ಮನದ ಮಾತು | ಸದೃಢ ನಾಯಕಿಪ್ರಧಾನ ಪಾತ್ರಗಳ ನಿರೀಕ್ಷೆಯಲ್ಲಿ ಆಶಿಕಾ

ಸ್ಯಾಂಡಲ್‌ವುಡ್‌ನ ಪ್ರಸ್ತುತ ಬೇಡಿಕೆಯ ನಾಯಕನಟಿಯರಲ್ಲಿ ಆಶಿಕಾ ಒಬ್ಬರು. ತುಮಕೂರು ಮೂಲದ ಅಪ್ಪಟ ಕನ್ನಡದ ಹುಡುಗಿ. ನಾಳೆ (ಮೇ 18) ಅವರು ನಟಿಸಿರುವ ‘ರ‍್ಯಾಂಬೋ 2’ ಸಿನಿಮಾ ತೆರೆಕಾಣುತ್ತಿದೆ. ಸಿನಿಮಾ ಹಾಗೂ ಇನ್ನಿತರ ಸಂಗತಿಗಳ ಬಗೆಗಿನ ಆಶಿಕಾ ಮನದ ಮಾತು ಇಲ್ಲಿದೆ 

‘ಕ್ರೇಜಿ ಬಾಯ್ಸ್‌’ ಚಿತ್ರದೊಂದಿಗೆ ಸ್ಯಾಂಡಲ್‌ವುಡ್‌ಗೆ ಪರಿಚಯವಾದ ಆಶಿಕಾಗೆ ‘ಮುಗುಳುನಗೆ’ ಯಶಸ್ಸು ತಂದುಕೊಟ್ಟಿತ್ತು. ಯೋಗರಾಜ್‌ ಭಟ್‌ ನಿರ್ದೇಶನದ ಈ ಚಿತ್ರದ ನಂತರ ‘ರಾಜು ಕನ್ನಡ ಮೀಡಿಯಂ’ನಲ್ಲಿಯೂ ಅವರು ಪ್ರೇಕ್ಷಕರಿಗೆ ಇಷ್ಟವಾಗಿದ್ದರು. ಈ ಮಧ್ಯೆ, ಶಿವ ರಾಜಕುಮಾರ್‌ ಅಭಿನಯದ ‘ಮಾಸ್ ಲೀಡರ್‌’ನಲ್ಲೊಂದು ಚೆಂದದ ಪಾತ್ರ. ಈಗ ಅವರ ‘ರ‍್ಯಾಂಬೋ 2’ ಸಿನಿಮಾ ತೆರೆಕಾಣುತ್ತಿದೆ.

ಅಚಾನಕ್ಕಾಗಿ ಸಿನಿಮಾರಂಗ ಪ್ರವೇಶಿಸಿದವರು ನೀವು. ಈಗ ನಟನೆಯೇ ನಿಮ್ಮ ವೃತ್ತಿಯಾಗಿದ್ದು, ಬದುಕಿನ ತಿರುವುಗಳ ಬಗ್ಗೆ ಏನು ಹೇಳುತ್ತೀರಿ?

ಹೌದು, ಸಿನಿಮಾ ನನಗೆ ಅನಿರೀಕ್ಷಿತ. ಮೊದಲು ತುಂಬಾ ಕ್ಯಾಶುಯಲ್‌ ಆಗಿರುತ್ತಿದ್ದೆ. ಪದವಿ ಓದುತ್ತಿದ್ದ ನನಗೆ ಸಿನಿಮಾ ಒಂದು ಪ್ಯಾಷನ್ ಆಗಿತ್ತಷ್ಟೆ. ಸಿನಿಮಾ ಪ್ರವೇಶಿಸಿ ಜನರು ಗುರುತಿಸುತ್ತಿದ್ದಂತೆ ತುಂಬಾ ಸೀರಿಯಸ್‌ನೆಸ್‌ ಬಂದಿದೆ. ಒಳ್ಳೊಳ್ಳೆಯ ಪಾತ್ರಗಳನ್ನು ಮಾಡಬೇಕೆಂದು ಅನಿಸುತ್ತಿದೆ. ಈಗ ಎಲ್ಲಿ ಹೋದರೂ ಜನರು ನನ್ನ ನಟನೆ, ಪಾತ್ರಗಳನ್ನು ಮೆಚ್ಚಿ ಮಾತನಾಡುತ್ತಾರೆ. ಇದು ನನ್ನಲ್ಲಿನ ಆಸಕ್ತಿ, ಉತ್ಸಾಹ ಹೆಚ್ಚು ಮಾಡಿದೆ.

‘ರ‍್ಯಾಂಬೋ 2’ ಚಿತ್ರದಲ್ಲಿ ನಿಮ್ಮ ಪಾತ್ರದ ಚಿತ್ರಣ ಹೇಗಿದೆ?

ಬೋಲ್ಡ್‌, ಔಟ್‌ಸ್ಪೋಕನ್ ಹುಡುಗಿ. ಈಗಿನ ಕಾಲದ ಫಾಸ್ಟ್‌ ಫಾರ್ವರ್ಡ್‌, ಆಧುನಿಕ ಮನೋಭಾವದ ಯುವತಿಯರ ಪ್ರತಿನಿಧಿಯಂತೆ ಕಾಣಿಸಿಕೊಂಡಿದ್ದೇನೆ. ಪಾರ್ಟಿ, ಫನ್‌, ಎಂಜಾಯ್‌ಮೆಂಟ್‌ ಎಂದು ಓಡಾಡುವ ನನ್ನ ಪಾತ್ರದ ಚಿತ್ರಣ ವಿಶಿಷ್ಟವಾಗಿದೆ. ನನ್ನ ಪಾತ್ರದೊಂದಿಗೆ ಪ್ರೇಕ್ಷಕರಿಗೆ ಕೊನೆಯಲ್ಲೊಂದು ಒಳ್ಳೆಯ ಸಂದೇಶ ಕೂಡ ರವಾನೆಯಾಗುತ್ತದೆ ಎನ್ನುವುದು ಖುಷಿಯ ವಿಷಯ.

‘ರ‍್ಯಾಂಬೋ 2’ ಚಿತ್ರದ ‘ಚುಟ್ಟು ಚುಟ್ಟು’ ಹಾಡು

ಚಿತ್ರದ ವಿಡಿಯೋ ಹಾಡುಗಳು ಬಿಡುಗಡೆಯಾಗಿದ್ದು, ತುಂಬಾ ಕಲರ್‌ಫುಲ್ ಅಗಿವೆ...

ಸಂಗೀತ ಸಂಯೋಜಿಸಿರುವ ಅರ್ಜುನ್ ಜನ್ಯ ಅವರು ಚಿತ್ರದ ಸಹನಿರ್ಮಾಪಕರಲ್ಲೊಬ್ಬರು. ವೈಯಕ್ತಿಕವಾಗಿ ನನಗೆ ಅವರ ಸಂಗೀತ ಸಂಯೋಜನೆಯ ಹಾಡುಗಳು ಅಚ್ಚುಮೆಚ್ಚು. ‘ರ‍್ಯಾಂಬೋ 2’ಗಾಗಿ ಅವರು ಫಾಸ್ಟ್‌, ಪೆಪ್ಪಿ, ಡಾನ್ಸಿಂಗ್ ನಂಬರ್‌ಗಳನ್ನು ಸಂಯೋಜಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ವಿಡಿಯೋ ಹಾಡುಗಳು ಸೋಷಿಯಲ್ ಮೀಡಿಯಾದಲ್ಲಿ ಕ್ಲಿಕ್ಕಾಗಿದ್ದು, ಪಿಕ್ಚರೈಸೇಷನ್‌ ಎಲ್ಲರಿಗೂ ಮೆಚ್ಚುಗೆಯಾಗಿದೆ. ಚಿತ್ರದ ಟ್ರೈಲರ್ ಬಿಟ್ಟಿಲ್ಲ. ಈ ಹಾಡುಗಳೇ ಪ್ರೇಕ್ಷಕರಿಗೆ ಒಂದು ರೀತಿಯ ಇನ್ವಿಟೇಷನ್‌ ಆಗಿವೆ. ಕಾಸ್ಟ್ಯೂಮ್‌, ಹೇರ್‌ಸ್ಟೈಲ್‌ ಎಲ್ಲ ವಿಭಾಗದಲ್ಲೂ ತಂತ್ರಜ್ಞರು ಸೂಕ್ಷ್ಮವಾಗಿ ಕೆಲಸ ಮಾಡಿದ್ದಾರೆ. ಛಾಯಾಗ್ರಾಹಕ ಸುದರ್ಶನ್ ನಮ್ಮನ್ನು ಚೆಂದವಾಗಿ ಸೆರೆಹಿಡಿದಿದ್ದಾರೆ.

‘ರ‍್ಯಾಂಬೋ 2’ ಹೀರೋ ಶರಣ್‌ ನಟನೆಯ ಚಿತ್ರಗಳ ಸಂಖ್ಯೆ ನೂರಾಹತ್ತರ ಆಸುಪಾಸಿದೆ. ಅನುಭವಿ ನಟನ ಜೊತೆಗಿನ ಚಿತ್ರೀಕರಣದಲ್ಲಿನ ಒಡನಾಟ ಹೇಗಿತ್ತು?

ಅವರಿಗೆ ಹೋಲಿಸಿದರೆ ನಾನು ತೀರಾ ಹೊಸಬಳು. ಅವರೊಬ್ಬ ಮೆಚ್ಯೂರ್ಡ್‌ ನಟ. ಆರಂಭದಲ್ಲಿ ಒಂದು ರೀತಿಯ ಭಯ ಇದ್ದೇ ಇತ್ತು. ಚಿತ್ರೀಕರಣದಲ್ಲಿ ತುಂಬಾ ಕಾನ್ಶಿಯಸ್‌ ಆಗಿರುತ್ತಿದ್ದೆ. ಸರಳ ಸ್ವಭಾವದ ಶರಣ್‌ ಯಾವ ಹಮ್ಮೂ ಇಲ್ಲದ ನಟ. ಶರಣ್‌, ಚಿಕ್ಕಣ್ಣ ಮತ್ತಿತರೊಂದಿಗೆ ಒಡನಾಟ ಚೆನ್ನಾಗಿತ್ತು. ಒಂದು ರೀತಿ ಕ್ಲೋಸ್‌ನೆಸ್‌ ಬೆಳೀತು. ನಟಿಸೋಕೆ ಸುಲಭವಾಯ್ತು. ರೊಮ್ಯಾಂಟಿಕ್‌-ಕಾಮಿಡಿ ಜಾನರ್‌ನ ‘ರ‍್ಯಾಂಬೋ 2’ ಚಿತ್ರೀಕರಣದಲ್ಲಿ ತಮಾಷೆ, ಪರಸ್ಪರರ ಕಾಲೆಳೆಯುವುದು ನಡೆಯುತ್ತಲೇ ಇತ್ತು.

‘ರ‍್ಯಾಂಬೋ 2’ ಚಿತ್ರದ ‘ದಮ್ ಮಾರೋ ದಮ್‌’ ಹಾಡಿನ ಮೇಕಿಂಗ್‌

ಇತ್ತೀಚೆಗೆ ನಾಯಕಿಪ್ರಧಾನ ಸಿನಿಮಾಗಳು ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಗುತ್ತಿವೆ. ಅಂತಹ ಪಾತ್ರಗಳ ನಿರೀಕ್ಷೆಯಲ್ಲಿದ್ದೀರಾ?

ಹೌದು, ಸಿನಿಮಾ ಪ್ರಭಾವಶಾಲಿ ಮೀಡಿಯಾ. ತೆರೆಯ ಮೇಲಿನ ಪಾತ್ರಗಳು ಜನರ ಮೇಲೆ ಪ್ರಭಾವ ಬೀರುತ್ತವೆ. ಬಾಲಿವುಡ್‌ ಸೇರಿದಂತೆ ದಕ್ಷಿಣದ ಪ್ರಾದೇಶಿಕ ಚಿತ್ರಗಳಲ್ಲಿ ಈಗೀಗ ಹೆಚ್ಚೆಚ್ಚು ನಾಯಕಿ ಪ್ರಧಾನ ಸಿನಿಮಾಗಳು ತಯಾರಾಗುತ್ತಿವೆ. ಸದೃಢ ನಾಯಕಿ ಪಾತ್ರಗಳು ಸೃಷ್ಟಿಯಾಗುತ್ತಿವೆ. ಬಾಲಿವುಡ್‌ನ ಅಲಿಯಾ ಭಟ್‌ ಅವರ ಪಾತ್ರಗಳು ಇಷ್ಟವಾಗುತ್ತವೆ. ಕಲಾವಿದೆಯಾಗಿ ನನಗೂ ಅಂತಹ ಪಾತ್ರಗಳಲ್ಲಿ ನಟಿಸಬೇಕೆನ್ನುವ ಇರಾದೆ ಇದೆ. ಇನ್ನೂ ಸಮಯವಿದೆ, ಕಾದು ನೋಡೋಣ.

ಸದ್ಯ ಯಾವ ಸಿನಿಮಾದ ಚಿತ್ರೀಕರಣದಲ್ಲಿದ್ದೀರಿ?

ಶಶಾಂಕ್‌ ನಿರ್ದೇಶನದ ‘ತಾಯಿಗೆ ತಕ್ಕ ಮಗ’ ಸಿನಿಮಾ ಚಿತ್ರೀಕರಣದಲ್ಲಿದ್ದೇನೆ. ಹಾಗಾಗಿ ‘ರ‍್ಯಾಂಬೋ 2’ ಪ್ರೊಮೋಷನ್‌ಗೆ ಟೈಂ ಸಿಗುತ್ತಿಲ್ಲ. ಒಮ್ಮೆಗೆ ಒಂದೇ ಸಿನಿಮಾದಲ್ಲಿ ನಟಿಸುವುದರಿಂದ ಪಾತ್ರಕ್ಕೆ ಹೆಚ್ಚು ನ್ಯಾಯ ಸಲ್ಲಿಸುವುದು ಸಾಧ್ಯ ಎನ್ನುವುದು ನನ್ನ ನೀತಿ. ಈ ಚಿತ್ರದ ಶೇ 40ರಷ್ಟು ಚಿತ್ರೀಕರಣವಿನ್ನೂ ಬಾಕಿಯಿದ್ದು, ನಂತರ ಬೇರೆ ಸಿನಿಮಾ ಒಪ್ಪಿಕೊಳ್ಳುತ್ತೇನೆ.

ಇತ್ತೀಚೆಗೆ ಯಾವ ಸಿನಿಮಾ ನೋಡಿದಿರಿ?

‘ಮಹಾನಟಿ’ ತೆಲುಗು ಸಿನಿಮಾ ನೋಡಿದೆ. ಹಿರಿಯ ನಟಿ ಸಾವಿತ್ರಿ ಅವರ ಬಯೋಪಿಕ್‌ನಲ್ಲಿ ನಟಿ ಕೀರ್ತಿ ಸುರೇಶ್‌ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಇಂತಹ ಸಿನಿಮಾಗಳು ಹೆಚ್ಚು ತಯಾರಾಗಬೇಕು. ಅಂಥದ್ದೊಂದು ದೊಡ್ಡ ಪಾತ್ರದಲ್ಲಿ ನಟಿಸಬೇಕೆನ್ನುವ ಆಸೆ ಮೂಡಿದೆ.

ಆಶಿಕಾ ನಟನೆಯ ‘ಮುಗುಳುನಗೆ’ ಚಿತ್ರದ ‘ನಿನ್ನ ಸ್ನೇಹದಿಂದ’ ಹಾಡು

ಇದನ್ನೂ ಓದಿ : ವಿಡಿಯೋ | 34 ವರ್ಷಗಳ ನಂತರ ನಟಿ ಸರೋಜಾದೇವಿ ಜೊತೆ ಪುನೀತ್‌
ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More