ಸಹನಟಿ ಐಶ್ವರ್ಯಾ ಜೊತೆಗಿನ ಮದುವೆ ನಿಜವಾದದ್ದಲ್ಲ ಎಂದ ಹುಚ್ಚ ವೆಂಕಟ್!

ತಮ್ಮ ಸಿನಿಮಾದ ನಟಿ ಐಶ್ವರ್ಯಾಳನ್ನು ಮದುವೆಯಾಗಿರುವುದಾಗಿ ಹುಚ್ಚ ವೆಂಕಟ್‌ ಹೇಳಿದ್ದ ವಿಡಿಯೋ ಮೊನ್ನೆ ವೈರಲ್ ಆಗಿತ್ತು. ಇದೀಗ ಅವರು, ‘ನಾವು ಮದುವೆಯಾಗಿಲ್ಲ, ಇದು ಚಿತ್ರದ ಸನ್ನಿವೇಶ’ ಎನ್ನುವ ಟಿಪ್ಪಣಿ ಇರುವ ವಿಡಿಯೋ ಹಾಕಿದ್ದಾರೆ. ಅವರ ನಡೆಗೆ ಹಲವರಿಂದ ಆಕ್ರೋಶ ವ್ಯಕ್ತವಾಗುತ್ತಿದೆ

ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ಹುಚ್ಚ ವೆಂಕಟ್‌ ಥರಾವರಿ ಮಾತು, ನಡೆಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಬಿಗ್‌ಬಾಸ್‌ನಲ್ಲಿ ಸ್ಪರ್ಧಿಯೊಬ್ಬರಿಗೆ ಹೊಡೆದು ಸುದ್ದಿಯಾಗಿದ್ದ ಅವರು ಸದ್ಯ ‘ಡಿಕ್ಟೇಟರ್ ಹುಚ್ಚ ವೆಂಕಟ್‌’ ಸಿನಿಮಾ ಮಾಡುತ್ತಿದ್ದಾರೆ. ಎಂದಿನಂತೆ ಕತೆ, ಚಿತ್ರಕತೆ, ಸಂಭಾಷಣೆ, ನಿರ್ದೇಶನ, ನಿರ್ಮಾಣ ಎಲ್ಲವೂ ಅವರದೇ. ಈ ಸಿನಿಮಾ ಚಿತ್ರೀಕರಣದಲ್ಲಿರುವಾಗ ಮೊನ್ನೆಯೊಂದು ವಿಡಿಯೋ ಬಿಟ್ಟಿದ್ದರು. "ನನ್ನ ಹೊಸ ಸಿನಿಮಾದ ನಾಯಕಿ ಐಶ್ವರ್ಯಾ ಜೊತೆ ನಾನು ವಿವಾಹವಾಗಿದ್ದೇನೆ. ಆಕೆಯ ಕುಟುಂಬದಿಂದ ಇದಕ್ಕೆ ಬೆಂಬಲವಿಲ್ಲ. ಆದರೆ, ನಮ್ಮ ಪ್ರೀತಿಗೆ ಯಾರ ಬೆಂಬಲವೂ ಬೇಕಿಲ್ಲ. ಎಲ್ಲಕ್ಕಿಂತ ನಮ್ಮ ಪ್ರೀತಿ ದೊಡ್ಡದು,” ಎನ್ನುವ ಅವರ ಮಾತುಗಳಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಜನರು ಈ ವಿಡಿಯೋಗೆ ಪರ-ವಿರೋಧದ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿ ಶುಭ ಹಾರೈಸಿದ್ದರು.

ಇದನ್ನೂ ಓದಿ : ವಿಡಿಯೋ | ಸಹನಟಿಯ ಕೈಹಿಡಿದ ಹುಚ್ಚ ವೆಂಕಟ್, ಫೇಸ್ಬುಕ್ ಲೈವ್‌ನಲ್ಲಿ ಬಹಿರಂಗ

ಈ ಮಧ್ಯೆ, ತಮ್ಮ ಪತ್ನಿ ಎಂದು ಹುಚ್ಚ ವೆಂಕಟ್‌ ಹೇಳಿಕೊಂಡಿದ್ದ ಯುವನಟಿ ಐಶ್ವರ್ಯಾ, ಮದುವೆ ಸುದ್ದಿಯನ್ನು ಅಲ್ಲಗಳೆದು ಫೇಸ್‌ಬುಕ್‌ನಲ್ಲಿ ಸಂದೇಶವೊಂದನ್ನು ಹಾಕಿದ್ದರು. ಇದಾಗಿ, ಕೆಲ ಸಮಯದಲ್ಲೇ ಹುಚ್ಚ ವೆಂಕಟ್‌ರ ಹೊಸ ವಿಡಿಯೋ ಹೊರಬಿದ್ದಿದೆ. “ನಾನು ಐಶ್ವರ್ಯಾಳನ್ನು ಮದುವೆಯಾಗಿಲ್ಲ. ಇದು ನಮ್ಮ ಚಿತ್ರದ ಒಂದು ಮದುವೆ ಸನ್ನಿವೇಶ. ಅಲ್ಲೊಂದು ಗಿಮಿಕ್ ಮಾಡೋಣ ಎಂದು ಆಕೆ ಹೇಳಿದ್ದರಿಂದ ಹೀಗಾಗಿದೆ. ಅವರನ್ನು ನಾನು ಮದುವೆಯಾಗಿಲ್ಲ. ನಾನು ಒಂಟಿಯಾಗಿರಲು ಬಯಸುತ್ತೇನೆ,” ಎನ್ನುವ ಹುಚ್ಚ ವೆಂಕಟ್‌ ಟಿಪ್ಪಣಿ ಈ ವಿಡಿಯೋದಲ್ಲಿದೆ. ಹುಚ್ಚ ವೆಂಕಟ್‌ರ ಈ ಹುಡುಗಾಟಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿರೋಧ ವ್ಯಕ್ತವಾಗಿದೆ. ಪ್ರಚಾರಕ್ಕಾಗಿ ಜನರಲ್ಲಿ ಗೊಂದಲ ಮೂಡಿಸುವ ಅವರ ನಡೆಯನ್ನು ಹಲವರು ತೀವ್ರವಾಗಿ ಖಂಡಿಸಿದ್ದಾರೆ. ಅಂದಹಾಗೆ, ಹುಚ್ಚ ವೆಂಕಟ್‌ ಈ ಬಾರಿ ರಾಜರಾಜೇಶ್ವರಿ ನಗರದಿಂದ ವಿಧಾನಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ತಾಂತ್ರಿಕ ಕಾರಣಗಳಿಂದಾಗಿ ಈ ಕ್ಷೇತ್ರದ ಚುನಾವಣೆ ಇದೇ ತಿಂಗಳ 28ಕ್ಕೆ ಮುಂದೂಡಲ್ಪಟ್ಟಿದೆ.

ವಿವಾದಕ್ಕೆ ಆಸ್ಪದವಾಗಿದ್ದ ಚಿತ್ರದ ಶೀರ್ಷಿಕೆ ಬದಲಿಸಿದ ನಿರ್ಮಾಪಕ ಸಲ್ಮಾನ್ 
ವಿಡಿಯೋ | ‘8 ಎಂಎಂ’ ಹಾಡಿನೊಂದಿಗೆ ಮರಳಿದ ಗಾಯಕ ಆಂಟೋನಿ
ವಿಡಿಯೋ | ಜನ್ಮದಿನದಂದು ಉತ್ತಮ ಪ್ರಜಾಕೀಯ ಪಕ್ಷ ಘೋಷಿಸಿದ ಉಪೇಂದ್ರ
Editor’s Pick More