ಸಿನಿಮಾ ಡಬ್ಬಿಂಗ್ ಹೋರಾಟದ ಪ್ರಮುಖ ರೂವಾರಿ ‘ಸಂಧ್ಯಾರಾಗ’ದ ಅನಕೃ

ಕನ್ನಡ ಸಿನಿಮಾರಂಗಕ್ಕೆ ಸಾಹಿತಿ ಅ ನ ಕೃಷ್ಣರಾಯರ ಕೊಡುಗೆ ಸ್ಮರಣೀಯ. ಅವರ ಕಾದಂಬರಿಗಳು ಸಿನಿಮಾಗಳಾಗಿವೆ. ಪ್ರಮುಖವಾಗಿ ಕನ್ನಡ ಚಿತ್ರರಂಗದ ಡಬ್ಬಿಂಗ್ ಹೋರಾಟದಲ್ಲಿ ಅವರ ಹೆಸರು ಮುಂಚೂಣಿಯಲ್ಲಿ ಪ್ರಸ್ತಾಪವಾಗುತ್ತದೆ. ಇಂದು (ಮೇ 9) ಅನಕೃ ಜನ್ಮದಿನ

ಅದು ‘ಜೀವನ ನಾಟಕ’ (1943) ಸಿನಿಮಾ ಚಿತ್ರೀಕರಣದ ಸಂದರ್ಭ. ವಹಾಬ್‌ ಕಾಶ್ಮೀರಿ ನಿರ್ದೇಶನದ ಈ ಚಿತ್ರದಲ್ಲಿ ಗುಬ್ಬಿ ವೀರಣ್ಣ, ಕೆಂಪರಾಜು ಅರಸು, ಶಾಂತಾ ಹುಬ್ಳೀಕರ್‌, ಬಿ ಜಯಮ್ಮ ಕಲಾವಿದರು. ಅ ನ ಕೃಷ್ಣರಾಯರ ಕತೆಯನ್ನು ಆಧರಿಸಿದ ಸಿನಿಮಾ. ಸ್ವತಃ ಅನಕೃ ಅವರೇ ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿದ್ದರು. ನಟಿ ಶಾಂತಾ ಹುಬ್ಳೀಕರ್‌ ಅವರು ನಟಿಸುತ್ತಿದ್ದ ಸನ್ನಿವೇಶವೊಂದನ್ನು ಚಿತ್ರಿಸಲಾಗುತ್ತಿತ್ತು. ಕನ್ನಡತಿಯಾದರೂ ಮುಂಬಯಿಯಲ್ಲಿದ್ದುದರಿಂದ ಶಾಂತಾ ಹುಬ್ಳೀಕರ್ ನಾಲಗೆಯಲ್ಲಿ ಕನ್ನಡದ ಕೆಲವು ಪದಗಳು ಸ್ಪಷ್ಟವಾಗಿ ಹೊರಳುತ್ತಿರಲಿಲ್ಲ. ಜೊತೆಗೆ ಹಿಂದಿ ಸಿನಿಮಾ ನಟಿ ಎನ್ನುವ ಹೆಚ್ಚುಗಾರಿಕೆಯೂ ಅವರಿಗಿತ್ತು. ‘ಜೀವನ ನಾಟಕ’ ಚಿತ್ರೀಕರಣದಲ್ಲಿ ಒಂದು ಕಷ್ಟದ ಸಂಭಾಷಣೆ ಹೇಳಬೇಕಾಯ್ತು. ‘ಇದನ್ನು ಬದಲಿಸಿ, ಸರಳ ಪದಗಳನ್ನು ಹಾಕಿ’ ಎಂದು ಶಾಂತಾ ಪಟ್ಟುಹಿಡಿದರಂತೆ. ‘ಇಲ್ಲ, ಸಂಭಾಷಣೆ ಬದಲಿಸಲು ಸಾಧ್ಯವಿಲ್ಲ. ಬೇರೆ ಪದಗಳನ್ನು ಹಾಕಿದರೆ ಸನ್ನಿವೇಶ ಕೆಡುತ್ತದೆ’ ಎಂದಿದ್ದಾರೆ ಅನಕೃ. ಕೊನೆಗೆ ಅನಕೃ ಅವರ ಮಾತಿಗೆ ಮಣಿದ ಶಾಂತಾ ಪದಗಳನ್ನು ಅಭ್ಯಾಸ ಮಾಡಿ ಸಂಭಾಷಣೆ ಒಪ್ಪಿಸಿದರಂತೆ. ಅನಕೃ ಕನ್ನಡಪ್ರೀತಿಗೆ ಇದೊಂದು ಉದಾಹರಣೆ ಎಂದು ಹಿರಿಯರು ಉದಾಹರಿಸುತ್ತಾರೆ.

‘ತುಂಬಿದ ಕೊಡ’ ಚಿತ್ರದ ಹಾಡಿನ ಸಂದರ್ಭದಲ್ಲಿ ಅನಕೃ ಅತಿಥಿಯಾಗಿ ಕಾಣಿಸಿಕೊಂಡಿದ್ದರು

‘ಜೀವನ ನಾಟಕ’ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ರಚಿಸಿದ್ದ ಅನಕೃ ಅವರಿಗೆ ಕನ್ನಡ ಚಿತ್ರರಂಗದ ಬಗ್ಗೆ ಅಪಾರ ಪ್ರೀತಿಯಿತ್ತು. ಎಸ್‌ ಕೆ ಭಗವಾನ್ ನಿರ್ದೇಶನದಲ್ಲಿ ತಯಾರಾದ ‘ಸಂಧ್ಯಾರಾಗ’ ಅನಕೃ ಅವರ ಕೃತಿಯನ್ನು ಆಧರಿಸಿದ ಸಿನಿಮಾ. ಸಂಗೀತಗಾರನ ಬದುಕನ್ನು ಹೇಳುವ ಈ ಚಿತ್ರ ಕನ್ನಡದ ಮಹತ್ವದ ಚಿತ್ರಗಳಲ್ಲೊಂದು. ಜಿ ಕೆ ವೆಂಕಟೇಶ್‌ ಸಂಗೀತ ಸಂಯೋಜಿಸಿದ್ದ ಈ ಚಿತ್ರದಲ್ಲಿ ಖ್ಯಾತ ಸಂಗೀತಗಾರರಾದ ಎಂ ಬಾಲಮುರಳಿಕೃಷ್ಣ ಮತ್ತು ಪಂಡಿತ್ ಭೀಮಸೇನ್ ಜೋಷಿ ಹಾಡಿದ್ದಾರೆ. ‘ತುಂಬಿದ ಕೊಡ’ ಚಿತ್ರದಲ್ಲಿ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು ಅನಕೃ. ಕನ್ನಡ ಚಿತ್ರರಂಗದ ಪ್ರಮುಖರೊಂದಿಗೆ ಅವರಿಗೆ ಉತ್ತಮ ಒಡನಾಟವಿತ್ತು. ಅರುವತ್ತರ ದಶಕದ ಕೊನೆಯಲ್ಲಿ ಕನ್ನಡ ಚಿತ್ರರಂಗಕ್ಕೆ ಡಬ್ಬಿಂಗ್‌ ಭೀತಿ ಎದುರಾಗಿತ್ತು. ಆಗಷ್ಟೇ ಕನ್ನಡ ಸಿನಿಮಾ ಭದ್ರವಾಗಿ ನೆಲೆಕಂಡುಕೊಳ್ಳುತ್ತಿದ್ದ ಅವಧಿಯದು. ಎಚ್ಚೆತ್ತುಕೊಂಡ ಕನ್ನಡದ ಕಟ್ಟಾಳು ಅನಕೃ ಹೋರಾಟದ ಮೂಲಕ ಡಬ್ಬಿಂಗ್‌ ಹತ್ತಿಕ್ಕಿದರು. ಆಗ ಅವರಿಗೆ ಜೊತೆಯಾಗಿದ್ದು ಮ ರಾಮಮೂರ್ತಿ. ಮುಂದೆ ಡಾ ರಾಜಕುಮಾರ್ ಹಾಗೂ ಚಿತ್ರರಂಗದ ಇತರೆ ಪ್ರಮುಖರು ಅನಕೃ ತೋರಿದ ಹಾದಿಯಲ್ಲಿ ನಡೆದರು. ಬೆಂಗಳೂರಿನ ‘ಅಲಂಕಾರ್‌’ ಚಿತ್ರಮಂದಿರದಲ್ಲಿ ಆಗ ಹಿಂದಿ ಚಿತ್ರಗಳಷ್ಟೇ ಪ್ರದರ್ಶನಗೊಳ್ಳುತ್ತಿದ್ದವು. ಅನಕೃ ಹೋರಾಟದ ಫಲವಾಗಿ ಮೊದಲ ಬಾರಿಗೆ ‘ಬಂಗಾರಿ’ (1963) ಕನ್ನಡ ಸಿನಿಮಾ ಪ್ರದರ್ಶನಗೊಂಡಿತು. ‘ಅಂದು ಅನಕೃ ಅವರು ಡಬ್ಬಿಂಗ್‌ ವಿರುದ್ಧ ದನಿ ಎತ್ತದಿದ್ದರೆ ಕನ್ನಡ ಚಿತ್ರರಂಗ ದೃಢವಾಗಿ ನೆಲೆ ಕಂಡುಕೊಳ್ಳುವುದು ಕಷ್ಟವಾಗುತ್ತಿತ್ತು. ಆ ಮಟ್ಟಿಗೆ ಕನ್ನಡ ಚಿತ್ರರಂಗ ಅವರಿಗೆ ಋಣಿಯಾಗಿರಬೇಕು’ ಎನ್ನುತ್ತಾರೆ ಹಿರಿಯ ಚಿತ್ರನಿರ್ದೇಶಕ ಭಗವಾನ್‌.

ಅನಕೃ ಕೃತಿಯನ್ನು ಆಧರಿಸಿದ ‘ಸಂಧ್ಯಾರಾಗ’ ಚಿತ್ರದ ಹಾಡು

ಇದನ್ನೂ ಓದಿ : ವಸ್ತು, ನಿರೂಪಣೆ, ಉತ್ತಮ ನಟನೆಯಿಂದ ಗಮನ ಸೆಳೆದ ರಾಜಕೀಯ ಚಿತ್ರಗಳು
ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More