ಟೀಸರ್‌ | ದಿನಕರ್ ನಿರ್ದೇಶನದ ಜರ್ನಿ ಸಿನಿಮಾ ‘ಲೈಫ್‌ ಜೊತೆ ಒಂದ್‌ ಸೆಲ್ಫಿ’

ಜರ್ನಿ ಸಿನಿಮಾ ‘ಲೈಫ್ ಜೊತೆ ಒಂದ್ ಸೆಲ್ಫಿ’ ಟ್ರೈಲರ್ ಮತ್ತು ಆಡಿಯೋ ಬಿಡುಗಡೆಯಾಗಿದೆ. ತಾಜಾ ಎನಿಸುವ ಟ್ರೈಲರ್‌ ಮತ್ತು ಮಧುರ ಹಾಡುಗಳು ಚಿತ್ರದ ಬಗ್ಗೆ ಭರವಸೆ ಮೂಡಿಸಿವೆ. ವಿ ಹರಿಕೃಷ್ಣ ಸಂಗೀತ ಸಂಯೋಜನೆ, ದಿನಕರ್ ನಿರ್ದೇಶನದ ಸಿನಿಮಾ ಆಗಸ್ಟ್‌ನಲ್ಲಿ ತೆರೆಗೆ ಬರಲಿದೆ

‘ಜೊತೆಜೊತೆಯಲಿ’, ‘ನವಗ್ರಹ’, ‘‌ಸಾರಥಿ’ ಚಿತ್ರಗಳ ನಂತರ ದಿನಕರ್‌ ‘ಲೈಫ್‌ ಜೊತೆ ಒಂದ್ ಸೆಲ್ಫಿ’ ಎನ್ನುವ ವಿಶಿಷ್ಟ ಶೀರ್ಷಿಕೆಯ ಚಿತ್ರದೊಂದಿಗೆ ಮರಳುತ್ತಿದ್ದಾರೆ. ಭಿನ್ನ ಕಥಾವಸ್ತು ಇದ್ದ ಮೂರೂ ಸಿನಿಮಾಗಳು ಅವರಿಗೆ ಗೆಲುವು ತಂದುಕೊಟ್ಟಿದ್ದವು. ಇದೀಗ ನಾಲ್ಕನೇ ಪ್ರಯೋಗವಾಗಿ ಜರ್ನಿ ಸಿನಿಮಾ ಮಾಡಿದ್ದಾರೆ. ಟ್ರೈಲರ್ ಬಿಡುಗಡೆಯಾಗಿದ್ದು ನೋಡುಗರಿಗೆ ತಾಜಾ ಅನುಭವ ನೀಡುತ್ತದೆ. ಮೂರು ಪಾತ್ರಗಳೊಂದಿಗೆ ದಿನಕರ್ ಮೂರು ಕತೆಗಳನ್ನು ಹೇಳುತ್ತಿದ್ದಾರೆ. ಈ ಪಾತ್ರಗಳಲ್ಲಿ ಪ್ರೇಕ್ಷಕರು ಕೂಡ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಾರೆ ಎನ್ನುತ್ತಾರವರು. “ಸಿನಿಮಾ ನಿರ್ದೇಶನ ಮಾಡುವ ಇರಾದೆ ಹೊಂದಿರುವ ಸಾಫ್ಟ್‌ವೇರ್‌ ಎಂಜಿನಿಯರ್‌, ಬದುಕಿನಲ್ಲಿ ಎಲ್ಲವೂ ಇದ್ದೂ ಏನೋ ಹುಡುಕಾಟದಲ್ಲಿರುವ ಶ್ರೀಮಂತ ಯುವಕ ಮತ್ತು ತನ್ನ ಅಸ್ತಿತ್ವದ ಹುಡುಕಾಟದಲ್ಲಿರುವ ಆಧುನಿಕ ಮನೋಭಾವದ ಯುವತಿ ಗೋವಾದಲ್ಲಿ ಪರಸ್ಪರರಿಗೆ ಪರಿಚಿತರಾಗುತ್ತಾರೆ. ತಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತಾರೆ. ಕೊನೆಗೆ ಲೈಫೇ ಅವರ ಸಮಸ್ಯೆಗಳಿಗೆ ಪರಿಪಾರ ಸೂಚಿಸುತ್ತದೆ,” ಎಂದು ತಮ್ಮ ಸಿನಿಮಾ ಬಗ್ಗೆ ಹೇಳುತ್ತಾರೆ ನಿರ್ದೇಶಕ ದಿನಕರ್‌.

ಇದನ್ನೂ ಓದಿ : ಚಿತ್ರ ವಿಮರ್ಶೆ | ಆಕ್ಷನ್‌ ಜೊತೆ ಸಂದೇಶ ಸಾರುವ ‘ಅಮ್ಮ ಐ ಲವ್‌ ಯೂ’

ಪತ್ನಿ ಮಾನಸ ಬರೆದ ಕತೆಯನ್ನು ದಿನಕರ್ ಚಿತ್ರಕತೆ ಮಾಡಿಕೊಂಡು ನಿರ್ದೇಶಿಸಿದ್ದಾರೆ. ಚೊಚ್ಚಲ ನಿರ್ದೇಶನದ ‘ಜೊತೆಜೊತೆಯಲಿ’ ಸಿನಿಮಾದಲ್ಲಿ ಹೀರೋ ಆಗಿದ್ದ ಪ್ರೇಮ್‌ ‘ಲೈಫ್‌ ಜೊತೆ ಒಂದ್ ಸೆಲ್ಫಿ’ಯಲ್ಲಿದ್ದಾರೆ. ಪ್ರಜ್ವಲ್ ದೇವರಾಜ್ ಮತ್ತು ಹರಿಪ್ರಿಯಾ ಮತ್ತಿಬ್ಬರು ಪ್ರಮುಖ ಪಾತ್ರಧಾರಿಗಳು. ಪ್ರಜ್ವಲ್ ತಾಯಿಯಾಗಿ ಸುಧಾರಾಣಿ ನಟಿಸಿದ್ದು, ಅವರ ಪಾತ್ರಕ್ಕೆ ಟ್ವಿಸ್ಟ್ ಇದೆ ಎನ್ನುತ್ತಾರೆ. ಅತಿಥಿ ಪಾತ್ರವೊಂದರಲ್ಲಿ ಪ್ರಮುಖ ಕಲಾವಿದರೊಬ್ಬರು ಚಿತ್ರದಲ್ಲಿ ನಟಿಸಿದ್ದು, ಅವರು ಯಾರೆಂದು ದಿನಕರ್ ರಿವೀಲ್ ಮಾಡುತ್ತಿಲ್ಲ. ಟ್ರೈಲರ್ ಜೊತೆ ಚಿತ್ರದ ಹಾಡುಗಳೂ ಬಿಡುಗಡೆಯಾಗಿವೆ. ಕವಿರಾಜ್‌ ಟೈಟಲ್ ಸಾಂಗ್ ಹಾಗೂ ಎರಡು ಕವಿತೆಗಳನ್ನು ಬರೆದಿದ್ದಾರೆ. ನಾಗೇಂದ್ರ ಪ್ರಸಾದ್ ಎರಡು ಗೀತೆ ಮತ್ತು ಯೋಗರಾಜ್‌ ಭಟ್‌ ಒಂದು ಗೀತೆ ರಚಿಸಿದ್ದಾರೆ. ಸಂಗೀತ ಸಂಯೋಜನೆ ವಿ ಹರಿಕೃಷ್ಣ ಅವರದು. ಜರ್ನಿ ಸಿನಿಮಾದಲ್ಲಿ ಛಾಯಾಗ್ರಹಣ ಬಹುಮುಖ್ಯ. ‘ನವಗ್ರಹ’, ‘ಸಾರಥಿ’ ಸಿನಿಮಾಗಳಿಗೆ ಕ್ಯಾಮೆರಾ ಸಹಾಯಕರಾಗಿದ್ದ ದಿನಕರ್ ಸ್ನೇಹಿತ ನಿರಂಜನ್ ಬಾಬು ‘ಲೈಫ್ ಜೊತೆ ಒಂದ್‌ ಸೆಲ್ಫಿ’ಗೆ ಛಾಯಾಗ್ರಾಹಕ. ಸಮೃದ್ಧಿ ಮಂಜುನಾಥ್ ನಿರ್ಮಾಣದ ಸಿನಿಮಾ ಆಗಸ್ಟ್‌ ತಿಂಗಳಿನಲ್ಲಿ ತೆರೆಗೆ ಬರುವ ಸಾಧ್ಯತೆಗಳಿವೆ.

‘ಲೈಫ್ ಜೊತೆ ಒಂದ್ ಸೆಲ್ಫಿ’ ಹಾಡುಗಳು

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More