‘ಕಾಜಿ’ ಕಿರುಚಿತ್ರದ ನಿರ್ದೇಶಕಿಯಾಗಿ ಸದ್ದು ಮಾಡುತ್ತಿದ್ದಾರೆ ನಟಿ ಐಶಾನಿ

ನಟಿಯಾಗಿ ಕನ್ನಡಿಗರಿಗೆ ಪರಿಚಿತರಾಗಿರುವ ಐಶಾನಿ ಶೆಟ್ಟಿ ನಿರ್ದೇಶನದಲ್ಲೂ ತಮ್ಮ ಪ್ರತಿಭೆ ಸಾಬೀತು ಮಾಡಿದ್ದಾರೆ. ಇತ್ತೀಚೆಗೆ, ದಾದಾ ಸಾಹೇಬ್‌ ಫಾಲ್ಕೆ ಅಕಾಡೆಮಿ ಚಿತ್ರೋತ್ಸವದಲ್ಲಿ ಅವರ ‘ಕಾಜಿ’ ಕಿರುಚಿತ್ರ ಪ್ರದರ್ಶನಗೊಂಡು ಮೆಚ್ಚುಗೆ ಪಡೆದಿದೆ. ನಟ ಸತೀಶ್ ನೀನಾಸಂ ಈ ಕಿರುಚಿತ್ರದ ನಿರ್ಮಾಪಕ

ನಟನೆಯಿಂದ ಕೊಂಚ ಬಿಡುವು ಪಡೆದಿದ್ದ ನಟಿ ಐಶಾನಿ ಶೆಟ್ಟಿ ‘ಕಾಜಿ’ ಕಿರುಚಿತ್ರ ಸಿದ್ಧಪಡಿಸಿದ್ದಾರೆ. ಹದಿನೇಳು ನಿಮಿಷಗಳ ಈ ಕಿರುಚಿತ್ರವು ಕ್ಯಾಲಿಫೋರ್ನಿಯಾದಲ್ಲಿ ನಡೆದ ಭಾರತದ ಅತ್ಯುತ್ತಮ ಕಿರುಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು. ಅಲ್ಲಿ ಜನಮೆಚ್ಚುಗೆ ಪಡೆದ ಕಿರುಚಿತ್ರ ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿ ಚಿತ್ರೋತ್ಸವಕ್ಕೆ ಆಯ್ಕೆಯಾಗಿತ್ತು. ಅಲ್ಲಿ ಪ್ರದರ್ಶನಗೊಂಡ ಈ ಕಿರುಚಿತ್ರವು ಅತ್ಯುತ್ತಮ ಛಾಯಾಗ್ರಹಣ (ಪ್ರೀತಂ ತೆಗ್ಗಿನಮನೆ) ಮನ್ನಣೆಗೆ ಪಾತ್ರವಾಗಿದೆ. "ಇದು ನಮ್ಮೆಲ್ಲರ ಪ್ರಯತ್ನಕ್ಕೆ ಸಂದ ಗೌರವ,” ಎನ್ನುತ್ತಾರೆ ನಿರ್ದೇಶಕಿ ಐಶಾನಿ ಶೆಟ್ಟಿ. ‘ಕಾಜಿ’ ಅಂದರೆ ಬಳೆ. ಕಿರುಚಿತ್ರದಲ್ಲಿ ಸಾಂಕೇತಿಕವಾಗಿ ಬಳೆ ಬಳಕೆಯಾಗಿದೆಯಂತೆ. ನಟಿ ಹಿತ ಚಂದ್ರಶೇಖರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮಧುರಚೆನ್ನಿಗ ಮತ್ತು ಇಂಚರಾ ಚಿತ್ರದ ಬಾಲಕಲಾವಿದರು.

"ಬಡತನದ ಕುಟುಂಬದಲ್ಲಿ ತಾಯಿ-ಮಗನ ಬಾಂಧವ್ಯ, ಅವರ ದಿನನಿತ್ಯದ ಆಗುಹೋಗುಗಳು, ಸಮಾಜ ಅವರನ್ನು ನೋಡುವ ಬಗೆ, ತಮ್ಮ ಸಂಕಷ್ಟಗಳ ಮಧ್ಯೆಯೇ ಚಿಕ್ಕ-ಚಿಕ್ಕ ಸಂಗತಿಗಳಲ್ಲಿ ಖುಷಿಪಡುವ ಅವರ ಜೀವನೋತ್ಸಾಹ... ಇದು ನಮ್ಮ ಕಿರುಚಿತ್ರದ ಕಥಾಹಂದರ,” ಎನ್ನುವ ಐಶಾನಿ, ಹೈಸ್ಕೂಲ್‌ ದಿನಗಳಿಂದಲೂ ಬರೆಯುವ ಹವ್ಯಾಸ ರೂಢಿಸಿಕೊಂಡಿದ್ದರಂತೆ. ಸಮೂಹ ಮಾಧ್ಯಮ ಪದವಿ ಓದುವಾಗ ಸ್ಟೂಡೆಂಟ್‌ ಪ್ರಾಜೆಕ್ಟ್‌ ಎಂದು ಕಿರುಚಿತ್ರ ಮಾಡಿದ ಅನುಭವ ಅವರಿಗಿತ್ತು. ಇನ್ನು, ನಟಿಯಾಗಿ ಚಿತ್ರೀಕರಣದಲ್ಲಿರುವಾಗ ನಿರ್ದೇಶನ ಹಾಗೂ ಇತರ ತಾಂತ್ರಿಕ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಅಲ್ಲಿನ ಗ್ರಹಿಕೆಗಳು ‘ಕಾಜಿ’ ಕಿರುಚಿತ್ರಕ್ಕೆ ನೆರವಾಗಿವೆ. ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದರು.

ನನಗೆ ಮೇನ್‌ಸ್ಟ್ರೀಮ್‌ನಲ್ಲಿ ಇಂತಹ ಪಾತ್ರ ಸಿಗುತ್ತೋ, ಇಲ್ಲವೋ ಗೊತ್ತಿಲ್ಲ. ಹಾಗಾಗಿ ಐಶಾನಿ ಕತೆ ಹೇಳಿದಾಕ್ಷಣ ಒಪ್ಪಿಕೊಂಡೆ. ವಯಸ್ಸಿಗೆ ಮೀರಿದ ಡಿಗ್ಲ್ಯಾಮ್‌ ಪಾತ್ರ. ಮಂಡ್ಯ ಭಾಷೆ ಮಾತನಾಡಬೇಕಿತ್ತು. ನಟ, ‘ಕಾಜಿ’ ನಿರ್ಮಾಪಕ ಸತೀಶ್ ನೀನಾಸಂ ಈ ಹಂತದಲ್ಲಿ ಸೂಕ್ತ ಸಲಹೆ-ಸೂಚನೆಗಳೊಂದಿಗೆ ನೆರವಾದರು. ರಂಗಭೂಮಿಯಲ್ಲಿನ ಅನುಭವ ಈ ಪಾತ್ರಕ್ಕೆ ತುಂಬಾ ನೆರವಾಯ್ತು.
ಹಿತ ಚಂದ್ರಶೇಖರ್, ‘ಕಾಜಿ’ ಕಿರುಚಿತ್ರದ ನಟಿ

“ರಾಕೆಟ್’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವಾಗ ಚಿತ್ರದ ನಾಯಕನಟ ನೀನಾಸಂ ಸತೀಶ್ ಅವರಲ್ಲಿ ಕಿರುಚಿತ್ರದ ಬಗ್ಗೆ ಪ್ರಸ್ತಾಪಿಸಿದ್ದೆ. ಅದಾಗಲೇ ಅವರು ‘ಚೌಕಾಬಾರ’ ಕಿರುಚಿತ್ರ ನಿರ್ಮಿಸಿದ್ದರು. ನಾನು ಹೇಳಿದ ಕತೆ ಅವರಿಗೆ ಇಷ್ಟವಾಗಿ ನಿರ್ಮಿಸಲು ಮುಂದಾದರು. ನೈಜ ಘಟನೆಯೊಂದು ಈ ಕಿರುಚಿತ್ರಕ್ಕೆ ಪ್ರೇರಣೆ. ಚುನಾವಣೆ ಗಲಾಟೆಗಳು ಮುಗಿದ ನಂತರ ಕಿರುಚಿತ್ರ ಬಿಡುಗಡೆ ಮಾಡಲಿದ್ದೇವೆ,” ಎನ್ನುತ್ತಾರೆ ಐಶಾನಿ. ಕನಕಪುರ ಸುತ್ತಮುತ್ತಲ ಗ್ರಾಮಗಳಲ್ಲಿ ಅವರು ಚಿತ್ರೀಕರಣ ನಡೆಸಿದ್ದಾರೆ. ಹಿನ್ನೆಲೆ ಸಂಗೀತ ಮಿಥುನ್‌ ಮುಕುಂದನ್‌ ಅವರದು. ನಟನೆ ಜೊತೆಜೊತೆಗೇ ಐಶಾನಿ ಸ್ನಾತಕೋತ್ತರ ಪದವಿಯನ್ನೂ ಪೂರೈಸಿದ್ದಾರೆ. ಅವರು ನಟಿಸಿರುವ ‘ನಡುವೆ ಅಂತರವಿರಲಿ’ ಸಿನಿಮಾ ತೆರೆಗೆ ಸಿದ್ಧವಾಗಿದೆ.

‘ಕಾಜಿ’ ಕಿರುಚಿತ್ರದ ದೃಶ್ಯ
ಇದನ್ನೂ ಓದಿ : ನಮ್ಮನ್ನು ಬಿಡೋದಿಲ್ಲ ಪಾಲಿಟಿಕ್ಸು; ವೈರಲ್ ಅಯ್ತು ಭಟ್ಟರ ಎಲೆಕ್ಷನ್‌ ಸಾಂಗ್

ನೀನಾಸಂ ಸತೀಶ್‌ ಮತ್ತು ಐಶಾನಿ ಶೆಟ್ಟಿ ಅಭಿನಯದ 'ರಾಕೆಟ್‌’ ಚಿತ್ರದ ಹಾಡು

ವಿಡಿಯೋ ಸ್ಟೋರಿ | ಕ್ಯಾನ್ ಚಿತ್ರೋತ್ಸವದಲ್ಲಿ ಸದ್ದು ಮಾಡಿದ ಜಪಾನ್, ಕೊರಿಯನ್
ರಾಯಲ್‌ ವೆಡ್ಡಿಂಗ್ | ಹ್ಯಾರಿ-ಮೆಗಾನ್ ಮದುವೆಯಲ್ಲಿ ಪ್ರಿಯಾಂಕಾ ಚೋಪ್ರಾ
ಮೀಸೆ ಕಾಣದಂತೆ ಟೇಪ್ ಅಂಟಿಸಬಹುದು! ಪತಿ ಲೋಕೇಶ್‌ರನ್ನು ಸ್ಮರಿಸಿದ ಗಿರಿಜಾ
Editor’s Pick More