ರಾಜೇಶ್ ಮನದ ಮಾತು | ಪ್ರಯೋಗಶೀಲ ಚಿತ್ರಗಳು ಹೆಚ್ಚುತ್ತಿರುವುದು ಒಳ್ಳೆಯದು

ರಂಗಭೂಮಿ, ಕಿರುತೆರೆ ಮತ್ತು ಸಿನಿಮಾ ಮೂರೂ ಮಾಧ್ಯಮಗಳಲ್ಲಿ ತೊಡಗಿಸಿಕೊಂಡಿರುವ ಅನುಭವಿ ನಟ ರಾಜೇಶ್ ನಟರಂಗ. ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಕಟ್ಟುಕತೆ’ ಸಿನಿಮಾ ನಾಳೆ ತೆರೆಕಾಣುತ್ತಿದೆ. ತಮ್ಮ ಸಿನಿಮಾ, ನಾಟಕ, ಟಿವಿ ಅಭಿಯಾನದ ಬಗ್ಗೆ ರಾಜೇಶ್ ಇಲ್ಲಿ ಮಾತನಾಡಿದ್ದಾರೆ

ಮೂರನೇ ಕ್ಲಾಸ್‌ನಲ್ಲಿ ಓದುವಾಗ ರಾಜೇಶ್ ಮೊದಲ ಬಾರಿ ನಾಟಕಕ್ಕೆ ಬಣ್ಣ ಹಚ್ಚಿದ್ದು. ಮುಂದೆ ವೃತ್ತಿಪರ ನಟನಾಗಿ ರಂಗಭೂಮಿ, ಸಿನಿಮಾ, ಕಿರುತೆರೆಯಲ್ಲಿ ಅವರು ಗುರುತಿಸಿಕೊಂಡರು. ‘ಮಿಡ್‌ಸಮ್ಮರ್ ನೈಟ್ ಡ್ರೀಮ್ಸ್’‌, ‘ಕಗ್ಗತ್ತಲೆಯಲ್ಲಿ ಕೋಲ್ಮಿಂಚು’, ‘ನನ್ನ ತಂಗಿಗೊಂದು ಗಂಡು ಕೊಡಿ’, ‘ಅಂಜುಮಲ್ಲಿಗೆ’, ‘ಬಿಜ್ಜಳ’ ಅವರು ಅಭಿನಯಿಸಿದ ಕೆಲವು ಪ್ರಮುಖ ನಾಟಕಗಳು. ‘ನಟರಂಗ’ ರಂಗತಂಡದಲ್ಲಿ ಗುರುತಿಸಿಕೊಂಡಿರುವ ಅವರು ‘ಸಂಕೇತ್‌’, ‘ದೃಷ್ಟಿ’ ತಂಡಗಳಲ್ಲಿಯೂ ಅಭಿನಯಿಸಿದ್ದಾರೆ. ನಟನೆಯ ಜೊತೆ ಬರವಣಿಗೆ, ನಿರ್ದೇಶನದಲ್ಲೂ ಆಸಕ್ತಿ ಹೊಂದಿರುವ ಅವರು ನಮ್ಮ ಮಧ್ಯೆಯ ಸೂಕ್ಷ್ಮಸಂವೇದಿ ಕಲಾವಿದ. ಇತ್ತೀಚಿನ ಹಲವು ಸಿನಿಮಾಗಳು ಅವರ ಪ್ರತಿಭೆಗೆ ಉತ್ತಮ ವೇದಿಕೆ ಒದಗಿಸಿಕೊಟ್ಟಿವೆ. ಅವರ ನಟನಾ ಅಭಿಯಾನಕ್ಕೀಗ ಎರಡೂವರೆ ದಶಕಗಳು ಸಂದಿವೆ.

‘ಕಟ್ಟು ಕತೆ’ ಚಿತ್ರದಲ್ಲಿನ ನಿಮ್ಮ ಪಾತ್ರದ ಬಗ್ಗೆ ಹೇಳಿ…

ಚಿತ್ರದಲ್ಲಿ ನಾನು ಇನ್ವೆಸ್ಟಿಗೇಟೀವ್ ಅಫೀಸರ್‌. ಇಲ್ಲಿ ಕತೆಯನ್ನು ಪ್ರೆಸೆಂಟ್ ಮಾಡುವ ರೀತಿಯಲ್ಲಿ ಭಿನ್ನತೆ ಇದೆ. ನಿರ್ದೇಶಕರು ಮೂರು ಕೋನಗಳಲ್ಲಿ ಕತೆ ಹೇಳುತ್ತಾರೆ. ನಾನು ಕೆಲಸ ಮಾಡಿದ ಸೂರಿ ನಿರ್ದೇಶನದ ‘ಕೆಂಡಸಂಪಿಗೆ’ ಚಿತ್ರದಲ್ಲಿ ಇಂಥದ್ದೇ ನಿರೂಪಣಾ ಶೈಲಿ ಇತ್ತು. ನಿರ್ದೇಶಕನೊಬ್ಬ ನಿರ್ಮಾಪಕರಿಗೆ ಹೇಗೆ ತಾನು ನಿರ್ದೇಶಿಸಲಿರುವ ಕತೆ ಹೇಳುತ್ತಾನೋ, ಹಾಗೆ ನಾನಿಲ್ಲಿ ನನ್ನ ಪಾತ್ರದ ಮೂಲಕ ಕತೆ ಹೇಳುತ್ತೇನೆ. ಒಂದು ರೀತಿ ನಿರೂಪಕನಾಗಿ ಕಾಣಿಸುತ್ತೇನೆ. ನಿರ್ದೇಶಕ ರಾಜ್‌ ಪ್ರವೀಣ್ ಅವರಿಗೆ ಇದು ಮೊದಲ ಸಿನಿಮಾ. ಅವರು ಅನಿಮೇಷನ್‌ ಕ್ಷೇತ್ರದಲ್ಲಿದ್ದವರು. ಹಾಗಾಗಿ ಆಂಗಲ್‌, ಪರ್ಫೆಕ್ಷನ್ ಬಗ್ಗೆ ಅವರಿಗೆ ನಿಖರತೆ ಇದೆ. ಸನ್ನಿವೇಶ ಹೀಗೇ ಬೇಕು, ಇಂತಿಷ್ಟೇ ಬೇಕು ಎನ್ನುವುದು ಗೊತ್ತಿದೆ. ಒಂದೊಳ್ಳೆ ಸಿನಿಮಾದಲ್ಲಿ ನಟಿಸಿರುವ ತೃಪ್ತಿ ನನ್ನದು.

ಇತ್ತೀಚಿಗೆ ನಿರ್ದೇಶನ, ಸಿನಿಮಾ ಬರವಣಿಗೆಯಲ್ಲೂ ತೊಡಗಿಸಿಕೊಳ್ಳುತ್ತಿದ್ದೀರಿ...

ಈ ಹಿಂದೆ ಕಿರುತೆರೆಗೆ ಕೆಲವು ಸಂಚಿಕೆಗಳನ್ನು ನಿರ್ದೇಶಿಸಿದ್ದಿದೆ. ಬೇಸಿಕಲೀ ನಾನೊಬ್ಬ ನಟ. ನಿರ್ದೇಶಕ ಸೂರಿ ನನ್ನ ಹಳೆಯ ಗೆಳೆಯ. ಅವನು ಕರೆದಾಗ ಹೋದೆ. ಸೂರಿ ನಿರ್ದೇಶನದ ‘ಕಡ್ಡಿಪುಡಿ’ ಚಿತ್ರದಿಂದ ‘ಕೆಂಡಸಂಪಿಗೆ’ ಚಿತ್ರದವರೆಗೂ ನಿರ್ದೇಶನ, ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದೆ. ನಿರ್ದೇಶನದ ಬಗ್ಗೆ ನನಗೂ ಒಂದಷ್ಟು ಥಾಟ್ಸ್ ಇದೆ. ಅದು ಹೆಂಗೆ ಅಂದ್ರೆ, ಇವತ್ತು ಬೆಳಗ್ಗೆ ತುಂಬಾ ಎಕ್ಸೈಟ್ ಮಾಡುತ್ತೆ; ನಾಳೆ ಬೆಳಗ್ಗೆ ಹೊತ್ತಿಗಾಗಲೇ ಇದನ್ನು ಮಾಡದೆ ಇದ್ರೆ ಏನಾಗುತ್ತೆ ಅನಿಸುತ್ತೆ! ನಟನೆ ಮಧ್ಯೆ ನಿರ್ದೇಶನಕ್ಕೆ ಸಮಯ ಹೊಂದಿಸಿಕೊಳ್ಳೋದು ಕಷ್ಟ. ಮುಂದೆ ನೋಡೋಣ.

ಸೂರಿ ಆಪ್ತ ಸ್ನೇಹಿತರಾದ ನೀವು ‘ಟಗರು’ ಚಿತ್ರದಲ್ಲೇಕೆ ಕಾಣಿಸಿಕೊಂಡಿಲ್ಲ?

ಸೂರಿ ‘ದೊಡ್ಮನೆ ಹುಡ್ಗ’ ಸಿನಿಮಾ ಮಾಡುವಾಗ ನಾನು ‘ಕಿಲ್ಲಿಂಗ್ ವೀರಪ್ಪನ್‌’ ಚಿತ್ರೀಕರಣದಲ್ಲಿದ್ದೆ. ಅದಾಗಲೇ ‘ದೊಡ್ಮನೆ ಹುಡ್ಗ’ ಚಿತ್ರದ ಬರವಣಿಗೆ ಆಗಿತ್ತು. ಹಾಗಾಗಿ ನಾನು ಅಲ್ಲಿ ಸೇರಿಕೊಳ್ಳಲು ಸಾಧ್ಯವಾಗಲಿಲ್ಲ. ‘ಟಗರು’ ಸೆಟ್ಟೇರುವ ಹೊತ್ತಿನಲ್ಲೂ ನಾನು ಇತರ ಸಿನಿಮಾಗಳಲ್ಲಿ ಬಿಜಿಯಾಗಿದ್ದೆ. ಈ ಮಧ್ಯೆ, ‘ಕೆಂಡಸಂಪಿಗೆ’ ನಂತರ ‘ಕಾಗೆ ಬಂಗಾರ’ ಸಿನಿಮಾ ಮಾಡಬೇಕಿತ್ತು. ಬಹುಪಾಲು ಬರವಣಿಗೆ ಕೆಲಸವೂ ಆಗಿತ್ತು. ಆದರೆ, ಡಿಮಾನಿಟೈಸೇಷನ್‌ ಆದ ನಂತರ ಅದರ ಕಂಟೆಂಟ್ ತುಂಬಾ ಎಕ್ಸೈಟ್‌ಮೆಂಟ್‌ ಅನಿಸಲಿಲ್ಲ ಎಂದು ಸೂರಿ ಅಭಿಪ್ರಾಯಪಟ್ಟಿದ್ದರಿಂದ ಪ್ರಾಜೆಕ್ಟ್‌ ಡ್ರಾಪ್ ಅಯ್ತು.

ಇತ್ತೀಚೆಗೆ ಕನ್ನಡದಲ್ಲಿ ಎಕ್ಸ್‌ಪೆರಿಮೆಂಟ್‌ ಚಿತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ತಯಾರಾಗುತ್ತಿವೆ...

ಇದು ತುಂಬಾ ಒಳ್ಳೆಯ ಬೆಳವಣಿಗೆ. ನಾಲ್ಕು ಹಾಡು, ಫೈಟ್‌, ಬಿಲ್ಡ್‌ಅಪ್‌ಗಳ ಒಂದು ಫ್ರೇಮ್‌ವರ್ಕ್‌ನಲ್ಲಿ ನಡೆಯುತ್ತಿದ್ದ ಸಿನಿಮಾಗಳನ್ನುಮೀರಿ ಇಂತಹ ಪ್ರಯತ್ನಗಳಾಗುತ್ತಿವೆ. ಇದು ವೆಲ್‌ಕಮ್‌ ಥಿಂಗ್‌. ಇದು ಎಲ್ಲ ಲಾಂಗ್ವೇಜ್‌ಗಳಲ್ಲೂ ನಡೆಯುತ್ತಿತ್ತು. ನಾವೊಂದಿಷ್ಟು ಹಿಂದೆ ಬಿದ್ದಿದ್ವೇನೋ... ಮೊದಲು ಪ್ಯಾರಲಲ್‌, ಬ್ರಿಡ್ಜ್‌, ಅರ್ಟ್‌ ಸಿನಿಮಾ ಅಂತ ಹೆಸರಿಟ್ಟುಕೊಂಡು ಸಿನಿಮಾಗಳು ಬರುತ್ತಿದ್ದವು. ಅವುಗಳ ಮಧ್ಯೆ ಎಲ್ಲವನ್ನೂ ಒಳಗೊಂಡ ಒಳ್ಳೆಯ ಕಾನ್ಸೆಪ್ಟ್‌ನ ಚಿತ್ರಗಳನ್ನು ಹಲವರು ಮಾಡುತ್ತ ಬಂದಿದ್ದಾರೆ. ಅದಕ್ಕೂ ಒಂದು ಆಡಿಯನ್ಸ್ ಇದೆ. ವರ್ಲ್ಡ್‌ ಸಿನಿಮಾಗಳಿಗೆ ಎಕ್ಸ್‌ಪೋಸ್ ಅಗಿರುವ ಜನರು ಇಂತಹ ಸಿನಿಮಾಗಳನ್ನು ಅಕ್ಸೆಪ್ಟ್ ಮಾಡುತ್ತಿದ್ದಾರೆ. ಆದರೆ, ಇಂತಹ ಚಿತ್ರಗಳಿಗಿನ್ನೂ ದೊಡ್ಡ ಮಾರುಕಟ್ಟೆ ಕ್ರಿಯೇಟ್ ಅಗಬೇಕಿದೆ.

ಇದನ್ನೂ ಓದಿ : ಸಂಭಾಷಣೆಕಾರ ಮಾಸ್ತಿ ಮನದ ಮಾತು | ಸಿನಿಮಾ ನನ್ನ ಉಸಿರಲ್ಲಿ ಬೆರೆತುಹೋಗಿದೆ

ರಂಗಭೂಮಿ ಹಿನ್ನೆಲೆಯ ನಿಮ್ಮಂತಹ ನಟರಿಗೆ ಇಂತಹ ಪ್ರಯೋಗಶೀಲ ಸಿನಿಮಾಗಳು ಖುಷಿ ಕೊಡುತ್ತವೆ ಅಲ್ಲವೇ?

ಅಲ್ಲಿ ಚರ್ಚೆಗೆ ಅವಕಾಶ ಸಿಗುತ್ತೆ. ನಿರ್ದೇಶಕರು, ತಂತ್ರಜ್ಞರೊಂದಿಗೆ ಮಾತನಾಡಬಹುದು. ಇದು ತಪ್ಪು, ಅದು ಸರಿ, ಹೀಗೆ ಮಾಡೋಣ ಎಂದೆಲ್ಲ ಸಲಹೆ-ಸೂಚನೆ ಕೊಡಬಹುದು. ದೊಡ್ಡ ಸ್ಟಾರ್‌ಗಳ ಸಿನಿಮಾಗಳಲ್ಲಿ ಇದಕ್ಕೆ ಅವಕಾಶ ಇರೋಲ್ಲ. ತಮ್ಮ ಹೀರೋ ಏನು ಮಾಡ್ತಾನೆ ಅಂತ ನೋಡೋಕೆ ಅಲ್ಲಿ ಜನ ಥಿಯೇಟರ್‌ಗೆ ಬರುತ್ತಾರೆ. ಅಂತಹ ಸಿನಿಮಾಗಳ ಸೆಟ್‌ಗಳಲ್ಲಿ ನಾವು ವಾದ ಮಾಡೋದು ನಿರರ್ಥಕ. ಪ್ರಯೋಗಶೀಲ ಕತೆಗಳಲ್ಲಿ ನಮಗೆ ಚರ್ಚೆಗೆ ಅವಕಾಶ ಸಾಧ್ಯವಾಗುತ್ತದೆ.

ರಂಗಭೂಮಿ ನಂಟು ಈಗಲೂ ಇದೆಯೇ?

ಅತ್ಮೀಯರಾದ ಸುರೇಂದ್ರನಾಥ್ ಆಗಸ್ಟ್‌ನಲ್ಲಿ ನಾಟಕವೊಂದನ್ನು ರೂಪಿಸಲಿದ್ದು, ಅದರಲ್ಲಿ ನಟಿಸುವಂತೆ ಕರೆ ಕೊಟ್ಟಿದ್ದಾರೆ. ನಾನು ಅಭಿನಯಿಸುತ್ತಿದ್ದೇನೆ. ನಾಟಕದಲ್ಲಿ ನಟಿಸಬೇಕೆಂದರೆ ಅಲ್ಲೊಂದು ಶಿಸ್ತು ಬೇಕು, ಅದಕ್ಕೇಂತ ಟೈಂ ಎತ್ತಿಡಬೇಕು. ಸಿನಿಮಾಗಳ ವಿಚಿತ್ರ ಶೆಡ್ಯೂಲ್‌ಗಳ ಮಧ್ಯೆ ಅದಾಗದು. ಕೆಲಸದ ಒತ್ತಡಗಳಿಂದಾಗಿ ತಿಂಗಳುಗಳಿಂದ ನನಗೆ ನಾಟಕಗಳನ್ನು ನೋಡಲು ಕೂಡ ಸಾಧ್ಯವಾಗಿಲ್ಲ.

ಕಳೆದ ವರ್ಷ ‘ತ್ರಿವೇಣಿ ಸಂಗಮ’ ಸೀರಿಯಲ್‌ನಲ್ಲಿ ನಟಿಸಿದ್ದಿರಿ, ಮತ್ತೆ ಟಿವಿಗೆ ಮರಳುವ ಸೂಚನೆಗಳಿವೆಯೇ?

ಇಲ್ಲ, ಸೀರಿಯಲ್‌ಗಳಿಗೆ ಕರೆ ಬಂದಿದ್ದಿದೆ. ಆದರೆ, ಯಾವುದೂ ಇಂಟರೆಸ್ಟಿಂಗ್ ಅನಿಸುತ್ತಿಲ್ಲ. ಬಹುಪಾಲು ಕತೆಗಳು ಹಿಂದಿ ಅವತರಣಿಕೆ ಆಗಿರುತ್ತವೆ. ನಮ್ಮ ಮಣ್ಣಿನದ್ದು ಅನಿಸೋಲ್ಲ. ಹಾಗಾಗಿ, ನಮಗೂ ಒಪ್ಪಿಕೊಳ್ಳೋದಕ್ಕೆ ಗೊಂದಲ. ಇದರ ಮಧ್ಯೆ ಸಿನಿಮಾ, ಟಿವಿ ಮಧ್ಯೆ ಇದ್ದ ಗೋಡೆ ಇಲ್ಲವಾಗಿದೆ. ಕೆಲವು ವರ್ಷಗಳ ಹಿಂದೆ ಕಿರುತೆರೆಯಲ್ಲಿ ನಟಿಸಿದವರನ್ನು ಸಿನಿಮಾಗೆ ಕರೆಯೋಕೆ ಹಿಂಜರಿಯುತ್ತಿದ್ದರು. ಈಗ ಅಂತಹ ತಾರತಮ್ಯ ದೂರವಾಗಿದೆ.

ತೆರೆಕಾಣಲಿರುವ ನಿಮ್ಮ ಮುಂದಿನ ಚಿತ್ರಗಳಾವುವು?

ಶಿವ ರಾಜಕುಮಾರ್ ಅಭಿನಯದ ‘ಕವಚ’, ‘ಕೋಟಿಗೊಬ್ಬ 3’ ಚಿತ್ರಗಳು ಸಿದ್ಧವಾಗುತ್ತಿವೆ. ಸುನೀಲ್ ಕುಮಾರ್‌ ಸಿಂಗ್‌ ನಿರ್ದೇಶನದ ಸಿನಿಮಾದಲ್ಲಿ ನನಗೆ ತುಂಬಾ ಒಳ್ಳೆಯ ಪಾತ್ರವಿದೆ. ಹೀಗೆ, ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಇರಾದೆ ನನ್ನದು.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More