ಚಾರ್ಲಿ ನೆನಪು | ಚಾಪ್ಲಿನ್ ಪ್ರೇರಣೆಯಿಂದ ಸೃಷ್ಟಿಯಾದ ಬಾಲಿವುಡ್ ಪಾತ್ರಗಳು

ಹಾಸ್ಯ ಸಿನಿಮಾದ ಮೇರು ತಾರೆ ಚಾರ್ಲಿ ಚಾಪ್ಲಿನ್‌ ಜಗತ್ತಿನ ಹಲವು ಕಲಾವಿದರಿಗೆ ಸ್ಫೂರ್ತಿ. ಹಿಂದಿ ಸೇರಿದಂತೆ ಭಾರತದ ಪ್ರಾದೇಶಿಕ ಭಾಷೆಗಳ ಹತ್ತಾರು ನಟ-ನಟಿಯರು ಚಾಪ್ಲಿನ್‌ರಿಂದ ಪ್ರೇರಿತರಾಗಿ ಪಾತ್ರಗಳನ್ನು ಮಾಡಿದ್ದಾರೆ. ಇಂದು (ಏ 16) ಚಾಪ್ಲಿನ್‌ ಜನ್ಮದಿನ

ಹಿಂದಿ ಸಿನಿಮಾರಂಗದ ಮೇರುನಟ ರಾಜ್‌ಕಪೂರ್‌ ಅವರು ‘ಭಾರತೀಯ ಸಿನಿಮಾದ ಚಾರ್ಲಿ ಚಾಪ್ಲಿನ್‌’ ಎಂದೇ ಕರೆಸಿಕೊಳ್ಳುತ್ತಾರೆ. ನಗುವಿನ ಮುಖವಾಡ ಹೊತ್ತ ನೊಂದ ಮನಸ್ಸಿನ ವ್ಯಕ್ತಿಯ ಪಾತ್ರಗಳಲ್ಲಿ ರಾಜ್‌ಕಪೂರ್‌ರನ್ನು ಜನರು ಬಹುವಾಗಿ ಮೆಚ್ಚಿಕೊಂಡರು. ‘ಆವಾರಾ’ (1951), ‘ಶ್ರೀ 420’ (1955) ಮತ್ತು ‘ಮೇರಾ ನಾಮ್ ಜೋಕರ್‌’ (1970) ಹಿಂದಿ ಚಿತ್ರಗಳಲ್ಲಿ ರಾಜ್‌ಕಪೂರ್ ಪಾತ್ರಗಳು ಚಾರ್ಲಿ ಚಾಪ್ಲಿನ್‌ರ ‘ದಿ ಟ್ರ್ಯಾಂಪ್‌’ ಪಾತ್ರವನ್ನೇ ಹೋಲುತ್ತವೆ. ಚಾಪ್ಲಿನ್‌ರಂತೆ ರಾಜ್‌ಕಪೂರ್‌ ಅವರ ಅಂತಿಮ ಉದ್ದೇಶವೂ ಪ್ರೇಕ್ಷರನ್ನು ನಗಿಸುವುದೇ ಆಗಿತ್ತು!

‘ಆವಾರಾ’ ಚಿತ್ರದಲ್ಲಿ ರಾಜ್‌ಕಪೂರ್

ಜೈಲರ್‌ ಅಸ್ರಾನಿ | ಹಿಂದಿ ಚಿತ್ರರಂಗದ ದಂತಕತೆ ‘ಶೋಲೆ’ (1975) ಚಿತ್ರದಲ್ಲಿ ಹಾಸ್ಯನಟ ಅಸ್ರಾನಿ ನಿರ್ವಹಿಸಿದ್ದ ಜೈಲರ್ ಪಾತ್ರ ಎಲ್ಲರ ಗಮನ ಸೆಳೆದಿತ್ತು. ಚಾಪ್ಲಿನ್‌ರ ಬಹುಪ್ರಮುಖವಾದ ಹಿಟ್ಲರ್‌ನನ್ನು ಅಣಕವಾಡುವ ಸಿನಿಮಾ ‘ದಿ ಗ್ರೇಟ್‌ ಡಿಕ್ಟೇಟರ್‌’ (1940) ಆಧರಿಸಿ ನಿರ್ದೇಶಕ ರಮೇಶ್ ಸಿಪ್ಪಿ ಸೃಷ್ಟಿಸಿದ್ದ ಪಾತ್ರವದು. ‘ಹಮ್‌ ಅಂಗ್ರೇಝೋನ್‌ ಕೆ ಜಮೀನೆ ಕೆ ಜೈಲರ್ ಹೂ!’ ಎನ್ನುವ ಡೈಲಾಗ್‌ನೊಂದಿಗೆ ಅಸ್ರಾನಿ ಪಾತ್ರವನ್ನು ಸೊಗಸಾಗಿ ನಿಭಾಯಿಸಿದ್ದರು.

‘ಶೋಲೆ’ಯಲ್ಲಿ ಅಸ್ರಾನಿ

ಶ್ರೀದೇವಿ | ಶೇಖರ್ ಕಪೂರ್ ನಿರ್ದೇಶನದ ‘ಮಿಸ್ಟರ್ ಇಂಡಿಯಾ’ (987) ಚಿತ್ರದಲ್ಲಿ ಶ್ರೀದೇವಿ, ಚಾಪ್ಲಿನ್ ವೇಷ ತೊಟ್ಟು ನಟಿಸಿದ್ದರು. ಈ ಗೆಟಪ್‌ನಲ್ಲಿ ಶ್ರೀದೇವಿ ಅವರ ಕಾಮಿಡಿ ಟೈಮಿಂಗ್‌ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿತ್ತು. “ಇದು ತಮ್ಮ ವೃತ್ತಿಬದುಕಿನ ಅಪರೂಪದ ಪಾತ್ರ. ಚಾಪ್ಲಿನ್‌ರನ್ನು ಅನುಕರಿಸುವ ದೃಶ್ಯದೊಂದಿಗೆ ಅವರಿಗೆ ನನ್ನ ಪುಟ್ಟ ಸೇವೆ ಸಲ್ಲಿಸಿದ್ದೇನೆ,” ಎಂದು ಸಿನಿಮಾ ಬಿಡುಗಡೆಯಾದ ಸಂದರ್ಭದಲ್ಲಿ ಶ್ರೀದೇವಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

‘ಮಿಸ್ಟರ್ ಇಂಡಿಯಾ’ದಲ್ಲಿ ಶ್ರೀದೇವಿ

ರಣಬೀರ್ ಕಪೂರ್ | ‘ಅಜಬ್ ಪ್ರೇಮ್‌ ಕಿ ಗಜಬ್ ಕಹಾನಿ’ (2009) ಚಿತ್ರದಲ್ಲಿ ಹೀರೋ ರಣಬೀರ್ ಕಪೂರ್‌ ತಮ್ಮ ಮುತ್ತಜ್ಜ ರಾಜ್‌ಕಪೂರ್‌ ಅವರ ಹಾದಿಯಲ್ಲಿ ನಡೆದಿದ್ದರು. ಚಿತ್ರದ ಒಂದು ಸನ್ನಿವೇಶದಲ್ಲಿ ರಣಬೀರ್, ಚಾಪ್ಲಿನ್ ಗೆಟಪ್‌ನಲ್ಲಿ ತಮ್ಮ ಕಾಮಿಡಿ ಟೈಮಿಂಗ್‌ ಅಭಿವ್ಯಕ್ತಿಸಿದ್ದರು. ಇವರಲ್ಲದೆ ಮತ್ತೆ ಕೆಲವು ಹಿಂದಿ ಚಿತ್ರಗಳಲ್ಲಿ ಚಾಪ್ಲಿನ್‌ ಪ್ರಾಸಂಗಿಕವಾಗಿ ಪ್ರಸ್ತಾಪವಾಗಿದ್ದಾರೆ. ಹಾಡು, ದೃಶ್ಯಗಳ ತುಣುಕುಗಳಲ್ಲಿ ಚಾರ್ಲಿ ವೇಷ ತೊಟ್ಟ ನಟರನ್ನು ನೋಡಬಹುದು.

‘ಅಜಬ್ ಪ್ರೇಮ್‌ ಕಿ ಗಜಬ್ ಕಹಾನಿ’ಯಲ್ಲಿ ರಣಬೀರ್ ಕಪೂರ್‌

ನರಸಿಂಹರಾಜು | ಕನ್ನಡದ ಮೇರು ಹಾಸ್ಯತಾರೆ ನರಸಿಂಹರಾಜು ಅವರಿಗೂ ಚಾಪ್ಲಿನ್‌ ಬಲುಇಷ್ಟ. ಚಾಪ್ಲಿನ್‌ರಂತೆಯೇ ನರಸಿಂಹರಾಜು ಕೂಡ ತಮ್ಮ ಬಾಡಿ ಲಾಂಗ್ವೇಜ್‌ನಿಂದಲೇ ಪ್ರೇಕ್ಷರನ್ನು ನಗಿಸುವ ಕಲೆಗಾರ. ‘ಪ್ರೊ ಹುಚ್ಚೂರಾಯ’ ಚಿತ್ರದಲ್ಲಿನ ನರಸಿಂಹರಾಜು ಪಾತ್ರಕ್ಕೆ ಚಾರ್ಲಿ ಪ್ರೇರಣೆಯಿತ್ತು ಎನ್ನಲಾಗುತ್ತದೆ. ಇದು ನರಸಿಂಹರಾಜು ಅವರೇ ನಿರ್ಮಿಸಿದ್ದ ಸಿನಿಮಾ. ಹರೆಯದ ಪುತ್ರನ ಅಕಾಲಿಕ ನಿಧನದಿಂದ ನರಸಿಂಹರಾಜು ನೋವಿನಲ್ಲಿರುತ್ತಾರೆ. ಪುತ್ರನ ನೆನಪಿನಲ್ಲಿ ನಿರ್ಮಿಸುವ ಚಿತ್ರವಿದು. ಮನಸ್ಸಿನ ನೋವನ್ನು ನುಂಗಿ ಪ್ರೇಕ್ಷಕರನ್ನು ನಗಿಸಿದ ಅಪ್ರತಿಮ ಕಲಾವಿದ ಚಾಪ್ಲಿನ್‌ರಂತೆಯೇ ನರಸಿಂಹರಾಜು ಕೂಡ ಮಾದರಿಯಾಗುತ್ತಾರೆ. ‘ಭಲೇ ಹುಚ್ಚ’ ಚಿತ್ರದಲ್ಲಿನ ರಾಜಕುಮಾರ್ ಪಾತ್ರದ ದೃಶ್ಯವೊಂದು ಚಾಪ್ಲಿನ್‌ರನ್ನು ನೆನಪಿಸುತ್ತದೆ.

‘ಪ್ರೊ ಹುಚ್ಚೂರಾಯ’ ಚಿತ್ರದಲ್ಲಿ ನರಸಿಂಹರಾಜು
ಇದನ್ನೂ ಓದಿ : ಚಾಪ್ಲಿನ್‌ ನೆನಪು | ಕಾಮಿಡಿ ಲೆಜೆಂಡ್‌ ಚಾರ್ಲಿ ನಟನೆಯ ಕಾಡುವ ಐದು ವಿಡಿಯೋ
ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More