ವೀಕ್ಷಕರನ್ನು ಸೆಳೆಯುವಲ್ಲಿ ವಿಫಲವಾದ ತೆಲುಗು ವೆಬ್‌ ಸರಣಿ ‘ಗ್ಯಾಂಗ್‌ಸ್ಟರ್ಸ್‌‌’

ಅಮೆಜಾನ್‌ ಪ್ರೈಂನ ಚೊಚ್ಚಲ ತೆಲುಗು ವೆಬ್‌ ಸರಣಿ ‘ಗ್ಯಾಂಗ್‌ಸ್ಟರ್ಸ್‌‌’ ವೀಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಹನ್ನೆರೆಡು ಸಂಚಿಕೆಗಳ ಈ ಪ್ರಯೋಗದ ಬಗ್ಗೆ ಕಿರುತೆರೆ ಮತ್ತು ಸಿನಿಮಾರಂಗದಲ್ಲಿ ದೊಡ್ಡ ನಿರೀಕ್ಷೆ ಇತ್ತು. ಆದರೆ ‘ಗ್ಯಾಂಗ್‌ಸ್ಟರ್ಸ್‌‌’ ವೀಕ್ಷಕರ ನಿರೀಕ್ಷೆಯನ್ನು ಹುಸಿಗೊಳಿಸಿದೆ

ಸಿನಿಮಾ, ಟಿವಿ ಸೀರಿಯಲ್‌ಗಳ ಮಧ್ಯೆ ವೆಬ್‌ ಸರಣಿಗಳಿಗೂ ಈಗ ಪ್ರೇಕ್ಷಕರಿದ್ದಾರೆ. ಇದೊಂದು ದೊಡ್ಡ ಮಾರುಕಟ್ಟೆಯಾಗಿ ಬೆಳೆದಿದ್ದು, ದಕ್ಷಿಣದ ಪ್ರಾದೇ‍ಶಿಕ ಭಾ‍ಷೆಗಳಲ್ಲೂ ಸರಣಿಗಳು ತಯಾರಾಗುತ್ತಿವೆ. ಅಮೆಜಾನ್ ಪ್ರೈಂ ‘ಗ್ಯಾಂಗ್‌ಸ್ಟರ್ಸ್‌‌’ ತೆಲುಗು ವೆಬ್ ಸರಣಿ ನಿರ್ಮಾಣದೊಂದಿಗೆ ತೆಲುಗು ಮಾರುಕಟ್ಟೆ ಪ್ರವೇಶಿಸಿತ್ತು. ದೊಡ್ಡ ಪ್ರಮಾಣದಲ್ಲಿ ತಯಾರಾದ ಸರಣಿಯಲ್ಲಿ ಜಗಪತಿ ಬಾಬು ಸೇರಿದಂತೆ ಟಾಲಿವುಡ್‌ನಲ್ಲಿ ಹೆಸರು ಮಾಡಿರುವ ನಟ-ನಟಿಯರು ಅಭಿನಯಿಸಿದ್ದರು. ‘ಅಲಾ ಮೊದಲೈಂದಿ’ (2011) ತೆಲುಗು ಸಿನಿಮಾ ಖ್ಯಾತಿಯ ಬಿ ವಿ ನಂದಿನಿ ರೆಡ್ಡಿ ವೆಬ್‌ ಸರಣಿ ನಿರ್ದೇಶಕಿ. ಈ ಹಿಂದೆ ಅವರು ‘ಮನ ಮುಗ್ಗರಿ ಲವ್‌ಸ್ಟೋರಿ’ ವೆಬ್‌ ಸರಣಿ ನಿರ್ದೇಶಿಸಿದ್ದರು. ಜೂನ್‌ 1ರಿಂದ ಪ್ರಸಾರವಾದ ಸರಣಿ ವೀಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದೆ. ವೆಬ್‌ ಸರಣಿ ಅಪೇಕ್ಷಿಸುವ ಕಂಟೆಂಟ್‌ ಇದಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

‘ಗ್ಯಾಂಗ್‌ಸ್ಟರ್ಸ್‌’ ವೆಬ್‌ ಸರಣಿ ಟ್ರೈಲರ್‌

ಇದನ್ನೂ ಓದಿ : ರಾಜೇಶ್‌ ಮನದ ಮಾತು | ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸಿದ ಅದೃಷ್ಟವಂತ ನಾನು

ಕ್ಯಾನ್ಸರ್‌ನಿಂದ ಬಳಲುವ ಭೂಗತ ಪಾತಕಿಗೆ ತನ್ನ ಆಯುಷ್ಯ ಆರು ತಿಂಗಳಷ್ಟೇ ಎಂದು ಗೊತ್ತಾಗುತ್ತದೆ. ಆತ ತಾನು ಸಂಪಾದಿಸಿದ ಕಪ್ಪುಹಣವನ್ನು ಸಿನಿಮಾ ನಿರ್ಮಾಣದಲ್ಲಿ ತೊಡಗಿಸುವುದು, ಸಿನಿಮಾದ ಗಂಧಗಾಳಿಯೂ ಗೊತ್ತಿರದ ಎಡಬಿಡಂಗಿಗಳ ಗುಂಪೊಂದು ಈ ಯೋಜನೆಯಲ್ಲಿ ತೊಡಗಿಸಿಕೊಳ್ಳುವ ತಮಾಷೆ ವೆಬ್‌ ಸರಣಿಯ ಕಥಾವಸ್ತು. ಇತ್ತೀಚೆಗೆ ಖಳಪಾತ್ರಗಳಲ್ಲಿ ಮಿಂಚುತ್ತಿರುವ ಟಾಲಿವುಡ್‌ ನಟ ಜಗಪತಿ ಬಾಬು ಗ್ಯಾಂಗ್‌ಸ್ಟರ್‌ ಪಾತ್ರದಲ್ಲಿ ನಟಿಸಿದ್ದರೆ, ನಟ ನವದೀಪ್ ಮತ್ತು ಬಾಲಿವುಡ್‌ ನಟಿ ಶ್ವೇತಾ ಬಸು ಪ್ರಮುಖ ಪಾತ್ರಗಳಲ್ಲಿದ್ದಾರೆ. ‘ಮುಗುಳುನಗೆ’ ಕನ್ನಡ ಚಿತ್ರದಲ್ಲಿ ಮಲೆನಾಡಿನ ಹುಡುಗಿಯಾಗಿ ಮಿಂಚಿದ್ದ ಅಪೂರ್ವ ಅರೋರಾ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ವೀಕ್ಷಕರನ್ನು ಹಿಡಿದಿಡುವ ಬಿಗಿಯಾದ ಚಿತ್ರಕತೆ ಇಲ್ಲದ ಕಾಮಿಡಿ ಸರಣಿ ನೀರಸವಾಗಿದೆ ಎಂದಿದ್ದಾರೆ ವಿಶ್ಲೇಷಕರು. ‘ಗ್ಯಾಂಗ್‌ಸ್ಟರ್ಸ್‌’ ವೈಫಲ್ಯದೊಂದಿಗೆ ತೆಲುಗು ವೆಬ್‌ ಸಿರೀಸ್ ಮಾರುಕಟ್ಟೆಯನ್ನು ಅವರಿಸಿಕೊಳ್ಳುವ ಅಮೆಜಾನ್‌ ಯೋಜನೆ ತಲೆಕೆಳಗಾಗಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More