ಪುತ್ರಿ ಕನಸು ರಚಿಸಿರುವ ಕತೆಗೆ ನಾಗತಿಹಳ್ಳಿ ಚಂದ್ರಶೇಖರ್‌ ಆ್ಯಕ್ಷನ್‌-ಕಟ್‌

ನಾಗತಿಹಳ್ಳಿ ಚಂದ್ರಶೇಖರ್ ಹೊಸ ಸಿನಿಮಾ ನಿರ್ದೇಶನಕ್ಕೆ ವೇದಿಕೆ ಸಜ್ಜಾಗಿದೆ. ಈ ಬಾರಿ ಅವರ ಪುತ್ರಿ ಕನಸು ರಚಿಸಿರುವ ಕತೆಯನ್ನು ತೆರೆಗೆ ಅಳವಡಿಸಲಿದ್ದಾರೆ. ಗುರುನಂದನ್ ಮತ್ತು ಮಾನ್ವಿತಾ ಸಿನಿಮಾದ ಮುಖ್ಯಪಾತ್ರಗಳಲ್ಲಿದ್ದು, ಶೇಕಡ 50ರಷ್ಟು ಚಿತ್ರೀಕರಣ ಇಂಗ್ಲೆಂಡ್‌ನಲ್ಲಿ ನಡೆಯಲಿದೆ

ಸದಭಿರುಚಿಯ ‘ಇಷ್ಟಕಾಮ್ಯ’ ಚಿತ್ರದ ನಂತರ ನಾಗತಿಹಳ್ಳಿ ಚಂದ್ರಶೇಖರ್‌ ಮುಂದಿನ ನಿರ್ದೇಶನಕ್ಕೆ ಚಿತ್ರಕತೆ ಸಿದ್ಧಪಡಿಸುತ್ತಿದ್ದಾರೆ. ಪುತ್ರಿ ಕನಸು ಕಾದಂಬರಿಯೊಂದನ್ನು ರಚಿಸಿದ್ದು, ಈ ಕಥಾವಸ್ತುವನ್ನು ತೆರೆಗೆ ಅಳವಡಿಸುತ್ತಿದ್ದಾರೆ ನಾಗತಿಹಳ್ಳಿ. "ಕ್ರಿಯೇಟಿವ್ ಬರಹಕ್ಕೆ ಸಂಬಂಧಿಸಿದಂತೆ ಕನಸು ಲಂಡನ್‌, ಅಮೆರಿಕದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾಳೆ. ಪ್ರಕಟವಾಗದ ಆಕೆಯ ಕಾದಂಬರಿಯೊಂದನ್ನು ಚಿತ್ರಕತೆ ಮಾಡುತ್ತಿದ್ದೇವೆ. ಕನಸು ಕೂಡ ಬರವಣಿಗೆಯಲ್ಲಿ ಜೊತೆಯಾಗಿದ್ದಾಳೆ,” ಎನ್ನುತ್ತಾರೆ ನಾಗತಿಹಳ್ಳಿ. ‘ಇಷ್ಟಕಾಮ್ಯ’ ನಿರ್ಮಿಸಿದ್ದ ವೈ ಎನ್ ಶಂಕರೇಗೌಡ ಮತ್ತು ನಾಗತಿಹಳ್ಳಿಯವರ ಅನಿವಾಸಿ ಭಾರತೀಯ ಸ್ನೇಹಿತರು ಹಣ ಹೂಡಲಿದ್ದಾರೆ. ‘ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್‌’ ಬ್ಯಾನರ್‌ನಡಿ ಸಿನಿಮಾ ನಿರ್ಮಾಣವಾಗಲಿದೆ.

“ಲಂಡನ್‌, ಅಮೆರಿಕದಲ್ಲಿ ಓದಿರುವ ಕನಸು, ಅಲ್ಲಿನ ಹಿನ್ನೆಲೆ, ಬದುಕು ಎಲ್ಲವನ್ನೂ ಕಾದಂಬರಿಯಲ್ಲಿ ತಂದಿದ್ದಾಳೆ. ಇದು ಎರಡು ಖಂಡಾಂತರಗಳ ಮಧ್ಯೆ ನಡೆಯುವ ಪ್ರೇಮಕತೆ ಎಂದು ಹೇಳಬಹುದು. ಹಿಂದೆ ‘ಅಮೆರಿಕ ಅಮೆರಿಕ’ ಚಿತ್ರದಲ್ಲಿ ಅಳವಡಿಸಿದಂತೆ ನಾನು ಬೌದ್ಧಿಕವಾಗಿ ಕೆಲವು ವಿಚಾರಗಳನ್ನು ತರಲಿದ್ದೇನೆ. ಗುರುನಂದನ್‌ ಮತ್ತು ಮಾನ್ವಿತಾ ಪ್ರಮುಖ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ಇನ್ನಿತರ ಕಲಾವಿದರು ಹಾಗೂ ತಂತ್ರಜ್ಞರ ಆಯ್ಕೆಯಾಗಿಲ್ಲ,” ಎನ್ನುತ್ತಾರೆ ನಾಗತಿಹಳ್ಳಿ. ಲಂಡನ್‌ನಲ್ಲಿನ ಚಿತ್ರೀಕರಣದಲ್ಲಿ ಅಲ್ಲಿನ ಕೆಲವು ಹವ್ಯಾಸಿ ರಂಗಭೂಮಿ ಕಲಾವಿದರು ನಟಿಲಿದ್ದಾರಂತೆ. ಪ್ರಮುಖ ಪಾತ್ರಗಳಲ್ಲಿ ನಟಿಸಲಿರುವ ಗುರುನಂದನ್ ಮತ್ತು ಮಾನ್ವಿತಾ ನಾಗತಿಹಳ್ಳಿಯವರ 'ಟೆಂಟ್‌ ಸಿನಿಮಾ’ ಸಂಸ್ಥೆಯಲ್ಲಿ ಅಗತ್ಯ ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಇಷ್ಟಕಾಮ್ಯ’ ಚಿತ್ರದ ‘ತಂಗಾಳಿ’ ಹಾಡಿನ ಮೇಕಿಂಗ್ ವಿಡಿಯೋ

‘ಇಷ್ಟಕಾಮ್ಯ’ ಚಿತ್ರದ ‘ನೀ ನನಗೋಸ್ಕರ’ ಹಾಡು

ಇದನ್ನೂ ಓದಿ : ‘ಪೈಲ್ವಾನ್‌’ ಸುದೀಪ್‌ಗೆ ನಾಯಕಿಯಾಗಿ ಜೈಪುರದ ಚೆಲುವೆ ಆಕಾಂಕ್ಷಾ ಸಿಂಗ್‌
ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More