ಪ್ರಕಾಶ್‌ ರೈ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತಿದ್ದಾರಾ ಜಗಪತಿ ಬಾಬು?

ಕಳೆದೊಂದು ದಶಕದಲ್ಲಿ ದಕ್ಷಿಣ ಭಾರತವಷ್ಟೇ ಅಲ್ಲ, ಹಿಂದಿ ಚಿತ್ರರಂಗದಲ್ಲೂ ಪ್ರಕಾಶ್‌ ರೈ ಮಿಂಚಿದ್ದರು. ಅನನ್ಯ ದನಿ, ಅಭಿನಯದ ಮೂಲಕ ನೆಗೆಟಿವ್‌ ಪಾತ್ರಗಳಿಗೆ ಖದರ್‌ ತಂದಿದ್ದರು. ಅವರು ರಾಜಕೀಯಕ್ಕೆ ಇಳಿದ ಮೇಲೆ ಇದೀಗ ಜಗಪತಿಬಾಬು ಅಂಥ ಅವಕಾಶಗಳನ್ನು ದನಿಯಿಂದ ಆಕ್ರಮಿಸಿಕೊಳ್ಳುತ್ತಿದ್ದಾರೆ

ಓದು, ರಂಗಭೂಮಿ ಸಖ್ಯ, ಪ್ರತಿಭಾವಂತ ನಿರ್ದೇಶಕರ ಪ್ರೋತ್ಸಾಹದಲ್ಲಿ ಬೆಳೆದ ಪ್ರಕಾಶ್‌ ರೈ ಎಲ್ಲ ರೀತಿಯ ಪಾತ್ರಗಳನ್ನು ನಿರ್ವಹಿಸಿ ಕಡೆಗೆ ಮಿಂಚಲಾರಂಭಿಸಿದ್ದು ಖಳನಟನಾಗಿ. ವಿಶಿಷ್ಟ ದನಿ, ನೋಟ, ಆಂಗಿಕ ಅಭಿನಯದ ಮೂಲಕ ವಿಶಿಷ್ಟ ಛಾಪು ಒತ್ತಿ, ಜನಪ್ರಿಯರಾದರು. ಕನ್ನಡದ ನಟ, ತಮಿಳು, ತೆಲುಗು ಚಿತ್ರರಂಗದಲ್ಲಿ ಮಿಂಚಲಾರಂಭಿಸಿದರು. ಹಿಂದಿಗೂ ಅದು ವ್ಯಾಪಿಸಿತು. ಖಳನಟರಾಗಿ ಸಾರ್ವಜನಿಕ ಬದುಕು ಅನುಭವಿಸುತ್ತಿದ್ದವರು, ರಾಜಕೀಯದ ಮೂಲಕ ನಾಯಕರಾಗಲು ಇನ್ನೊಂದು ಮಗ್ಗುಲಿಗೆ ಹೊರಳಿದ್ದಾರೆ.

ಇನ್ನೊಂದೆಡೆ, ರಾಮ್‌ಗೋಪಾಲ್‌ ನಿರ್ದೇಶನದ ‘ಗಾಯಂ’ ಚಿತ್ರದ ಮೂಲಕ ಬ್ರೇಕ್‌ ಪಡೆದು, ‘ಶುಭ ಲಗ್ನಂ’ ಚಿತ್ರದ ಮೂಲಕ ಸೂಪರ್‌ಹಿಟ್‌ ಯಶಸ್ಸು ಪಡೆದ ಬಾಬು, ತೊಂಬತ್ತರ ದಶಕದಲ್ಲಿ ಬೇಡಿಕೆಯ ಹೀರೋ. ೨೦೦೦ನೇ ಇಸವಿ ದಾಟುವ ಹೊತ್ತಿಗೆ ಯುವನಟರ ನಡುವೆ ವರ್ಚಸ್ಸು ಕಡಿಮೆ ಆಯಿತು. ಆದರೆ, ಈಗ ಮತ್ತೆ ಪರದೆ ಮೇಲೆ ರಾರಾಜಿಸಲಾರಂಭಿಸಿದ್ದಾರೆ.

ಪ್ರಕಾಶ್‌ ರೈ ಅವರ ಹೊರಳುದಾರಿಯಿಂದಾಗಿ ಖಾಲಿ ಎನಿಸಲಾರಂಭಿಸಿದ್ದ ಬೆಳ್ಳಿಪರದೆಯನ್ನು ಈಗ ತೆಲುಗಿನ ಹಿರಿಯ ನಟ ಜಗಪತಿ ಬಾಬು ಆಕ್ರಮಿಸಿಕೊಳ್ಳಲು ಆರಂಭಿಸಿದ್ದಾರೆ. ಎರಡೂವರೆ ದಶಕಗಳ ಅವಧಿಯಲ್ಲಿ ೧೨೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಬಾಬು, ಸದ್ಯ ಬೇಡಿಕೆಯ ಖಳನಟನಾಗಿ ಮಿಂಚಲು ಆರಂಭಿಸಿದ್ದಾರೆ.

ಕಟ್ಟುಮಸ್ತಾದ ದೇಹ, ಚೂಪು ನೋಟ ಖಳಪಾತ್ರಗಳಿಗೆ ಬೇಕಾದ ಅಗತ್ಯಗಳನ್ನು ಪೂರೈಸುತ್ತವೆ. ಜೊತೆಗೆ ತೆಲುಗಿನ ಪ್ರೇಕ್ಷಕರಿಗೆ ಬೇರೆ ನೆಲದ ಕಲಾವಿದರಿಗಿಂತ ತಮ್ಮ ನೆಲೆದ ಕಲಾವಿದರ ಮೇಲೆ ಸಹಜ ಪ್ರೀತಿ. ಹಾಗಾಗಿ, ಪ್ರಯೋಗಕ್ಕೆ ಒಡ್ಡಿಕೊಂಡ ಬಾಬು ಅವರನ್ನು ಅಲ್ಲಿನ ಪ್ರೇಕ್ಷಕರು ಕೊಂಡಾಡುತ್ತಿದ್ದಾರೆ.

ಕನ್ನಡದ ‘ಬಚ್ಚನ್‌’, ‘ಜಾಗ್ವರ್‌’ ಚಿತ್ರಗಳಲ್ಲಿ ಕೂಡ ಬಾಬು ಖಡಕ್‌ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಆದರೆ, ನೆಗೆಟಿವ್‌ ಪಾತ್ರಗಳಲ್ಲಿ ಅಭಿನಯಿಸಲು ಆರಂಭಿಸಿದ ಮೇಲೆ ಜಗಪತಿ ಬಾಬು ಅವರ ಜನಪ್ರಿಯತೆ ಸಾಕಷ್ಟು ಹೆಚ್ಚಾಗಿದೆ.

ಇತ್ತೀಚೆಗೆ ವಿಜಯ್‌ ಅವರ ೬೦ನೇ ಚಿತ್ರ, ವಿಶಾಲ್‌ ಅವರ ಹೊಸ ಚಿತ್ರವನ್ನು ಒಪ್ಪಿಕೊಂಡ ಮೇಲೆ ರೆಡಿಫ್‌.ಕಾಂಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತ, " ಹೀರೋ ಆಗುವುದು ಸುಲಭವಲ್ಲ. ಮರ ಸುತ್ತಬೇಕು, ಎಲ್ಲ ರೀತಿಯ ಕಷ್ಟಗಳನ್ನು ಎದುರಿಸಬೇಕು, ಅಸಹಜವಾದದ್ದನ್ನೇ ಮಾಡಬೇಕು. ಈಗ ಅವುಗಳಿಂದ ನಾನು ಮುಕ್ತ. ಆದರೆ, ವಿಲನ್‌ ಆಗಿ ಒದೆಸಿಕೊಳ್ಳುತ್ತೇನೆ, ಹೆಚ್ಚೆಂದರೆ ಸಾಯುತ್ತೇನೆ. ನನಗೆ ಅದು ಓಕೆ. ನನ್ನ ಪಾತ್ರವನ್ನು ಕಟ್ಟುವ ತಲೆನೋವು ನಿರ್ದೇಶಕರದ್ದು. ನನ್ನ ಜವಾಬ್ದಾರಿ ಸೊನ್ನೆ. ಚಿತ್ರ ಗಳಿಕೆ, ಯಶಸ್ಸಿನ ಭಾರವೆಲ್ಲ ಹೀರೋ ಹೆಗಲ ಮೇಲಿರುತ್ತದೆ. ನನಗೆ ಸ್ವಾತಂತ್ರ್ಯ ಸಿಗುವ ಜೊತೆಗೆ, ಯಾವುದೇ ಜವಾಬ್ದಾರಿಗಳಿಲ್ಲದೆ ಹೆಚ್ಚಿನ ಕೆಲಸ ಮಾಡುವ ಅವಕಾಶವಿರುತ್ತದೆ,'' ಎಂದಿದ್ದರು.

ಜಗಪತಿ ಈಗ ಹೀರೋ ಆಗಿ ಗಳಿಸಿದ ಜನಪ್ರಿಯತೆಗಿಂತ ಹೆಚ್ಚಿನ ಜನಪ್ರಿಯತೆಯನ್ನು, ಹಣವನ್ನು ಸಂಪಾದಿಸುತ್ತಿರುವ ನಟರಾಗಿದ್ದಾರೆ. ಹೀರೋ ಆಗಿ ೭೦-೮೦ ದಿನ ನಟಿಸುವ ಬದಲು ಖಳನಟನಾಗಿ ೨೦-೩೦ ದಿನಗಳಲ್ಲಿ ನನ್ನ ಜವಾಬ್ದಾರಿ ಮುಗಿಯುತ್ತದೆ ಎಂದು ನಿರಾಳವಾಗಿ ಹೇಳಿಕೊಳ್ಳುತ್ತಾರೆ. ಜೊತೆಗೆ ಪಾತ್ರ ವೈವಿಧ್ಯವೂ ಸಿಗುತ್ತದೆ ಎಂಬುದು ಅವರ ಲೆಕ್ಕಾಚಾರ.

ಪ್ರಕಾಶ್‌ ರೈ ಕೂಡ ಸುಮ್ಮನೆ ಏನೂ ಕುಳಿತಿಲ್ಲ. ಈ ವರ್ಷ ಅವರು ಒಪ್ಪಿಕೊಂಡಿರುವ ಒಟ್ಟು ಚಿತ್ರಗಳು ೨೦. ಅದರಲ್ಲಿ ಎಂಟು ಚಿತ್ರಗಳು ತೆರೆ ಕಂಡಿವೆ. ಈ ಸಂಖ್ಯೆಯ ಎದುರು ಜಗಪತಿ ಅವರ ಸಂಖ್ಯೆ ಚಿಕ್ಕದು; ಆದರೆ, ಅವು ಸೃಷ್ಟಿಸಿರುವ ಹವಾ ದೊಡ್ಡದು. ಬಾಲಕೃಷ್ಣ ನಟಿಸಿದ ‘ಲೆಜೆಂಡ್‌’ ಚಿತ್ರದಲ್ಲಿ ನೆಗೆಟಿವ್‌ ಪಾತ್ರದಲ್ಲಿ ಕಾಣಿಸಿಕೊಂಡ ಬಾಬು ಯಶಸ್ಸು ಕಂಡರು. ಹೀರೋ ಆಗಿ ಸೋಲಿನ ಸುಳಿಗೆ ಜಾರುತ್ತಲೇ ಇದ್ದ ಬಾಬುಗೆ ಇದು ಮರುಜೀವ ಕೊಟ್ಟಿತು. ನಂತರ ಬಂದ ‘ಶ್ರೀಮಂತುಡು’, ‘ನಾನಕ್ಕೊ ಪ್ರೇಮತೊ’ ಜಗಪತಿ ಬಾಬು ಅವರ ಹೊಸ ಅವತಾರವನ್ನು ಗಟ್ಟಿ ಮಾಡಿದವು. ‘ಪುಲಿ ಮುರುಗನ್‌’, ‘ಭೈರವ’, ‘ರಂಗಸ್ಥಳಂ’, ‘ನೆಲ ಟಿಕೆಟ್‌’, ‘ಇಸಂ’ ಚಿತ್ರಗಳು ಜಗಪತಿ ಬಾಬು ಅವರನ್ನು ಮಿಂಚುವಂತೆ ಮಾಡಿವೆ.

ಇದು ಒಂದೆಡೆಯಾದರೆ, ಹಲವು ಪ್ರಯೋಗಗಳಿಗೆ ಒಡ್ಡಿಕೊಂಡಿರುವ ಜಗಪತಿ ಬಾಬು ಅಮೆಜಾನ್‌ಗಾಗಿ ನಿರ್ಮಿಸಿದ ‘ಗ್ಯಾಂಗ್‌ಸ್ಟರ್ಸ್‌’ ಹೆಸರಿನ ಥ್ರಿಲ್ಲರ್‌ ವೆಬ್‌ಸರಣಿಯಲ್ಲಿ ಗ್ಯಾಂಗ್‌ಸ್ಟರ್‌ ಆಗಿ ನಟಿಸಿದ್ದರು. ಇನ್ನೊಂದೆಡೆ, ತೆಲುಗಿನ ವಾಹಿನಿಯೊಂದರಲ್ಲಿ 'ಸಮುದ್ರಂ' ಹೆಸರಿನಲ್ಲಿ ಅವರದ್ದೇ ಆತ್ಮಕಥನ ಧಾರಾವಾಹಿಯಾಗಿ ಪ್ರಸಾರ ಕಂಡಿದೆ.

ದಕ್ಷಿಣ ಭಾರತ ಚಿತ್ರರಂಗಗಳಲ್ಲಿ ಈ ರೀತಿಯ ಮರುಹುಟ್ಟು ಪಡೆದ ನಟರ ಸಂಖ್ಯೆ ಹೆಚ್ಚುತ್ತಲೇ ಇದೆ. ಕನ್ನಡದಲ್ಲಿ ರವಿಚಂದ್ರನ್‌, ತಮಿಳಿನಲ್ಲಿ ಅರವಿಂದ ಸ್ವಾಮಿ ಕೂಡ ಹೀಗೆ ಮತ್ತೆ ಚಾಲ್ತಿಗೆ ಬಂದು ಹೊಸ ಪ್ರಯೋಗಗಳಿಗೆ ಕಾರಣವಾದವರು. ಈಗ ಈ ಪಟ್ಟಿಗೆ ಹೊಸ ಹೆಸರು ನಿಸ್ಸಂಶಯವಾಗಿ ಜಗಪತಿ ಬಾಬು.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More