ವಸ್ತು, ನಿರೂಪಣೆ, ಉತ್ತಮ ನಟನೆಯಿಂದ ಗಮನ ಸೆಳೆದ ರಾಜಕೀಯ ಚಿತ್ರಗಳು

ರಾಜಕೀಯದ ಒಳಸುಳಿಗಳು, ಸಂಕೀರ್ಣತೆ, ಜನಸಾಮಾನ್ಯರ ಬಲಿ ಕುರಿತ ಹಲವಾರು ಕನ್ನಡ ಸಿನಿಮಾಗಳು ಗಮನ ಸೆಳೆಯುತ್ತವೆ. ಹತ್ತಾರು ಗಂಭೀರ ಪ್ರಯತ್ನಗಳಾಗಿದ್ದು, ಕಮರ್ಷಿಯಲ್‌ ಮಾದರಿಯಲ್ಲೂ ಹಲವಾರು ಸಿನಿಮಾಗಳು ತಯಾರಾಗಿರುವುದನ್ನು ನಾವು ಗುರುತಿಸಬಹುದು

ಕನ್ನಡ ಚಿತ್ರರಂಗದಲ್ಲಿ ರಾಜಕೀಯ ಸಿನಿಮಾಗಳ ಭರಾಟೆ ಶುರುವಾಗಿದ್ದು ಎಂಬತ್ತರ ದಶಕದಲ್ಲಿ. ಸಾಮಾಜಿಕ, ಕೌಟುಂಬಿಕ, ಥ್ರಿಲ್ಲರ್‌, ಆಕ್ಷನ್‌ ಸಿನಿಮಾಗಳ ಪ್ರೇಕ್ಷಕರು ಗಂಭೀರವಾದ ರಾಜಕೀಯ ಸಿನಿಮಾಗಳನ್ನು ಒಪ್ಪಿಕೊಳ್ಳುವ ಬಗ್ಗೆ ಚಿತ್ರತಯಾರಕರಲ್ಲಿ ಭರವಸೆ ಇರಲಿಲ್ಲ. ಹಿಂದಿ ಚಿತ್ರರಂಗದಲ್ಲಿ ಅಂತಹ ಸಿನಿಮಾಗಳು ಬಂದ ನಂತರ ಕನ್ನಡದಲ್ಲಿಯೂ ನಿರ್ದೇಶಕರು ರಾಜಕೀಯ ವಸ್ತುವನ್ನು ತೆರೆಗೆ ಅಳವಡಿಸತೊಡಗಿದರು. ಪುಣೆಯ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಕಲಿತುಬಂದವರು, ಹವ್ಯಾಸಿ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಕ್ರಿಯಾಶೀಲರು ಗಂಭೀರ ರಾಜಕೀಯ ವಸ್ತುಗಳ ಬಗ್ಗೆ ಆಲೋಚಿಸಿದರು.

ಎಂ ಎಸ್ ಸತ್ಯು ನಿರ್ದೇಶನದ ‘ಚಿತೆಗೂ ಚಿಂತೆ’ (1978), ಲಂಕೇಶರ ‘ಖಂಡಿವಿದೆಕೋ ಮಾಂಸವಿದೆಕೋ’ (1979), ಕೆ ಎಂ ಶಂಕರಪ್ಪ ನಿರ್ದೇಶನದ ‘ಮಾಡಿ ಮಡಿದವರು’ (1974) ಆರಂಭದ ಪ್ರಮುಖ ಪ್ರಯೋಗಗಳು. ‘ಚಿತೆಗೂ ಚಿಂತೆ’ಯಲ್ಲಿ ನಿರ್ದೇಶಕ ಸತ್ಯು ಅವರು ರಾಜಕೀಯದ ಕದಂಬ ಬಾಹುಗಳು ಇತರೆಡೆ ಹೇಗೆ ಚಾಚುತ್ತವೆ ಎನ್ನುವುದನ್ನು ವಿಡಂಬನೆಯ ಧಾಟಿಯಲ್ಲಿ ಚಿತ್ರಿಸಿದ್ದರು. ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯ ವಸ್ತುವಾದರೂ ‘ಮಾಡಿ ಮಡಿದವರು’ ಕತೆಯ ಆಂತರ್ಯದಲ್ಲಿ ರಾಜಕಾರಣದ ಸುಳಿಯಿತ್ತು.

ಚಿತೆಗೂ ಚಿಂತೆ

ಎಸ್ ವಿ ರಾಜೇಂದ್ರಸಿಂಗ್ ಬಾಬು ನಿರ್ದೇಶನದ ‘ಅಂತ’ (1981) ಕನ್ನಡದ ಪ್ರಮುಖ ಪೊಲಿಟಿಕಲ್‌-ಥ್ರಿಲ್ಲರ್‌. ಹಸಿ ಹಸಿ ನಿರೂಪಣೆಯ ಸಿನಿಮಾ ದಕ್ಷಿಣ ಭಾರತದಲ್ಲಿ ಮಾತ್ರವಲ್ಲ ಬಾಲಿವುಡ್‌ನಲ್ಲೂ ಸುದ್ದಿಯಾಗಿತ್ತು. ವ್ಯವಸ್ಥೆಯಲ್ಲಿನ ರಾಜಕೀಯ ಮೇಲಾಟ, ಇದರಿಂದ ಅಸಹಾಯಕರಾಗುವ ಸಾಮಾನ್ಯರು ಹಾಗೂ ಅಧಿಕಾರಿಗಳ ಚಿತ್ರಣ. ಈ ಸಿನಿಮಾದ ಯಶಸ್ಸು ಇಂತಹ ಮತ್ತಷ್ಟು ಸಿನಿಮಾಗಳಿಗೆ ಪ್ರೇರಣೆಯಾಯ್ತು. ರಾಜಕಾರಣದ ಒಳಪದರಗಳ ರೋಚಕ ನಿರೂಪಣೆಯ ‘ಚಕ್ರವ್ಯೂಹ’, ‘ನ್ಯೂಡೆಲ್ಲಿ’, ‘ಗಜೇಂದ್ರ’ ಕೆಲವು ಉದಾಹರಣೆ. ಅಂಬರೀಶ್ ಅವರ ರೆಬೆಲ್‌ ಇಮೇಜನ್ನು ನಿರ್ದೇಶಕರು ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಂಡರು.

ಅಂತ

ಕೃಷ್ಣ ಮಾಸಡಿ ನಿರ್ದೇಶನದ ‘ಅವಸ್ಥೆ’ (1987) ಕನ್ನಡದ ಪ್ರಮುಖ ರಾಜಕೀಯ ಸಿನಿಮಾಗಳಲ್ಲೊಂದು. ರಾಜಕೀಯ ಸಂಕೀರ್ಣತೆಯೊಂದಿಗೆ ಸಾಮಾಜಿಕ ಕಳಕಳಿ ಮತ್ತು ವ್ಯಕ್ತಿಯೊಬ್ಬನ ಬೆಳವಣಿಗೆಯ ಹಂತಗಳನ್ನು ಹೇಳುವ ಕಥಾನಕವಾಗಿ ಇದೊಂದು ಮಹತ್ವದ ಪ್ರಯೋಗ. ಇದಕ್ಕೂ ಮುನ್ನ ತೆರೆಕಂಡ ಎಂ ಎಸ್ ಸತ್ಯು ಅವರ ‘ಬರ’ (1982) ಹಾಗೂ ‘ಸಿಂಹಾಸನ’ (1983) ಚಿತ್ರದಲ್ಲಿ ನಿರ್ದೇಶಕ ಸಿ ಆರ್ ಸಿಂಹ ಅವರ ರಾಜಕೀಯ ವಿಡಂಬನೆ ಪ್ರೇಕ್ಷಕರಿಗೆ ಮೆಚ್ಚುಗೆಯಾಗಿತ್ತು. ಶಂಕರ್‌ನಾಗ್‌ ನಟಿಸಿ, ನಿರ್ದೇಶಿಸಿದ್ದ ‘ಆಕ್ಸಿಡೆಂಟ್’‌ (1985) ಕನ್ನಡದ ಅತ್ಯಂತ ಪ್ರಮುಖ ಪ್ರಯೋಗ. ಸಮಾಜದಲ್ಲಿನ ಭ್ರಷ್ಟಾಚಾರ, ಲಂಚಕೋರತನ ಮತ್ತು ರಾಜಕೀಯ ಪ್ರಭಾವಗಳನ್ನು ಶಂಕರ್‌ ಪರಿಣಾಮಕಾರಿಯಾಗಿ ನಿರೂಪಿಸಿದ್ದರು. ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ತಮ್ಮ ‘ಪಡುವಾರಹಳ್ಳಿ ಪಾಂಡವರು’ (1978) ಚಿತ್ರದಲ್ಲಿ ತುರ್ತು ಪರಿಸ್ಥಿತಿಯನ್ನು ಅಣಕಿಸಿದ್ದನ್ನು ಮರೆಯುವ ಹಾಗೇ ಇಲ್ಲ.

ಆಕ್ಸಿಡೆಂಟ್‌

ತೊಂಬತ್ತರ ದಶಕದಲ್ಲಿ ರಾಜಕೀಯ ಸಿನಿಮಾಗಳು ಕಮರ್ಷಿಯಲ್‌ ಆಗಿಬಿಟ್ಟವು. ಅಂತಹ ಹತ್ತಾರು ಸಿನಿಮಾಗಳ ಪೈಕಿ ‘ಮರಣ ಮೃದಂಗ’ (1992), ‘ಗೋಲಿಬಾರ್’ (1993), ‘ರಾಜಕೀಯ’ (1993) ಗಮನ ಸೆಳೆದ ಚಿತ್ರಗಳು. ರಾಜಕೀಯ ದುರುದ್ದೇಶದಿಂದ ನಿಷ್ಠಾವಂತ ರಾಜಕಾರಣಿಯ ಕೊಲೆ, ಆತನ ಕುಟುಂಬಕ್ಕೆ ಬೆದರಿಕೆ, ಅವರಿಗೆ ನೆರವಾಗಿ ಭ್ರಷ್ಟರನ್ನು ಸದೆಬಡಿವ ಪೊಲೀಸ್ ಅಧಿಕಾರಿಯ ಕಥಾನಕಗಳು. ಸಿದ್ಧಮಾದರಿಯ ಹತ್ತಾರು ರಾಜಕೀಯ ಸಿನಿಮಾಗಳ ಮಧ್ಯೆ ಬಿಗಿಯಾದ ನಿರೂಪಣೆ, ತಾಂತ್ರಿಕ ಕೌಶಲ, ಕಲಾವಿದರ ಉತ್ತಮ ನಟನೆಯಿಂದಾಗಿ ಈ ಸಿನಿಮಾಗಳು ಭಿನ್ನವಾಗಿ ಕಾಣಿಸಿದವು. ಕೆ ವಿ ರಾಜು ಅವರ ‘ಹುಲಿಯಾ’ (1996) ರಾಜಕಾರಣದೆಡೆಗಿನ ಸಾಮಾನ್ಯನೊಬ್ಬನ ಕ್ರೋಧವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿತ್ತು. ಮುಂದೆ ಟಿ ಎನ್ ಸೀತಾರಾಂ ನಿರ್ದೇಶನದ ‘ಮತದಾನ’ (2001) ರಾಜಕಾರಣದ ಒಳಸುಳಿಗಳು, ಇದಕ್ಕೆ ಬಲಿಯಾಗುವ ಸೂಕ್ಷ್ಮ ಮನಸ್ಸುಗಳು, ಸಾಮಾನ್ಯರ ಒಳಗುದಿಗಳನ್ನು ಹಿಡಿದಿಟ್ಟಿತ್ತು. ಎರಡು ವರ್ಷಗಳ ಹಿಂದೆ ತೆರೆಕಂಡ ಬಿ ಸುರೇಶ್‌ ನಿರ್ದೇಶನದ ‘ದೇವರ ನಾಡಲ್ಲಿ’ (2016) ಪ್ರೀತಿಯ ಕತೆಯೊಂದಿಗೆ ರಾಜಕೀಯದ ಕದಂಬ ಬಾಹುಗಳನ್ನು ಪರಿಚಯಿಸಿತ್ತು. ಹೀಗೆ, ಪ್ರೀತಿಯ ಕತೆಯ ಹಿನ್ನೆಲೆಯಲ್ಲಿ ರಾಜಕಾರಣವನ್ನು ಹೇಳುವ ಹತ್ತಾರು ಸಿನಿಮಾಗಳು ಸಿಗುತ್ತವೆ.

ಹಿಂದಿ ರಾಜಕೀಯ ಸಿನಿಮಾಗಳು | ಲೀಡರ್‌ (1964), ಗರಂ ಹವಾ (1973), ಕಿಸ್ಸಾ ಕುರ್ಸಿ ಕಾ (1977), ‘ಆಂಧಿ’ (1975), ‘ನ್ಯೂ ಡೆಲ್ಲಿ ಟೈಮ್ಸ್‌’ (1986), ಮೇ ಆಜಾದ್ ಹೂ (1989), ಆಜ್ ಕಾ ಎಂಎಲ್‌ಎ (1984), ಇನ್ಕಿಲಾಬ್‌ (1984), ‘ಹು ತು ತು’ (1999), ‘ರಾಜ್‌ನೀತಿ’ (2010), ‘ಗುಲಾಲ್‌’ (2009), ‘ನಾಯಕ್‌’ (2001), ‘ಸರ್ಕಾರ್‌’ (2005), ‘ಸರ್ಕಾರ್ ರಾಜ್‌’ (2008), ‘ಶೂಲ್‌’ (1999), ‘ಸತ್ತಾ’ (2003), ‘ಯುವ’ (2004), ‘ಹಾಸಿಲ್‌’ (2003), ‘ಫಿರಾಕ್‌’ (2008), ‘ರಣ್‌’ (2010), ‘ರಕ್ತ್‌ ಚರಿತ್ರಾ’ (2010), ‘ಚಕ್ರವ್ಯೂಹ್‌’ (2012), ‘ಆರಕ್ಷಣ್‌’ (2011), ‘ಶಾಂಘೈ’ (2012), ‘ಏಕ್ ಬುರಾ ಆದ್ಮಿ’ (2013), ‘ಸತ್ಯಾಗ್ರಹ್‌’ (2013), ‘ಡರ್ಟಿ ಪಾಲಿಟಿಕ್ಸ್‌’ (2015), ‘ರಾಜ್‌ನೀತಿ 2’ (2015)

ಕಿಸ್ಸಾ ಕುರ್ಸಿ ಕಾ

ರಾಜ್‌ನೀತಿ

ಇದನ್ನೂ ಓದಿ : ‘ಕಾಜಿ’ ಕಿರುಚಿತ್ರದ ನಿರ್ದೇಶಕಿಯಾಗಿ ಸದ್ದು ಮಾಡುತ್ತಿದ್ದಾರೆ ನಟಿ ಐಶಾನಿ
ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More