ರಂಗಭೂಮಿ ಹಿನ್ನೆಲೆಯ ಅಪರೂಪದ ಸ್ವಾಭಿಮಾನಿ ಕಲಾವಿದ ಅಕ್ಕಿ ಚನ್ನಬಸಪ್ಪ

ನಿನ್ನೆ ಅಗಲಿದ ರಂಗಭೂಮಿ, ಸಿನಿಮಾ ನಟ ಅಕ್ಕಿ ಚನ್ನಬಸಪ್ಪ ತಮ್ಮ ವಿಶಿಷ್ಠ ಧ್ವನಿ, ನಟನೆಯ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾಗಿದ್ದವರು. ತಮ್ಮ ‘ನಾಕುತಂತಿ’ ಧಾರಾವಾಹಿ, ‘ಪುಟ್ಟಕ್ಕನ ಹೈವೇ’ ಸಿನಿಮಾದಲ್ಲಿ ನಟಿಸಿದ್ದ ಚನ್ನಬಸಪ್ಪ ಅವರನ್ನು ನಟ, ನಿರ್ದೇಶಕ ಬಿ ಸುರೇಶ್ ಸ್ಮರಿಸಿಕೊಂಡಿದ್ದಾರೆ

ಅಕ್ಕಿ ಚನ್ನಬಸಪ್ಪ ಮೂಲತಃ ವೃತ್ತಿರಂಗಭೂಮಿ ಕಲಾವಿದರು. ಬಾಲನಟನಾಗಿ ಬಣ್ಣ ಹಚ್ಚಿದ ಅವರು ಗುಬ್ಬಿ ವೀರಣ್ಣ, ಮಾಸ್ಟರ್‌ ಹಿರಣ್ಣಯ್ಯ ಕಂಪನಿ ಸೇರಿದಂತೆ ರಾಜ್ಯದ ಹಲವು ಪ್ರಮುಖ ನಾಟಕ ಕಂಪನಿಗಳಲ್ಲಿ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅವರು ಸಿನಿಮಾಗೆ ಬಂದದ್ದು ತೀರಾ ತಡವಾಗಿ, ಅರವತ್ತೈದು ವರ್ಷ ದಾಟಿದ ನಂತರ. ಸೀರಿಯಲ್‌, ಸಿನಿಮಾಗಳ ಚಿಕ್ಕಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡ ಅವರಿಗೆ ಎಪ್ಪತ್ತು ದಾಟಿದ ನಂತರ ಹಲವು ಪ್ರಮುಖವಾದ, ಗುರುತಿಸಬಹುದಾದ ಪಾತ್ರಗಳು ಸಿಕ್ಕವು.

ವೃತ್ತಿರಂಗಭೂಮಿಯಲ್ಲಿ ಅವರು ಜನಪ್ರಿಯ ಹಾಸ್ಯನಟನಾಗಿದ್ದರು ಎಂದು ಅವರ ಸಮಕಾಲೀನರು, ಅವರನ್ನು ರಂಗದ ಮೇಲೆ ನೋಡಿದವರು ಹೇಳುತ್ತಾರೆ. ಒಂದು ರೀತಿ ಮೆಟಾಲಿಕ್ ವಾಯ್ಸ್‌ ಇದ್ದ ಅಕ್ಕಿ ಚನ್ನಬಸಪ್ಪ ತಮ್ಮ ಧ್ವನಿಯಿಂದಲೇ ರಂಗಭೂಮಿ, ಸಿನಿಮಾಗಳಲ್ಲಿ ಜನಪ್ರಿಯತೆ ಗಳಿಸಿರಲಿಕ್ಕೂ ಸಾಕು. ನಮ್ಮ ಸಂಸ್ಥೆಯ ‘ನಾಕುತಂತಿ’ ಧಾರಾವಾಹಿಯಲ್ಲಿ ಮತ್ತು ‘ಪುಟ್ಟಕ್ಕನ ಹೈವೇ’ ಸಿನಿಮಾದಲ್ಲಿ ಅವರು ನಟಿಸಿದ್ದರು. ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ ‘ಕನಸೆಂಬೋ ಕುದುರೆಯನೇರಿ’ ಸಿನಿಮಾದಲ್ಲಿ ಅವರಿಗೆ ಅಪರೂಪದ ಪಾತ್ರವಿದೆ.

ಅಕ್ಕಿ ಚನ್ನಬಸಪ್ಪ ಮದುವೆಯಾಗಿದ್ದು ಕೂಡ ತಡವಾಗಿ. ವೃತ್ತಿ ನಾಟಕ ಕಂಪನಿಯಲ್ಲಿನ ನಟಿಯನ್ನು ಅವರು ವರಿಸಿದ್ದರು. ನಾನು ನೋಡಿದಂತೆ ತುಂಬಾ ಸ್ವಾಭಿಮಾನಿ ವ್ಯಕ್ತಿತ್ವದ ನಟ. ಪತ್ನಿಯ ಹೊರತಾಗಿ ಕುಟುಂಬದ ಯಾರ ಸಂಪರ್ಕವೂ ಇಲ್ಲದೆ ನಟನೆಯಿಂದಲೇ ಜೀವನ ನಿರ್ವಹಿಸುತ್ತಿದ್ದರು. ದಂಪತಿಗೆ ಮಕ್ಕಳಿರಲಿಲ್ಲ. ದುರದೃಷ್ಟವತಾಶ್‌ ಪತ್ನಿ ಕ್ಯಾನ್ಸರ್‌ನಿಂದ ಬಳಲಿದರು. ತಾವು ನಟನೆಯಿಂದ ದುಡಿದ ಹಣವನ್ನೆಲ್ಲಾ ಪತ್ನಿಯ ಚಿಕಿತ್ಸೆಗಾಗಿ ವ್ಯಯಿಸುತ್ತಿದ್ದರು. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ಐದು ವರ್ಷದ ಹಿಂದೆ ಅವರ ಪತ್ನಿ ನಿಧನರಾದರು.

ಪತ್ನಿ ಅಗಲಿಕೆಯಿಂದ ಅಕ್ಕಿ ಚನ್ನಬಸಪ್ಪ ಒಂಟಿಯಾದರು. ಒಂದಷ್ಟು ವರ್ಷ ನಟನೆಯಿಂದಲೂ ವಿಮುಖರಾಗಿದ್ದರು. ಸರ್ಕಾರ ಕೊಡುತ್ತಿದ್ದ ಸಾವಿರದಿನ್ನೂರು ರೂಪಾಯಿ ಮಾಸಾಶನದಿಂದ ಜೀವನ ನಿರ್ವಹಣೆ ಹೇಗಾಗುತ್ತದೆ? ಆಟೋ ಓಡಿಸುತ್ತಿದ್ದ ರಾಮು ಮತ್ತು ಅವರ ಪತ್ನಿ ಈ ಹಿರಿಯ ಜೀವಕ್ಕೆ ನೆರವಾಗಿದ್ದರು. ನಾನು ಅಕ್ಕಿ ಚನ್ನಬಸಪ್ಪನವರ ಮನೆ ಬಾಡಿಗೆ, ಖರ್ಚು ನಿರ್ವಹಣೆಗೆಂದು ಸಹಾಯ ಮಾಡುತ್ತಿದ್ದೆ. ಪತ್ನಿ ಸಾವಿನಿಂದ ಚೇತರಿಸಿಕೊಂಡ ಅವರು ಮತ್ತೆ ಬಣ್ಣ ಹಚ್ಚಿದರು. ತಿಂಗಳಲ್ಲಿ ಆರೇಳು ದಿನ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಗುತ್ತಿತ್ತು.

ಇದನ್ನೂ ಓದಿ : ವಿಡಿಯೋ | 34 ವರ್ಷಗಳ ನಂತರ ನಟಿ ಸರೋಜಾದೇವಿ ಜೊತೆ ಪುನೀತ್‌

ಅಕ್ಕಿ ಚನ್ನಬಸಪ್ಪನವರನ್ನು ಉತ್ತಮ ವೃದ್ಧಾಶ್ರಮವೊಂದಕ್ಕೆ ಸೇರಿಸಲು ಸಚಿವೆ, ನಟಿ ಉಮಾಶ್ರೀ ಅವರಿಗೆ ನಾವೊಂದಿಷ್ಟು ಮಂದಿ ಮನವಿ ಮಾಡಿದ್ದೆವು. ಅದರಂತೆ ಉಮಾಶ್ರೀಯವರು ವೃದ್ಧಾಶ್ರಮವೊಂದರಲ್ಲಿ ಅವರಿಗೆ ನೆಲೆ ಕಲ್ಪಿಸುವ ವ್ಯವಸ್ಥೆಯನ್ನೂ ಮಾಡಿದ್ದರು. ಆದರೆ ಅಲ್ಲಿನ ಕೆಲವು ನಿರ್ಭಂಧಗಳು ಅಕ್ಕಿ ಚನ್ನಬಸಪ್ಪನವರಿಗೆ ಒಪ್ಪಿತವಾಗಲಿಲ್ಲ. ‘ಮೊಬೈಲ್ ಬಳಸುವಂತಿಲ್ಲ, ಸಂಜೆ ಆರರೊಳಗೆ ವೃದ್ಧಾಶ್ರಮಕ್ಕೆ ವಾಪಸಾಗಬೇಕು’ ಎನ್ನುವ ಅಲ್ಲಿನ ರೀತಿನೀತಿಗಳನ್ನು ಚನ್ನಬಸಪ್ಪನವರು ಪ್ರಶ್ನಿಸಿದ್ದರು. “ನನ್ನನ್ನೇನು ಜೈಲಿಗೆ ಹಾಕುತ್ತಿದ್ದೀರಾ? ನನಗೆ ನಾಟಕ ಮುಗಿಯೋದೇ ರಾತ್ರಿ ಒಂಬತ್ತಕ್ಕೆ. ಈ ವ್ಯವಸ್ಥೆಯೇ ಬೇಡ, ನನಗಿಷ್ಟ ಬಂದ ಹಾಗೆ ನಾನಿರುತ್ತೇನೆ” ಎಂದು ಅವರು ವೃದ್ಧಾಶ್ರಮಕ್ಕೆ ಹೋಗಲೇ ಇಲ್ಲ.

ಕಳೆದ ಒಂದು ವರ್ಷದಿಂದೀಚೆಗೆ ವಯೋಸಹಜ ಅನಾರೋಗ್ಯದಿಂದ ಅಕ್ಕಿ ಚನ್ನಬಸಪ್ಪ ತಮ್ಮ ದೇಹದ ಮೇಲಿನ ನಿಯಂತ್ರಣ ಕಳೆದುಕೊಂಡರು. ಅವರನ್ನು ನೋಡಿಕೊಳ್ಳಲು ರಾಮು ದಂಪತಿಗೆ ಕಷ್ಟವಾಗಿ ಕುಂಬಳಗೋಡಿನಲ್ಲಿರುವ ನಟ ಜ್ಯೂನಿಯರ್ ರಾಜಕುಮಾರ್ ನಡೆಸುತ್ತಿದ್ದ ವೃದ್ಧಾಶ್ರಮಕ್ಕೆ ಸೇರಿಸಲಾಯ್ತು. ನಿನ್ನೆ ಅವರು ನಮ್ಮನ್ನು ಅಗಲಿದ್ದಾರೆ. ಸುಮಾರು ಏಳೆಂಟು ದಶಕಗಳನ್ನು ನಟನೆಯಲ್ಲೇ ಕಳೆದ ಅಕ್ಕಿ ಚನ್ನಬಸಪ್ಪ ಕನ್ನಡ ವೃತ್ತಿರಂಗಭೂಮಿ, ಸಿನಿಮಾರಂಗ ಸದಾ ನೆನಪಿಟ್ಟುಕೊಳ್ಳುವ ನಟ. ಸ್ವಾಭಿಮಾನಿ ವ್ಯಕ್ತಿತ್ವದ ನಟನ ಅಗಲಿಕೆ ವೈಯಕ್ತಿಕವಾಗಿ ನನ್ನ ಮನಸ್ಸಿಗೆ ನೋವು ತಂದಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More