ಬಾಲ್ಯಕಾಲದಲ್ಲಿ ಮಿಂಚಿದ್ದ ಬೇಬಿ ಶಾಮಿಲಿಗೆ ನಾಯಕಿಯಾಗಿ ಬೇಕಾಗಿದೆ ಗೆಲುವು

ತೊಂಬತ್ತರ ದಶಕದಲ್ಲಿ ದಕ್ಷಿಣ ಭಾರತ ಚಿತ್ರರಂಗದ ಜನಪ್ರಿಯ ಬಾಲನಟಿ ಬೇಬಿ ಶಾಮಿಲಿ. ಮಣಿರತ್ನಂ ನಿರ್ದೇಶನದ ‘ಅಂಜಲಿ’ ತಮಿಳು ಸಿನಿಮಾದ ಉತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಾಕೆ. ಇಂದು 31ನೇ ವರ್ಷಕ್ಕೆ ಕಾಲಿಟ್ಟಿರುವ ಶಾಮಿಲಿ, ನಾಯಕನಟಿಯಾಗಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ

“ಆಗ ನಾನು ಏನು ಮಾಡುತ್ತಿದ್ದೇನೆ ಎಂಬುದನ್ನು ತಿಳಿಯಲಾರದಷ್ಟು ಚಿಕ್ಕವಳಾಗಿದ್ದೆ. ಹಲವಾರು ಬಾರಿ ಸೆಟ್‌ನಲ್ಲಿ ಬೋರಾಗುತ್ತಿತ್ತು. ನನಗೆ ಇತರ ಮಕ್ಕಳೊಂದಿಗೆ ಆಟವಾಡಲು ಇಷ್ಟವಾಗುತ್ತಿತ್ತು. ಆದರೆ, ಸಾಧ್ಯವಾಗುತ್ತಿರಲಿಲ್ಲ,” ಎಂದು ನಟಿ ಶಾಮಿಲಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಬಾಲನಟಿಯಾಗಿ ಬಹುಬೇಡಿಕೆಯಲ್ಲಿದ್ದ ಶಾಮಿಲಿ ಹಾಗೆ ಹೇಳಿಕೊಂಡಿರುವುದರಲ್ಲಿ ಅತಿಶಯೋಕ್ತಿಯೇನೂ ಇಲ್ಲ.

1989ರಿಂದ 1998ರವರೆಗೆ ದಕ್ಷಿಣ ಭಾರತದ ನಾಲ್ಕು ಭಾಷೆಗಳ ಅರವತ್ತು ಸಿನಿಮಾಗಳಲ್ಲಿ ಶಾಮಿಲಿ ನಟಿಸಿದ್ದಾರೆ. ‘ರಾಜನಾಡೈ’ (1989) ತಮಿಳು ಚಿತ್ರದೊಂದಿಗೆ ಸಿನಿಮಾ ಪ್ರವೇಶಿಸಿದ ಆಕೆಗೆ, ಮಣಿರತ್ನಂ ನಿರ್ದೇಶನದ ‘ಅಂಜಲಿ’ (1990) ತಮಿಳು ಸಿನಿಮಾ ಅತ್ಯುತ್ತಮ ಬಾಲನಟಿ ರಾಷ್ಟ್ರಪ್ರಶಸ್ತಿ ತಂದುಕೊಟ್ಟಿತು. ಈ ಚಿತ್ರದಲ್ಲಿ ಕಾಣಿಸಿಕೊಂಡಾಗ ಆಕೆಗೆ ಮೂರು ವರ್ಷ. 'ಅಂಜಲಿ’ ಚಿತ್ರಕ್ಕೆ ತಮಿಳುನಾಡು ರಾಜ್ಯ ಪ್ರಶಸ್ತಿಯನ್ನೂ ಪಡೆದ ಶಾಮಿಲಿ, ಇದೇ ವರ್ಷ ‘ಮಲೂಟ್ಟಿ’ ಮಲಯಾಳಂ ಚಿತ್ರದ ಅಭಿನಯಕ್ಕಾಗಿ ಕೇರಳ ರಾಜ್ಯ ಪ್ರಶಸ್ತಿ ಪಡೆದರು. 1990ರಲ್ಲಿ ‘ಮತ್ತೆ ಹಾಡಿತು ಕೋಗಿಲೆ’ ಚಿತ್ರದೊಂದಿಗೆ ಕನ್ನಡ ಚಿತ್ರರಂಗಕ್ಕೆ ಬಂದ ಹುಡುಗಿ, ಈ ಚಿತ್ರದ ಉತ್ತಮ ನಟನೆಗೆ ಅತ್ಯುತ್ತಮ ಬಾಲನಟಿ ರಾಜ್ಯ ಪ್ರಶಸ್ತಿ ಪಡೆದರು. ಮುಂದೆ ಶಾಮಿಲಿಗಾಗಿಯೇ ಹಲವರು ಚಿತ್ರಕತೆ ಹೆಣೆಯತೊಡಗಿದರು. ‘ಭೈರವಿ’, ‘ಶ್ವೇತಾಗ್ನಿ’, ‘ಪೊಲೀಸ್ ಲಾಕಪ್‌’, ‘ಕಾದಂಬರಿ’, ‘ಶಾಂಭವಿ’, ‘ದಾಕ್ಷಾಯಣಿ’, ‘ಮಕ್ಕಳ ಸಾಕ್ಷಿ’, ‘ಹೂವು ಹಣ್ಣು’, ‘ಚಿನ್ನಾ ನೀ ನಗುತಿರು’, ‘ಕರುಳಿನ ಕುಡಿ’, ‘ಜಗದೀಶ್ವರಿ’ ಶಾಮಿಲಿ ನಟನೆಯ ಕನ್ನಡ ಸಿನಿಮಾಗಳು.

‘ಶಾಂಭವಿ’ ಕನ್ನಡ ಸಿನಿಮಾದಲ್ಲಿ ಬೇಬಿ ಶಾಮಿಲಿ

“ಜನರು ಈಗಲೂ ನನ್ನನ್ನು ‘ಅಂಜಲಿ’ ಸಿನಿಮಾ ಮೂಲಕ ಗುರುತಿಸುತ್ತಾರೆ. ಇಷ್ಟು ವರ್ಷಗಳಾದ ಮೇಲೂ ಜನರು ನನ್ನ ಅಂಜಲಿ ಪಾತ್ರ ಮರೆತಿಲ್ಲ,” ಎನ್ನುವ ಶಾಮಿಲಿಗೆ, ‘ಅಂಜಲಿ’ ಸಿನಿಮಾ ಬಗ್ಗೆ ವಿಶೇಷ ವ್ಯಾಮೋಹ. ಮಣಿರತ್ನಂ ನಿರ್ದೇಶನದ ಚಿತ್ರದಲ್ಲಿ ಆಕೆ ಬುದ್ಧಿಮಾಂದ್ಯ ಮಗುವಿನ ಪಾತ್ರದಲ್ಲಿ ನಟಿಸಿದ್ದರು. ‘ಕಂಡುಕೊಂಡೇನ್‌ ಕಂಡುಕೊಂಡೇನ್‌’ (ತಮಿಳು) ಬಾಲನಟಿಯಾಗಿ ಅವರು ನಟಿಸಿದ ಕೊನೆಯ ಸಿನಿಮಾ. ಆನಂತರ ವಿದ್ಯಾಭ್ಯಾಸದಲ್ಲಿ ಗಂಭೀರವಾಗಿ ತೊಡಗಿಸಿಕೊಂಡರು. ಹೈಸ್ಕೂಲ್‌ ಹೊತ್ತಿಗೇ ಅವರಿಗೆ ನಾಯಕಿಯಾಗಲು ಕರೆ ಬಂದಿತ್ತು. ಇದಕ್ಕೆ ಕಾರಣ ಆಕೆಯ ತಾರಾಸಹೋದರಿ ಶಾಲಿನಿ. ಆ ವೇಳೆಗಾಗಲೇ ಶಾಲಿನಿ ನಟಿಯಾಗಿ ತಮಿಳು ಚಿತ್ರರಂಗದಲ್ಲಿ ಜನಪ್ರಿಯರಾಗಿದ್ದರು. “9ನೇ ತರಗತಿಯಲ್ಲಿದ್ದಾಗಲೇ ನನಗೆ ನಟನೆಯ ಅವಕಾಶಗಳು ಬಂದವು. ಆದರೆ, ಆ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳು ನಟನೆ ಮತ್ತು ಮಾಡೆಲಿಂಗ್‌ನಲ್ಲಿ ತೊಡಗಿಸಿಕೊಳ್ಳುವಂತಿರಲಿಲ್ಲ. ಅಲ್ಲದೆ, ನನಗೂ ಆಗ ನಟಿಸಲು ಆಸಕ್ತಿ ಇರಲಿಲ್ಲ,” ಎನ್ನುವ ಶಾಮಿಲಿ, ವಿದ್ಯಾಭ್ಯಾಸದೆಡೆಗೆ ಹೆಚ್ಚು ಗಮನ ಹರಿಸಿದ್ದರು.

ಇತ್ತೀಚಿನ ‘ಅಮ್ಮಮ್ಮಗಾರಿಲ್ಲು’ ತೆಲುಗು ಸಿನಿಮಾದ ಹಾಡು

ಬಾಲನಟಿಯಾಗಿ ಜನಪ್ರಿಯತೆ ಗಳಿಸಿದ್ದ ಶಾಮಿಲಿಗೆ ಸೂಕ್ತ ಸಿನಿಮಾ ಹಿನ್ನೆಲೆಯೂ ಇತ್ತು. ಅವರ ತಾರಾ ಸಹೋದರಿ ಶಾಲಿನಿ ಕಾಲಿವುಡ್‌ನ ಜನಪ್ರಿಯ ನಟ ಅಜಿತ್‌ರನ್ನು ವರಿಸಿದ್ದರು. ಮತ್ತೊಂದೆಡೆ, ಶಾಮಿಲಿ ಅಣ್ಣ ರಿಜರ್ಡ್‌ ರಿಷಿ ಅವರೂ ನಟನಾಗಿ ಗುರುತಿಸಿಕೊಂಡಿದ್ದರು. ನಾಯಕಿಯಾಗಿ ಪದಾರ್ಪಣೆ ಮಾಡಬೇಕೆಂದಿದ್ದ ಶಾಮಿಲಿಗೆ ಉತ್ತಮ ಅವಕಾಶವೇ ಸಿಕ್ಕಿತು. ‘ಓಯ್‌!’ (2009) ತೆಲುಗು ಚಿತ್ರದೊಂದಿಗೆ ಸಿದ್ದಾರ್ಥ್‌ಗೆ ನಾಯಕಿಯಾಗಿ ಎರಡನೇ ಇನಿಂಗ್ಸ್ ಆರಂಭಿಸಿದರು. ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ವಿಫಲವಾಯ್ತು. ಸಿನಿಮಾ ಗೆದ್ದಿದ್ದರೆ ಶಾಮಿಲಿ ಸಿನಿಮಾ ಬದುಕಿಗೆ ಒಂದೊಳ್ಳೆ ತಿರುವು ಸಿಕ್ಕಿರುತ್ತಿತ್ತು. ಸಿನಿಮಾ ಸೋಲಿನ ನಂತರ ಅವರು ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಸಿಂಗಾಪುರಕ್ಕೆ ತೆರಳಿದರು. ಮತ್ತೆ ಅವರು ತಾಯ್ನಾಡಿಗೆ ಮರಳಿದ್ದು 2015ರಲ್ಲಿ. ಕುಟುಂಬದವರ ಪ್ರೋತ್ಸಾಹದ ಮೇರೆಗೆ ‘ವಲ್ಲಿಯುಂ ತೆಟ್ಟಿ ಪುಲ್ಲಿಯುಂ ತೆಟ್ಟಿ’ ಮಲಯಾಳಂ ಚಿತ್ರದ ನಾಯಕಿಯಾದರು. ಈ ಚಿತ್ರವೂ ನಿರೀಕ್ಷಿತ ಗೆಲುವು ದಾಖಲಿಸಲಿಲ್ಲ. ಮರುವರ್ಷ ‘ವೀರ್‌ ಶಿವಾಜಿ’ ತಮಿಳು ಚಿತ್ರದಲ್ಲಿ ವಿಕ್ರಂ ಪ್ರಭುಗೆ ನಾಯಕಿಯಾಗಿ ನಟಿಸಿದರು. ಈ ವರ್ಷ ಮೇ ತಿಂಗಳಲ್ಲಿ ಅವರ ‘ಅಮ್ಮಮ್ಮಗಾರಿಲ್ಲು’ ತೆಲುಗು ಸಿನಿಮಾ ತೆರೆಕಂಡಿತ್ತು. ಇಲ್ಲಿಯೂ ಶಾಮಿಲಿಗೆ ಗೆಲುವು ಮರೀಚಿಕೆ ಆಯ್ತು. ಅವರಿಗೀಗ ಗೆಲುವು ಬೇಕಿದೆ. ಇಂದು 31ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ನಟಿ ದೊಡ್ಡ ಸಿನಿಮಾಗಳ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ : ನೆನಪು | ಹಿಂದಿ ಸಿನಿಮಾ ಹಾಗೂ ರಂಗಭೂಮಿ ನಟಿ, ನೃತ್ಯಗಾರ್ತಿ ಜೊಹ್ರಾ ಸೆಹಗಲ್‌

‘ಓಯ್‌!’ (2009) ತೆಲುಗು ಸಿನಿಮಾ ಹಾಡು

ಮಣಿರತ್ನಂ ನಿರ್ದೇಶನದ ‘ಅಂಜಲಿ’ ತಮಿಳು ಸಿನಿಮಾ

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More