ಅದ್ಧೂರಿ, ಅಬ್ಬರದ ಮಧ್ಯೆ ಕಳೆದುಹೋಗುತ್ತಿರುವ ಕನ್ನಡ ಚಿತ್ರಗಳ ಅಮ್ಮ

ಹಿಂದೆ ಅಮ್ಮನ ಪಾತ್ರಕ್ಕೆ ಸಾಕಷ್ಟು ಸ್ಕೋಪ್ ಇರುವಂತಹ ಸಿನಿಮಾಗಳು ತಯಾರಾಗುತ್ತಿದ್ದವು. ಅಂತಹ ಪಾತ್ರಗಳು ಇಂದಿಗೂ ಕಾಡುತ್ತವೆ. ಇದೀಗ ಗ್ಲಾಮರ್‌, ಹೊಡೆದಾಟದ ಚಿತ್ರಗಳ ಮಧ್ಯೆ ಅಮ್ಮನ ಪಾತ್ರಗಳು ಕಳೆದುಹೋಗುತ್ತಿವೆ. ವಿಶ್ವ ತಾಯಂದಿರ ದಿನದ ನಿಮಿತ್ತ ಒಂದು ಅವಲೋಕನ

ತೀರಾ ಇತ್ತೀಚಿನವರೆಗೂ ಸ್ಯಾಂಡಲ್‌ವುಡ್‌ನಲ್ಲಿ ಮಚ್ಚು ಮತ್ತು ಮದರ್ ಸೆಂಟಿಮೆಂಟ್ ಚಿತ್ರಗಳು ಚಾಲ್ತಿಯಲ್ಲಿದ್ದವು. ಬಾಲಿವುಡ್‌ಗೆ ಹೋಲಿಸಿದಲ್ಲಿ ಇಲ್ಲಿ ಅಮ್ಮನ ಪಾತ್ರಕ್ಕೆ ಹೆಚ್ಚಿನ ನಷ್ಟವಾಗಿಲ್ಲ ನಿಜ. ಆದರೆ ಪಾತ್ರದ ಚಿತ್ರಣಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ನಿರಾಸೆಯಾಗುವುದು ಹೌದು. ದಕ್ಷಿಣ ಭಾರತದ ಪ್ರಾದೇಶಿಕ ಭಾಷಾ ಚಿತ್ರಗಳೂ ಇದಕ್ಕೆ ಹೊರತಲ್ಲ. ವರ್ಷದಲ್ಲಿ ತೆರೆಕಾಣುವ ನೂರಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅಮ್ಮ ಕಾಣಿಸುವುದು ಬೆರಳೆಣಿಕೆಯ ಪಾತ್ರಗಳಲ್ಲಿ ಮಾತ್ರ. ಅವು ಕೂಡ ಬಹುಕಾಲ ನೆನಪಿನಲ್ಲುಳಿಯುವುದಿಲ್ಲ ಎನ್ನುವುದನ್ನು ಗುರುತಿಸಬಹುದು.

ಗ್ಲ್ಯಾಮರ್ ಅಮ್ಮ: ಮಚ್ಚಿನ ಚಿತ್ರಗಳಿಗೆ ಮದರ್ ಸೆಂಟಿಮೆಂಟ್ ಜೋಡಿಸಿದ ಕೀರ್ತಿ ನಿರ್ದೇಶಕ ಪ್ರೇಮ್‌ಗೆ ಸಲ್ಲುತ್ತದೆ. ಅವರ ಸೂಪರ್‌ಹಿಟ್‌ ‘ಜೋಗಿ’ ಚಿತ್ರದಲ್ಲಿ ಅಮ್ಮನ (ಆರುಂಧತಿ ನಾಗ್) ಪಾತ್ರಕ್ಕೆ ಹೆಚ್ಚಿನ ಸ್ಕೋಪ್ ಇತ್ತು. ಅಮ್ಮನ ಪ್ರೀತಿಯ ಜೊತೆಗೆ ಮಚ್ಚಿನ ಆರ್ಭಟಕ್ಕೂ ಅಲ್ಲಿ ಸಮಪಾಲು. ಅಮ್ಮನನ್ನು ನೆನಪಿಸುವಲ್ಲಿ ಪ್ರೇಮ್ ಯಶಸ್ವಿಯಾದರೂ, ಪ್ರೇಕ್ಷಕರು ಮಚ್ಚಿನ ಕತೆಯೆಂದೇ ಮಾತನಾಡಿಕೊಂಡರು. ಇದಕ್ಕೂ ಮುನ್ನ ಅವರೇ ನಿರ್ದೇಶಿಸಿದ್ದ ‘ಎಕ್ಸ್‌ಕ್ಯೂಸ್ ಮಿ’ ಚಿತ್ರದಲ್ಲೂ ಅಮ್ಮನ ಸೆಂಟಿಮೆಂಟ್‌ ವರ್ಕ್ ಅಗಿತ್ತು. ಆದರೆ ಅಲ್ಲಿ ಮಾತೃಭಾವಕ್ಕಿಂತ ಮಿಗಿಲಾಗಿ ನಟಿಯ (ಸುಮಲತಾ) ಲಿಪ್‌ಸ್ಟಿಕ್‌ ಮಿರುಗಿದ್ದು ಬದಲಾದ ಚಿತ್ರಣಕ್ಕೆ ಕೈಗನ್ನಡಿ ಎನ್ನಬಹುದು. ‘ಜೋಗಿ’ ಚಿತ್ರದ ಯಶಸ್ಸಿನೊಂದಿಗೆ ‘ಮಚ್ಚು ಮತ್ತು ಮದರ್ ಸೆಂಟಿಮೆಂಟ್’ ಕಾಂಬಿನೇಷನ್‌ನಲ್ಲಿ ಸಾಕಷ್ಟು ಚಿತ್ರಗಳು ತೆರೆಕಂಡವು. ಮಚ್ಚು ಬೀಸುವ ಭರದಲ್ಲಿ ನಿರ್ದೇಶಕರು ಅಮ್ಮನ ಪಾತ್ರಗಳನ್ನು ಜೋಕರ್‌ಗಳಂತೆ ಚಿತ್ರಿಸಿ ಪ್ರೇಕ್ಷಕರಿಗೆ ಬೇಸರ ಉಂಟುಮಾಡಿದರು. ನಾಯಕನ ಇಮೇಜು ಹೆಚ್ಚಿಸಲು ಅಮ್ಮನನ್ನು ಅತಿ ಭಾವುಕತನ, ಕಣ್ಣೀರಧಾರೆಯಲ್ಲಿ ತೋರಿಸುವ ಪರಿಪಾಠ ಜಾರಿಗೆ ಬಂತು.

ಸ್ನೇಹಿತೆಯಂಥ ಅಮ್ಮ: ‘ಮುಂಗಾರು ಮಳೆ’ ಸ್ಯಾಂಡಲ್‌ವುಡ್‌ನ ಟ್ರೆಂಡ್ ಸೆಟರ್ ಸಿನಿಮಾ. ಇಲ್ಲಿ ನಿರ್ದೇಶಕ ಯೋಗರಾಜ್ ಭಟ್, ಅಮ್ಮನ ಪಾತ್ರವನ್ನು ವಾಸ್ತವಕ್ಕೆ ಕರೆತಂದಿದ್ದರು. ಬೇರೊಬ್ಬನನ್ನು ಮದುವೆಯಾಗುತ್ತಿರುವ ಹುಡುಗಿಯನ್ನು ಪ್ರೀತಿಸುವ ಮಗನ ಕೆನ್ನೆಗೆ ಹೊಡೆದು ಬುದ್ಧಿ ಹೇಳುವ ಅಮ್ಮನ ಪಾತ್ರವದು. ಆಧುನಿಕ ಮನೋಭಾವದ ಸ್ನೇಹಿತೆಯಂಥ ಅಮ್ಮನನ್ನು ಪ್ರೇಕ್ಷಕರೂ ಪ್ರೀತಿ, ಅಕ್ಕರೆಯಿಂದ ಒಪ್ಪಿಕೊಂಡರು. ಆದರೆ ‘ಮಳೆ’ ಸ್ಫೂರ್ತಿಯಿಂದ ನಂತರದಲ್ಲಿ ತಯಾರಾದ ಹಲವಾರು ಚಿತ್ರಗಳಲ್ಲಿ ಅಮ್ಮನ ಪಾತ್ರಗಳು ಸೊರಗಿದವು. ‘ವಂಶಿ’ (ಅಮ್ಮನಾಗಿ ಲಕ್ಷ್ಮಿ ನಟಿಸಿದ್ದರು) ಸೇರಿದಂತೆ ಕೆಲವು ಚಿತ್ರಗಳನ್ನು ಹೊರತುಪಡಿಸಿದರೆ ಚಿತ್ರಗಳಲ್ಲಿ ಅಮ್ಮ ಪ್ರೇಕ್ಷಕರನ್ನು ತಲುಪಲೇ ಇಲ್ಲ. ಅದೇಕೋ ಕಳೆದ ನಾಲ್ಕೈದು ವರ್ಷಗಳಿಂದೀಚೆಗೆ ನಿರ್ದೇಶಕರು ಅಪ್ಪ-ಮಗನ ಸೆಂಟಿಮೆಂಟಿನ ಕಡೆ ಹೊರಳಿದ್ದಾರೆ!

ಅದೊಂದು ಕಾಲವಿತ್ತು: ಈ ಕ್ಷಣವೂ ಅಮ್ಮನ ಪಾತ್ರವೆಂದರೆ ಕನ್ನಡಿಗರ ಕಣ್ತುಂಬುವುದು ಪಂಡರೀಭಾಯಿ. ಸುಂದರ, ಸೌಮ್ಯ ಮುಖದ ಕರುಣಾಮಯಿ ಭಾವದ ಕಲಾವಿದೆ ಅಮ್ಮನ ಪಾತ್ರಕ್ಕೆ ವಿಶೇಷ ಮೆರುಗು ತಂದುಕೊಟ್ಟರು. ಸ್ವಭಾವತಃ ಮಾತೃಹೃದಯಿ ಪಂಡರೀಭಾಯಿ ತೆರೆಯ ಮೇಲೆ ಕೂಡ ಹಾಗೆಯೇ ಕಾಣಿಸಿದರು ಎಂದು ಅವರನ್ನು ಬಲ್ಲ ಕಲಾವಿದರು ಹಾಗೂ ತಂತ್ರಜ್ಞರು ‘ಅಮ್ಮ’ನನ್ನು ನೆನಪುಮಾಡಿಕೊಳ್ಳುತ್ತಾರೆ. ಆದವಾನಿ ಲಕ್ಷ್ಮಿದೇವಿ, ಸಾವಿತ್ರಿ, ಎಂ.ವಿ.ರಾಜಮ್ಮ, ಸಾಹುಕಾರ ಜಾನಕಿ ಇತರರು ಅಮ್ಮನ ಪಾತ್ರಗಳಿಗೆ ಜೀವ ತುಂಬಿದ ಅಂದಿನ ಶ್ರೇಷ್ಠ ಕಲಾವಿದೆಯರು. ನಟಿ ಲೀಲಾವತಿ ವೈವಿಧ್ಯಮಯ ತಾಯಿ ಪಾತ್ರಗಳನ್ನು ಪೊರೆದವರು. ಕೆಲವು ಚಿತ್ರಗಳಲ್ಲಿ ಗಯ್ಯಾಳಿ, ಹಠಮಾರಿ ಅಮ್ಮನಾಗಿ ಪ್ರೇಕ್ಷಕರ ನೆನಪಿನಲ್ಲುಳಿದಿದ್ದಾರೆ.

80ರ ದಶಕದ ಅಂತ್ಯಕ್ಕೆ ಕನ್ನಡ ಚಿತ್ರಗಳಲ್ಲಿ ಹಲವಾರು ಮಾರ್ಪಾಟುಗಳಾಗಿದ್ದವು. ಕೌಟುಂಬಿಕ ಕಥೆಗಳ ಜೊತೆಗೆ ಆಗ ರಾಜಕೀಯ ಸಿನಿಮಾಗಳೂ ತಯಾರಾಗುತ್ತಿದ್ದವು. ಚಿತ್ರದ ನಾಯಕನನ್ನು ಮಣಿಸುವ ಸಲುವಾಗಿ ಖಳನಾಯಕರು ಅಮ್ಮನನ್ನು ಬಂಧನದಲ್ಲಿಟ್ಟು ಹಿಂಸಿಸುತ್ತಿದ್ದರು. ಕಾಂಚನಾ, ಲೀಲಾವತಿ, ಸರೋಜಾದೇವಿ, ಜಯಂತಿ, ಆರತಿ ಇತರರು ಈ ಪಾತ್ರಗಳಿಗೆ ಜೀವ ತುಂಬಿದರು. ರಮಾದೇವಿ, ಉಮಾಶಿವಶಂಕರ್, ಸತ್ಯಭಾಮಾ, ಕಮಿನೀಧರನ್, ಆಶಾಲತಾ, ಶೋಭಾ ಶಿವಶಂಕರ್, ಹೇಮಾಚೌಧರಿ ಗಯ್ಯಾಳಿ ಅಮ್ಮಂದಿರಾಗಿ ಪ್ರೇಕ್ಷಕರ ಹುಸಿಕೋಪಕ್ಕೆ ಗುರಿಯಾಗುತ್ತಿದ್ದರು.

‘ಪುಟ್ನಂಜ’ ಚಿತ್ರದ ಉಮಾಶ್ರೀ ಪಾತ್ರಕ್ಕೆ ‘ಒಡಲಾಳ’ ನಾಟಕದ ಸಾಕವ್ವ ಪ್ರೇರಣೆ. ಇಲ್ಲಿ ಅಮ್ಮನ ಪಾತ್ರಕ್ಕೆ ಮತ್ತೊಂದು ಆಯಾಮ ಸಿಕ್ಕಿತು. ‘ಅಣ್ಣಯ್ಯ’ ಸಿನಿಮಾದಲ್ಲಿ ಹಿಂದಿ ನಟಿ ಅರುಣಾ ಇರಾನಿ ನೆಗೆಟಿವ್ ಶೇಡ್‌ನಲ್ಲಿ ಗಮನ ಸೆಳೆದಿದ್ದರು. ಈ ಮಧ್ಯೆ ತಾಯಿಯ ಆಂತರ್ಯದ ಹೋರಾಟದ ಕಥಾವಸ್ತುವಿನ ಕೆಲವು ಭಿನ್ನ ಅಲೆಯ ಚಿತ್ರಗಳು ತಯಾರಾದವು. ‘ತಾಯಿಸಾಹೇಬ’, ‘ತಾಯಿ’, ‘ಅವ್ವ’ ಕೆಲವು ಉದಾಹರಣೆ. ಎಂದಿನಂತೆ ಈ ಚಿತ್ರಗಳು ಕಲೆಯ ಚೌಕಟ್ಟನ್ನು ದಾಟಲಿಲ್ಲ. ಒಟ್ಟಾರೆಯಾಗಿ ಹೇಳಬೇಕೆಂದರೆ ಕನ್ನಡ ಚಿತ್ರಗಳಲ್ಲಿ ‘ಅಮ್ಮ’ ಸೊರಗುತ್ತಿದ್ದಾಳೆ. ಕಾಲದ ತಿರುಗಣೆಯಲ್ಲಿ ಮತ್ತೆ ಅಮ್ಮ ನಗೆ ಬೀರುವಳೇ?

ಯೋಗರಾಜ್ ಭಟ್ಟರು ತಮ್ಮ ‘ಮುಂಗಾರು ಮಳೆ’ ಚಿತ್ರದಲ್ಲಿ ಸೃಷ್ಟಿಸಿದ್ದ ಅಮ್ಮನ ಪಾತ್ರಕ್ಕೊಂದು ಭದ್ರ ನೆಲೆಯಿತ್ತು. ಅಂತಹ ಪಾತ್ರ ನನಗೆ ಮತ್ತೆ ಸಿಕ್ಕಿಲ್ಲ. ಈಗಿನವರು ಸೃಷ್ಟಿಸುವ ಅಮ್ಮನ ಪಾತ್ರಕ್ಕೆ ಸ್ವಂತ ನಿಲುವು, ವ್ಯಕ್ತಿತ್ವವೇ ಇರೋಲ್ಲ. ಹೊಸ ಟ್ರೆಂಡ್‌ನ ಪ್ರೇಕ್ಷಕರಿಗೆ ಇಷ್ಟವಾಗುವಂಥ ಸತ್ವಯುತ ಅಮ್ಮನ ಪಾತ್ರ ಸೃಷ್ಟಿಸುವಲ್ಲಿ ನಮ್ಮವರು ವಿಫಲರಾಗುತ್ತಿದ್ದಾರೆ.
ಸುಧಾ ಬೆಳವಾಡಿ, ನಟಿ

ಸ್ಯಾಂಡಲ್‌ವುಡ್‌ನ ಜನಪ್ರಿಯ ಅಮ್ಮಂದಿರು: ಪಂಢರೀಭಾಯಿ (ಪುರಂದರದಾಸ, ಸತ್ಯಹರಿಶ್ಚಂದ್ರ, ಅನುರಾಗ ಅರಳಿತು), ಆದವಾನಿ ಲಕ್ಷ್ಮಿದೇವಿ (ಗಂಧದ ಗುಡಿ), ಎಂ.ವಿ.ರಾಜಮ್ಮ (ಬಂಗಾರದ ಪಂಜರ), ಲೀಲಾವತಿ (ತಾಯಿಯ ಮಡಿಲಲ್ಲಿ, ನಾಗರಹಾವು, ಯಾರದು?), ಕಾಂಚನಾ (ಶಂಕರ್‌ಗುರು, ದಾರಿ ತಪ್ಪಿದ ಮಗ), ಸರೋಜಾದೇವಿ (ಭಾಗ್ಯವಂತರು), ಆರತಿ (ಕಲಿಯುಗ), ಅರುಣಾ ಇರಾನಿ (ಅಣ್ಣಯ್ಯ), ಉಮಾಶ್ರೀ (ಪುಟ್ನಂಜಿ), ಭಾರತಿ (ದೊರೆ), ಸುಮಿತ್ರಾ (ರಾಮಾಚಾರಿ), ಸುಮಲತಾ (ಎಕ್‌ಸ್‌‌ಕ್ಯೂಸ್ ಮಿ), ಅರುಂಧತಿ ನಾಗ್ (ಜೋಗಿ), ಲಕ್ಷ್ಮಿ (ಅಮ್ಮ, ಹೂವು-ಹಣ್ಣು, ವಂಶಿ), ಸುಧಾ ಬೆಳವಾಡಿ (ಮುಂಗಾರು ಮಳೆ), ತಾರಾ (ಡೆಡ್ಲಿ ಸೋಮ)

ಅಮ್ಮನ ಕುರಿತ ಐದು ಜನಪ್ರಿಯ ಹಾಡು

ಕೆರಳಿದ ಸಿಂಹ (1981)

ಕಳ್ಳ ಕುಳ್ಳ (1975)

ಎಕ್ಸ್‌ಕ್ಯೂಸ್ ಮಿ (2003)

ನೀಲಕಂಠ (2006)

ವಂಶಿ (2008)

ಇದನ್ನೂ ಓದಿ : ‘ಡೆಲ್ಲಿ ಪೂರಾ ಸುತ್ನಾ’ ಎಂಬ ವಜ್ರಮುನಿ ಹಿಂದಿಗೆ ತಬ್ಬಿಬ್ಬಾದ ಆಟೋ ಚಾಲಕ!
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
ಸ್ಮಿತಾ ನೆನಪು | ‘ಅನ್ವೇಷಣೆ’ ಗಾಗಿ ತಾನೇ ಹಣ ಹಾಕಿಕೊಂಡು ಬಂದು ನಟಿಸಿದ್ದರು
ಸುದ್ದಿ ವಾಚನದಿಂದ ಸಿನಿಮಾಲೋಕಕ್ಕೆ ಬಂದ ಕೃಷ್ಣಸುಂದರಿ
Editor’s Pick More