ಟೀಸರ್‌ | ಬಯೋಪಿಕ್‌ನಲ್ಲಿ ನಟಿ ಸಾವಿತ್ರಿಯಾಗಿ ಮಿಂಚಿದ ಕೀರ್ತಿ ಸುರೇಶ್

ದಕ್ಷಿಣ ಭಾರತದ ಸ್ಟಾರ್ ಹಿರೋಯಿನ್‌ ಎಂದು ಕರೆಸಿಕೊಂಡಿದ್ದ ಸಾವಿತ್ರಿ ಅವರ ಬಯೋಪಿಕ್‌ ಟೀಸರ್ ಬಿಡುಗಡೆಯಾಗಿದೆ. ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ತಯಾರಾಗುತ್ತಿರುವ ‘ಮಹಾನಟಿ’ ಚಿತ್ರದಲ್ಲಿನ ಶೀರ್ಷಿಕೆ ಪಾತ್ರದಲ್ಲಿ ಕೀರ್ತಿ ಸುರೇಶ್‌ ಸಿನಿಪ್ರಿಯರಿಗೆ ಇಷ್ಟವಾಗಿದ್ದಾರೆ

‘ಮಹಾನಟಿ’ ಎಂದು ಕರೆಸಿಕೊಂಡಿದ್ದ ದಕ್ಷಿಣ ಭಾರತದ ಖ್ಯಾತ ನಾಯಕನಟಿ ಸಾವಿತ್ರಿ ಅವರನ್ನು ಕುರಿತ ಬಯೋಪಿಕ್ ಟೀಸರ್ ಸಿನಿಪ್ರಿಯರ ಗಮನಸೆಳೆದಿದೆ. ಕೆಲವು ಕೋನಗಳಲ್ಲಿ ಸಾವಿತ್ರಿ ಅವರನ್ನು ಹೋಲುವ ನಟಿ ಕೀರ್ತಿ ಸುರೇಶ್‌ ಶೀರ್ಷಿಕೆ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ದುಲ್ಕರ್ ಸಲ್ಮಾನ್‌, ಸಮಂತಾ ಅಕ್ಕಿನೇನಿ ಮತ್ತು ವಿಜಯ್ ದೇವರಕೊಂಡ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಟೀಸರ್‌ನಲ್ಲಿ ಕೀರ್ತಿ ಸುರೇಶ್ ಅವರೊಂದಿಗೆ ದುಲ್ಕರ್ ಸಲ್ಮಾನ್‌ ಸನ್ನಿವೇಶಗಳು, ರೆಟ್ರೋ ಫೀಲ್‌ ನೀಡುವ ಬ್ಲ್ಯಾಕ್‌ ಅಂಡ್ ವೈಟ್‌ ದೃಶ್ಯಗಳು ಕುತೂಹಲಕಾರಿಯಾಗಿವೆ. ‘ಯೇವಾಡೆ ಸುಬ್ರಹ್ಮಣ್ಯಂ’ ತೆಲುಗು ಸಿನಿಮಾ ನಿರ್ದೇಶಿಸಿದ್ದ ನಾಗ್‌ ಅಶ್ವಿನ್‌ರ ಎರಡನೇ ಚಿತ್ರವಿದು. ಸಾಕಷ್ಟು ಸಂಶೋಧನೆಯೊಂದಿಗೆ ನಾಗ್‌ ಅಶ್ವಿನ್ ಚಿತ್ರ ಮಾಡುತ್ತಿದ್ದು ಇದು 60, 70ರ ದಶಕಗಳ ದಕ್ಷಿಣದ ಚಿತ್ರಜಗತ್ತಿನ ಮೇಲೆ ಬೆಳಕು ಚೆಲ್ಲಲಿದೆ ಎನ್ನಲಾಗುತ್ತಿದೆ.

ಹಿಂದಿ ಸೇರಿದಂತೆ ದಕ್ಷಿಣದ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳ ಚಿತ್ರಗಳಲ್ಲಿ ಸಾವಿತ್ರಿ ನಟಿಸಿದ್ದಾರೆ. ತೆಲುಗು ಚಿತ್ರರಂಗ ಅವರನ್ನು ‘ಮಹಾನಟಿ’ ಎಂದೇ ಗುರುತಿಸಿದೆ. “ದಕ್ಷಿಣ ಭಾರತ ಚಿತ್ರರಂಗ ಕಂಡ ಮೇರು ನಟಿಯ ಬದುಕು, ಸಾಧನೆಯನ್ನು ಹಿಡಿದಿಡುವ ಪ್ರಯತ್ನವಿದು. ಸಾಕಷ್ಟು ಸಂಶೋಧನೆ, ಅಧ್ಯಯನದಿಂದ ಚಿತ್ರಕಥೆ ಸಿದ್ಧಪಡಿಸಿದ್ದೇವೆ. ಅವರ ಸಾಧನೆ ಯುವ ಪೀಳಿಗೆಗೆ ತಲುಪಲಿ, ಪ್ರೇರಣೆಯಾಗಲಿ ಎನ್ನುವುದು ನಮ್ಮ ಉದ್ದೇಶ,” ಎನ್ನುತ್ತಾರೆ ನಿರ್ದೇಶಕ ನಾಗ್ ಅಶ್ವಿನ್‌. ಪ್ರಸ್ತುತ ತೆಲುಗು ಚಿತ್ರರಂಗದ ಜನಪ್ರಿಯ ಹಿರೋಯಿನ್‌ ಕೀರ್ತಿ ಸುರೇಶ್ ಚಿತ್ರದ ಶೀರ್ಷಿಕೆ ಪಾತ್ರದಲ್ಲಿದ್ದಾರೆ. ಸಾವಿತ್ರಿ ತಾರಾಪತಿ ಜೆಮಿನಿ ಗಣೇಶನ್ ಪಾತ್ರದಲ್ಲಿ ದುಲ್ಕರ್ ಸಲ್ಮಾನ್‌, ಮಧುರವಾಣಿ ಪಾತ್ರದಲ್ಲಿ ಸಮಂತಾ ಅಕ್ಕಿನೇನಿ, ವಿಜಯ್ ಆಂಥೋನಿಯಾಗಿ ವಿಜಯ್‌ ದೇವರಕೊಂಡ ನಟಿಸುತ್ತಿದ್ದಾರೆ. ಅನುಷ್ಕಾ ಶೆಟ್ಟಿ (ಭಾನುಮತಿ ರಾಮಕೃಷ್ಣ), ಶಾಲಿನಿ ಪಾಂಡೆ (ಜಮುನಾ), ಮೋಹನ್ ಬಾಬು (ಎಸ್‌ ವಿ ರಂಗರಾವ್‌), ನಾಗ ಚೈತನ್ಯ (ಅಕ್ಕಿನೇನಿ ನಾಗೇಶ್ವರ ರಾವ್‌), ಪ್ರಕಾಶ್ ರಾಜ್‌ (ಅಲ್ಲೂರಿ ಚಕ್ರಪಾಣಿ) ಚಿತ್ರದ ತಾರಾಬಳಗದಲ್ಲಿದ್ದಾರೆ. ಮೇ ತಿಂಗಳ ಎರಡನೇ ವಾರದಲ್ಲಿ ಚಿತ್ರ ತೆರೆಕಾಣುವ ಸಾಧ್ಯತೆಗಳಿವೆ.

ಇದನ್ನೂ ಓದಿ : ಚಾರ್ಲಿ ನೆನಪು | ಚಾಪ್ಲಿನ್ ಪ್ರೇರಣೆಯಿಂದ ಸೃಷ್ಟಿಯಾದ ಬಾಲಿವುಡ್ ಪಾತ್ರಗಳು
ವಿಡಿಯೋ | ಜನ್ಮದಿನದಂದು ಉತ್ತಮ ಪ್ರಜಾಕೀಯ ಪಕ್ಷ ಘೋಷಿಸಿದ ಉಪೇಂದ್ರ
ರಕ್ಷಿತ್ ಶೆಟ್ಟಿ ಜೊತೆಗಿನ ಬ್ರೇಕಪ್‌ ಕುರಿತು ಮೌನ ಮುರಿದ ರಶ್ಮಿಕಾ ಮಂದಣ್ಣ‌
ಟೀಸರ್ | ಬಯಲಾಯಿತು ‘ಥಗ್ಸ್‌ ಆಫ್ ಹಿಂದೂಸ್ತಾನ್’ನ ಅಮಿತಾಭ್‌ ಲುಕ್
Editor’s Pick More