ಚಿಕಿತ್ಸೆಯಲ್ಲಿರುವ ನಟ ಇರ್ಫಾನ್‌ ಟ್ವೀಟ್‌ನಿಂದ ಖುಷಿಯಾದ ಅಭಿಮಾನಿಗಳು

ಬಾಲಿವುಡ್ ನಟ ಇರ್ಪಾನ್ ಖಾನ್‌ ನ್ಯೂರೋಎಂಡೋಕ್ರೈನ್‌ ಟ್ಯೂಮರ್‌ಗೆ ಲಂಡನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡೂವರೆ ತಿಂಗಳಿಂದ ಅವರು ಟ್ವೀಟ್ ಮಾಡಿರಲಿಲ್ಲ. ಇದೀಗ ‘ಕಾರವಾನ್‌’ ಹಿಂದಿ ಚಿತ್ರದ ತಾರೆಯರಿಗೆ ಶುಭ ಕೋರಿರುವ ಅವರ ಟ್ವೀಟ್‌ ಅಭಿಮಾನಿಗಳಿಗೆ ಸಂತಸ ತಂದಿದೆ

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹಿಂದಿ ನಟ ಇರ್ಫಾನ್ ಖಾನ್‌ ಪ್ರಸ್ತುತ ಲಂಡನ್‌ನಲ್ಲಿ ನ್ಯೂರೋಎಂಡೋಕ್ರೈನ್‌ ಟ್ಯೂಮರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ತಮಗೆ ಗಂಭೀರವಾದ ಕಾಯಿಲೆ ಇದೆ ಎಂದು ಬರೆದುಕೊಂಡಿದ್ದೇ ಅವರ ಕೊನೆಯ ಟ್ವೀಟ್ ಆಗಿತ್ತು. ಎರಡೂವರೆ ತಿಂಗಳಿನಿಂದ ಅವರು ಟ್ವಿಟರ್‌ನಲ್ಲಿ ಬೇರೆ ಸಂದೇಶ ಬರೆದಿರಲಿಲ್ಲ. ಇದೀಗ ಅವರ ಕಡೆಯಿಂದ ಒಂದು ಟ್ವೀಟ್ ಬಂದಿದೆ. ತಾವು ನಟಿಸಿರುವ ‘ಕಾರವಾನ್‌’ ಹಿಂದಿ ಸಿನಿಮಾಗೆ ಸಂಬಂಧಿಸಿದಂತೆ ಅವರು ಟ್ವೀಟ್ ಮಾಡಿದ್ದಾರೆ. ‘ಕಾರವಾನ್‌’ ಚಿತ್ರದೊಂದಿಗೆ ದಕ್ಷಿಣದ ಖ್ಯಾತ ನಟ ದಲ್ಕಾರ್ ಸಲ್ಮಾನ್‌ ಮತ್ತು ಮಿತಿಲಾ ಪಾಲ್ಕರ್‌ ಬಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಇರ್ಫಾನ್‌ ಚಿತ್ರದಲ್ಲಿನ ಸಹನಟರಿಗೆ ಶುಭ ಹಾರೈಸುತ್ತ, "ಆರಂಭದ ಮುಗ್ಧತೆಯ ಅನುಭವವನ್ನು ಎಲ್ಲೂ ಖರೀದಿಸಲು ಸಾಧ್ಯವಿಲ್ಲ. ನಿಮ್ಮಿಬ್ಬರಿಗೆ ಒಳಿತಾಗಲಿ,” ಎಂದು ಟ್ವೀಟಿಸಿದ್ದಾರೆ.

ಇರ್ಫಾನ್‌ ಖಾನ್‌ ಅವರ ಟ್ವೀಟ್‌ಗೆ ಪ್ರತಿಯಾಗಿ ನಟ ದಲ್ಕಾರ್ ಸಲ್ಮಾನ್‌, "ನಿಮಗೆ ತುಂಬುಹೃದಯದ ಧನ್ಯವಾದಗಳು ಸರ್. ಬಾಲಿವುಡ್‌ ಪ್ರವೇಶಕ್ಕೆ ನಿಮ್ಮ ಸಿನಿಮಾಗಿಂತ ಅದ್ಭುತ ಸಿನಿಮಾ ನನಗೆ ಮತ್ತೊಂದು ಸಿಗಲಾರದು. ಅದಷ್ಟು ಬೇಗ ನೀವು ಹುಷಾರಾಗಿ ಬನ್ನಿ,” ಎಂದಿದ್ದಾರೆ. ಇರ್ಫಾನ್‌ ಟ್ವೀಟ್‌ಗೆ ನೂರಾರು ಅಭಿಮಾನಿಗಳು ಪ್ರತಿಕ್ರಿಯಿಸಿದ್ದು, ಅವರ ಆರೋಗ್ಯಕ್ಕೆ ಶುಭ ಹಾರೈಸಿದ್ದಾರೆ. ಆಕರ್ಷ ಖುರಾನಾ ನಿರ್ದೇಶನದ ‘ಕಾರವಾನ್‌’ ಹಿಂದಿ ಸಿನಿಮಾ ತೆರೆಗೆ ಸಿದ್ಧವಾಗುತ್ತಿದ್ದು, ಆ.10ರಂದು ತೆರೆಕಾಣಲಿದೆ.

ಪ್ರಯಾಣವೊಂದರಲ್ಲಿ ಮೂವರು ಭಿನ್ನ ವ್ಯಕ್ತಿತ್ವದ ವ್ಯಕ್ತಿಗಳು ಜೊತೆಯಾಗುತ್ತಾರೆ; ಅವರ ಅನುಭವ, ಮಾತುಕತೆಯೇ ಚಿತ್ರದ ಕಥಾವಸ್ತು. ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕೃತಿ ಕರಬಂಧ ನಟಿಸಿದ್ದಾರೆ. ‘ಬ್ಲ್ಯಾಕ್‌ಮೇಲ್‌’ ಸಿನಿಮಾ ನಂತರ ತೆರೆಕಾಣುತ್ತಿರುವ ಇರ್ಫಾನ್‌ ಚಿತ್ರವಿದು. ವಿಶಾಲ್ ಭಾರದ್ವಾಜ್‌ ನಿರ್ದೇಶನದಲ್ಲಿ ದೀಪಿಕಾ ಪಡುಕೋಣೆ ಜೊತೆಗೆ ನಟಿಸಬೇಕಿದ್ದ ಇರ್ಫಾನ್‌ ಚಿತ್ರವೊಂದು ಸೆಟ್ಟೇರಬೇಕಿತ್ತು. ಇರ್ಫಾನ್‌ ಅನಾರೋಗ್ಯದ ಕಾರಣ ಈ ಸಿನಿಮಾ ಮುಂದೂಡಲ್ಪಟ್ಟಿದೆ. ಇದೀಗ ಇರ್ಫಾನ್‌ ಟ್ವೀಟ್‌ ಅಭಿಮಾನಿಗಳು ಹಾಗೂ ಬಾಲಿವುಡ್‌ನಲ್ಲಿನ ಅವರ ಹಿತೈಷಿಗಳಿಗೆ ಖುಷಿ ತಂದಿದ್ದು, ಎಲ್ಲರೂ ಇರ್ಫಾನ್‌ ಮರಳುವುದನ್ನು ಎದುರು ನೋಡುತ್ತಿದ್ದಾರೆ.

ಇದನ್ನೂ ಓದಿ : ಮನದ ಮಾತು | ಸದೃಢ ನಾಯಕಿಪ್ರಧಾನ ಪಾತ್ರಗಳ ನಿರೀಕ್ಷೆಯಲ್ಲಿ ಆಶಿಕಾ

ಇತ್ತೀಚೆಗೆ ತೆರೆಕಂಡಿದ್ದ ಇರ್ಫಾನ್ ಖಾನ್‌ರ ‘ಬ್ಲ್ಯಾಕ್‌ಮೇಲ್‌’ ಚಿತ್ರದ ಟ್ರೈಲರ್‌

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More