತ್ತೇನೆ. ಇನ್ನು ನಾಯಕನಟನಾಗಿ ಪದಾರ್ಪಣೆ ಮಾಡಿದ ‘ನಮ್ಮ ಊರು’ ಚಿತ್ರದಲ್ಲಿನ ಮಾದರಿ ಯುವಕನ ಪಾತ್ರ ಎಂದಿಗೂ ನನ್ನ ಮನಸ್ಸಿನಲ್ಲಿರುತ್ತದೆ.

ಇಂಥದ್ದೊಂದು ಪಾತ್ರ ಸಿಗಬೇಕಿತ್ತು, ಸಿಗಲೇ ಇಲ್ಲ ಎನ್ನುವ ಬೇಸರವೇನಾದರೂ ಇದೆಯೇ?

ಖಂಡಿತ ಇಲ್ಲ, ನಟನಾಗಿ ನನಗೆ ವೈವಿಧ್ಯಮಯ ಪಾತ್ರಗಳು ಸಿಕ್ಕಿವೆ. ಆ ನಿಟ್ಟಿನಲ್ಲಿ ನಾನು ಅದೃಷ್ಟವಂತ. ಪಾಲಿಗೆ ಬಂದ ಪಾತ್ರಗಳನ್ನು ಚೆನ್ನಾಗಿ ನಿಭಾಯಿಸಿದ್ದೇನೆ, ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದೇನೆ ಎನ್ನುವ ಸಮಾಧಾನವಿದೆ.

ವರನಟ ರಾಜಕುಮಾರ್‌ ಅವರೊಂದಿಗಿನ ನಿಮ್ಮ ಒಡನಾಟ ನೆನಪು ಮಾಡಿಕೊಳ್ಳಬಹುದೇ?

‘ಶ್ರೀ ರಾಮಾಂಜನೇಯ ಯುದ್ಧ’ (1963) ಚಿತ್ರದಲ್ಲಿ ಮೊದಲ ಬಾರಿಗೆ ರಾಜಕುಮಾರ್ ಅವರೊಂದಿಗೆ ನಟಿಸುವ ಅವಕಾಶ ಒದಗಿಬಂತು. ಚಿತ್ರದಲ್ಲಿ ಅವರು ರಾಮನ ಪಾತ್ರದಲ್ಲಿದ್ದರೆ ನಾನು ಭರತನಾಗಿ ಕಾಣಿಸಿಕೊಂಡಿದ್ದೆ. ಉದಯಕುಮಾರ್‌ ಆಂಜನೇಯನಾಗಿದ್ದರು. ಆ ವೇಳೆಗಾಗಲೇ ರಾಜಕುಮಾರ್‌ ಜನಪ್ರಿಯ ನಾಯಕನಟನಾಗಿ ಜನಮಾನಸದಲ್ಲಿ ನೆಲೆಯಾಗಿದ್ದರು. ಮೊದಲ ಬಾರಿ ಅವರೊಂದಿಗೆ ಅಭಿನಯಿಸುವಾಗ ನಾನು ರೋಮಾಂಚಿತನಾಗಿದ್ದೆ. ಮುಂದೆ ‘ಗಂಗೆ ಗೌರಿ’ (1967) ಚಿತ್ರದಲ್ಲಿ ಅವರು ಶಿವನಾಗಿ, ನಾನು ಮಹಾವಿಷ್ಣು ಆಗಿ ನಟಿಸಿದ್ದೆವು. ರಂಗಭೂಮಿ ಹಿನ್ನೆಲೆಯಿಂದ ಬಂದವನು ಎನ್ನುವ ಕಾರಣಕ್ಕಾಗಿ ಅವರಿಗೆ ನನ್ನ ಮೇಲೆ ವಿಶೇ‍ಷ ಅಕ್ಕರೆ ಇತ್ತು. “ವ್ಯಾಯಾಮ ಮಾಡಿ ದೇಹವನ್ನು ಚೆನ್ನಾಗಿಟ್ಟುಕೊಂಡಿದ್ದೀರಿ,” ಎಂದು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದರು. ರಾಜ್‌ರೊಂದಿಗೆ ಏಳೆಂಟು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ.

‘ಬೆಳವಲದ ಮಡಿಲಲ್ಲಿ’ ಚಿತ್ರದ ಗೀತೆ

ಕೆಲವು ವರ್ಷ ರಾಜಕೀಯದಲ್ಲಿಯೂ ಸಕ್ರಿಯರಾಗಿದ್ದಿರಿ?

ಹೌದು, ಅದು ಒತ್ತಾಯದ ಮೇರೆಗೆ ಹೋದದ್ದು. ದೇವೇಗೌಡರು ಜನತಾ ಪಕ್ಷದಿಂದ ಲೋಕಸಭೆಗೆ ಸ್ಪರ್ಧಿಸುವಂತೆ ಕೋರಿದ್ದರು. ಅವರೇ ಖುದ್ದಾಗಿ ಮನೆಗೆ ಬಂದು ಪಕ್ಷಕ್ಕೆ ಆಹ್ವಾನಿಸಿದಾಗ ನಾನು ವಿನಯದಿಂದಲೇ ಇಲ್ಲವೆಂದಿದ್ದೆ. ದೇವೇಗೌಡರು ಹಾಗೂ ಇತರ ಪ್ರಮುಖರ ಒತ್ತಾಯಕ್ಕೆ ಚುನಾವಣೆಗೆ ನಿಂತದ್ದೂ ಆಯ್ತು. ಆದರೆ ಅಲ್ಲಿನ ವ್ಯವಸ್ಥೆ, ಬಣಗಳ ರಾಜಕೀಯಗಳು ಮನಸ್ಸಿಗೆ ತುಂಬಾ ಬೇಸರ ಮೂಡಿಸಿದವು. ಚುನಾವಣೆಯ ಸೋಲಿನೊಂದಿಗೆ ಒಂದಷ್ಟು ವರ್ಷ ರಾಜಕೀಯವೇ ಬೇಡವೆಂದು ಸುಮ್ಮನಾದೆ. ಮುಂದೆ ಬಿಜೆಪಿ ಮುಖಂಡರ ಒತ್ತಾಯದ ಮೇರೆಗೆ ಮತ್ತೆ ರಾಜಕೀಯ ಪ್ರವೇಶವಾಯ್ತು. ಆದರೆ, ಈ ಬಾರಿ ನೇರವಾಗಿ ಚುನಾವಣಾ ರಾಜಕೀಯ ಮಾಡುವುದಿಲ್ಲ ಎನ್ನುವ ಷರತ್ತಿನೊಂದಿಗೆ ಪಕ್ಷಕ್ಕೆ ಸೇರ್ಪಡೆಗೊಂಡೆ. ಆಗ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದೆ. ಏನೇ ಹೇಳಿ, ರಾಜಕೀಯ ನನಗೆ ಆಗಿಬರಲಿಲ್ಲ. ಕಳೆದ ಕೆಲವು ವರ್ಷಗಳಿಂದೀಚೆಗೆ ರಾಜಕೀಯದ ಆಲೋಚನೆಗಳಿಲ್ಲದೆ ನನ್ನ ಪಾಡಿಗೆ ನೆಮ್ಮದಿಯಿಂದಿದ್ದೇನೆ.

ಓದು, ಗಾಯನದ ಬಗ್ಗೆ ನಿಮಗೆ ಒಳ್ಳೆಯ ಅಭಿರುಚಿಯಿದೆ...

ಹೌದು, ಓದು ನನ್ನಿಷ್ಟದ ಹವ್ಯಾಸ. ನನ್ನ ಮನೆಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ಪುಸ್ತಕಗಳಿವೆ. ನನಗೆ ಮೊದಲಿನಿಂದಲೂ ಈ ಪಾರ್ಟಿ, ಕ್ಲಬ್‌ ಕಲ್ಚರ್ ಇಷ್ಟವಾಗಲ್ಲ. ಹೊರಗೆಲ್ಲೂ ಹೋಗದ ನನಗೆ ಪುಸ್ತಕ, ಪತ್ರಿಕೆಗಳೇ ಸ್ನೇಹಿತರು. ಇನ್ನು ಗಾಯನದ ಅಭಿರುಚಿಗೆ ರಂಗಭೂಮಿ ಕಾರಣ. ರಾಜಕೀಯದ ಸಹವಾಸದಿಂದ ಅಭ್ಯರ್ಥಿಗಳ ಪ್ರಚಾರಕ್ಕೆಂದು ಓಡಾಡಿ ಧ್ವನಿಯೇ ಉಡುಗಿಹೋಗಿತ್ತು. ಈಗ ಸಹಜಸ್ಥಿತಿಗೆ ಮರಳಿದೆ. ಸಂಗೀತ ಮನಸ್ಸಿಗೆ ಮುದ ನೀಡುತ್ತದೆ. ಬೇಸರವಾದಾಗ ಸಂಗೀತ ಆಲಿಸುತ್ತೇನೆ, ನನ್ನಷ್ಟಕ್ಕೆ ನಾನು ಹಾಡಿಕೊಳ್ಳುತ್ತಿರುತ್ತೇನೆ.

‘ದೇವರ ದುಡ್ಡು’ ಚಿತ್ರದ ಗೀತೆ

ಇಂದಿನ ಸಿನಿಮಾಗಳ ಬಗ್ಗೆ ನಿಮ್ಮ ಅಭಿಪ್ರಾಯ? ಯುವ ನಟ-ನಟಿಯರಿಗೆ ನಿಮ್ಮ ಕಿವಿಮಾತೇನು?

ಇಂದಿನ ಬಹುಪಾಲು ಸಿನಿಮಾಗಳ ಕಥಾವಸ್ತು ದ್ವೇಷ, ಸೇಡು, ಕ್ರೌರ್ಯ, ರಕ್ತಪಾತವೇ ಆಗಿರುತ್ತದೆ. ಮೌಲ್ಯ, ಆದರ್ಶಗಳೇ ಕಾಣಿಸುವುದಿಲ್ಲ. ನಮ್ಮ ಕಾಲದ ಸಿನಿಮಾಗಳಲ್ಲಿ ಇರುತ್ತಿದ್ದ ಪ್ರೀತಿ, ವಿಶ್ವಾಸ, ಆತ್ಮೀಯತೆ, ಅಕ್ಕರಾಸ್ಥೆ, ಮಮಕಾರದಂತಹ ಆಶಯಗಳನ್ನು ಹುಡುಕಾಡಬೇಕಿದೆ. ಹಾಗಾಗಿ, ಈಗ ನಾನು ಚಿತ್ರಗಳಲ್ಲಿ ಪಾತ್ರ ನಿರ್ವಹಿಸಲು ಹಿಂದೆ-ಮುಂದೆ ನೋಡುತ್ತೇನೆ. ಯುವ ನಟ-ನಟಿಯರು ಶ್ರದ್ಧೆ, ಶಿಸ್ತು, ವಿನಯಂತಿಕೆ ಮೈಗೂಡಿಸಿಕೊಳ್ಳಬೇಕೆಂದು ಹೇಳಲು ಬಯಸುತ್ತೇನೆ.

ಬದುಕು ಸುಂದರವಾಗಿರಬೇಕೆಂದರೆ ಹೇಗೆ ಜೀವಿಸಬೇಕು?

ಬದುಕಿನಲ್ಲಿ ಒಂದು ಶಿಸ್ತು ಇರಬೇಕು, ಚೌಕಟ್ಟು ಹಾಕಿಕೊಳ್ಳಬೇಕು. ಇತರರಿಗೆ ಒಳ್ಳೆಯದನ್ನು ಮಾಡಲು ಸಾಧ್ಯವಾಗದಿದ್ದರೂ ಕೆಡುಕನ್ನು ಬಯಸಬಾರದು. ಇದು ನನ್ನ ಸಮೃದ್ಧ ಜೀವನದ ಗುಟ್ಟು ಕೂಡ.

ನಿಮ್ಮ ಮೊಮ್ಮಗಳು ಐಶ್ವರ್ಯಾ ಸರ್ಜಾ (ಅರ್ಜುನ್‌ ಸರ್ಜಾ-ಆಶಾರಾಣಿ ಪುತ್ರಿ) ‘ಪ್ರೇಮ ಬರಹ’ ಚಿತ್ರದೊಂದಿಗೆ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ...

ಐಶ್ವರ್ಯಾಳ ಬಗ್ಗೆ ನನಗೆ ತುಂಬಾ ಹೆಮ್ಮೆ, ವಿಶ್ವಾಸವಿದೆ. ಮೊದಲ ಚಿತ್ರದಲ್ಲೇ ಆಕೆ ಉತ್ತಮ ನಟನೆಯೊಂದಿಗೆ ಪ್ರೇಕ್ಷಕರ ಗಮನ ಸೆಳೆದಿದ್ದಾಳೆ. ದಕ್ಷಿಣದಲ್ಲಿ ಮಾತ್ರವಲ್ಲ, ಹಿಂದಿ ಸಿನಿಮಾಗಳಲ್ಲೂ ಐಶ್ವರ್ಯಾ ಹೆಸರು ಮಾಡಲಿದ್ದಾಳೆ ಎಂದು ಆತ್ಮೀಯರು ಹೇಳಿದಾಗ ತುಂಬಾ ಖುಷಿಯಾಗುತ್ತದೆ. ಚಿತ್ರರಂಗದಲ್ಲಿ ಆಕೆಗೆ ಉತ್ತಮ ಭವಿಷ್ಯವಿದೆ ಎಂದು ನಾನು ಭಾವಿಸಿದ್ದೇನೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More