ಸೌಂದರ್ಯ ನೆನಪು | ದಕ್ಷಿಣ ಭಾರತದ ಜನಪ್ರಿಯ ನಟಿ ಸೌಂದರ್ಯ ಇವರೇನಾ?

ಅತಿ ಕಡಿಮೆ ಅವಧಿಯಲ್ಲಿ ದಕ್ಷಿಣ ಭಾರದ ಚಿತ್ರರಂಗಗಳಲ್ಲಿ ಮಾತ್ರವಲ್ಲದೆ ಬಾಲಿವುಡ್‌ನಲ್ಲೂ ಜನಪ್ರಿಯತೆಯನ್ನು ಗಳಿಸಿದ ನಟಿ ಸೌಂದರ್ಯ. ಕನ್ನಡದ ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ತಮ್ಮ ‘ದ್ವೀಪ’ ಚಿತ್ರೀಕರಣದಲ್ಲಿ ತಾವು ಕಂಡ ಸೌಂದರ್ಯ ಅವರನ್ನು ಇಲ್ಲಿ ಸ್ಮರಿಸಿಕೊಂಡಿದ್ದಾರೆ

‘ದ್ವೀಪ’ (2002) ಚಿತ್ರೀಕರಣದ ಸಂದರ್ಭ. ಚಿತ್ರದಲ್ಲಿ ಹಿರಿಯ ನಟ ವಾಸುದೇವ ರಾವ್ ಅಪರೂಪದ ಪಾತ್ರ ನಿರ್ವಹಿಸಿದ್ದಾರೆ. ನಟಿ ಸೌಂದರ್ಯ ಅವರಿಗೆ ವಾಸುದೇವ ರಾವ್ ಅವರನ್ನು ಕಂಡರೆ ತುಂಬಾ ಪ್ರೀತಿ. ‘ಅಜ್ಜಯ್ಯ’ ಎನ್ನುತ್ತ ಅವರೊಂದಿಗೆ ಸೆಟ್‌ನಲ್ಲಿ ಓಡಾಡಿಕೊಂಡಿರುತ್ತಿದ್ದರು. ಅದೊಂದು ದಿನ ಗುಡ್ಡದ ಮೇಲೆ ಶೂಟಿಂಗ್‌ಗೆಂದು ನಾವು ತಂತ್ರಜ್ಞರು ಬೆಳಗ್ಗೆಯೇ ಹೊರಟಿದ್ದೆವು. "ನೀವು ಹನ್ನೊಂದು ಗಂಟೆಗೆ ಬಂದರೆ ಸಾಕು,” ಎಂದು ವಾಸುದೇವ ರಾವ್ ಮತ್ತು ಸೌಂದರ್ಯ ಅವರಿಗೆ ತಿಳಿಸಿದ್ದೆ.

ಗಂಟೆ ಹನ್ನೊಂದಾಯ್ತು. ಹಿರಿಯರಾದ ವಾಸುದೇವ ರಾವ್ ಅವರಿಗೆ ಬೆಟ್ಟ ಹತ್ತಲು ಕಷ್ಟವಾಗುತ್ತಿತ್ತು. ನಟಿ ಸೌಂದರ್ಯ ಇದಕ್ಕೆ ಸೂಕ್ತ ಪೂರ್ವತಯಾರಿ ಮಾಡಿಕೊಂಡಿದ್ದರು. ಸೌಂದರ್ಯ ಮತ್ತು ಅವರ ಅಣ್ಣ ಇಬ್ಬರೂ ವಾಸುದೇವ ರಾವ್ ಕೈಹಿಡಿದು ಬೆಟ್ಟ ಹತ್ತಿಸುತ್ತಿದ್ದರು. ಅವರ ಜೊತೆಗಿದ್ದ ಸಹಾಯಕ ಛತ್ರಿ, ಫೋಲ್ಡಿಂಗ್ ಚೇರ್, ಬೀಸಣಿಕೆ ಹಿಡಿದಿದ್ದ. ಹತ್ತು ಹೆಜ್ಜೆ ಹತ್ತುತ್ತಿದ್ದಂತೆ ಇವರಿಬ್ಬರೂ ಚೇರ್ ಹಾಕಿ ವಾಸುದೇವ ರಾವ್‌ ಅವರನ್ನು ಕೂರಿಸುತ್ತಿದ್ದರು. ಅಣ್ಣ ಛತ್ರಿ ಹಿಡಿದರೆ, ಸೌಂದರ್ಯ ಬೀಸಣಿಕೆಯಿಂದ ಗಾಳಿ ಬೀಸುತ್ತಿದ್ದರು! ಪ್ರತಿ ಹತ್ತಿಪ್ಪತ್ತು ಹೆಜ್ಜೆಗೂ ಇದು ನಡೆಯುತ್ತಿತ್ತು. ನಾನು ಮೇಲಿನಿಂದ ಈ ದೃಶ್ಯ ನೋಡುತ್ತಿದ್ದೆ. ಕೊನೆಗೆ, ವಾಸುದೇವ ರಾವ್‌ ಅವರಿಗೆ ಶ್ರಮವಾಗದಂತೆ ಮೇಲೆ ಕರೆದುಕೊಂಡುಬಂದಿದ್ದರು. ದಕ್ಷಿಣ ಭಾರತದ ಜನಪ್ರಿಯ ನಟಿ ಸೌಂದರ್ಯ ಇವರೇನಾ? ಎಂದು ನನಗೆ ಅಚ್ಚರಿಯಾಗಿತ್ತು!

ದ್ವೀಪ ಚಿತ್ರದ ಟ್ರೈಲರ್ (2002)

ಸೌಂದರ್ಯ | ನಟಿ ಸೌಂದರ್ಯ 2004ರ ಏ.17ರ ಇದೇ ದಿನದಂದು ಅಗಲಿದಾಗ ಅವರಿಗೆ 31 ವರ್ಷವಷ್ಟೇ. ಅತ್ಯಂತ ಕಡಿಮೆ ಅವಧಿಯಲ್ಲಿ ದಕ್ಷಿಣದ ನಾಲ್ಕು ಪ್ರಾದೇಶಿಕ ಚಿತ್ರರಂಗ ಸೇರಿದಂತೆ ಬಾಲಿವುಡ್‌ನಲ್ಲೂ ಅಭಿನಯಿಸಿ ಜನಮೆಚ್ಚುಗೆ ಗಳಿಸಿದ್ದರು. ಚಂದದ ನಟಿ ಉತ್ತಮ ಅಭಿನೇತ್ರಿಯೂ ಹೌದು. ತೆಲುಗಿನಲ್ಲಿ ಸ್ಟಾರ್ ಹಿರೋಯಿನ್‌ ಎನಿಸಿಕೊಂಡಿದ್ದ ಅವರನ್ನು, ‘ಆಧುನಿಕ ತೆಲುಗು ಸಿನಿಮಾರಂಗದ ಸಾವಿತ್ರಿ’ ಎಂದು ಕರೆದಿದ್ದರು. ಅಮಿತಾಭ್‌ ಬಚ್ಚನ್‌, ರಜನೀಕಾಂತ್‌, ವಿಷ್ಣುವರ್ಧನ್‌, ಚಿರಂಜೀವಿ, ಕಮಲ್ ಹಾಸನ್‌, ಮುಮ್ಮೂಟಿ ಸೇರಿದಂತೆ ಭಾರತ ಚಿತ್ರರಂಗದ ಪ್ರಮುಖ ನಾಯಕನಟರೊಂದಿಗೆ ಸೌಂದರ್ಯ ಅಭಿನಯಿಸಿದ್ದಾರೆ. ಅವರು ನಿರ್ಮಿಸಿದ ‘ದ್ವೀಪ’ (2002) ಸಿನಿಮಾಗೆ ಅತ್ಯುತ್ತಮ ಪ್ರಾದೇಷಿಕ ಸಿನಿಮಾ ರಾಷ್ಟ್ರಪ್ರಶಸ್ತಿ ಸಂದಿದೆ. ಸೌಂದರ್ಯ ಎರಡು ಬಾರಿ ಕರ್ನಾಟಕ ರಾಜ್ಯ ಪ್ರಶಸ್ತಿ, ಐದು ಫೀಲ್ಮ್‌ಫೇರ್‌ ಹಾಗೂ ಮೂರು ಬಾರಿ ನಂದಿ ಪುರಸ್ಕಾರ ಪಡೆದಿದ್ದಾರೆ. ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಅವರು, ರಾಜಕೀಯದಲ್ಲೂ ಸಕ್ರಿಯರಾಗಿದ್ದರು. ರಾಜಕೀಯ ಅಭ್ಯರ್ಥಿಯೊಬ್ಬರ ಚುನಾವಣಾ ಪ್ರಚಾರಕ್ಕೆ ತೆರಳುವ ಸಂದರ್ಭ ಹೆಲಿಕಾಪ್ಟರ್‌ ದುರಂತದಲ್ಲಿ ಸೌಂದರ್ಯ ಅಗಲಿದರು. ಪ್ರತಿಭಾವಂತ ನಟಿಯ ಅಕಾಲಿಕ ಮರಣ ಚಿತ್ರರಂಗಕ್ಕಾದ ನಷ್ಟ.

ಇದನ್ನೂ ಓದಿ : ‘ಸ್ಟೇಟ್‌ಮೆಂಟ್‌’ ಚಿತ್ರಕ್ಕೆ ಹಾಡಿದ ಸುಹಾನಾ ಸೈಯದ್‌ ಈಗ ಹಿನ್ನೆಲೆ ಗಾಯಕಿ

ಆಪ್ತಮಿತ್ರ (2004)

ಸೂರ್ಯವಂಶಂ (1999)

ಅರುಣಾಚಲಂ (1999)

ನವ್ವಂಡಿ ಲಬ್ಬಂಡಿ (1999)

ಅನ್ನಯ್ಯ (1993)

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More