ರಜನೀ ‘ಕಾಲ’ನಿಗೆ ಕಾವೇರಿ ತಳುಕು; ಪ್ರಕಾಶ್ ರೈ ಪ್ರಶ್ನೆ, ವಿಶಾಲ್ ವಿಶ್ವಾಸ

ರಜನಿ ಅಭಿನಯದ ‘ಕಾಲ’ ಸಿನಿಮಾ ನಿಷೇಧಕ್ಕೆ ಸಂಬಂಧಿಸಿದಂತೆ ನಟ ಪ್ರಕಾಶ್ ರೈ ಟ್ವೀಟ್‌ ಮಾಡಿದ್ದಾರೆ. ಇಲ್ಲಿ ಕಾವೇರಿ ವಿವಾದ ತರುವುದು ಅಪ್ರಸ್ತುತ ಎನ್ನುವುದು ಅವರ ವಾದ. ಈ ಮಧ್ಯೆ, ಮುಂಬೈ ಮೂಲದ ಪತ್ರಕರ್ತರೊಬ್ಬರು ಇದು ತಮ್ಮ ತಂದೆಯ ಕತೆ ಎಂದು ತಕರಾರು ತೆಗೆದಿದ್ದಾರೆ

ರಜನೀಕಾಂತ್ ಅಭಿನಯದ ‘ಕಾಲ’ ಸಿನಿಮಾ ಈ ವಾರ ವಿಶ್ವಾದ್ಯಂತ ತೆರೆಕಾಣುತ್ತಿದೆ. ರಾಜ್ಯದಲ್ಲಿ ಸಿನಿಮಾ ಬಿಡುಗಡೆಯಾಗುವ ಕುರಿತಾದ ಗೊಂದಲವಿನ್ನೂ ಬಗೆಹರಿದಿಲ್ಲ. ಕಾವೇರಿ ನದಿ ನೀರು ವಿಚಾರಕ್ಕೆ ಸಂಬಂಧಿಸಿದಂತೆ ನಟ ರಜನೀಕಾಂತ್‌ ನಿಲುವು ಖಂಡಿಸಿ ಕನ್ನಡ ಚಿತ್ರವಿತರಕರು, ಪ್ರದರ್ಶಕರು ‘ಕಾಳ’ ಚಿತ್ರವನ್ನು ರಾಜ್ಯದಲ್ಲಿ ಪ್ರದರ್ಶಿಸದಿರಲು ನಿರ್ಧರಿಸಿದ್ದಾರೆ. ಕಳೆದ ವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸಭೆಯಲ್ಲಿ ಚಿತ್ರಮಂದಿರ ಮಾಲೀಕರು ಸ್ವಪ್ರೇರಣೆಯಿಂದ ತೆಗೆದುಕೊಂಡ ನಿರ್ಧಾರವಿದು. ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರವರೆಗೂ ವಿವಾದ ಹೋಗಿತ್ತು. ಇದು ಕನ್ನಡಿಗರ ವಿವೇಚನೆಗೆ ಬಿಟ್ಟ ನಿರ್ಣಯ ಎಂದಿದ್ದರು ಕುಮಾರಸ್ವಾಮಿ.

ಚಿತ್ರದ ಬಿಡುಗಡೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಚಿತ್ರರಂಗದ ಹಲವರು ಈ ಬಗ್ಗೆ ಪ್ರತಿಕ್ರಿಯಿಸುತ್ತಿದ್ದಾರೆ. ಬಹುಭಾಷಾ ನಟ ಪ್ರಕಾಶ್ ರೈ ವಿವಾದಕ್ಕೆ ಸಂಬಂಧಿಸಿದಂತೆ ಸುದೀರ್ಘ ಪತ್ರವೊಂದನ್ನು ಬರೆದು ಟ್ವೀಟ್ ಮಾಡಿದ್ದಾರೆ. ‘ಕಾವೇರಿಗೂ ಕಾಲನಿಗೂ ಎತ್ತಣಿಂದೆತ್ತಣ ಸಂಬಂಧ?’ ಎನ್ನುವ ಶೀರ್ಷಿಕೆಯ ಪತ್ರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. “ನದಿಗೂ ಮನುಷ್ಯನಿಗೂ ಇರುವ ಸಂಬಂಧ ತುಂಬಾ ಆಪ್ತವಾದದ್ದು, ಜೀವನ್ಮುಖಿಯಾದದ್ದು. ಕಾವೇರಿಯೊಂದಿಗೆ ನಮಗೆ ಅಂತಹ ಭಾವನಾತ್ಮಕ ಸಂಬಂಧವಿದೆ. ಹೀಗಾಗಿ ಈ ಜೀವನದಿಯ ನೀರು ಹಂಚಿಕೊಳ್ಳುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಾಗ ತುಂಬಾ ಭಾವುಕರಾಗುತ್ತೇವೆ,” ಎಂದು ಪತ್ರ ಆರಂಭಿಸುವ ಪ್ರಕಾಶ್ ರೈ, “ಕಾಲ’ ಚಿತ್ರಕ್ಕೆ ನಿಷೇಧ ಹೇರುವ ಮೂಲಕ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ,” ಎಂದು ಹೋರಾಟಗಾರರಿಗೆ ಸಲಹೆ ನೀಡುತ್ತಾರೆ. "ನಟನೊಬ್ಬನ ಹೇಳಿಕೆಗೆ ಯಾವುದೇ ಸಂಬಂಧವಿಲ್ಲದ ನಿರ್ಮಾಪಕನ ಬಂಡವಾಳದ ಗತಿ ಏನಾಗಬೇಕು? ನೂರಾರು ತಂತ್ರಜ್ಞರ, ಸಹಕಲಾವಿದರ, ಸಾವಿರಾರು ಕಾರ್ಮಿಕರ ದುಡಿಮೆ ಮತ್ತು ಪ್ರತಿಭೆಯ ಪ್ರತಿಫಲವೇನು? ಪೋಸ್ಟರ್ ಅಂಟಿಸುವುದರಿಂದ ಹಿಡಿದು ಸೈಕಲ್ ಸ್ಟ್ಯಾಂಡ್‌ ನಡೆಸುವ, ಕ್ಯಾಂಟೀನ್ ನಡೆಸುವ ಮಂದಿಯ ಪರಿಸ್ಥಿತಿ ಏನು? ಹಣ ಹೂಡಿದ ಹಂಚಿಕೆದಾರ, ಥಿಯೇಟರ್ ಮಾಲೀಕ, ಅವರನ್ನು ಅವಲಂಬಿಸಿದ ನೌಕಕರ ಗತಿ ಏನಾಗಬೇಕು?" ಎಂದು ಚಿತ್ರನಿಷೇಧದಿಂದಾಗಿ ಎದುರಾಗಬಹುದಾದ ಸಮಸ್ಯೆಗಳ ಬಗ್ಗೆ ಬರೆದಿದ್ದಾರೆ. ರೈ ನಿಲುವನ್ನು ಹಲವರು ಬೆಂಬಲಿಸಿದ್ದರೆ, ಮತ್ತಷ್ಟು ಮಂದಿ ಕನ್ನಡ ನಾಡಿಗೆ ಸಂಬಂಧಿಸಿದಂತೆ ಅವರ ಬದ್ಧತೆಯನ್ನು ಪ್ರಶ್ನಿಸಿದ್ದಾರೆ.

ಪ್ರಕಾಶ್ ರೈ ಟ್ವೀಟ್‌

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ ರಾ ಗೋವಿಂದು ವಿವಾದದ ಬಗ್ಗೆ ಮಾತನಾಡಿ, “ವಾಣಿಜ್ಯ ಮಂಡಳಿ ಚಿತ್ರವನ್ನು ನಿಷೇಧ ಮಾಡಲು ಸಾಧ್ಯವಿಲ್ಲ. ಇದು ನಮ್ಮ ವಿತರಕರು, ಪ್ರದರ್ಶಕರು ತೆಗೆದುಕೊಂಡಿರುವ ನಿರ್ಧಾರ,” ಎಂದಿದ್ದಾರೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆಯ ನಂತರ ತಮಿಳು ನಾಡು ಚಿತ್ರನಿರ್ಮಾಪಕರ ಸಂಘದ ಅಧ್ಯಕ್ಷ, ನಟ ವಿಶಾಲ್‌, “ರಜನೀಕಾಂತ್‌ ಮಾತನಾಡಿರುವುದು ಅವರ ಅಭಿವ್ಯಕ್ತಿ ಸ್ವಾತಂತ್ರ್ಯ. ಸಮಸ್ಯೆ ತಿಳಿಯಾಗಲಿದೆ. ಅಲ್ಲಿನ ವಾಣಿಜ್ಯ ಮಂಡಳಿ ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ,” ಎಂದು ಟ್ವೀಟ್ ಮಾಡಿದ್ದರು. ಚಿತ್ರದ ಬಿಡುಗಡೆಗೆ ಸಂಬಂಧಿಸಿದಂತೆ ದೊಡ್ಡಮಟ್ಟದಲ್ಲಿ ಮಾತುಕತೆ ಚಾಲ್ತಿಯಲ್ಲಿದೆ ಎಂದು ಉದ್ಯಮದ ಮೂಲಗಳು ಹೇಳುತ್ತವೆ.

ಇದನ್ನೂ ಓದಿ : ರಜನಿ‌ ‘ಕಾಳ’ ಸಿನಿಮಾ ಪ್ರದರ್ಶಿಸದಿರಲು ಕನ್ನಡ ವಿತರಕರು, ಪ್ರದರ್ಶಕರ ನಿರ್ಧಾರ

ತಮಿಳು ಚಿತ್ರನಿರ್ಮಾಪಕರ ಸಂಘದ ಅಧ್ಯಕ್ಷ, ನಟ ವಿಶಾಲ್ ಟ್ವೀಟ್‌

ಮಾನನಷ್ಟ ಮೊಕದ್ದಮೆಯ ಬೆದರಿಕೆ: ಈ ಮಧ್ಯೆ, ಮುಂಬೈ ಮೂಲದ ಪತ್ರಕರ್ತರೊಬ್ಬರು ‘ಕಾಲ’ ಸಿನಿಮಾ ತಂಡದ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಬೆದರಿಕೆಯೊಡ್ಡಿದ್ದಾರೆ. ತಮ್ಮ ತಂದೆ ತಿರವಿಯಂ ನಾಡಾರ್‌ ಅವರ ಬದುಕಿನ ಕತೆಯನ್ನು ತಮ್ಮ ಅನುಮತಿ ಇಲ್ಲದೆ ತೆರೆಗೆ ಅಳವಡಿಸಿದ್ದಾರೆ ಎನ್ನುವುದು ಅವರ ಆರೋಪ. ತಮಿಳುನಾಡಿನ ತೂತುಕುಡಿಯಿಂದ 1957ರಲ್ಲಿ ಮುಂಬೈಗೆ ವಲಸೆ ಹೋಗಿದ್ದವರು ತಿರವಿಯಂ ನಾಡಾರ್‌. ಆಗ ಮುಂಬಯಿಯ ಧಾರಾವಿ ಸ್ಲಂನಲ್ಲಿ ತೀವ್ರ ನೀರಿನ ಸಮಸ್ಯೆ ಇರುತ್ತದೆ. ತಿರವಿಯಂ ನಾಡಾರ್‌ ಮುಂದಾಳತ್ವ ವಹಿಸಿ ಸಮಸ್ಯೆಗೆ ಪರಿಹಾರ ಒದಗಿಸುತ್ತಾರೆ. ‘ಕಾಲ’ ಚಿತ್ರದಲ್ಲಿ ತಮ್ಮ ತಂದೆಯ ಬದುಕಿನ ಕತೆ ಇದ್ದು, ರಾಜಕೀಯ ಪ್ರೇರಿತ ಕಥಾವಸ್ತು ತಂದೆಯ ವ್ಯಕ್ತಿತ್ವಕ್ಕೆ ಮಸಿ ಬಳಿಯಲಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿತ್ರತಂಡದಿಂದ ತಪ್ಪೊಪ್ಪಿಗೆ ಪತ್ರ ಕೇಳಿರುವ ಅವರು, ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಹೇಳುತ್ತಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More