ಸಲ್ಮಾನ್ ‘ಭಾರತ್‌’ ಸಿನಿಮಾದೊಂದಿಗೆ ಬಾಲಿವುಡ್‌ಗೆ ಮರಳಿದ ಪ್ರಿಯಾಂಕಾ ಚೋಪ್ರಾ

ಹಾಲಿವುಡ್ ಸಿನಿಮಾಗಳು ಹಾಗೂ ವೆಬ್‌ ಸರಣಿಯಲ್ಲಿ ನಟಿಸುತ್ತಿದ್ದ ಪ್ರಿಯಾಂಕಾ ಚೋಪ್ರಾ, ಎರಡು ವರ್ಷಗಳ ನಂತರ ಇದೀಗ ಬಾಲಿವುಡ್‌ಗೆ ಮರಳುತ್ತಿದ್ದಾರೆ. ಅಲಿ ಅಬ್ಬಾಸ್‌ ಜಾಫರ್ ನಿರ್ದೇಶನದ ‘ಭಾರತ್‌’ ಸಿನಿಮಾದಲ್ಲಿ ಸಲ್ಮಾನ್‌ ಖಾನ್‌ ಜೊತೆಗೆ ಅವರಿಗೆ ಮಹತ್ವದ ಪಾತ್ರವನ್ನು ನೀಡಲಾಗಿದೆ

ಎರಡು ವರ್ಷಗಳ ಹಿಂದೆ ತೆರೆಕಂಡ ‘ಜೈ ಗಂಗಾಜಲ್‌’ ಪ್ರಿಯಾಂಕಾ ಚೋಪ್ರಾರ ಲೇಟೆಸ್ಟ್‌‌ ಬಾಲಿವುಡ್ ಸಿನಿಮಾ. ಪ್ರಕಾಶ್‌ ಝಾ ನಿರ್ದೇಶನದ ಈ ಚಿತ್ರದಲ್ಲಿ ಪ್ರಿಯಾಂಕಾ ಐಪಿಎಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು. ಇದಾದ ನಂತರ ಹಾಲಿವುಡ್‌ಗೆ ಹಾರಿದ ಅವರು ಅಲ್ಲಿ ಸಿನಿಮಾ ಹಾಗೂ ‘ಕ್ಬಾಂಟಿಕೋ’ ವೆಬ್‌ ಸರಣಿಯಲ್ಲಿ ತೊಡಗಿಸಿಕೊಂಡಿದ್ದರು. ‘ಬೇವಾಚ್‌’ ಚಿತ್ರದೊಂದಿಗೆ ಹಾಲಿವುಡ್‌ ಅಭಿಯಾನ ಅರಂಭಿಸಿದ್ದ ಅವರು ‘ಎ ಕಿಡ್ ಲೈಕ್‌ ಜೇಕ್‌’ ಮತ್ತು ‘ಇಸ್‌ ನಾಟ್‌ ಇಟ್ ರೊಮ್ಯಾಂಟಿಕ್‌’ ಸಿನಿಮಾಗಳ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಈ ಮಧ್ಯೆ ‘ಕ್ವಾಂಟಿಕೋ’ ವೆಬ್‌ ಸರಣಿಯಲ್ಲೂ ಅವರು ಜನಪ್ರಿಯತೆ ಗಳಿಸಿದ್ದಾರೆ. ಇದೀಗ ಅವರು ಬಾಲಿವುಡ್‌ಗೆ ಮರಳುತ್ತಿದ್ದು, ‘ಭಾರತ್‌’ ಹಿಂದಿ ಚಿತ್ರದಲ್ಲಿ ಸಲ್ಮಾನ್‌ಗೆ ಜೋಡಿಯಾಗುತ್ತಿದ್ದಾರೆ. ಚಿತ್ರದ ನಿರ್ದೇಶಕ ಅಲಿ ಅಬ್ಬಾಸ್ ಜಾಫರ್‌ ಸುದ್ದಿಯನ್ನು ಖಚಿತಪಡಿಸಿದ್ದಾರೆ.

"ಹೌದು, ಪ್ರಿಯಾಂಕಾ ನಮ್ಮ ಚಿತ್ರದ ನಾಯಕಿಯಾಗಿ ನಟಿಸುತ್ತಿರುವುದು ಇದೀಗ ಅಧಿಕೃತ. ಹಾಲಿವುಡ್ ಸಿನಿಮಾ ಮತ್ತು ಕ್ವಾಂಟಿಕೋ ಸರಣಿಯೊಂದಿಗೆ ಅವರೀಗ ಗ್ಲೋಬಲ್ ಸ್ಟಾರ್‌. ನಮ್ಮ ಭಾರತ್ ಸಿನಿಮಾ ಕೂಡ ಜಾಗತಿಕ ಮಟ್ಟದ ಕಥಾವಸ್ತು ಹೊಂದಿದೆ. ಬಾಲಿವುಡ್‌ಗೆ ಅಂತಾರಾಷ್ಟ್ರೀಯ ಮುಖವಾಣಿಯಾಗಿರುವ ಪ್ರತಿಭಾವಂತ ನಟಿ ಪ್ರಿಯಾಂಕಾ ನಮ್ಮ ಚಿತ್ರಕ್ಕೆ ಅತ್ಯಂತ ಸೂಕ್ತ ಆಯ್ಕೆಯಾಗಿದ್ದಾರೆ,” ಎಂದಿದ್ದಾರೆ ನಿರ್ದೇಶಕ ಅಲಿ ಅಬ್ಬಾಸ್‌. ಪ್ರಿಯಾಂಕಾ ಈ ಹಿಂದೆ ಸಲ್ಮಾನ್‌ ಜೊತೆ ‘ಮುಝ್ಸೆ ಶಾದೀ ಕರೋಗೆ’ (2004), ‘ಸಲಾಂ ಎ ಇಶ್ಕ್’ (2007) ಮತ್ತು ‘ಗಾಡ್ ತುಸ್ಸಿ ಗ್ರೇಟ್‌ ಹೋ’ (2008) ಚಿತ್ರಗಳಲ್ಲಿ ನಟಿಸಿದ್ದರು. ದಶಕದ ನಂತರ ‘ಭಾರತ್‌’ನೊಂದಿಗೆ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಅಲಿ ಅಬ್ಬಾಸ್‌ ಜಾಫರ್‌ ನಿರ್ದೇಶನದಲ್ಲಿ ತಯಾರಾದ ಆಕ್ಷನ್‌-ಥ್ರಿಲ್ಲರ್‌ ‘ಗುಂಡೇ’ ಚಿತ್ರದಲ್ಲಿ ಪ್ರಿಯಾಂಕಾ ನಟಿಸಿದ್ದರು. ‘ಈ ತಂಡದೊಂದಿಗೆ ಕೆಲಸ ಮಾಡಲು ಉತ್ಸುಕಳಾಗಿದ್ದೇನೆ. ಅಭಿಮಾನಿಗಳ ಪ್ರೋತ್ಸಾಹಕ್ಕೆ ಋಣಿ. ಸಿನಿಮಾದಲ್ಲಿ ಸಿಗೋಣವಂತೆ’ ಎಂದು ಪ್ರಿಯಾಂಕಾ ಟ್ವೀಟಿಸಿದ್ದಾರೆ.

‘ಭಾರತ್‌’ ಸಿನಿಮಾಗೆ ಪ್ರೇರಣೆಯಾದ ‘ಓಡ್ ಟು ಮೈ ಫಾದರ್‌’ ಕೊರಿಯನ್‌ ಸಿನಿಮಾ

ಇದನ್ನೂ ಓದಿ : ಚಾರ್ಲಿ ನೆನಪು | ಚಾಪ್ಲಿನ್ ಪ್ರೇರಣೆಯಿಂದ ಸೃಷ್ಟಿಯಾದ ಬಾಲಿವುಡ್ ಪಾತ್ರಗಳು

ಚಿತ್ರದ ನಿರ್ಮಾಪಕ ಅತುಲ್ ಅಗ್ನಿಹೋತ್ರಿ ಮತ್ತು ನಿರ್ದೇಶಕ ಅಲಿ ಅಬ್ಬಾಸ್ ಜಾಫರ್‌ ನ್ಯೂಯಾರ್ಕ್‌ನಲ್ಲಿ ಪ್ರಿಯಾಂಕಾಗೆ ‘ಭಾರತ್‌’ ಚಿತ್ರದ ರೀಡಿಂಗ್ ಕೊಟ್ಟಿದ್ದರಂತೆ. ಸಿನಿಮಾ, ಪಾತ್ರದ ಬಗ್ಗೆ ಪ್ರಭಾವಿತರಾದ ಪ್ರಿಯಾಂಕಾ ಕೂಡಲೇ ಒಪ್ಪಿದ್ದಾರೆ. 2014ರಲ್ಲಿ ತೆರೆಕಂಡ ‘ಓಡ್ ಟು ಮೈ ಫಾದರ್‌’ ಕೊರಿಯನ್ ಸಿನಿಮಾ ಪ್ರೇರಣೆಯಿಂದ ‘ಭಾರತ್‌’ ತಯಾರಾಗುತ್ತಿದೆ. ಸಾಮಾನ್ಯ ವ್ಯಕ್ತಿಯೊಬ್ಬನ ದೃಷ್ಟಿಕೋನದಲ್ಲಿ ಏಳು ದಶಕಗಳ ಕೊರಿಯಾದ ಇತಿಹಾಸವನ್ನು ಚಿತ್ರದಲ್ಲಿ ದಾಖಲಿಸಲಾಗಿದೆ. ಇದನ್ನು ಇಲ್ಲಿನ ನೇಟಿವಿಟಿಗೆ ಒಗ್ಗಿಸಿ ಅಬ್ಬಾಸ್ ಜಾಫರ್ ಸಿನಿಮಾ ಮಾಡುತ್ತಿದ್ದಾರೆ. ಚಿತ್ರದಲ್ಲಿ ಸಲ್ಮಾನ್‌ 8 ವರ್ಷದಿಂದ 65 ವರ್ಷದವರೆಗಿನ ವ್ಯಕ್ತಿಯಾಗಿ ಐದು ಗೆಟಪ್‌ಗಳಲ್ಲಿ ನಟಿಸುತ್ತಿದ್ದಾರೆ. ಸ್ಪೇನ್‌, ಅಬುದಾಬಿ, ಪಂಜಾಬ್‌ ಮತ್ತು ದಿಲ್ಲಿಯಲ್ಲಿ ಚಿತ್ರೀಕರಣ ನಡೆಯಲಿದೆ. 2019ರ ಈದ್ ಹಬ್ಬಕ್ಕೆ ಚಿತ್ರವನ್ನು ತೆರೆಗೆ ತರುವುದು ಚಿತ್ರನಿರ್ಮಾಪಕ ಯೋಜನೆ.

ಮುಝ್ಸೆ ಶಾದಿ ಕರೋಗೆ ಚಿತ್ರದ ಹಾಡು (2004)

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More