ಇಂದರ್ ಕುಮಾರ್‌ ವೈರಲ್ ವಿಡಿಯೋ; ವದಂತಿ ಅಲ್ಲಗಳೆದ ನಟನ ಪತ್ನಿ

ಬಾಲಿವುಡ್‌ ನಟ ಇಂದರ್‌ ಕುಮಾರ್‌ ಕಳೆದ ವರ್ಷ ಜುಲೈನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಸುಸೈಡ್‌ ನೋಟ್‌ನಂತಿರುವ ಅವರ ವಿಡಿಯೋ ಬಿಡುಗಡೆಯಾಗಿ ವೈಲರ್ ಅಗಿತ್ತು. ನಟನ ಪತ್ನಿ ಪಲ್ಲವಿ ವಿಡಿಯೋ ಸತ್ಯಾಸತ್ಯತೆಯ ಬಗ್ಗೆ ಮಾಹಿತಿ ನೀಡಿದ್ದಾರೆ

ಹಿಂದಿ ಸಿನಿಮಾ ನಟ ಇಂದರ್ ಕುಮಾರ್ (44 ವರ್ಷ)‌ ಕಳೆದ ವರ್ಷ (2017) ಜುಲೈನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಈಗ ಮೊನ್ನೆಯಿಂದ ಅವರ ವಿಡಿಯೋ ‘ಜಸ್ಟ್‌ ಬಿಫೋರ್‌ ಸುಸೈಡ್‌’ ಶೀರ್ಷಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಈ ಸೆಲ್ಫೀ ವಿಡಿಯೋದಲ್ಲಿ ಇಂದರ್ ಕುಮಾರ್‌ ಮದ್ಯಪಾನ ಮಾಡುತ್ತಾ ಜೀವನದಲ್ಲಿ ತಾವು ಮಾಡಿದ ತಪ್ಪುಗಳನ್ನು ಹೇಳುತ್ತಾರೆ. “ದುರಾಭ್ಯಾಸಗಳು ನನ್ನ ಜೀವನ ಹಾಳುಗೆಡಹಿದವು, ನನ್ನ ತಪ್ಪುಗಳಿಂದ ಪೋಷಕರು ತಲೆತಗ್ಗಿಸುವಂತಾಯ್ತು,” ಎಂದು ಹೇಳಿಕೊಳ್ಳುತ್ತಾರೆ. ಅಳುತ್ತಾ ಪೋಷಕರಲ್ಲಿ ಕ್ಷಮೆಯಾಚಿಸುವ ಈ ವಿಡಿಯೋ ಒಂದು ರೀತಿ ಸುಸೈಡ್ ನೋಟ್‌ನಂತಿದೆ.

ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿರುವ ಈ ವಿಡಿಯೋ ನಿಜವೆಂದು ನಂಬಿ ಸಾವಿರಾರು ಜನರು ಶೇರ್ ಮಾಡಿದ್ದಾರೆ. ಆದರೆ ಇಂದರ್ ಕುಮಾರ್‌ ಅವರ ಪತ್ನಿ ಪಲ್ಲವಿ ಈ ವಿಡಿಯೋ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. “ಇದು ಇಂದರ್‌ ಅಗಲುವ ಮುಂಚೆ ಚಿತ್ರೀಕರಣಗೊಂಡ ‘ಫಟ್ಟಿ ಪಡಿ ಹೈ ಯಾರ್‌’ ಹಿಂದಿ ಚಿತ್ರವೊಂದರ ಸನ್ನಿವೇಶ. ಚಿತ್ರದಲ್ಲಿ ಸುಸೈಡ್‌ ಮಾಡಿಕೊಳ್ಳುವ ಸನ್ನಿವೇಶಕ್ಕೆ ಚಿತ್ರಿಸಿದ ದೃಶ್ಯ. ಇದನ್ನು ಜನರು ನಿಜ ಬದುಕಿನ ವಿಡಿಯೋ ಎಂದು ಕನ್ಫ್ಯೂಸ್‌ ಆಗಿದ್ದಾರೆ. ಹಿಂದಿ ಸಿನಿಮಾ ಪೋಸ್ಟ್‌ ಪ್ರೊಡಕ್ಷನ್ ಹಂತದಲ್ಲಿದೆ. ಬಹುಶಃ ಅವರು ಪ್ರಚಾರಕ್ಕಾಗಿ ಇಂತಹ ತಂತ್ರ ಮಾಡಿರಬಹುದು. ಇದು ಇಂದರ್ ಕುಟುಂಬದವರಾದ ನಮ್ಮೆಲ್ಲರಿಗೆ ನೋವು ಉಂಟುಮಾಡಿದೆ,” ಎಂದಿದ್ದಾರೆ ಪಲ್ಲವಿ.

‘ಮಾಸೂಮ್‌’ (1996) ಹಿಂದಿ ಚಿತ್ರದಲ್ಲಿ ಆಯೇಷಾ ಜುಲ್ಕಾ ಜೋಡಿಯಾಗಿ ಇಂದರ್ ಕುಮಾರ್ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ದರು. ಸ್ಟಾರ್ ಹೀರೋ ಸಲ್ಮಾನ್‌ ಖಾನ್‌ ಅವರಿಗೆ ಆಪ್ತರಾಗಿದ್ದ ಇಂದರ್‌ ‘ಖಿಲಾಡಿಯೋನ್‌ ಕಾ ಖಿಲಾಡಿ’, ‘ಕಹೀ ನಾ ಪ್ಯಾರ್ ಹೋ ಜಾಯೇ’, ‘ವಾಂಟೆಡ್‌’ ಸೇರಿದಂತೆ ಹದಿನೈದಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. 2014ರಲ್ಲಿ ಯುವನಟಿಯನ್ನು ಲೈಂಗಿಕವಾಗಿ ಶೋಷಿಸಿದ ಆರೋಪದ ಮೇಲೆ ಇಂದರ್‌ ಬಂಧನಕ್ಕೊಳಗಾಗಿದ್ದರು. ನಲವತ್ತೈದು ದಿನ ಜೈಲು ವಾಸ ಅನುಭವಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. “ಇದು ಹುಸಿ ಆರೋಪ. ಈ ಘಟನೆಯ ನಂತರ ಪತಿ ಇಂದರ್ ಕುಮಾರ್‌ ಉದ್ಯಮದೊಂದಿಗೆ ಸಂಪರ್ಕ ಕಡಿದುಕೊಂಡಿದ್ದರು. ಹತಾಶರಾಗಿದ್ದ ಅವರು ಇದೇ ಖಿನ್ನತೆಯಲ್ಲಿ ಕೊರಗುತ್ತಿದ್ದರು. ಕಳೆದ ವರ್ಷ ಜುಲೈನಲ್ಲಿ ನಾವು ಅವರನ್ನು ಕಳೆದುಕೊಂಡೆವು,” ಎಂದಿದ್ದಾರೆ.

ಇದನ್ನೂ ಓದಿ : ಕ್ಯಾನ್‌ ಸಿನಿಮೋತ್ಸವದಲ್ಲಿ ಐಶ್ವರ್ಯಾ, ಪುತ್ರಿ ಆರಾಧ್ಯ ‘ಕಿಸ್ ಆಫ್‌ ಲವ್‌’
ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More