ನೂತನ್ ನೆನಪು | ಹಿಂದಿ ಚಿತ್ರರಂಗ ಕಂಡ ಪ್ರತಿಭಾವಂತ ಕೃಷ್ಣಸುಂದರಿ

ಬಾಲನಟಿಯಾಗಿ ಬೆಳ್ಳಿತೆರೆಗೆ ಪರಿಚಯವಾದ ನೂತನ್‌, ಹಿಂದಿಚಿತ್ರರಂಗದ ಜನಪ್ರಿಯ ನಾಯಕನಟಿ ಎನಿಸಿಕೊಂಡರು. ದಿಲೀಪ್ ಕುಮಾರ್‌, ಸುನೀಲ್ ದತ್, ಶಮ್ಮಿ ಕಪೂರ್ ಜೋಡಿಯಾಗಿ ನಟಿಸಿದ ಅವರ ಸಿನಿಮಾಗಳು ಬಹುಜನಪ್ರಿಯವಾಗಿವೆ. ಇಂದು (ಜೂ 4) ನೂತನ್ ಜನ್ಮದಿನ

ಭಾವಪೂರ್ಣ ಕಣ್ಣುಗಳ ನೂತನ್, ಹಿಂದಿ ಚಿತ್ರರಂಗ ಕಂಡ ಪ್ರತಿಭಾವಂತ ನಟಿ. ಈ ಕೃಷ್ಣ ಸುಂದರಿಗೆ ಸಿನಿಮಾ ಹಿನ್ನೆಲೆಯೂ ಇತ್ತು. ಖ್ಯಾತ ನಟಿ ಶೋಭನಾ ಸಮರ್ಥ್ ಪುತ್ರಿ ಎನ್ನುವ ವಿಶೇಷಣವಿದ್ದರೂ, ನೂತನ್ ತಮ್ಮದೇ ಆದ ನೈಜ ಪ್ರತಿಭೆಯಿಂದ ಗುರುತಿಸಿಕೊಂಡರು. ಬಾಲನಟಿಯಾಗಿ ಬೆಳ್ಳಿತೆರೆಗೆ ಪರಿಚಯವಾದ ನೂತನ್ ಮುಂದೆ ದಶಕಗಳ ಕಾಲ ಮೇರು ನಟಿಯಾಗಿ ಹಿಂದಿ ಚಿತ್ರರಸಿಕರ ಮನಗೆದ್ದರು. ನೂತನ್ ಹುಟ್ಟಿದ್ದು 1936, ಜೂನ್ 4ರಂದು ಮುಂಬಯಿಯಲ್ಲಿ. ಹದಿನಾಲ್ಕರ ಹರೆಯದಲ್ಲಿ ‘ನಳ ದಮಯಂತಿ’ ಚಿತ್ರದೊಂದಿಗೆ ಅವರು ಸಿನಿಮಾ ಪ್ರವೇಶಿಸಿದರು. ತದನಂದರ ನೂತನ್ ಕೆಲವು ಸಿನಿಮಾಗಳಲ್ಲಿ ನಟಿಸಿದರೂ, ಅವರನ್ನು ಜನರು ಗುರುತಿಸಲಿಲ್ಲ. ಆದರೇನಂತೆ, ನಟಿ ಶೋಭನಾ ಸಮರ್ಥ್ ತಮ್ಮ ಪುತ್ರಿಯಲ್ಲಿದ್ದ ಪ್ರತಿಭೆಯನ್ನು ಗುರುತಿಸಿದ್ದರು. ಅಭಿನಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಪರಿಣತಿ ಪಡೆಯಲೆಂದು ಮಗಳನ್ನು ಸ್ವಿಟ್ಜರ್‌ಲ್ಯಾಂಡ್‌ನ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ಗೆ ಕಳುಹಿಸಿದರು.

ಸ್ವಿಟ್ಜರ್‌ಲ್ಯಾಂಡ್‌ನಿಂದ ಭಾರತಕ್ಕೆ ಮರಳಿದ ನೂತನ್‌ರನ್ನು ಬೆಳ್ಳಿತೆರೆ ಕೈಬೀಸಿ ಕರೆಯಿತು. 1950ರ ನಂತರ ಎರಡು ದಶಕಗಳ ಕಾಲ ವೈವಿಧ್ಯಮಯ ಪಾತ್ರಗಳೊಂದಿಗೆ ಅವರು ಅಭಿಮಾನಿಗಳ ಮನಸೂರೆಗೊಂಡರು. 1950ರಲ್ಲಿ ‘ಹಮಾರಿ ಭೇಟಿ’ ಚಿತ್ರದೊಂದಿಗೆ ಹಿಂದಿ ಚಿತ್ರರಂಗದಲ್ಲಿ ನೂತನ್‌ರ ಎರಡನೇ ಇನ್ನಿಂಗ್ಸ್‌ ಆರಂಭವಾಯಿತು. ಇದಾದ ನಂತರ ತೆರೆಕಂಡ ‘ಹಮ್ ಲೋಗ್’, ‘ನಾಗೀನಾ’  ಚಿತ್ರಗಳು ಅವರಿಗೆ ಜನಪ್ರಿಯತೆ ತಂದುಕೊಟ್ಟವು. ‘ಸೀಮಾ’ (1956) ಚಿತ್ರದ ಉತ್ತಮ ಅಭಿನಯಕ್ಕಾಗಿ ಅವರು ಫಿಲ್ಮ್‌ಫೇರ್‌ ಶ್ರೇಷ್ಠ ನಟಿ ಪುರಸ್ಕಾರ ಪಡೆದರು. ‘ಪೇಯಿಂಗ್ ಗೆಸ್‌ಟ್‌’, ‘ದಿಲ್ಲಿ ಕಾ ಥಗ್’ ಚಿತ್ರಗಳು ಅವರನ್ನು ಎತ್ತರದ ಸ್ಥಾನಕ್ಕೆ ಕೊಂಡೊಯ್ದವು.

ನೂತನ್ ಸಿನಿಮಾಗಳ ವಿಡಿಯೋ ಹಾಡುಗಳ ಗುಚ್ಛ

1959ರಲ್ಲಿ ನೂತನ್, ನೌಕಾದಳದ ಅಧಿಕಾರಿ ರಜನೀಶ್ ಬೆಹ್‌ಲ್‌ ಅವರನ್ನು ವರಿಸಿದರು. ಇದೇ ವರ್ಷ ‘ಸುಜಾತಾ’ ಚಿತ್ರದ ಶ್ರೇಷ್ಠ ಅಭಿನಯಕ್ಕಾಗಿ ಅವರಿಗೆ ಮತ್ತೊಮ್ಮೆ ಫಿಲ್ಮ್‌ಫೇರ್‌ ಪುರಸ್ಕಾರ ಸಂದಿತು. 1963ರಲ್ಲಿ ತೆರೆಕಂಡ ರೊಮ್ಯಾಂಟಿಕ್‌ ಕಾಮಿಡಿ ‘ತೇರೆ ಘರ್ ಕೆ ಸಾಮ್ನೆ’ ನೂತನ್‌ಗೆ ಸಿನಿಮಾ ಬದುಕಿಗೆ ತಿರುವು ಕೊಟ್ಟಿತು. ಈ ಚಿತ್ರದೊಂದಿಗೆ ದೇವಾನಂದ್ ಮತ್ತು ನೂತನ್ ಅತ್ಯುತ್ತಮ ಜೋಡಿ ಎನಿಸಿಕೊಂಡರು. ‘ಬಂಧಿನಿ’ ಚಿತ್ರದ ಜೀವನ ಶ್ರೇಷ್ಠ ಅಭಿನಯದೊಂದಿಗೆ ನೂತನ್ ವಿಮರ್ಶಕರ ಮೆಚ್ಚುಗೆ ಗಳಿಸಿದರು. ಈ ಚಿತ್ರಕ್ಕಾಗಿ ಅವರು ಮತ್ತೊಂದು ಫಿಲ್‌ಫೇರ್‌ ಪ್ರಶಸ್ತಿ ತಮ್ಮದಾಗಿಸಿಕೊಂಡರು.

1960ರ ಅವಧಿಯಲ್ಲಿ ನೂತನ್ ಮತ್ತು ಸುನೀಲ್ ದತ್ ಜೋಡಿ ಜನಪ್ರಿಯತೆ ಗಳಿಸಿತ್ತು. ಈ ಜೋಡಿಯ ‘ಖಾಂದಾನ್’, ‘ಮೆಹರ್‌ಬಾನ್’, ‘ಮಿಲನ್’ ಚಿತ್ರಗಳು ಬಾಕ್‌ಸ್‌ ಆಫೀಸ್‌ನಲ್ಲಿ ದೊಡ್ಡ ಯಶಸ್ಸು ಗಳಿಸಿದವು. ‘ಮಿಲನ್’ ಚಿತ್ರಕ್ಕಾಗಿ ನೂತನ್ ಫಿಲ್‌ಫೇರ್‌ ಗೌರವಕ್ಕೆ ಪಾತ್ರರಾದರು. ಶಮ್ಮಿ ಕಪೂರ್ ಮತ್ತು ದಿಲೀಪ್ ಕುಮಾರ್ ಅವರೊಂದಿಗಿನ ಚಿತ್ರಗಳಲ್ಲೂ ನೂತನ್ ಗೆಲುವು ಕಂಡಿದ್ದಾರೆ. ‘ಸಾಜನ್ ಬಿನಾ ಸುಹಾಗನ್’, ‘ಸಾಜನ್ ಕಿ ಸಹೇಲಿ’, ‘ತೇರಿ ಮಾಂಗ್ ಸಿತಾರೋನ್ ಸೆ ಭರ್ ದೂನ್’, ‘ರಿಶ್ತಾ ಕಾಗಜ್ ಕಾ’ ಸೇರಿದಂತೆ ಹಲವು ಸಿನಿಮಾಗಳು ನೂತನ್‌ ಪ್ರತಿಭೆಗೆ ಸಾಕ್ಷ್ಯ ನುಡಿಯುತ್ತವೆ.

ಇದನ್ನೂ ಓದಿ : ಜನುಮದಿನ | ಎಸ್‌ಪಿಬಿ ಹಾಡಿರುವ ಸಿನಿಮಾ ವಿಡಿಯೋ ಹಾಡುಗಳ ಗುಚ್ಛ

ಸುಮಧುರ ಕಂಠ, ನೂತನ್‌ಗೆ ದೈವದತ್ತ ವರ. ತಾವು ನಾಯಕಿಯಾಗಿದ್ದ ‘ಛಬೀಲಿ’ (1960) ಚಿತ್ರದ ಹಾಡೊಂದಕ್ಕೆ ಅವರು ದನಿಯಾಗಿದ್ದರು. ತಮ್ಮ ಚಿತ್ರಗಳಿಗೆ ಸ್ವತಃ ತಾವೇ ಹಾಡುವಂತೆ ಗಾಯಕಿ ಲತಾ ಮಂಗೇಶ್ವರ್ ಕೂಡ ನೂತನ್‌ಗೆ ಸಲಹೆ ಮಾಡಿದ್ದರು. ಆದರೆ ನೂತನ್ ಗಾಯನ ಮುಂದುವರೆಸಲಿಲ್ಲ. ‘ಮೇರಿ ಜಂಗ್’, ‘ಕರ್ಮ್’ ಚಿತ್ರಗಳೊಂದಿಗೆ ನೂತನ್ ತಾಯಿ ಪಾತ್ರಗಳತ್ತ ಹೊರಳಿದರು. ‘ಮೇರಿ ಜಂಗ್’ (1985) ಚಿತ್ರದ ಉತ್ತಮ ಅಭಿನಯಕ್ಕಾಗಿ ಫಿಲ್ಮ್‌ಫೇರ್‌ನಿಂದ ಅವರಿಗೆ ಅತ್ಯುತ್ತಮ ಪೋಷಕ ನಟಿ ಪುರಸ್ಕಾರ ಸಿಕ್ಕಿತು. 1980ರ ವೇಳೆಯಲ್ಲಿ ನೂತನ್ ಕ್ಯಾನ್ಸರ್‌ನಿಂದ ಬಳಲಿದರು. ಚಿಕಿತ್ಸೆ ಫಲಕಾರಿಯಾಗದೆ 1991, ಫೆಬ್ರವರಿ 21ರಂದು ನಿಧನರಾದರು. ‘ನಸೀಬ್‌ವಾಲಾ’ (1992), ‘ಇನ್‌ಸಾನಿಯಾತ್’ (1994) ಚಿತ್ರಗಳು ಅವರ ನಿಧನಾನಂತರ ತೆರೆಕಂಡವು. ಅವರ ಪುತ್ರ ಮನೀಶ್ ಬೆಹ್‌ಲ್‌ ಹಿಂದಿ ಸಿನಿಮಾ ಹಾಗೂ ಕಿರುತೆರೆಯಲ್ಲಿ ನಟನಾಗಿ ಹೆಸರು ಮಾಡುತ್ತಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More