ಶ್ರೀದೇವಿ ಮಗಳ ಸಿನಿ ಜರ್ನಿ ಶುರು; ಸೈರಾಟ್‌ನಂತೆ ಸದ್ದು ಮಾಡುವುದೇ ‘ಧಡಕ್‌’?

ಎರಡು ಕಾರಣಗಳಿಗೆ ‘ಧಡಕ್‌’ ಸಿನಿಮಾ ಎಲ್ಲರ ಗಮನ ಸೆಳೆಯುತ್ತಿದೆ. ಒಂದು, ಇದು ಅಪಾರ ಮೆಚ್ಚುಗೆ ಗಳಿಸಿದ ಮರಾಠಿ ಚಿತ್ರ ‘ಸೈರಾಟ್‌’ನ ರೀಮೇಕ್‌. ಇನ್ನೊಂದು, ಶ್ರೀದೇವಿ ಪುತ್ರಿ ಜಾನ್ಹವಿ ಕಪೂರ್‌ ನಾಯಕಿಯಾಗಿ ನಟಿಸುತ್ತಿರುವ ಮೊದಲ ಚಿತ್ರ. ಟ್ರೇಲರ್‌ ಬಿಡುಗಡೆಯಾಗಿದ್ದು, ೨೦ ಲಕ್ಷ ವೀಕ್ಷಣೆ ಕಂಡಿದೆ

ಮರಾಠಿಯಲ್ಲಿ ನಿರ್ಮಾಣಗೊಂಡ 'ಸೈರಾಟ್‌' ಮರ್ಯಾದೆಗೇಡು ಹತ್ಯೆ ಕುರಿತ ಚಿತ್ರ. ಸರಳ, ನೈಜ ಕಥಾ ನಿರೂಪಣೆ ಹಾಗೂ ಚಿತ್ರ ನಿರ್ಮಾಣದಿಂದಾಗಿ ಸೈರಾಟ್‌ ಹಲವು ಪ್ರಶಸ್ತಿ ಬಾಚಿಕೊಂಡಿತು. ಅಷ್ಟೇ ಅಲ್ಲ, ಕನ್ನಡವೂ ಸೇರಿದಂತೆ ವಿವಿಧ ಭಾಷೆಗಳಲ್ಲಿ ರೀಮೇಕ್‌ ಕೂಡ ಆಯಿತು. ಈಗ ಬಾಲಿವುಡ್‌ ಸರದಿ.

ಕರಣ್‌ ಜೋಹರ್‌ ನಿರ್ಮಾಣದಲ್ಲಿ, ಶಶಾಂಕ್‌ ಖೇತನ್‌ ನಿರ್ದೇಶನದಲ್ಲಿ ಸಿದ್ಧವಾಗಿರುವ 'ಧಡಕ್‌' ಮುಂದಿನ ತಿಂಗಳ ೨೦ನೇ ತಾರೀಖು ತೆರೆಗೆ ಬರಲು ಸಿದ್ಧವಾಗುತ್ತಿದೆ. ಜೂನ್‌ ೧೦ರಂದು ಇದರ ಟ್ರೇಲರ್ ಬಿಡುಗಡೆಯಾಗಿದ್ದು, ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ.

ಪ್ರೀತಿ, ದ್ವೇಷ, ಬದುಕುವ ಹಠ ಎಲ್ಲವನ್ನೂ ತೀವ್ರವಾಗಿ ಕಟ್ಟಿಕೊಟ್ಟಿದ್ದು ‘ಸೈರಾಟ್‌’ ಚಿತ್ರ. ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡ ರಿಂಕು ರಾಜ್‌ಗುರು ಅವರು ಸಹಜ ಅಭಿನಯದ ಮೂಲಕ ಪಾತ್ರಕ್ಕೆ ಜೀವ ತುಂಬಿದ್ದು ವಿಶೇಷವಾಗಿ ಗಮನ ಸೆಳೆದಿತ್ತು. ಕನ್ನಡದಲ್ಲಿ ಈ ಚಿತ್ರ ರೀಮೇಕ್‌ ಆದಾಗ ರಿಂಕುವನ್ನೇ ನಟಿಯಾಗಿ ಕರೆತರಲಾಗಿತ್ತು. ಇದೇ ಪಾತ್ರದಲ್ಲೀಗ ಜಾನ್ಹವಿ ನಟಿಸುತ್ತಿದ್ದಾರೆ. ಪರ್‌ಶ್ಯಾ ಪಾತ್ರದಲ್ಲಿ ಇಶಾನ್‌ ನಟಿಸುತ್ತಿದ್ದಾರೆ. ಶಾಹೀದ್‌ ಕಪೂರ್‌ ಸೋದರನಾದ ಈತ, ಇತ್ತೀಚೆಗೆ ಮಜೀದ್‌ ಮಜಿದಿ ನಿರ್ದೇಶನದ 'ಬಿಯಾಂಡ್‌ ದಿ ಕ್ಲೌಡ್ಸ್‌' ಚಿತ್ರದಲ್ಲಿ ನಟಿಸಿದ್ದಾನೆ.

ಇದನ್ನೂ ಓದಿ : ಆತ್ಮೀಯ ಸ್ನೇಹಿತೆ, ನನ್ನಾತ್ಮದ ಭಾಗ ನೀನು; ಅಗಲಿದ ಅಮ್ಮನಿಗೆ ಜಾಹ್ನವಿ ನಮನ 

ಟ್ರೇಲರ್‌ ಅಂತೂ ಭಾರಿ ಸಂಖ್ಯೆಯಲ್ಲಿ ವೀಕ್ಷಣೆಗೆ ಒಳಗಾಗಿದೆ. ಆದರೆ, ‘ಸೈರಾಟ್‌’ನಲ್ಲಿ ಕಾಣುವ ಸಹಜತೆ ಇಲ್ಲ. ಬಾಲಿವುಡ್‌ ಗ್ಲಾಮರ್‌ ಸ್ಪರ್ಶ ಸ್ಪಷ್ಟವಾಗಿ ಕಾಣುತ್ತದೆ. ಮರ್ಯಾದೆಗೇಡು ಹತ್ಯೆಗೆ ಅಂಟಿಕೊಂಡಿರುವ ಜಾತಿ ತಾರತಮ್ಯ, ಅಂತಸ್ತಿನ ಬೇಧಗಳು ಅಷ್ಟು ತೀವ್ರವಾಗಿ ತಟ್ಟುವುದಿಲ್ಲ. ಶ್ರೀದೇವಿ ಮಗಳು ಎಂಬ ಕುತೂಹಲದ ಕಾರಣಕ್ಕೆ ಚಿತ್ರ ಗಮನ ಸೆಳೆಯುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ, ನಾಗರಾಜ್‌ ತಮ್ಮ ‘ಸೈರಾಟ್‌’ನಲ್ಲಿ ಮಾಡಿದ ಮ್ಯಾಜಿಕ್‌ ಬಾಲಿವುಡ್‌ ಚಿತ್ರದಲ್ಲೂ ಆಗುವುದೇ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರವಂತೂ 'ಧಡಕ್‌' ಟ್ರೇಲರ್‌ನಿಂದ ಸಿಕ್ಕುವುದಿಲ್ಲ.

#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
ಸ್ಮಿತಾ ನೆನಪು | ‘ಅನ್ವೇಷಣೆ’ ಗಾಗಿ ತಾನೇ ಹಣ ಹಾಕಿಕೊಂಡು ಬಂದು ನಟಿಸಿದ್ದರು
ಸುದ್ದಿ ವಾಚನದಿಂದ ಸಿನಿಮಾಲೋಕಕ್ಕೆ ಬಂದ ಕೃಷ್ಣಸುಂದರಿ
Editor’s Pick More