ಅವಿನಾಶ್ ಮನದ ಮಾತು | ಪ್ರೇಕ್ಷಕರ ನಿರೀಕ್ಷೆ ತಲುಪಿದರೆ ಸಿನಿಮಾ ಗೆಲ್ಲುತ್ತದೆ

ರಂಗಭೂಮಿ ನಟ, ನಿರ್ದೇಶಕ ಅವಿನಾಶ್‌ ಷಟಮರ್ಷನ್‌ ಅವರಿಗೆ ‘ದಯವಿಟ್ಟು ಗಮನಿಸಿ’ ಚಿತ್ರದಲ್ಲಿ ಒಂದೊಳ್ಳೆ ಪಾತ್ರವಿತ್ತು. ಇಂದು ಅವರ ‘ಕನ್ನಡಕ್ಕಾಗಿ ಒಂದನ್ನು ಒತ್ತಿ’ ಸಿನಿಮಾ ತೆರೆಕಂಡಿದೆ. ಸದಾ ಹೊಸತನಕ್ಕೆ ತುಡಿಯುವ ಅವಿನಾಶ್‌ ಅವರೊಂದಿಗಿನ ಮಾತುಕತೆ ಇಲ್ಲಿದೆ

ಕಳೆದ ವರ್ಷ ತೆರೆಕಂಡ ‘ದಯವಿಟ್ಟು ಗಮನಿಸಿ’ ಪ್ರಯೋಗಶೀಲ ಚಿತ್ರವಾಗಿ ಗಮನ ಸೆಳೆದಿತ್ತು. ರಂಗಭೂಮಿ ಹಿನ್ನೆಲೆಯ ನಟ, ನಿರ್ದೇಶಕ ಅವಿನಾಶ್‌ ಷಟಮರ್ಷನ್‌ ಈ ಚಿತ್ರದಲ್ಲಿನ ಅಪರೂಪದ ಪಾತ್ರದ ಮೂಲಕ ಸಿನಿಮಾ ಪ್ರವೇಶಿಸಿದ್ದರು. ಇಂದು ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಕನ್ನಡಕ್ಕಾಗಿ ಒಂದನ್ನು ಒತ್ತಿ’ ಸಿನಿಮಾ ತೆರೆಕಂಡಿದೆ. ಕುಶಾಲ್ ಗೌಡ ನಿರ್ದೇಶನದ ಈ ಚಿತ್ರ ಹಲವು ದಿನಗಳಿಂದ ಸುದ್ದಿಯಲ್ಲಿದೆ. ಹಾಡು, ಮೇಕಿಂಗ್‌ ಬಗ್ಗೆ ಸುದ್ದಿಯಾಗಿದ್ದ ತಮ್ಮ ಸಿನಿಮಾ ಹಾಗೂ ಇತರ ಸಂಗತಿಗಳ ಬಗೆಗಿನ ಅವಿನಾಶ್ ಇಲ್ಲಿ ಮಾತನಾಡಿದ್ದಾರೆ.

‘ಕನ್ನಡಕ್ಕಾಗಿ ಒಂದನ್ನು ಒತ್ತಿ’ ಸಿನಿಮಾದಲ್ಲಿನ ನಿಮ್ಮ ಪಾತ್ರದ ಬಗ್ಗೆ ಹೇಳಿ?

ನಿಜ ಜೀವನದಲ್ಲಿ ಪತ್ರಿಕೋದ್ಯಮದ ವಿದ್ಯಾರ್ಥಿಯಾಗಿದ್ದ ನನಗೆ ಸಿನಿಮಾದಲ್ಲೂ ಪತ್ರಕರ್ತನ ಪಾತ್ರಕ್ಕೆ ಬಣ್ಣ ಹಚ್ಚುವ ಅವಕಾಶ ಸಿಕ್ಕಿದ್ದು ವೈಯಕ್ತಿಕವಾಗಿ ಹೆಚ್ಚು ಖುಷಿ ಕೊಟ್ಟಿದೆ. ಪದ್ಮಿನಿ ಕಾರಿನ ಜೊತೆಜೊತೆಯಲಿ ಸಾಗುವ ನಮ್ಮ ಕತೆ ಪ್ರೇಕ್ಷಕರ ಮನಮುಟ್ಟುವಲ್ಲಿ ಸಂದೇಹವಿಲ್ಲ.

ಪತ್ರಿಕೋದ್ಯಮದ ವಿದ್ಯಾರ್ಥಿ ಸಿನಿಮಾದತ್ತ ಮುಖ ಮಾಡಿದ್ದೇಕೆ?

ಹೆಸರಿಗೆ ಪತ್ರಿಕೋದ್ಯಮ ಓದಿಕೊಂಡಿದ್ದರೂ ರಂಗಭೂಮಿಯ ನೆರಳಲ್ಲಿ ಬೆಳೆದವ ನಾನು. ಚಿಕ್ಕಂದಿನಿಂದಲೂ ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ. ನಾಟಕಗಳನ್ನು ಬರೆಯುವುದಲ್ಲದೆ ನಿರ್ದೇಶನವನ್ನೂ ಮಾಡಿದ್ದೇನೆ. ರಂಗಭೂಮಿಯ ನಂಟು ಸಿನಿಮಾದವರೆಗೆ ಕೈಹಿಡಿದು ಕರೆತಂದಿದೆ.

‘ದಯವಿಟ್ಟು ಗಮನಿಸಿ’ ಸಿನಿಮಾದ ‘ಸಂಚಾರಿ’ ಹಾಡು

ರಂಗಭೂಮಿಯಿಂದ ನೀವು ಪಡೆದುಕೊಂಡಿದ್ದೇನು?

ನಾನು ಎಂದಿಗೂ ರಂಗಭೂಮಿಯೊಟ್ಟಿಗೆ ವ್ಯವಹರಿಸಿಲ್ಲ, ಬದಲಿಗೆ ಜೀವಿಸಿದ್ದೇನೆ. ಕೊಡುಕೊಳ್ಳುವಿಕೆಯಲ್ಲಿ ನನಗೆ ನಂಬಿಕೆ ಇಲ್ಲ. ನನಗೆ ರಂಗಭೂಮಿಯ ಅನಿವಾರ್ಯತೆ ಇತ್ತು, ಹಾಗಾಗಿ ಅದನ್ನು ಆಶ್ರಯಿಸಿ ಬೆಳೆದೆ.

ಸಿನಿಮಾಗಳಿಗೆ ಸೀಮಿತವಾಗಿ ಉಳಿಯುತ್ತೀರಾ?

ಖಂಡಿತ ಇಲ್ಲ. ನನಗೆ ನನ್ನದೇ ಆದ ಕನಸುಗಳಿವೆ. ರಂಗಶಾಲೆ ಸ್ಥಾಪಿಸಬೇಕೆಂಬುದು ನನ್ನ ಬಹುದಿನದ ಕನಸು. ಸದ್ಯದಲ್ಲೇ ರಂಗಶಾಲೆ ತೆರೆಯುತ್ತಿದ್ದೇನೆ. ಆಸಕ್ತ ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶ ಕಲ್ಪಿಸುವ ಪ್ರಯತ್ನದಲ್ಲಿದ್ದೇನೆ.

ಇದನ್ನೂ ಓದಿ : ವಿಡಿಯೋ | ವೈರಲ್ ಆಯ್ತು ಅವಿನಾಶ್-ಪ್ರಿಯಾ ಹಾಡಿದ ‘ಯಾಕಮ್ಮಿ’ ಸಾಂಗ್

ನೀವು ನಿರ್ದೇಶಿಸುತ್ತಿರುವ ‘ಸೈಡ್ ವಿಂಗ್’ಸಿನಿಮಾದ ಬಗ್ಗೆ ಹೇಳಿ...

ಲಿವಿಂಗ್‌ ರಿಲೇಶನ್‌ಶಿಪ್‌ ಬಗೆಗಿನ ಕತೆಯನ್ನು ತೆರೆಗೆ ಅಳವಡಿಸುವ ಪ್ರಯತ್ನದಲ್ಲಿದ್ದೇನೆ. ಬಂಡವಾಳದ ಕೊರತೆ ಇರುವುದರಿಂದ ಕೊನೆಯ ಹಂತದ ಚಿತ್ರೀಕರಣ ನಿಧಾನಗತಿಯಲ್ಲಿ ಸಾಗುತ್ತಿದೆ. ಮುಂದಿನ ಎರಡ್ಮೂರು ತಿಂಗಳಲ್ಲಿ ಚಿತ್ರ ತೆರೆಕಾಣಲಿದೆ.

ಈ ವಾರ ನಿಮ್ಮ ಸಿನಿಮಾದ ಜೊತೆಗೆ ಆರೇಳು ಚಿತ್ರ ಬಿಡುಗಡೆಯಾಗಿವೆ. ಇದು ನಿಮ್ಮಲ್ಲಿ ಆತಂಕ ಹುಟ್ಟಿಸಿದೆಯೇ?

ನಿಜವಾಗಿಯೂ ನಮಗೆ ಆತಂಕವಿಲ್ಲ. ಮೊದಲನೆಯದಾಗಿ, ನಾವು ಸ್ಪರ್ಧೆಗೆ ಇಳಿದಿಲ್ಲ. ಸದಭಿರುಚಿಯ ಚಿತ್ರವೊಂದನ್ನು ಪ್ರೇಕ್ಷಕರ ಮುಂದಿಡುತ್ತಿದ್ದೇವೆ; ಅವರ ನಿರೀಕ್ಷೆಗಳನ್ನು ನಾವು ತಲುಪಿದ್ದೇ ಆದರೆ ನಮ್ಮ ಸಿನಿಮಾ ಗೆಲ್ಲುತ್ತದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More