ವಿಡಿಯೋ | ವೈರಲ್‌ ಆಯ್ತು ಹರ್ಷಿತಾ ‘ಡಬ್‌ಸ್ಮಾಶ್‌ ಗರ್ಲ್‌’ ರ‍್ಯಾಪ್‌ ಸಾಂಗ್

ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ರ‍್ಯಾಪ್ ಹಾಡುಗಳು ಆಗಿಂದಾಗ್ಗೆ ಸದ್ದು ಮಾಡುತ್ತಿವೆ. ಕ್ರಿಯಾಶೀಲ ಯುವ ತಂತ್ರಜ್ಞರು ತಮ್ಮದೊಂದು ತಂಡ ಕಟ್ಟಿಕೊಂಡು ಹಾಡುಗಳನ್ನು ಮಾಡಿ ಗಮನ ಸೆಳೆಯುತ್ತಿದ್ದಾರೆ. ಈ ಪಟ್ಟಿಗೆ ಹೊಸ ಸೇರ್ಪಡೆ ಉದಯ್‌ ನಿರ್ದೇಶನದ ‘ಡಬ್‌ಸ್ಮಾಶ್‌ ಗರ್ಲ್‌’ ಸಾಂಗ್‌

ಕ್ರಿಯಾಶೀಲ ತಂತ್ರಜ್ಞರ ಹೊಸ ಪ್ರಯೋಗಗಳಿಗೆ ರ‍್ಯಾಪ್‌ ಸಂಗೀತ ಕ್ಷೇತ್ರ ಉತ್ತಮ ವೇದಿಕೆಯಾಗುತ್ತಿದೆ. ಕನ್ನಡದಲ್ಲಿ ಚಂದನ್‌ ಶೆಟ್ಟಿ ರ‍್ಯಾಪ್‌ ಹಾಡುಗಳ ಮೂಲಕ ದೊಡ್ಡ ಸದ್ದು ಮಾಡುತ್ತಿದ್ದು, ಇತ್ತೀಚೆಗೆ ಹೊಸಬರ ಅನೇಕ ತಂಡಗಳು ಹಾಡುಗಳನ್ನು ಮಾಡುತ್ತಿವೆ. ಇದೀಗ ಉದಯ್‌ ನಿರ್ದೇಶನದಲ್ಲಿ ತಯಾರಾಗಿರುವ ‘ಡಬ್‌ಸ್ಮಾಶ್ ಗರ್ಲ್‌’ ರ‍್ಯಾಪ್ ಸಾಂಗ್‌ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ. ಯುವ ಗಾಯಕಿ ಹರ್ಷಿತಾ ಸುಬ್ರಹ್ಮಣ್ಯ ಅವರು ರ‍್ಯಾಪ್‌ ಸಾಂಗ್ ಹಾಡಿ, ಡ್ಯಾನ್ಸ್‌ ಮಾಡಿದ್ದಾರೆ.

"ನಮ್ಮಂತಹ ಕ್ರಿಯಾಶೀಲ ಯುವ ತಂತ್ರಜ್ಞರಿಗೆ ರ‍್ಯಾಪ್‌ ಉತ್ತಮ ಕ್ಷೇತ್ರ. ನಾವು ಸಮಾನಾಸಕ್ತರು ಸೇರಿ ಈ ಹಾಡು ಮಾಡಿದ್ದೇವೆ. ಸಾಮಾನ್ಯವಾಗಿ ಕನ್ನಡದಲ್ಲಿ ರ‍್ಯಾಪ್‌ಗೆ ಗಾಯಕರೇ ಹೆಚ್ಚು ಹಾಡಿರೋದು. ಇಲ್ಲಿ ಹರ್ಷಿತಾ ಹಾಡಿ ನರ್ತಿಸಿದ್ದಾರೆ. ನಮ್ಮ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ,” ಎನ್ನುತ್ತಾರೆ ನಿರ್ದೇಶಕ ಉದಯ್‌.

ಇದನ್ನೂ ಓದಿ : ಅವಿನಾಶ್ ಮನದ ಮಾತು | ಪ್ರೇಕ್ಷಕರ ನಿರೀಕ್ಷೆ ತಲುಪಿದರೆ ಸಿನಿಮಾ ಗೆಲ್ಲುತ್ತದೆ

ಉದಯ್‌ ಅವರಿಗೆ ಮುಂದಿನ ದಿನಗಳಲ್ಲಿ ಸಿನಿಮಾ ನಿರ್ದೇಶಿಸುವ ಇರಾದೆ ಇದೆ. ಇದಕ್ಕೆ ತಯಾರಿ ಎನ್ನುವಂತೆ ಅವರು ರ‍್ಯಾಪ್‌ ಸಾಂಗ್ ರೂಪಿಸಿದ್ದಾರೆ. ಇನ್ನು, ಗಾಯಕಿ ಹರ್ಷಿತಾಗೆ ಇದು ಎರಡನೇ ಆಲ್ಬಂ ಸಾಂಗ್‌. ಈ ಮೊದಲು ಅವರು ‘ಏನೋ ಆಗಿದೆ’ ಸಾಂಗ್ ಹಾಡಿನೊಂದಿಗೆ ಆಲ್ಬಂ ದುನಿಯಾಗೆ ಕಾಲಿಟ್ಟಿದ್ದರು. ಬಿಕಾಂ ವಿದ್ಯಾರ್ಥಿನಿ ಹರ್ಷಿತಾ ಮುಂದಿನ ದಿನಗಳಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುವ ಗುರಿ ಹೊಂದಿದ್ದಾರೆ. “ಟೀನೇಜ್ ಯುವತಿಯ ಕನಸು, ಆಸೆಗಳೇ ಈ ಆಲ್ಬಂನ ವಸ್ತು. ಚೇತನ್‌ ಕುಮಾರ್ ಅವರ ತಾಜಾ ಎನಿಸುವ ಹಾಡಿಗೆ ವಿಜೇತ್‌ ಆಕರ್ಷಕ ಸಂಗೀತ ಸಂಯೋಜನೆ ಹಾಡಿನ ಹೈಲೈಟ್‌. ಈ ಅವಕಾಶಕ್ಕಾಗಿ ನಿರ್ದೇಶಕ ಉದಯ್ ಅವರಿಗೆ ಕೃತಜ್ಞಳಾಗಿದ್ದೇನೆ,” ಎಂದು ಹರ್ಷಿತಾ ನಿರ್ದೇಶಕರಿಗೆ ಧನ್ಯವಾದ ಅರ್ಪಿಸುತ್ತಾರೆ. ಹರ್ಷಿತಾ ಅವರ ಸಹೋದರಿ ಜೀವಿತಾ ಸುಬ್ರಹ್ಮಣ್ಯ ಈ ಆಲ್ಬಂ ಹಾಡಿಗೆ ಹಣ ಹೂಡಿದ್ದು, ಕುಮಾರ್ ಗೌಡ ಛಾಯಾಗ್ರಹಣ ಮಾಡಿದ್ದಾರೆ. ‘ಭರ್ಜರಿ’ ಸಿನಿಮಾ ಖ್ಯಾತಿಯ ಚೇತನ್‌ ಕುಮಾರ್‌ ಗೀತೆ ರಚಿಸಿದ್ದು, ವಿಜೇತ್‌ ಕೃಷ್ಣ ಸಂಗೀತ ಸಂಯೋಜಿಸಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More