ಚಿತ್ರನಿರ್ದೇಶಕರಾಗಿ ಯಶಸ್ಸು ಕಂಡ ಬಾಲಿವುಡ್‌ ನೃತ್ಯ ಸಂಯೋಜಕರು

ಸಲ್ಮಾನ್ ಖಾನ್‌ ಅಭಿನಯದ ‘ರೇಸ್‌ 3’ ಹಿಂದಿ ಸಿನಿಮಾ ನಾಡಿದ್ದು (ಜೂ 15) ತೆರೆಕಾಣುತ್ತಿದೆ. ನೃತ್ಯ ಸಂಯೋಜಕ ರೆಮೋ ಡಿಸೋಜಾ ನಿರ್ದೇಶನದ ಚಿತ್ರವಿದು. ನೃತ್ಯ ಸಂಯೋಜಕರಾದ ಪ್ರಭುದೇವ, ಫರ್ಹಾ ಖಾನ್‌, ಅಹ್ಮದ್ ಖಾನ್‌, ಗಣೇಶ್‌ ಆಚಾರ್ಯ ಅವರೂ ನಿರ್ದೇಶಕರಾಗಿ ಯಶಸ್ಸು ಕಂಡಿದ್ದಾರೆ

ಬಾಲಿವುಡ್‌ನ ಖ್ಯಾತ ನೃತ್ಯ ಸಂಯೋಜಕ ರೆಮೋ ಡಿಸೋಜಾ ನಿರ್ದೇಶನದ ‘ರೇಸ್‌ 3’ ನಾಡಿದ್ದು (ಜೂ 15) ತೆರೆಕಾಣುತ್ತಿದೆ. ಸಲ್ಮಾನ್‌ ಖಾನ್‌ ಅಭಿನಯದ ದೊಡ್ಡ ಚಿತ್ರವಿದು. ನೃತ್ಯ ಸಂಯೋಜಕರಾಗಿ ಜನಪ್ರಿಯತೆ ಗಳಿಸಿರುವ ರೆಮೋ ಸಿನಿಮಾದ ಬಗ್ಗೆ ಸಹಜವಾಗಿಯೇ ಬಾಲಿವುಡ್‌ನಲ್ಲಿ ಕುತೂಹಲವಿದೆ. ‘ಫಾಲ್ತು’ (2011) ಚಿತ್ರದೊಂದಿಗೆ ನಿರ್ದೇಶಕರಾದವರು ರೆಮೋ. ಚಿತ್ರದಲ್ಲಿನ ‘ಚಾರ್ ಬಜ್‌ ಗಯೇ’ ಹಾಡು ಕ್ಲಿಕ್ಕಾಗಿತ್ತು. ಆದರೆ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ವಿಫಲವಾಯ್ತು. ಇದಾಗಿ ಎರಡು ವರ್ಷಗಳ ನಂತರ ರೆಮೋ ನಿರ್ದೇಶಿಸಿದ ‘ಎಬಿಸಿಡಿ’ (2013) ಡಾನ್ಸ್ ಸಿನಿಮಾ ಗೆಲುವು ಕಂಡಿತು. ರೆಮೋ ತಮ್ಮ ನೃತ್ಯದ ಪಟ್ಟುಗಳನ್ನು ಇಲ್ಲಿ ಸೊಗಸಾಗಿ ದುಡಿಸಿಕೊಂಡಿದ್ದರು. ಈ ಗೆಲುವಿನ ವಿಶ್ವಾಸದಲ್ಲಿ 2015ರಲ್ಲಿ ‘ಎಬಿಸಿಡಿ’ ಸರಣಿ ಚಿತ್ರ ಮಾಡಿ ಖುಷಿಯಿಂದ ಬೀಗಿದರು. ಅದರೆ ಟೈಗರ್ ಶ್ರಾಫ್‌ಗೆ ಅವರು ನಿರ್ದೇಶಿಸಿದ ‘ಎ ಫ್ಲೈಯಿಂಗ್ ಝಾಟ್‌’ (2016) ಗೆಲ್ಲಲಿಲ್ಲ. ಇದೀಗ ಅವರ ‘ರೇಸ್‌ 3’ ತೆರೆಕಾಣುತ್ತಿದೆ. ಮುಂದಿನ ವರ್ಷ ಅವರು ಸಲ್ಮಾನ್‌ಗಾಗಿ ಡಾನ್ಸ್‌ ಸಿನಿಮಾ ನಿರ್ದೇಶಿಸಲಿದ್ದಾರೆ ಎನ್ನುವುದು ಲೇಟೆಸ್ಟ್‌ ಸುದ್ದಿ.

‘ಎಬಿಸಿಡಿ’ ಚಿತ್ರದಲ್ಲಿ ಪ್ರಭುದೇವ, ಗಣೇಶ್ ಆಚಾರ್ಯ ಮತ್ತು ರೆಮೋ ಡಿಸೋಜಾ ಡಾನ್ಸ್‌

ಪ್ರಭುದೇವ | ತೊಂಬತ್ತರ ದಶಕದಲ್ಲಿ ಪ್ರಭುದೇವ ದೊಡ್ಡ ಡಾನ್ಸ್‌ ಸೆನ್ಸೇಷನ್‌. ನೃತ್ಯ ನಿರ್ದೇಶಕನಾಗಿ ಯಶಸ್ಸು ಕಂಡ ಅವರಿಗೆ ನಟನಾಗಿಯೂ ಒಳ್ಳೆಯ ಅವಕಾಶಗಳು ಸಿಕ್ಕವು. ಉತ್ತಮ ನಟನೆಯೊಂದಿಗೆ ಅವರು ಹೀರೋ ಆಗಿಯೂ ಅಭಿಮಾನಿಗಳನ್ನು ಸಂಪಾದಿಸಿದರು. 2005ರಲ್ಲಿ ತೆರೆಕಂಡ ಅವರ ಚೊಚ್ಚಲ ನಿರ್ದೇಶನದ ‘ನುವ್ವೊಸ್ತಾನಂಟೆ ನೇನೊದ್ದಂಟಾನಾ’ ಸೂಪರ್‌ಹಿಟ್‌ ಎನಿಸಿಕೊಂಡಿತು. ಈ ಯಶಸ್ಸಿನ ಹಿನ್ನೆಲೆಯಲ್ಲಿ ಅವರು ಕೆಲವು ತೆಲುಗು, ತಮಿಳು ಸಿನಿಮಾಗಳನ್ನು ನಿರ್ದೇಶಿಸಿದರು. ‘ವಾಂಟೆಡ್‌’ (2009) ಚಿತ್ರದೊಂದಿಗೆ ಬಾಲಿವುಡ್‌ ಪ್ರವೇಶಿಸಿದ ಅವರು ಅಲ್ಲಿ ದೊಡ್ಡ ಗೆಲುವು ಕಂಡರು. ‘ಪೋಕಿರಿ’ ತೆಲುಗು ಚಿತ್ರದ ರಿಮೇಕಿದು. ಸಲ್ಮಾನ್‌ ಖಾನ್‌ ವೃತ್ತಿ ಬದುಕಿಗೆ ದೊಡ್ಡ ತಿರುವಾಯ್ತು. ಇದೀಗ ಪ್ರಭುದೇವ ‘ದಬಾಂಗ್‌ 3’ಗೆ ಚಿತ್ರಕಥೆ ಹೆಣೆಯುತ್ತಿದ್ದಾರೆ.

ಪ್ರಭುದೇವ ನಿರ್ದೇಶನದ ‘ವಾಂಟೆಡ್‌’ ಸಿನಿಮಾ ಹಾಡು

ಫರ್ಹಾ ಖಾನ್‌ | ‘ಜೋ ಜೀತಾ ವಹೀ ಸಿಕಂದರ್‌’ (1992) ಚಿತ್ರದೊಂದಿಗೆ ನೃತ್ಯ ಸಂಯೋಜಕಿಯಾದ ಫರ್ಹಾ ಖಾನ್‌ ಹಿಂದಿ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದರು. ಶಾರುಖ್‌ ಖಾನ್‌ ಪರಮಾಪ್ತೆಯಾದ ಅವರು ಶಾರುಖ್‌ಗೆ ‘ಮೈ ಹೂ ನಾ’ (2004) ನಿರ್ದೇಶಿಸಿದರು. ಇದಾದ ನಂತರ ಅವರು ನಿರ್ದೇಶಿಸಿದ ‘ಓಂ ಶಾಂತಿ ಓಂ’, ‘ತೀಸ್ ಮಾರ್ ಖಾನ್‌’, ‘ಹ್ಯಾಪಿ ನ್ಯೂ ಇಯರ್‌’ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಕಂಡವು.

ಫರ್ಹಾ ಖಾನ್ ನಿರ್ದೇಶನದ ‘ಓಂ ಶಾಂತಿ ಓಂ’ ಸಿನಿಮಾ ಹಾಡು

ಅಹ್ಮದ್ ಖಾನ್‌ | ಟೈಗರ್ ಶ್ರಾಫ್‌ ಮತ್ತು ದಿಶಾ ಪಟಾನಿ ಅಭಿನಯದ ಇತ್ತೀಚಿನ ‘ಬಾಘಿ 2’ ಶತಕೋಟಿ ವಹಿವಾಟು ನಡೆಸಿತು. ಈ ಚಿತ್ರದ ನಿರ್ದೇಶಕ ಅಹ್ಮದ್ ಖಾನ್ ಮೂಲತಃ ನೃತ್ಯ ಸಂಯೋಜಕ. ‘ಮಿಸ್ಟರ್‌ ಇಂಡಿಯಾ’ ಚಿತ್ರದಲ್ಲಿ ಬಾಲನಟನಾಗಿ ಬೆಳ್ಳಿತೆರೆಗೆ ಪರಿಚಯವಾದ ಅಹ್ಮದ್‌ ಮುಂದೆ ನೃತ್ಯದತ್ತ ಹೊರಳಿದರು. ‘ಲಕೀರ್‌’ (2004) ಚಿತ್ರದೊಂದಿಗೆ ನಿರ್ದೇಶಕರಾದ ಅವರು ಮುಂದೆ ‘ಪಾಠಶಾಲಾ’, ‘ಏಕ್‌ ಪಹೇಲಿ ಲೀಲಾ’ ನಿರ್ದೇಶಿಸಿದ್ದರು.

ಅಹ್ಮದ್ ಖಾನ್ ನಿರ್ದೇಶನದ ‘ಬಾಘಿ 2’ ಸಿನಿಮಾದ ಟ್ರೈಲರ್‌

ಇದನ್ನೂ ಓದಿ : ಬಪ್ಪಿ ಲಹರಿ ಸಂಗೀತ ಸಂಯೋಜನೆಗೆ ಹಾಡಲಿದ್ದಾರೆ ಗಾಯಕ ಎಲ್ಟನ್‌ ಜಾನ್

ಗಣೇಶ್ ಆಚಾರ್ಯ | ರಾಷ್ಟ್ರಪ್ರಶಸ್ತಿ ಪುರಸ್ಕೃತ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ನಿರ್ದೇಶನಕ್ಕಿಳಿದದ್ದು ‘ಸ್ವಾಮಿ’ (2007) ಚಿತ್ರದೊಂದಿಗೆ. ಮನೋಜ್‌ ಭಾಜಪೈ ಮತ್ತು ಜೂಹಿ ಚಾವ್ಲಾ ಜೋಡಿಯ ಸಿನಿಮಾ ಭಿನ್ನ ಕಥಾವಸ್ತುವಿನಿಂದ ಗಮನ ಸೆಳೆದಿತ್ತು. ಇದಾದ ನಂತರ ಗಣೇಶ್‌ ‘ಮನೀ ಹೋ ತೋ ಹನೀ ಹೈ’, ‘ಏಂಜೆಲ್‌’ ಮತ್ತು ಮರಾಠಿ ಚಿತ್ರ ‘ಭಿಕಾರಿ’ ನಿರ್ದೇಶಿಸಿದ್ದರು.

ಗಣೇಶ್ ಆಚಾರ್ಯ ನಿರ್ದೇಶನದ ‘ಮನೀ ಹೋ ತೊ ಹನೀ ಹೈ’ ಚಿತ್ರದ ಟ್ರೈಲರ್‌

#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
ಸ್ಮಿತಾ ನೆನಪು | ‘ಅನ್ವೇಷಣೆ’ ಗಾಗಿ ತಾನೇ ಹಣ ಹಾಕಿಕೊಂಡು ಬಂದು ನಟಿಸಿದ್ದರು
ಸುದ್ದಿ ವಾಚನದಿಂದ ಸಿನಿಮಾಲೋಕಕ್ಕೆ ಬಂದ ಕೃಷ್ಣಸುಂದರಿ
Editor’s Pick More