ಕರ್ನಾಟಕ ವಿಧಾನಸಭಾ ಚುನಾವಣೆ: ಸೋಲು-ಗೆಲುವು ಕಂಡ ಸಿನಿಮಾ ಮಂದಿ

ಹಿರಿಯ ನಟ ಅಂಬರೀಶ್ ಕೊನೆಯ ಹಂತದಲ್ಲಿ ಚುನಾವಣಾ ಅಖಾಡದಿಂದ ವಿಮುಖರಾಗಿದ್ದರು. ಉಳಿದಂತೆ ಈ ಬಾರಿ ಸ್ಪರ್ಧಿಸಿದ್ದ ಸಿನಿಮಾ ನಂಟಿನ ಹಲವರ ಪೈಕಿ ಗೆಲುವು ದಾಖಲಿಸಿರುವುದು ಕೇವಲ ಇಬ್ಬರೇ. ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜಗ್ಗೇಶ್ ದಯನೀಯ ಸೋಲು ಕಂಡಿದ್ದಾರೆ

ಎಂದಿನಂತೆ ಈ ಬಾರಿಯ ಚುನಾವಣೆಯಲ್ಲಿಯೂ ಸಿನಿಮಾ ನಟ-ನಟಿಯರು ಹಾಗೂ ನಿರ್ಮಾಪಕರು ಸ್ಪರ್ಧೆಯಲ್ಲಿದ್ದರು. ಕಳೆದ ಸರ್ಕಾರದಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಚಿತ್ರನಿರ್ಮಾಪಕ ಮುನಿರತ್ನ, ಈ ಬಾರಿಯೂ ಬೆಂಗಳೂರು ರಾಜರಾಜೇಶ್ವರಿ ನಗರದ ಅಭ್ಯರ್ಥಿ. ಆದರೆ ಈ ಕ್ಷೇತ್ರದ ಚುನಾವಣೆ ಇದೇ ತಿಂಗಳ 28ಕ್ಕೆ ಮುಂದೂಡಲ್ಪಟ್ಟಿದೆ. ಇನ್ನು, ಈಗ ಸರ್ಕಾರ ರಚನೆಯ ಪ್ರಮುಖ ಅಸ್ತ್ರ ಜೆಡಿಎಸ್ ಮುಖಂಡ ಎಚ್‌ ಡಿ ಕುಮಾರಸ್ವಾಮಿ ಅವರ ಕೈಲಿದೆ. ಮೂಲತಃ ಅವರು ಸಿನಿಮಾರಂಗದಿಂದ ಬಂದವರೇ ಅಗಿದ್ದಾರೆ. ಚಿತ್ರ ವಿತರಕ, ನಿರ್ಮಾಪಕರಾಗಿ ಗುರುತಿಸಿಕೊಂಡ ನಂತರವೇ ಅವರು ಸಕ್ರಿಯ ರಾಜಕಾರಣಕ್ಕಿಳಿದದ್ದು. ಈ ಬಾರಿಯ ರಾಜಕೀಯ ಅಂಗಳದಲ್ಲಿ ಗೆದ್ದವರು, ಸೋತವರ ವಿವರ ಇಲ್ಲಿದೆ.

ಬಿ ಸಿ ಪಾಟೀಲ್‌

ಪೊಲೀಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಬಿ ಸಿ ಪಾಟೀಲ್‌ ಸಿನಿಮಾ ನಟ, ನಿರ್ಮಾಪಕನಾಗಿ ಗುರುತಿಸಿಕೊಂಡರು. ಅಲ್ಲಿನ ಜನಪ್ರಿಯತೆ ಅವರನ್ನು ರಾಜಕೀಯ ಕ್ಷೇತ್ರಕ್ಕೆ ಕರೆದೊಯ್ದಿತು. ಕಾಂಗ್ರೆಸ್‌ ಅಭ್ಯರ್ಥಿಯಾಗಿ ತಮ್ಮೂರು ಹಿರೇಕೆರೂರಿನಿಂದ ಸ್ಪರ್ಧಿಸಿ ಚೊಚ್ಚಲ ಚುನಾವಣೆಯಲ್ಲೇ ಗೆಲುವು ಸಾಧಿಸಿದ್ದರು. ಕಳೆದ 2013ರಲ್ಲಿ ಸೋಲು ಕಂಡಿದ್ದ ಅವರು ಈ ಬಾರಿ ಗೆಲುವಿನ ನಗೆ ಬೀರಿದ್ದಾರೆ.

ಉಮಾಶ್ರೀ

ರಂಗಭೂಮಿ, ಸಿನಿಮಾ ನಟಿ ಉಮಾಶ್ರೀ ಉತ್ತರ ಕರ್ನಾಟಕದ ತೇರದಾಳ ಕ್ಷೇತ್ರದಿಂದ ಕಳೆದ ಬಾರಿ ಕಾಂಗ್ರೆಸ್ ಪಕ್ಷದ ಸ್ಪರ್ಧಿಯಾಗಿ ಆಯ್ಕೆಯಾಗಿದ್ದರು. ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವೆಯಾಗಿದ್ದ ಅವರು ಈ ಬಾರಿಯೂ ಅದೇ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆ ನಡೆಸಿದ್ದರು. ಈ ಬಾರಿ ಅವರು ಸೋಲುಂಡಿದ್ದಾರೆ. ಕಾರ್ಯಕ್ಷೇತ್ರದಲ್ಲಿ ಜನರ ವಿಶ್ವಾಸ ಈ ಬಾರಿ ಅವರ ಪರವಾಗಿರಲಿಲ್ಲ ಎನ್ನಲಾಗಿತ್ತು.

ಜಗ್ಗೇಶ್‌

ಚಿಕ್ಕಪುಟ್ಟ ಪಾತ್ರಗಳಲ್ಲಿ ನಟಿಸುತ್ತ ನಾಯಕನಟನಾಗಿ ಬೆಳೆದ ನಟ ಜಗ್ಗೇಶ್‌ ಅವರ ಬದುಕೇ ಒಂದು ಸಿನಿಮಾದಂತಿದೆ. ಸಿನಿಮಾದಿಂದ ರಾಜಕೀಯದತ್ತ ಹೊರಳಿದ ಅವರು ಕಾಂಗ್ರೆಸ್‌ ಪಕ್ಷ ಸೇರಿದ್ದರು. ತುರುವೇಕೆರೆ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿ ಗೆದ್ದಿದ್ದ ಅವರು ನಂತರ ಬಿಜೆಪಿಗೆ ಸೇರಿ ವಿಧಾನ ಪರಿಷತ್ ಸದಸ್ಯನಾಗಿ ಆಯ್ಕೆಯಾಗಿದ್ದರು. ಈ ಬಾರಿ ಯಶವಂತರಪುರ ಕ್ಷೇತ್ರದಿಂದ (ಬಿಜೆಪಿ) ಸ್ಪರ್ಧಿಸಿದ್ದ ಅವರು ಮುಖಭಂಗ ಅನುಭವಿಸಿದ್ದಾರೆ. ಕಾಂಗ್ರೆಸ್‌ನ ಎಸ್ ಟಿ ಸೋಮಶೇಖರ್‌ ಅವರೆದುರು ದೊಡ್ಡ ಅಂತರದಲ್ಲಿ ಸೋಲನ್ನುಂಡಿದ್ದಾರೆ.

ಕುಮಾರ ಬಂಗಾರಪ್ಪ

ನಟ ಕುಮಾರ ಬಂಗಾರಪ್ಪ 1996ರಲ್ಲಿ ಆಕಸ್ಮಿಕವಾಗಿ ರಾಜಕೀಯ ಪ್ರವೇಶಿಸಿದವರು. ತಂದೆ, ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರು ಲೋಕಸಭೆಗೆ ಆಯ್ಕೆಯಾದಾಗ ಸೊರಬ ಕ್ಷೇತ್ರದಿಂದ ಉಪ ಚುನಾವಣೆಗೆ ಸ್ಪರ್ಧಿಸಿ (ಕರ್ನಾಟಕ ಕಾಂಗ್ರೆಸ್ ಪಕ್ಷ) ವಿಧಾನ ಸಭೆಗೆ ಆಯ್ಕೆಯಾಗಿದ್ದರು. ಮುಂದೆ 1999ರಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದಿಂದ ವಿಧಾನ ಸಭೆಗೆ ಆಯ್ಕೆಯಾದರು. 2004ರಲ್ಲಿ ಮೂರನೇ ಬಾರಿ ಗೆಲುವು ದಾಖಲಿಸಿದ ಅವರು ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಅವರು ಗೆಲುವು ದಾಖಲಿಸಿದ್ದಾರೆ. ಚಿತ್ರರಂಗದಲ್ಲೇ ಸಕ್ರಿಯರಾಗಿರುವ ಅವರ ಕಿರಿಯ ಸಹೋದರ ಮಧು ಬಂಗಾರಪ್ಪ ಇದೇ ಕ್ಷೇತ್ರದಿಂದ ಈ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು. ಸಹೋದರನೆದುರು ಕುಮಾರ್‌ ಬಂಗಾರಪ್ಪ ಗೆದ್ದಿದ್ದಾರೆ.

ಸಾಯಿಕುಮಾರ್‌

ಪೊಲೀಸ್ ಪಾತ್ರಗಳ ಮೂಲಕವೇ ಜನಪ್ರಿಯತೆ ಗಳಿಸಿರುವ ನಟ ಸಾಯಿಕುಮಾರ್‌ ಮೂಲತಃ ಆಂಧ್ರದವರು. ಈ ಬಾರಿ ಅವರು ಬಿಜೆಪಿ ಪಕ್ಷದಿಂದ ಬಾಗೇಪಲ್ಲಿ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆ ಬಯಸಿದ್ದರು. ಇದೇ ಕ್ಷೇತ್ರದಿಂದ ಕನ್ನಡ ಚಿತ್ರನಿರ್ಮಾಪಕ ಸಿ ಆರ್ ಮನೋಹರ್ ಕೂಡ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದರು. ಕಾಂಗ್ರೆಸ್‌ ಪಕ್ಷದ ಸ್ಪರ್ಧಿ ಎಸ್ ಎನ್‌ ಸುಬ್ಬಾರೆಡ್ಡಿ ಅವರೆದುರು ಇವರಿಬ್ಬರೂ ಸೋಲುಂಡಿದ್ದಾರೆ.

ಶಶಿಕುಮಾರ್‌

ನಟ ಶಶಿಕುಮಾರ್‌ ಜೆಡಿ (ಯು) ಪಕ್ಷದಿಂದ 13ನೇ ಲೋಕಸಭೆಗೆ ಸದಸ್ಯನಾಗಿ (ಚಿತ್ರದುರ್ಗ) ಆಯ್ಕೆಯಾಗಿದ್ದರು. 2006ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಅವರು ಒಂದಷ್ಟು ವರ್ಷ ಸಕ್ರಿಯ ರಾಜಕಾರಣದಲ್ಲಿರಲಿಲ್ಲ. ಈ ಬಾರಿ ವಿಧಾನಸಭಾ ಚುನಾವಣೆಗೆ ಪಕ್ಷದಿಂದ ಅವರು ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಟಿಕೆಟ್‌ ಸಿಗದ ಹಿನ್ನೆಲೆಯಲ್ಲಿ ಕೊನೆಯ ಹಂತದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿ ಹೊಸದುರ್ಗದಿಂದ ಸ್ಪರ್ಧಿಸಿದ್ದರು. ಅಲ್ಲಿ ಬಿಜೆಪಿ ಅಭ್ಯರ್ಥಿ ಗೂಳಿಹಟ್ಟಿ ಶೇಖರ್ ವಿರುದ್ಧ ಸೋತಿದ್ದಾರೆ. ಕಿರುತೆರೆ, ಸಿನಿಮಾ ನಟ ನೆ ಲ ನರೇಂದ್ರಬಾಬು ಕಾಂಗ್ರೆಸ್ ಅಭ್ಯರ್ಥಿಯಾಗಿ ಬೆಂಗಳೂರು ಮಹಾಲಕ್ಷ್ಮೀ ಲೇಔಟ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅವರು ಜೆಡಿಎಸ್ ಅಭ್ಯರ್ಥಿ ಗೋಪಾಲಯ್ಯ ಅವರ ಎದುರು ಪರಾಭವಗೊಂಡಿದ್ದಾರೆ.

ಇದನ್ನೂ ಓದಿ : ಫಲಿತಾಂಶ ಅತಂತ್ರ; ಮತದಾರರು ಮತ್ತು ಪಕ್ಷಗಳ ಲೆಕ್ಕಾಚಾರ ಹಳಿ ತಪ್ಪಿದ್ದೆಲ್ಲಿ?

ತಾರಾ ಪ್ರಚಾರಕರು

ಈ ಬಾರಿ ಪ್ರಮುಖ ತಾರಾ ಪ್ರಚಾರಕರಾಗಿ ನಟರಾದ ಸುದೀಪ್‌, ದರ್ಶನ್‌ ಮತ್ತು ಯಶ್‌ ಪಕ್ಷಾತೀತವಾಗಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ್ದರು. ಸುದೀಪ್‌ ಪ್ರಚಾರ ನಡೆಸಿದ್ದ ಸುರಪುರದ ಬಿಜೆಪಿ ಅಭ್ಯರ್ಥಿ ನರಸಿಂಹ ನಾಯ್ಕ ಮತ್ತು ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಗೆದ್ದಿದ್ದಾರೆ. ನಟ ಯಶ್‌ ಕೆ ಆರ್ ನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಾ ರಾ ಮಹೇಶ್‌, ಕೆ ಅರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಮದಾಸ್‌, ತುಮಕೂರಿನ ಬಿಜೆಪಿ ಅಭ್ಯರ್ಥಿ ಜ್ಯೋತಿ ಗಣೇಶ್‌, ಶಿರಸಿಯ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ, ಬೆಂಗಳೂರು ಬೊಮ್ಮನಹಳ್ಳಿಯ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ ಅವರ ಪರ ಮತ ಯಾಚಿಸಿದ್ದರು. ಇವರೆಲ್ಲರೂ ಗೆಲುವಿನ ನಗೆ ಬೀರಿದ್ದಾರೆ. ನಟ ದರ್ಶನ್‌ ಕೆ ಆರ್‌ ನಗರ ಕ್ಷೇತ್ರದ ಅಭ್ಯರ್ಥಿ ಸಾ ರಾ ಮಹೇಶ್‌ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಪರ್ಧಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ರೋಡ್‌ ಶೋಗಳಲ್ಲಿ ಪಾಲ್ಗೊಂಡಿದ್ದರು. ಸಾ ರಾ ಮಹೇಶ್‌ ಗೆದ್ದರೆ ಸಿದ್ದರಾಮಯ್ಯ ಸೋತಿದ್ದಾರೆ. ಅಭ್ಯರ್ಥಿಗಳ ಗೆಲುವಿನಲ್ಲಿ ತಾರೆಯರ ಪ್ರಚಾರ ನೆರವಾಗಿರುವುದನ್ನು ಅಲ್ಲಗಳೆಯುವಂತಿಲ್ಲ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More