‘ಸ್ಟೇಟ್‌ಮೆಂಟ್‌’ ಚಿತ್ರಕ್ಕೆ ಹಾಡಿದ ಸುಹಾನಾ ಸೈಯದ್‌ ಈಗ ಹಿನ್ನೆಲೆ ಗಾಯಕಿ

ಸರಿಗಮಪ ಸಂಗೀತ ರಿಯಾಲಿಟಿ ಶೋ ಪ್ರತಿಭೆ ಸುಹಾನಾ ಸೈಯದ್‌ ‘ವಂದೇ ಮಾತರಂ’ ಗೀತೆಯೊಂದಿಗೆ ಸಿನಿಮಾ ಹಿನ್ನೆಲೆ ಗಾಯಕಿಯಾಗಿ ಬಡ್ತಿ ಹೊಂದಿದ್ದಾರೆ. ದೇಶಭಕ್ತಿ ಗೀತೆಯೊಂದಿಗೆ ಸಿನಿಮಾ ಗಾಯನಕ್ಕೆ ಕಾಲಿಟ್ಟಿರುವ ಅವರು ಎರಡು ತುಳು ಸಿನಿಮಾ ಹಾಡುಗಳಿಗೂ ದನಿಯಾಗಿದ್ದಾರೆ

ಝೀ ಕನ್ನಡ ವಾಹಿನಿಯ ಸರಿಗಮಪ ರಿಯಾಲಿಟಿ ಶೋನಲ್ಲಿ ಗಮನಸೆಳೆದ ಗಾಯನ ಪ್ರತಿಭೆಗಳಲ್ಲಿ ಸುಹಾನಾ ಒಬ್ಬರು. ಉತ್ತಮ ಕಂಠಸಿರಿಯ ಗಾಯಕಿ ಎಲ್ಲಾ ಪ್ರಕಾರದ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು. ಸರಿಗಮಪ ವೇದಿಕೆಯಲ್ಲಿ ವೀಕ್ಷಕರ ಮೆಚ್ಚುಗೆ ಗಳಿಸಿದ್ದ ಸುಹಾನಾ ಇದೀಗ ಸಿನಿಮಾ ಹಿನ್ನೆಲೆ ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಅವರ ಮೊದಲ ಸಿನಿಮಾ ಹಾಡು ಬಿಡುಗಡೆಯಾಗಿದೆ. ಅಪ್ಪಿ ಪ್ರಸಾದ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ‘ಸ್ಟೇಟ್‌ಮೆಂಟ್‌ 8/11’ ಸಿನಿಮಾದ ‘ವಂದೇ ಮಾತರಂ’ ಹಾಡಿಗೆ ಸುಹಾನಾ ದನಿಯಾಗಿದ್ದಾರೆ. ಕಿರಣ್ ಕಾವೇರಪ್ಪ ರಚಿಸಿರುವ ಗೀತೆಗೆ ಹೇಮಂತ್ ಜೋಯಿಸ್‌ ಸಂಗೀತ ಸಂಯೋಜಿಸಿದ್ದಾರೆ. ದೇಶಭಕ್ತಿ ಗೀತೆಯೊಂದಿಗೆ ಸಿನಿಮಾ ಹಿನ್ನೆಲೆ ಗಾಯನ ಆರಂಭಿಸಿರುವುದು ಸುಹಾನಾಗೆ ಹೆಮ್ಮೆಯಿದೆ. “ಐಕ್ಯತೆ ಸಾರುವ ದೇಶಭಕ್ತಿ ಗೀತೆಯೊಂದಿಗೆ ನನ್ನ ಸಿನಿಮಾಯಾನ ಆರಂಭವಾಗಿದೆ. ಇದು ನನಗೆ ಅತ್ಯಂತ ಖುಷಿ ಮತ್ತು ಹೆಮ್ಮೆಯ ಸಂಗತಿ,” ಎನ್ನುತ್ತಾರವರು.

ಇದನ್ನೂ ಓದಿ : ಟೀಸರ್‌ | ಬಯೋಪಿಕ್‌ನಲ್ಲಿ ನಟಿ ಸಾವಿತ್ರಿಯಾಗಿ ಮಿಂಚಿದ ಕೀರ್ತಿ ಸುರೇಶ್

‘ಸ್ಟೇಟ್‌ಮೆಂಟ್‌’ ಚಿತ್ರದ ನಂತರ ಸುಹಾನಾ ಎರಡು ತುಳು ಸಿನಿಮಾ ಗೀತೆಗಳಿಗೂ ದನಿಯಾಗಿದ್ದಾರೆ. ವಿ ಮನೋಹರ್ ಸಂಗೀತ ಸಂಯೋಜನೆಯಲ್ಲೊಂದು ಗೀತೆ ಹಾಡಿದ್ದರೆ, ರಾಜೇಶ್ ಕೃಷ್ಣನ್‌ ಅವರೊಂದಿಗೆ ಡ್ಯೂಯೆಟ್‌ ಹಾಡೊಂದನ್ನು ಹಾಡಿದ್ದಾರೆ. ಸಂಗೀತ ರಿಯಾಲಿಟಿ ಶೋನಲ್ಲಿ ರಾಜೇಶ್ ಕೃಷ್ಣನ್‌ ತೀರ್ಪುಗಾರರಲ್ಲೊಬ್ಬರಾಗಿದ್ದರು. “ಸ್ಟೇಟ್‌ಮೆಂಟ್‌ ಸಿನಿಮಾ ನಿರ್ಮಾಪಕರು ನಮ್ಮ ಸರಿಗಮಪ ರಿಯಾಲಿಟಿ ಶೋವನ್ನು ಪ್ರತಿ ವಾರ ವೀಕ್ಷಿಸುತ್ತಿದ್ದರಂತೆ. ನಾನು ಶೋನಲ್ಲಿ ಹಾಡಿದ್ದ ಅಶ್ವಮೇಧ ಹಾಡು ಅವರಿಗೆ ತುಂಬಾ ಇಷ್ಟವಾಗಿತ್ತು. ತಮ್ಮ ನಿರ್ಮಾಣದ ಸಿನಿಮಾಗೆ ನನ್ನಿಂದ ಹಾಡಿಸಬೇಕೆಂದು ಅವರು ಆಗಲೇ ನಿರ್ಧರಿಸಿದ್ದರಂತೆ. ನಿರ್ಮಾಪಕರ ಅಪೇಕ್ಷೆಯಂತೆ ಸಂಗೀತ ನಿರ್ದೇಶಕ ಹೇಮಂತ್‌ ಜೋಯಿಸ್‌ ದೇಶಭಕ್ತಿಯ ಹಾಡನ್ನು ಹಾಡಿಸಿದ್ದಾರೆ,” ಎಂದು ಚೊಚ್ಚಲ ಸಿನಿಮಾ ಅವಕಾಶದ ಬಗ್ಗೆ ಸುಹಾನಾ ಹೇಳಿಕೊಳ್ಳುತ್ತಾರೆ.

ಹೆಗ್ಗೋಡು ಸಮೀಪದ ಗ್ರಾಮವೊಂದರಲ್ಲಿ ಹುಟ್ಟಿ, ಬೆಳೆದ ಸುಹಾನಾ ಚಿಕ್ಕಂದಿನಲ್ಲೇ ರಂಗಭೂಮಿಯೆಡೆ ಆಸಕ್ತರಾಗಿದ್ದರು. ನೀನಾಸಂ ನಾಟಕಗಳಿಗೆ ರಂಗಗೀತೆಗಳನ್ನು ಹಾಡುತ್ತಿದ್ದ ಅವರು ಶಾಸ್ತ್ರೀಯ ಸಂಗೀತ ಕಲಿತವರಲ್ಲ. ಗಾಯನ ಪ್ರತಿಭೆ ಸಾಬೀತು ಮಾಡಲು ಅವರಿಗೆ ಸರಿಗಮಪ ರಿಯಾಲಿಟಿ ಶೋ ಒಂದೊಳ್ಳೆಯ ವೇದಿಕೆಯಾಯ್ತು. ಅಲ್ಲಿನ ಜನಪ್ರಿಯತೆ ಅವರಿಗೆ ಸಿನಿಮಾ ಅವಕಾಶ ತಂದುಕೊಟ್ಟಿದೆ. ಮುಂದಿನ ದಿನಗಳಲ್ಲಿ ಅವರು ಪೂರ್ಣಪ್ರಮಾಣದಲ್ಲಿ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಇರಾದೆ ಹೊಂದಿದ್ದಾರೆ. “ಸದ್ಯ ನಾನು ಎಂಬಿಎ ಕೊನೆಯ ಸೆಮಿಸ್ಟರ್‌ನಲ್ಲಿದ್ದೇನೆ. ಓದಿನ ಒತ್ತಡದಿಂದಾಗಿ ಹೆಚ್ಚು ಸಂಗೀತಾಭ್ಯಾಸ ಸಾಧ್ಯವಾಗುತ್ತಿಲ್ಲ. ಕೋರ್ಸ್ ಮುಗಿದ ನಂತರ ಶಾಸ್ತ್ರೀಯ ಸಂಗೀತ ಕಲಿಕೆಗೆ ಮುಂದಾಗುತ್ತೇನೆ,” ಎನ್ನುವ ಸುಹಾನಾ ಖ್ಯಾತ ಹಿನ್ನೆಲೆ ಗಾಯಕಿ ಚಿತ್ರಾ ಅವರ ದೊಡ್ಡ ಅಭಿಮಾನಿ. ದೂರವಾಣಿಯಲ್ಲಿ ಚಿತ್ರಾ ಅವರೊಂದಿಗೆ ಮಾತನಾಡಿರುವ ಅವರು ಮುಂದೆ ತಮ್ಮ ನೆಚ್ಚಿನ ಗಾಯಕಿಯನ್ನು ಭೇಟಿಯಾಗುವ ಆಸೆ ಹೊಂದಿದ್ದಾರೆ. ಹಿನ್ನೆಲೆ ಗಾಯಕಿಯಾಗಿ ಸಂಗೀತ ಕ್ಷೇತ್ರದಲ್ಲಿ ಮತ್ತೊಂದು ಹೆಜ್ಜೆ ಹತ್ತಿರುವ ಅವರು ಭವಿಷ್ಯದ ಬಗ್ಗೆ ಆಶಾವಾದಿಯಾಗಿದ್ದಾರೆ.

ಸರಿಗಮಪ ವೇದಿಕೆಯಲ್ಲಿ ಸುಹಾನಾ ಹಾಡಿದ ‘ಅಶ್ವಮೇಧ’ ಹಾಡು

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More