‘ಬಾಲಚಂದರ್ ಕೊಟ್ಟ ಅವಕಾಶವನ್ನು ನಾನು ಸರಿಯಾಗಿ ಬಳಕೆ ಮಾಡಿಕೊಳ್ಳಲಿಲ್ಲ!’

ಭಾರತದ ಖ್ಯಾತ ನಿರ್ದೇಶಕ ಕೆ ಬಾಲಚಂದರ್‌ ಅವರ ಜನ್ಮದಿನವಿಂದು (ಜು.9). ಬಾಲಚಂದರ್‌ ಅವರ ‘ತಪ್ಪಿದ ತಾಳ’ ಸಿನಿಮಾಗೆ ತಾವು ಆಯ್ಕೆಯಾದ ಸಂದರ್ಭವನ್ನು ಕನ್ನಡದ ನಟ ಸುಂದರ್‌ ರಾಜ್‌ ಇಲ್ಲಿ ಸ್ಮರಿಸಿಕೊಂಡಿದ್ದಾರೆ. ನಿರ್ದೇಶಕ ಬಾಲಚಂದರ್‌ ಕನ್ನಡ ಸಿನಿಮಾಗಳ ವಿಡಿಯೋ ಹಾಡುಗಳು ಇಲ್ಲಿವೆ

ನಿರ್ದೇಶಕ ಕೆ ಬಾಲಚಂದರ್ ಅವರ ಸಿನಿಮಾದಲ್ಲಿ ನಾನು ಅವಕಾಶ ಪಡೆದದ್ದೇ ಒಂದು ಸಿನಿಮಾ ಕತೆಯಂತಿದೆ. 1976-77ರಲ್ಲಿ ‘ಬೆನಕ’ ರಂಗತಂಡದ ನಾವು ಚೆನ್ನೈನಲ್ಲಿ ‘ಹಯವದನ’ ಮತ್ತು ‘ಜೋಕುಮಾರಸ್ವಾಮಿ’ ನಾಟಕ ಮಾಡಿದ್ದೆವು. ನಿರ್ದೇಶಕ ಕೆ ಬಾಲಚಂದರ್‌ ಅವರ ಸಹಾಯಕ ಅನಂತು ಅಲ್ಲಿ ಈ ನಾಟಕಗಳನ್ನು ನೋಡಿದ್ದರು. ಆಗ ‘ತಪ್ಪಿದ ತಾಳ’ ಕನ್ನಡ ಸಿನಿಮಾಗೆ ತಯಾರಿ ನಡೆಸುತ್ತಿದ್ದ ಬಾಲಚಂದರ್‌, ನಟ-ನಟಿಯರಿಗೆ ಹುಡುಕಾಟ ನಡೆಸಿದ್ದರು. ನಾಟಕಗಳಲ್ಲಿ ನನ್ನನ್ನು ನೋಡಿದ್ದ ಅನಂತು, ನನ್ನ ಬಗ್ಗೆ ಬಾಲಚಂದರ್ ಅವರಲ್ಲಿ ಹೇಳಿದ್ದರು. ಆ ವೇಳೆಗೆ ನನ್ನ ‘ತಬ್ಬಲಿಯು ನೀನಾದೆ ಮಗನೆ’ ಸಿನಿಮಾ ತೆರೆಕಂಡಿತ್ತು. ಈ ಚಿತ್ರದ ನಿರ್ಮಾಪಕ ಚಂದೂಲಾಲ್ ಜೈನ್ ಅವರಲ್ಲಿಯೂ ನನ್ನ ಕುರಿತಾಗಿ ಬಾಲಚಂದರ್ ವಿಚಾರಿಸಿದ್ದರು.

ಅದೊಂದು ದಿನ ಬಾಲಚಂದರ್‌ ಮತ್ತು ಅನಂತು ಬೆಂಗಳೂರಿಗೆ ಬಂದರು. ನನ್ನನ್ನು ಸಂಪರ್ಕ ಮಾಡಲು ಆಗ ಫೋನ್‌ ಇರಲಿಲ್ಲ. ಎರಡು ದಿನ ಅನಂತು ಅವರು ರವೀಂದ್ರ ಕಲಾಕ್ಷೇತ್ರ ಹಾಗೂ ಮತ್ತೆ ಕೆಲವೆಡೆ ನನ್ನ ಬಗ್ಗೆ ವಿಚಾರಿಸಿದ್ದರು. ಆ ದಿನಗಳಲ್ಲಿ ವಿವಿ ಪುರಂನ ಎನ್‌ಎಂಎಚ್‌ ಹೋಟೆಲ್‌ ನಮ್ಮ ಅಡ್ಡಾ ಆಗಿತ್ತು. ಕೊನೆಯ ಪ್ರಯತ್ನ ಎನ್ನುವಂತೆ ಅನಂತು ಎನ್‌ಎಂಎಚ್‌ ಕೌಂಟರ್‌ನಲ್ಲಿ ನನಗೊಂದು ಚೀಟಿ ಕೊಟ್ಟು ಹೋಗಿದ್ದರು. ಅದೃಷ್ಟಕ್ಕೆ ನನಗೆ ಈ ಮೆಸೇಜ್‌ ಸಿಕ್ಕಿತು. ಬಾಲಚಂದರ್‌ ಸಿನಿಮಾದ ಅವಕಾಶದ ಕನಸು ಕಾಣುತ್ತ, ಅವರು ಉಳಿದುಕೊಂಡಿದ್ದ ವುಡ್‌ಲ್ಯಾಂಡ್ಸ್ ಹೋಟೆಲ್‌ಗೆ ಹೋದೆ. ದಾಡಿ, ಹವಾಯ್‌ ಚಪ್ಪಲಿ, ಕೊಳವೆ ಪ್ಯಾಂಟ್‌, ಚಕ್ಸ್ ಷರ್ಟ್‌ನಲ್ಲಿದ್ದ ನಾನು ಹೋಟೆಲ್‌ನ ಎರಡನೇ ಫ್ಲೋರ್‌ನ ರೂಂನಲ್ಲಿದ್ದ ಕೋಣೆಯ ಬಗಿಲು ಬಡಿದೆ. ನನ್ನ ನೋಡುತ್ತಲೇ ಅವರು, "ಕಮ್ ಇನ್‌,” ಎಂದು ಒಳಗೆ ಕರೆದರು. ನಾನು ಅವರನ್ನೇ ಭಕ್ತಿಯಿಂದ ನೋಡುತ್ತ ಸುಮ್ಮನೆ ಕುಳಿತಿದ್ದೆ. ಅವರು ಕೈಲಿ ಸಿಗರೇಟು ಹಿಡಿದು ಇಂಗ್ಲಿಷ್‌ನಲ್ಲಿ ಮಾತನಾಡುತ್ತ ಅಂತಿದಿತ್ತ ಓಡಾಡುತ್ತಿದ್ದರು. ಮೊದಲು ಅವರೊಂದಿಗೆ ಇಂಗ್ಲಿಷ್‌ನಲ್ಲಿ ಮಾತನಾಡಿದ ನಾನು, ಕೆಲವು ನಿಮಿಷಗಳ ನಂತರ “ಎನಕ್ಕು ತಮಿಳು ವರುಮ್ ಸರ್‌,” ಎಂದೆ. ಅವರು ‘ತಪ್ಪಿದ ತಾಳ’ ಕನ್ನಡ ಮತ್ತು ತಮಿಳು (ತಪ್ಪು ತಾಳಂಗಳ್‌) ಅವತರಣಿಗಳ ಖಳಪಾತ್ರಕ್ಕೆ ನನ್ನನ್ನು ಆಯ್ಕೆ ಮಾಡಿದರು.

ಇದನ್ನೂ ಓದಿ : ಜನುಮದಿನ | ಇಮೇಜಿನ ಹಂಗಿಗೆ ಸಿಲುಕದ ಸ್ಟಾರ್‌ ಹೀರೋ ಸಂಜೀವ್‌ ಕುಮಾರ್

ಸಿನಿಮಾಗೆ ಆಯ್ಕೆ ಮಾಡಿದ ಬಾಲಚಂದರ್‌ ಅಡ್ವಾನ್ಸ್ ಸಂಭಾವನೆ ಎಂದು ಏಳು ಸಾವಿರದ ಚೆಕ್ ಕೊಟ್ಟರು. ನಾನೆಂದೂ ಅಷ್ಟೊಂದು ದೊಡ್ಡ ಮೊತ್ತದ ಸಂಭಾವನೆ ಕಂಡಿರಲೇ ಇಲ್ಲ. ಆ ವೇಳೆಗೆ ನನಗೆ ಸಿನಿಮಾಗಳಿಂದ ಸಿಗುತ್ತಿದ್ದುದು ಸಾವಿರದೊಳಗಿನ ಸಂಭಾವನೆಯಷ್ಟೆ. ‘ತಪ್ಪಿದ ತಾಳ’ ಚಿತ್ರಕ್ಕೆ ಬೆಂಗಳೂರಿನಲ್ಲೇ ಸಂಪೂರ್ಣ ಚಿತ್ರೀಕರಣ ನಡೆಯಿತು. ಚಾಮುಂಡೇಶ್ವರಿ ಸ್ಟುಡಿಯೋ, ಜ್ಞಾನಗಂಗೋತ್ರಿ, ಬನ್ನೇರುಘಟ್ಟ ಹಾಗೂ ಕೆಲವು ರಸ್ತೆಗಳಲ್ಲಿ ಚಿತ್ರಿಸಿದರು. ಬಿಡುಗಡೆಯಾದ ಸಿನಿಮಾ ಇಲ್ಲಿ ಮತ್ತು ತಮಿಳಿನಲ್ಲೂ ದೊಡ್ಡ ಯಶಸ್ಸು ಕಂಡಿತು. ತಮಿಳು ಅವತರಣಿಕೆ ಶತದಿನೋತ್ಸವ ಆಚರಿಸಿಕೊಂಡಿತು. ಆಗ ತಮಿಳುನಾಡಿನಲ್ಲಿ ಕಮಲ್ ಹಾಸನ್ ಮತ್ತು ರಜನೀಕಾಂತ್‌ ಬಹುದೊಡ್ಡ ಸ್ಟಾರ್ಸ್‌. ರಜನೀ ಎದುರು ನಟಿಸಿದ ನನಗೆ ತುಂಬಾ ಮೆಚ್ಚುಗೆ ವ್ಯಕ್ತವಾಯ್ತು. ಈ ಚಿತ್ರದ ನಂತರ ನನಗೆ ತಮಿಳು ಹಾಗೂ ಮಲಯಾಳಂ ಸಿನಿಮಾಗಳಿಗೆ ಕರೆ ಬಂತು. ಆದರೆ, ನಾನು ನಾಟಕಗಳೆಂದು ಸಂಚಾರದಲ್ಲಿದ್ದೆ. ಬಾಲಚಂದರ್‌ ಅವರ ‘ತಪ್ಪು ತಾಳಂಗಳ್‌’ ಚಿತ್ರದ ಗೆಲುವನ್ನು ನಾನು ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲ. ಇದಾಗಿ ವರ್ಷದ ನಂತರ ಜೆ ಮಹೇಂದ್ರನ್‌ ನಿರ್ದೇಶನದ ‘ಉದಿರಿಪೂಕ್ಕಲ್‌’ ಚಿತ್ರದಲ್ಲಿ ನಟಿಸಿದೆ. ಇದು ಇಪ್ಪತ್ತೈದು ವಾರಗಳ ಕಾಲ ಪ್ರದರ್ಶನಗೊಂಡಿತ್ತು.

ಮತ್ತೆ ಕೆ ಬಾಲಚಂದರ್ ಅವರ ನಿರ್ದೇಶನದಲ್ಲಿ ನಾನು ನಟಿಸಿದ್ದು ‘ಬೆಂಕಿಯಲ್ಲಿ ಅರಳಿದ ಹೂವು’ನಲ್ಲಿ. ಈ ಚಿತ್ರದ ಪೂರ್ತಿ ಕಾಸ್ಟಿಂಗ್‌ ಜವಾಬ್ದಾರಿಯನ್ನು ಅವರು ನನಗೆ ವಹಿಸಿದ್ದರು. ಚಿತ್ರದಲ್ಲಿ ನಾನು ಸುಹಾಸಿನಿ ಅಣ್ಣನ ಪಾತ್ರದಲ್ಲಿ ನಟಿಸಬೇಕಿತ್ತು. ಆಗ ನಾನು ನಾಟಕಕ್ಕಾಗಿ ಕೊಲ್ಕೊತಾಗೆ ಹೋಗಬೇಕಿತ್ತು. ಕೊನೆಗೆ, ದೊಡ್ಡ ಪಾತ್ರದಲ್ಲಿ ನಟಿಸಲು ಸಾಧ್ಯವಾಗದೆ ಖಳಪಾತ್ರವೊಂದರಲ್ಲಿ ನಟಿಸಬೇಕಾಯ್ತು. “ಏನಪ್ಪಾ ನೀನು, ಯಾವಾಗಲೂ ಹೀಗೆ ಮಾಡುತ್ತೀಯ! ಒಳ್ಳೆಯ ಅವಕಾಶ ಬಿಟ್ಟುಕೊಡುತ್ತೀಯ!” ಎನ್ನುತ್ತಿದ್ದ ಅವರಿಗೆ ನನ್ನ ಮೇಲಿನ ಪ್ರೀತಿಗೆ ಕಾರಣವೂ ರಂಗಭೂಮಿಯೇ. ಅವರು ಕೂಡ ರಂಗಭೂಮಿ ಹಿನ್ನೆಲೆಯವರೇ ಆಗಿದ್ದವರಾದ್ದರಿಂದ ನನ್ನ ಮೇಲೆ ಪ್ರೀತಿ ಇತ್ತು. ‘ಸಂಸ್ಕಾರ’, ‘ಚೋಮನ ದುಡಿ’, ‘ಘಟಶ್ರಾದ್ಧ’ ಸಿನಿಮಾಗಳ ನಂತರ ತಮಿಳು ನಿರ್ದೇಶಕರು ಕನ್ನಡ ಚಿತ್ರರಂಗದ ಕಡೆ ಹೆಮ್ಮೆಯಿಂದ ನೋಡುತ್ತಿದ್ದರು. ಬಾಲಚಂದರ್‌ ಅವರಿಗೆ ಕನ್ನಡದ ನಟರು, ಕನ್ನಡ ಭಾಷೆಯ ಬಗ್ಗೆ ಪ್ರೀತಿ ಇತ್ತು. ಕನ್ನಡದವರು ನ್ಯಾಚುರಲ್‌ ಆಕ್ಟರ್ಸ್‌ ಎನ್ನುವುದು ಅವರ ಅಭಿಪ್ರಾಯವಾಗಿತ್ತು. “ತಮಿಳು ನಟರಂತೆ ಕನ್ನಡದವರು (ತಾಯ್‌ ನಾಗೇಶ್‌, ರಜನೀಕಾಂತ್‌, ಸುಂದರ್‌ ರಾಜ್‌, ಜೈಜಗದೀಶ್‌, ರಾಮಕೃಷ್ಣ, ಮುರಳಿ) ಸ್ಟಿಫ್ ಆಗಿರಲ್ಲ, ಫ್ಲೆಕ್ಸಿಬಲ್‌,” ಎನ್ನುತ್ತಿದ್ದರು.

ಅವರ ನಿರ್ದೇಶನದಲ್ಲಿ ನನಗೆ ಹೆಚ್ಚು ಸಿನಿಮಾಗಳಲ್ಲಿ ನಟಿಸಲು ಸಾಧ್ಯವಾಗಲಿಲ್ಲ. ಇದು ನಾನಾಗಿಯೇ ಮಾಡಿಕೊಂಡ ತಪ್ಪು ಎಂದು ನನಗನಿಸುತ್ತದೆ. ಇನ್ನು, ಅವರ ಸಿನಿಮಾಗಳು ದಕ್ಷಿಣ ಭಾರತದಲ್ಲಿ ಮಾತ್ರವಲ್ಲ ಹಿಂದಿ ಚಿತ್ರರಂಗದವರನ್ನೂ ಆಕರ್ಷಿಸುತ್ತಿದ್ದವು. ಮಧ್ಯಮ ವರ್ಗದ ಜನರ ಬದುಕನ್ನು ಚಿತ್ರಿಸುತ್ತಿದ್ದ ಅವರು, ಸಾಮಾಜಿಕ ಕಳಕಳಿಯ ವಸ್ತುಗಳಿಗೆ ಪ್ರಾಮುಖ್ಯತೆ ಕೊಡುತ್ತಿದ್ದರು. ಅವರ ‘ತಪ್ಪಿದ ತಾಳ’ ಈ ಹೊತ್ತಿಗೂ ಪ್ರಸ್ತುತವಾಗುತ್ತದೆ. ಅವರು ಪರಿಚಯಿಸಿದ ಹಲವಾರು ನಟ-ನಟಿಯರು ಇಂದು ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ‘ನಿರ್ದೇಶಕರ ನಿರ್ದೇಶಕ’ ಎಂದು ಕರೆಸಿಕೊಂಡವರು ಕೆ ಬಾಲಚಂದರ್‌.

ಕೆ ಬಾಲಚಂದರ್‌ ನಿರ್ದೇಶನದ ಕನ್ನಡ ಸಿನಿಮಾ ಹಾಡುಗಳ ವಿಡಿಯೋ

ತಪ್ಪಿದ ತಾಳ (1978)

ಬೆಂಕಿಯಲ್ಲಿ ಅರಳಿದ ಹೂವು (1983)

ಎರಡು ರೇಖೆಗಳು (1984)

ಮುಗಿಲ ಮಲ್ಲಿಗೆ (1985)

ಸುಂದರ ಸ್ವಪ್ನಗಳು (1986)

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More