ಸಂಭಾಷಣೆಕಾರ ಮಾಸ್ತಿ ಮನದ ಮಾತು | ಸಿನಿಮಾ ನನ್ನ ಉಸಿರಲ್ಲಿ ಬೆರೆತುಹೋಗಿದೆ

ಹಲವು ವರ್ಷದಿಂದ ಸಿನಿಮಾ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಮಾಸ್ತಿಗೆ, ಸೂರಿ ನಿರ್ದೇಶನದ ‘ಟಗರು’ ಸಿನಿಮಾ ಹೆಸರು ತಂದುಕೊಟ್ಟಿತು. ಹೊಸ ತಲೆಮಾರಿನ ಪ್ರೇಕ್ಷಕರ ನಾಡಿಮಿಡಿತ ಅರಿತಿರುವ ಅವರಿಗೆ ಚುರುಕಿನ ಸಂಭಾಷಣೆ ಬರೆಯುವ ಕಲೆ ಸಿದ್ಧಿಸಿದೆ. ಅವರೊಂದಿಗಿನ ಮಾತುಕತೆ ಇಲ್ಲಿದೆ

ಮಾಲೂರು ಸಮೀಪದ ಉಪ್ಪಾರಹಳ್ಳಿಯ ಮಾಸ್ತಿ ದೊಡ್ಡ ಸಿನಿಮಾ ವ್ಯಾಮೋಹಿ. ಈ ಗೀಳು ಅವರನ್ನು ಸಿನಿಮಾಗೆ ಕರೆತಂದಿತು. ತಮ್ಮ ಚುರುಕು ಸಂಭಾಷಣೆಗಳಿಂದ ಅವರೀಗ ಸ್ಯಾಂಡಲ್‌ವುಡ್‌ನಲ್ಲಿ ಹೆಸರು ಮಾಡುತ್ತಿದ್ದಾರೆ. ಹಲವು ವರ್ಷಗಳಿಂದ ಸಿನಿಮಾ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಮಾಸ್ತಿಗೆ ಇತ್ತೀಚಿನ ‘ಟಗರು’ ಚಿತ್ರ ಜನಪ್ರಿಯತೆ ತಂದುಕೊಟ್ಟಿದೆ. ತಿಂಗಳುಗಳ ಹಿಂದೆ ತೆರೆಕಂಡ ‘ಕಾಲೇಜ್‌ಕುಮಾರ್‌’ ಚಿತ್ರದ ಬರವಣಿಗೆಗೂ ಅವರಿಗೆ ಮೆಚ್ಚುಗೆ ವ್ಯಕ್ತವಾಗಿತ್ತು. ತಮ್ಮ ಸಿನಿಮಾ ಹಾದಿಯ ಬಗೆಗಿನ ಅವರ ಮನದ ಮಾತು ಇಲ್ಲಿದೆ.

ಈ ಸಿನಿಮಾ ನಂಟು ಶುರುವಾಗಿದ್ದು ಹೇಗೆ?

ಪ್ರಾಥಮಿಕ ಶಿಕ್ಷಣ ಮುಗಿಯುವ ಹೊತ್ತಿಗಾಗಲೇ ಮನೆಯವರ ಒತ್ತಾಯಕ್ಕೆ ಮಣಿದು ಒಲ್ಲದ ಮನಸ್ಸಿನಿಂದಲೇ ಇಂಗ್ಲೀಷ್ ಮೀಡಿಯಮ್‌ ಸೇರಿಕೊಂಡಿದ್ದೆ. ಕಾಲೇಜು ಮೆಟ್ಟಿಲೇರುವ ಹೊತ್ತಿಗೆ ನನಗೆ ಕನ್ನಡ ಬರೆಯುವುದು ಕೂಡ ಕಷ್ಟಕರವಾಗಿತ್ತು. ಆದರೆ ಚಿಕ್ಕಂದಿನಿಂದ ಓದಿಕೊಂಡಿದ್ದ ಕತೆಗಳು, ಸಿನಿಮಾಗಳು ನನ್ನ ಕನಸುಗಳನ್ನು ಹೇಳದೆ ಉಳಿದ ಮಾತುಗಳನ್ನ ಜೀವಂತವಾಗಿರಿಸಿತ್ತು. ಬದುಕಿನ ಪ್ರತಿ ಹಂತದಲ್ಲೂ ಸಿನಿಮಾ ನನ್ನನ್ನು ಸೆಳೆಯುತ್ತಲೇ ಇತ್ತು. ಕೊನೆಗೊಂದು ದಿನ ಗಾಂಧಿ ನಗರದತ್ತ ಹೆಜ್ಜೆ ಹಾಕಬೇಕು ಎಂದು ನಿರ್ಧರಿಸಿದಾಗ ಚಿತ್ರನಿರ್ದೇಶಕ ತುಷಾರ್ ರಂಗನಾಥ ಪರಿಚಯವಾದರು. ‘ಸುಂಟರಗಾಳಿ’ ಸಿನಿಮಾದಿಂದ ನನ್ನ ಸಿನಿಪಯಣ ಸದ್ದಿಲ್ಲದೆ ಶುರುವಾಯಿತು.

ಮಾಸ್ತಿ ಸಂಭಾಷಣೆ ಬರೆದಿದ್ದ ‘ಕಡ್ಡಿಪುಡಿ’ ಸಿನಿಮಾದ ಟ್ರೈಲರ್‌

‘ಟಗರು’ ಸಿನಿಮಾದಲ್ಲಿನ ನಿಮ್ಮ ಸಂಭಾಷಣೆಗೆ ಮೆಚ್ಚುಗೆ ವ್ಯಕ್ತವಾಯ್ತು. ಚಿತ್ರದ ಕೆಲವು ಸಂಭಾಷಣೆಗಳು ವಿವಾದಕ್ಕೂ ಸಿಲುಕಿದ್ದವು ಅಲ್ಲವೇ?

ನಿರ್ದೇಶಕ ದುನಿಯಾ ಸೂರಿಯವರ ಜೊತೆಗಿನ ಒಡನಾಟ ಬಲು ಹಳೆಯದು. ಅವರ ನಿರ್ದೇಶನದ ’ಕಡ್ಡಿಪುಡಿ’ ಸಿನಿಮಾಗೂ ಸಂಭಾಷಣೆ ಬರೆದಿದ್ದೆ. ‘ಟಗರು’ ಸಿನಿಮಾಗೆ ಬರೆದ ಸಂಭಾಷಣೆ ಸಿನಿಪ್ರಿಯರ ಟೀಕೆಗೆ ಗುರಿಯಾಗಿದ್ದು ಹೌದು. ಆದರೆ ಶಿವಣ್ಣನ ಗೌರವಕ್ಕೆ ಎಲ್ಲಿಯೂ ಧಕ್ಕೆಯನ್ನುಂಟು ಮಾಡಿಲ್ಲ. ಚಿತ್ರದಲ್ಲಿ ಶಿವಣ್ಣ ನಿರ್ವಹಿಸಿದ್ದು ಪೋಲಿಸ್ ಪಾತ್ರವಾದ್ದರಿಂದ ಪೋಲಿಸ್ ಮತ್ತು ಕಳ್ಳರ ನಡುವಿನ ವಾಸ್ತವಿಕ ನೋಟವನ್ನು ಮುಚ್ಚು ಮರೆಯಿಲ್ಲದೆ ತೋರಿಸುವ ಪ್ರಯತ್ನ ನಮ್ಮದಾಗಿತ್ತು. ರೌಡಿಗಳು ಸಮಾಜದ ಸ್ವಾಸ್ಥ್ಯ ಕದಡುವ ಮಾರಕ ವ್ಯಕ್ತಿಗಳೇ ಆಗಿರುತ್ತಾರೆ. ಅವರಿಗೆ ಸೂಕ್ಷ್ಮತೆಯ ಅರ್ಥ, ಅನರ್ಥಗಳ ಅರಿವು ಇರುವುದಿಲ್ಲ. ತಿಳಿದುಕೊಳ್ಳುವ ಗೋಜಿಗೂ ಅವರು ಬೀಳುವುದಿಲ್ಲ. ಅಂತಹ ಅಂಧಕಾರದ ವ್ಯಸನಿಗಳಿಗೆ ನಿಷ್ಠಾವಂತ ಪೋಲಿಸ್ ಅಧಿಕಾರಿಯೊಬ್ಬ ಎದುರಾದಾಗ ನಡೆಯಬಹುದಾದ ಕತೆಯನ್ನ ಸೂರಿ ಅಚ್ಚುಕಟ್ಟಾಗಿ ತೆರೆಗೆ ಅಳವಡಿಸಿದ್ದಾರೆ.

ಬಿಡುವಿನ ಸಮಯದಲ್ಲಿ ಏನು ಮಾಡುತ್ತೀರಿ?

ಸದ್ಯದ ಮಟ್ಟಿಗೆ ಬಿಡುವಿಲ್ಲವಾದರೂ ಬಿಡುವಾದಾಗಲೆಲ್ಲ ಪುಸ್ತಕಗಳ ಮೊರೆಹೋಗ್ತೀನಿ. ಇಷ್ಟದ ಸಿನಿಮಾಗಳನ್ನ ನೋಡುತ್ತ, ಕತೆಗಳನ್ನು ಬರೆಯುತ್ತ ಕನ್ನಡ ಭಾಷೆಯ ಜೊತೆಯಲ್ಲಿ ಕಾಲ ಕಳೆಯುತ್ತೇನೆ.

ಒಬ್ಬ ಬರಹಗಾರನಲ್ಲಿ ಉತ್ತಮ ನಿರ್ದೇಶಕನೂ ಅಡಗಿರುತ್ತಾನೆ ಎಂಬ ಮಾತಿದೆ, ನಿಮಗೆ ನಿರ್ದೇಶನದ ಬಗ್ಗೆ ಆಸಕ್ತಿ ಇದೆಯೇ?

ಬರವಣಿಗೆ ನನಗೆ ತೃಪ್ತಿ ತಂದಿದೆ. ಬನ್ ತಿನ್ನುತ್ತ ಹೇಳಿದ ಸಾಲೊಂದು ಕತೆಯಾಗಿಯೋಗರಾಜ್ ಭಟ್ಟರ ‘ಪಂಚತಂತ್ರ’ವಾಗಿ ಸೆಟ್ಟೇರಿದೆ. ಸೂರಿಯವರ ‘ಪಾಪ್ ಕಾರ್ನ್ ಮಂಕಿ ಟೈಗರ್’, ‘ಭರಣಿ’ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದೇನೆ. ನೆಚ್ಚಿನ ಕತೆಯೊಂದು ಹೊತ್ತಿಗೆಯಲ್ಲಿ ಬೆಚ್ಚಗೆ ಕುಳಿತಿದೆ. ಸಿನಿಮಾ ನಿರ್ದೇಶಿಸುವ ಹಂಬಲವೂ ಇದೆ. ಎಲ್ಲದಕ್ಕೂ ಕಾಲ ಕೂಡಿ ಬರಬೇಕು.

ಇದನ್ನೂ ಓದಿ : ವಿಡಿಯೋ | ‘ಬಟರ್‌ಫ್ಲೈ’ ಸಿನಿಮಾ ಶೂಟಿಂಗ್ ಸೆಟ್‌ನಲ್ಲಿ ಪರೂಲ್‌ ಬರ್ತ್‌ಡೇ ಸಂಭ್ರಮ

ಬದುಕು ಹೇಗಿದೆ?

ಕನ್ನಡಮಯವಾಗಿ ಸುಂದರವಾಗಿದೆ. ಸಿನಿಮಾ ನನ್ನ ಉಸಿರಲ್ಲಿ ಬೆರೆತುಹೋಗಿದೆ. ಸಿನಿಮಾಗೆ ನಾನು ಬರೆವ ಸಂಭಾಷಣೆಯನ್ನು ಪ್ರೇಕ್ಷಕರು ಗುರುತಿಸಿ ಅಭಿನಂದಿಸುತ್ತಿದ್ದಾರೆ. ಇದಕ್ಕಿಂತ ಇನ್ನೇನೂ ಬೇಕಿಲ್ಲ.

‘ಟಗರು’ ಸಿನಿಮಾದ ಟ್ರೈಲರ್‌

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More