ಟ್ರೈಲರ್ | ಖ್ಯಾತ ಹಾಕಿ ಆಟಗಾರ ಸಂದೀಪ್‌ ಸಿಂಗ್‌ ಬಯೋಪಿಕ್‌ ‘ಸೂರ್ಮಾ’

ಶಾದ್ ಆಲಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ‘ಸೂರ್ಮಾ’ ಟ್ರೈಲರ್ ಬಿಡುಗಡೆಯಾಗಿದೆ. ಭಾರತದ ಖ್ಯಾತ ಹಾಕಿ ಆಟಗಾರ ಸಂದೀಪ್ ಸಿಂಗ್‌ ಬಯೋಪಿಕ್ ಇದು. ದಿಲ್‌ಜಿತ್‌ ದೊಸಾಂಜ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಇದು ಮತ್ತೊಂದು ಯಶಸ್ವೀ ಬಯೋಪಿಕ್‌ ಆಗುವ ನಿರೀಕ್ಷೆ ಹುಟ್ಟಿಸಿದೆ

ಹಿಂದಿ ಚಿತ್ರರಂಗದಲ್ಲಿ ಬಯೋಪಿಕ್‌ಗಳು ಸದ್ದು ಮಾಡುತ್ತಿದ್ದು, ‘ಸೂರ್ಮಾ’ ಸಿನಿಮಾ ಮತ್ತೊಂದು ಗೆಲುವು ದಾಖಲಿಸುವ ಸೂಚನೆ ನೀಡಿದೆ. ಅಂತಾರಾಷ್ಟ್ರೀಯ ಹಾಕಿ ಆಟಗಾರ ಸಂದೀಪ್ ಸಿಂಗ್ ಬದುಕಿನ ಕತೆಯಿದು. ಶಾದ್ ಆಲಿ ನಿರ್ದೆಶನದಲ್ಲಿ ತಯಾರಾಗಿರುವ ಚಿತ್ರದಲ್ಲಿ, ಖ್ಯಾತ ಪಂಜಾಬಿ ನಟ ದಿಲ್‌ಜಿತ್‌ ದೊಸಾಂಜ್ ಶೀರ್ಷಿಕೆ ಪಾತ್ರದಲ್ಲಿ ನಟಿಸಿದ್ದಾರೆ. ಸಂದೀಪ್‌ ಸಿಂಗ್ ಸಹೋದರನ ಪಾತ್ರದಲ್ಲಿ ಅಂಗದ್‌ ಬೇಡಿ ಕಾಣಿಸಿಕೊಂಡಿದ್ದು, ತಾಪಸಿ ಪನ್ನು ನಾಯಕಿ. ಭಾರತಕ್ಕೆ ಗೆಲುವು ತಂದುಕೊಡುವ ಉತ್ಸಾಹದಲ್ಲಿದ್ದ ಸಂದೀಪ್‌ ಆಕಸ್ಮಿಕವೊಂದರಲ್ಲಿ ಗಾಯಗೊಳ್ಳುತ್ತಾರೆ. ಇದರಿಂದ ಅವರು ಆಟವನ್ನಷ್ಟೇ ಅಲ್ಲ, ಪ್ರೀತಿಯನ್ನೂ ಕಳೆದುಕೊಳ್ಳಬೇಕಾಗುತ್ತದೆ. ಎರಡು ವರ್ಷ ಅವರು ಗಾಲಿ ಕುರ್ಚಿಯಲ್ಲಿ ಕಳೆಯುತ್ತಾರೆ. ಅಪಾರ ಆತ್ಮಸ್ಥೈರ್ಯ, ಜೀವನ ಪ್ರೀತಿ ಅವರನ್ನು ಮತ್ತೆ ಹಾಕಿ ಮೈದಾನಕ್ಕೆ ಕರೆತರುತ್ತದೆ. 2008ರಲ್ಲಿ ಅಂತಾರಾಷ್ಟ್ರೀಯ ಹಾಕಿಗೆ ಸಂದೀಪ್‌ ಮರಳುತ್ತಾರೆ. ಸಂದೀಪ್‌ ಸಿಂಗ್ ನಾಯಕತ್ವದಲ್ಲಿ 2009ರಲ್ಲಿ ಸುಲ್ತಾನ್‌ ಅಜ್ಲಾನ್‌ ಷಾ ಕಪ್‌ ಗೆಲ್ಲುವ ತಂಡ, 2012ರ ಒಲಂಪಿಕ್ಸ್‌ಗೆ ಅವಕಾಶ ಪಡೆಯುತ್ತದೆ.

ಇದನ್ನೂ ಓದಿ : ಸಂಭಾಷಣೆಕಾರ ಮಾಸ್ತಿ ಮನದ ಮಾತು | ಸಿನಿಮಾ ನನ್ನ ಉಸಿರಲ್ಲಿ ಬೆರೆತುಹೋಗಿದೆ

ಸಂದೀಪ್ ಸಿಂಗ್‌ ಸ್ಫೂರ್ತಿದಾಯಕ ಕತೆಯನ್ನು ನಿರ್ದೇಶಕ ಶಾದ್ ಆಲಿ ಆಕರ್ಷಕವಾಗಿ ತೆರೆಗೆ ಅಳವಡಿಸಿರುವ ಸೂಚನೆ ನೀಡುತ್ತದೆ ಟ್ರೈಲರ್. ನಟ ದಿಲ್‌ಜಿತ್‌ ಅವರಿಗೆ ಇದು ನಾಲ್ಕನೇ ಹಿಂದಿ ಸಿನಿಮಾ. “ಭಾರತೀಯ ಮತ್ತು ಕ್ರೀಡೆಯ ಬಗ್ಗೆ ಆಕಸ್ತಿಯುಳ್ಳ ವ್ಯಕ್ತಿಯಾಗಿ ಹಾಕಿ ಆಟಗಾರ ಸಂದೀಪ್‌ ಅವರ ಬಗ್ಗೆ ನನಗೆ ಹೆಚ್ಚು ಗೊತ್ತಿರಲಿಲ್ಲ. ಈ ಬಗ್ಗೆ ನನಗೆ ನನ್ನ ಕುರಿತಾಗಿ ಬೇಸರವಿದೆ. ಈ ಸಿನಿಮಾ ಅವರ ಸಾಧನೆ, ಜೀವನೋತ್ಸಾಹವನ್ನು ಹೇಳಲಿದೆ,” ಎನ್ನುತ್ತಾರೆ ದಿಲ್‌ಜಿತ್‌. ಬಾಲಿವುಡ್‌ನಲ್ಲಿ ಹೆಚ್ಚು ಅವಕಾಶಗಳನ್ನು ಪಡೆಯುತ್ತಿರುವ ತಾಪಸಿ ಪನ್ನು ‘ಸೂರ್ಮಾ’ ಚಿತ್ರದ ನಾಯಕಿ. ಚಿತ್ರದಲ್ಲಿ ಅವರು ಕೂಡ ಹಾಕಿ ಆಟಗಾರ್ತಿ. “ಚಿತ್ರದಲ್ಲಿ ನಾನು ಕೆಲವೇ ಸೀನ್‌ಗಳಲ್ಲಿ ಕಾಣಿಸಿಕೊಂಡಿದ್ದೇನೆ. ಆದರೇನಂತೆ, ಥಿಯೇಟರ್‌ನಿಂದ ಹೊರಬೀಳುವ ಪ್ರೇಕ್ಷಕನ ಮನಸ್ಸಿನಲ್ಲುಳಿಯುತ್ತೇನೆ,” ಎನ್ನುವ ಆತ್ಮವಿಶ್ವಾಸ ತಾಪಸಿ ಅವರದು. ಜುಲೈ 13ರಂದು ಸಿನಿಮಾ ತೆರೆಕಾಣಲಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More