ನೆನಪು | ಹಿಂದಿ ಸಿನಿಮಾ ಹಾಗೂ ರಂಗಭೂಮಿ ನಟಿ, ನೃತ್ಯಗಾರ್ತಿ ಜೊಹ್ರಾ ಸೆಹಗಲ್‌

ಹಿಂದಿ ಚಿತ್ರನಟಿ, ನೃತ್ಯಗಾರ್ತಿ ಜೊಹ್ರಾ ಸೆಹ್ಗಾಲ್‌ ಅಗಲಿ ಇಂದಿಗೆ (ಜು.10) ನಾಲ್ಕು ವರ್ಷ. ಜೊಹ್ರಾ ನೃತ್ಯನಿರ್ದೇಶಕಿಯಾಗಿ ಹಿಂದಿ ಚಿತ್ರರಂಗ ಪ್ರವೇಶಿಸಿ ನಟಿಯಾಗಿ ಜನಪ್ರಿಯತೆ ಗಳಿಸಿದವರು. ಜರ್ಮನಿಯ ವಿಗ್‌ಮನ್ಸ್‌ ಬ್ಯಾಲೆಟ್‌ ಸ್ಕೂಲ್‌ನಲ್ಲಿ ಕಲಿತ ಮೊದಲ ಭಾರತೀಯ ಮಹಿಳೆ ಎನ್ನುವ ಹೆಗ್ಗಳಿಕೆ ಅವರದು

ಭಾರತೀಯ ಚಿತ್ರರಂಗ ಮತ್ತು ರಂಗಭೂಮಿ ಕಂಡ ಅಪರೂಪದ ನಟಿಯರಲ್ಲಿ ಜೊಹ್ರಾ ಸೆಹಗಲ್‌ ಪ್ರಮುಖರು. ಅವರ ಪೂರ್ಣ ಹೆಸರು ಸಾಹಿಬ್ಜಾದಿ ಜೊಹ್ರಾ ಬೇಗಮ್ ಮಮ್ತಾಜುಲ್ಲಾ ಖಾನ್‌. ಹುಟ್ಟಿದ್ದು (1912ರ ಏ.27) ಉತ್ತರ ಪ್ರದೇಶದ ಸಹ್ರಾನ್‌ಪುರ್‌ನಲ್ಲಿ. ರೊಹಿಲ್ಲಾ ಪಠಾಣ್ ಕುಟುಂಬದ ಮಮ್ತಾಜುಲ್ಲಾ ಖಾನ್ ಮತ್ತು ನಾತಿಕ್ ಬೇಗಮ್ ದಂಪತಿಯ ಏಳು ಮಕ್ಕಳಲ್ಲಿ ಜೊಹ್ರಾ ಮೂರನೆಯವರು. ಜೊಹ್ರಾ ವೃತ್ತಿಜೀವನ ಆರಂಭಿಸಿದ್ದು ನೃತ್ಯಗಾರ್ತಿಯಾಗಿ. ಖ್ಯಾತ ನೃತ್ಯಪಟು ಉದಯಶಂಕರ್ ಜೊತೆ ಅವರು ಎಂಟು ವರ್ಷಗಳ ಕಾಲ ಸಹವರ್ತಿಯಾಗಿದ್ದರು.

ಬಾಲ್ಯದಲ್ಲಿ ಕಟ್ಟಾ ಸುನ್ನಿ ಮುಸ್ಲಿಂ ಸಂಪ್ರದಾಯಗಳೊಂದಿಗೆ ಬೆಳೆದವರು ಜೊಹ್ರಾ. ದಿನಕ್ಕೆ ಐದು ಬಾರಿ ಪ್ರಾರ್ಥನೆ ಮತ್ತು ರಮ್ಜಾನ್‌ ದಿನಗಳಲ್ಲಿ ಕಡ್ಡಾಯ ಉಪವಾಸ. ಆದರೆ, ತಮ್ಮ ಒಡಹುಟ್ಟಿದವರಿಗಿಂತ ಜೊಹ್ರಾ ಗಟ್ಟಿಗಿತ್ತಿ. ಚಿಕ್ಕ ವಯಸ್ಸಿನಲ್ಲೇ ಅವರು ಅಮ್ಮನನ್ನು ಕಳೆದುಕೊಂಡರು. ಅಮ್ಮನ ಇರಾದೆಯಂದೆ ಜೊಹ್ರಾ ಹಾಗೂ ಅವರ ಒಡಹುಟ್ಟಿದವರಿಗೆ ಲಾಹೋರ್‌ನ ಕ್ವೀನ್ ಮೇರಿಸ್ ಗರ್ಲ್ಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿಸಲಾಯಿತು. ಪದವಿ ಪಡೆಯುತ್ತಿದ್ದಂತೆ ಜೊಹ್ರಾಗೆ ನೃತ್ಯಾಭ್ಯಾಸದತ್ತ ಒಲವು ಬೆಳೆಯಿತು. ಚಿಕ್ಕಪ್ಪ ಸಾಹೇಬ್‌ಜಾದಾ ಸಯೀದ್ ಜಾಫರ್ ಖಾನ್ ಅವರ ನೆರವಿಗೆ ಬಂದರು. ಆಗ ಸಯೀದ್ ಜಾಫರ್‌ ಯೂರೋಪ್‌ನ ಎಡಿನ್‌ಬರ್ಗ್‌ನಲ್ಲಿ ವೈದ್ಯಕೀಯ ವಿದ್ಯಾರ್ಥಿ. ತನ್ನ ಚಿಕ್ಕಪ್ಪನ ಮನೆಗೆಂದು ಜೊಹ್ರಾ ಯೂರೋಪ್‌ಗೆ ತೆರಳಿದರು.

ಯೂರೋಪ್‌ಗೆ ತೆರಳಿದ ಜೊಹ್ರಾ ನೃತ್ಯಾಭ್ಯಾಸದಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳಲು ಆಲೋಚಿಸಿದರು. ಚಿಕ್ಕಮ್ಮ ದಿಖ್ತಾ ಅವರ ಅಣತಿಯಂತೆ ಜರ್ಮನಿಯ ಡ್ರೆಸ್ಡನ್‌ನಲ್ಲಿದ್ದ ಮೇರಿ ವಿಗ್ಮನ್ಸ್‌ ಬ್ಯಾಲೆಟ್ ಸ್ಕೂಲ್‌ಗೆ ಜೊಹ್ರಾ ಪ್ರವೇಶ ಪಡೆದರು. ಅವರು ಆ ನೃತ್ಯಶಾಲೆಗೆ ಸೇರ್ಪಡೆಯಾದ ಮೂದಲ ಭಾರತೀಯ ವಿದ್ಯಾರ್ಥಿನಿ. ಡ್ರೆಸ್ಡನ್‌ನಲ್ಲಿ ಮೂರು ವರ್ಷಗಳ ನೃತ್ಯಾಭ್ಯಾಸ ಜೊಹ್ರಾ ಜೀವನಕ್ಕೆ ಮಹತ್ವದ ತಿರುವು ನೀಡಿತು. ಅದೊಮ್ಮೆ ಭಾರತದ ಖ್ಯಾತ ನೃತ್ಯಪಟು ಉದಯಶಂಕರ್ ಯೂರೋಪ್ ಪ್ರವಾಸ ಕೈಗೊಂಡಿದ್ದರು. ಈ ಸಂದರ್ಭದಲ್ಲಿ ಉದಯಶಂಕರ್ ನೃತ್ಯ ನೋಡಿದ ಜೊಹ್ರಾ, ಪ್ರಭಾವಿತರಾಗಿ ಅವರನ್ನು ಪರಿಚಯಿಸಿಕೊಂಡರು. ಭಾರತಕ್ಕೆ ಬಂದು ತಮ್ಮ ಶಾಲೆಯಲ್ಲಿ ನೃತ್ಯಶಿಕ್ಷಕಿಯಾಗಿ ಕಾರ್ಯನಿರ್ವಹಿಸುವಂತೆ ಉದಯ ಶಂಕರ್ ಜೊಹ್ರಾಗೆ ಆಹ್ವಾನ ಕೊಟ್ಟರು. ಇದಕ್ಕೆ ಮುನ್ನವೇ ಜೊಹ್ರಾಗೆ ಉದಯ ಶಂಕರ್ ನೃತ್ಯತಂಡದೊಂದಿಗೆ ಕೆಲಸ ಮಾಡುವ ಸಂದರ್ಭ ಒದಗಿಬಂತು. 1935ರ ಆಗಸ್ಟ್ 8ರಂದು ಜೊಹ್ರಾ ಈ ತಂಡವನ್ನು ಕೂಡಿಕೊಂಡರು. ಉದಯ ಶಂಕರ್ ತಂಡದೊಂದಿಗೆ ಜೊಹ್ರಾ ಜಪಾನ್, ಈಜಿಪ್ಟ್, ಯುರೋಪ್ ಮತ್ತು ಅಮೆರಿಕದಲ್ಲಿ ನೃತ್ಯ ಪ್ರದರ್ಶನ ನೀಡಿದರು.

ಜಾಹೀರಾತಿನಲ್ಲಿ ನಟ ಅಮೀರ್ ಖಾನ್‌ ಜೊತೆ ಜೊಹ್ರಾ ಸೆಹಗಲ್

ಭಾರತಕ್ಕೆ ಮರಳುತ್ತಿದ್ದಂತೆ ಜೊಹ್ರಾ, ಅಲ್ಮೊರಾದಲ್ಲಿನ ಉದಯ ಶಂಕರ್ ಇಂಡಿಯಾ ಕಲ್ಚರಲ್ ಸೆಂಟರ್ ನೃತ್ಯಶಾಲೆಯಲ್ಲಿ ಶಿಕ್ಷಕಿಯಾದರು. ಅಲ್ಲಿ ಆಕೆಗೆ ಕಾಮೇಶ್ವರ್ ಸೆಹಗಲ್‌ ಪರಿಚಯವಾದರು. ಪ್ರತಿಭಾವಂತ ಯುವ ವಿಜ್ಞಾನಿ, ನೃತ್ಯಪಟು, ಚಿತ್ರ ಕಲಾವಿದ ಕಾಮೇಶ್ವರ್‌ರನ್ನು ವರಿಸಲು ಆರಂಭದಲ್ಲಿ ಕುಟುಂಬದವರಿಂದ ತೀವ್ರ ಪ್ರತಿರೋಧ ವ್ಯಕ್ತವಾಯ್ತು. ಕಾಮೇಶ್ವರ್ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ಜೊಹ್ರಾರನ್ನು ವರಿಸಿದರು. ಈ ದಂಪತಿಗೆ ಇಬ್ಬರು ಮಕ್ಕಳು ಕಿರಣ್ ಮತ್ತು ಪವನ್. ಅಲ್ಮೊರಾದಲ್ಲಿನ ಉದಯ ಶಂಕರ್ ನೃತ್ಯಶಾಲೆ ಮುಚ್ಚಿದ ನಂತರ ಈ ದಂಪತಿ ಲಾಹೋರ್‌ಗೆ ತೆರಳಿದರು. ಅಲ್ಲಿ ಜೊಹ್ರೇಶ್‌ ಡ್ಯಾನ್ಸ್‌ ಇನ್‌ಸ್ಟಿಟ್ಯೂಟ್ ಆರಂಭಿಸಿದರು.

ಇದನ್ನೂ ಓದಿ : ಕತೆಗಳಿಗೆ ಬರ ಬಂದು ಕಂಗಾಲಾಗಿ ಬಯೋಪಿಕ್‌ಗಳ ಬೆನ್ನು ಹತ್ತಿತೇ ಬಾಲಿವುಡ್‌? 

ಮುಂದೆ ಅವಿಭಜಿತ ಭಾರತದಲ್ಲಿ ಕೋಮು ಸಂಬಂಧ ಗಲಾಟೆ ಶುರುವಾಯಿತು. ಜೊಹ್ರಾ ದಂಪತಿ ಮುಂಬಯಿಗೆ ವಲಸೆ ಬಂದರು. ಅದಾಗಲೇ ಜೊಹ್ರಾ ಸಹೋದರಿ ಉಝ್ರಾ ಭಟ್, ನಟ ಪೃಥ್ವಿರಾಜ್‌ ಕಪೂರ್‌ ಅವರ ಪೃಥ್ವಿ ಥಿಯೇಟರ್‌ನಲ್ಲಿ ಕಲಾವಿದೆಯಾಗಿದ್ದರು. ಪೃಥ್ವಿ ಥಿಯೇಟರ್ ಸೇರಲು ಜೊಹ್ರಾಗೆ ಸಹೋದರಿಯ ಶಿಫಾರಸು ನೆರವಾಯ್ತು. ಆಗ ಜೊಹ್ರಾಗೆ ತಿಂಗಳ ಸಂಬಳ 400 ರೂಪಾಯಿ. 1945ರಲ್ಲಿ ಪೃಥ್ವಿ ಥಿಯೇಟರ್ ಸೇರಿದ ಜೊಹ್ರಾ, ಮುಂದಿನ 14 ವರ್ಷಗಳ ಕಾಲ ಕಲಾವಿದೆಯಾಗಿ ಭಾರತಾದ್ಯಂತ ಪ್ರವಾಸ ನಡೆಸಿದರು. 1945ರಲ್ಲಿ ಜೊಹ್ರಾ ಎಡಪಂಥೀಯ ರಂಗತಂಡ ಐಪಿಟಿಎ ಸೇರಿದರು. ಅಲ್ಲಿ ಸಾಕಷ್ಟು ನಾಟಕಗಳಲ್ಲಿ ಅಭಿನಯಿಸಿದರು. ಇದೇ ರಂಗತಂಡ ನಿರ್ಮಿಸಿದ ‘ಧರ್ತಿ ಕೆ ಲಾಲ್’ (1946) ಚಿತ್ರದೊಂದಿಗೆ ಜೊಹ್ರಾಗೆ ಬೆಳ್ಳಿತೆರೆ ಪರಿಚಯವಾಯಿತು. ಇದೇ ವರ್ಷ ಅವರು ಚೇತನ್ ಆನಂದ್‌ರ ‘ನೀಚಾ ನಗರ್’ ಚಿತ್ರದಲ್ಲಿ ನಟಿಸಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಮೊದಲ ಭಾರತೀಯ ಚಿತ್ರವಿದು. ಕ್ಯಾನೆ ಸಿನಿಮೋತ್ಸವದಲ್ಲಿ ಚಿತ್ರಕ್ಕೆ ಗೋಲ್ಡನ್ ಪಾಮ್ ಪುರಸ್ಕಾರ ಸಂದಾಯವಾಯಿತು.

‘ಚೀನಿ ಕಮ್‌’ ಚಿತ್ರದಲ್ಲಿ ಅಮಿತಾಭ್, ತಬು ಜೊತೆ

ಸಿನಿಮಾಗೆ ಪರಿಚಯವಾದ ನಂತರವೂ ಜೊಹ್ರಾ ಮತ್ತು ಕಾಮೇಶ್ವರ್ ನಾಟಕಗಳಲ್ಲೇ ಹೆಚ್ಚು ಆಸಕ್ತರಾಗಿದ್ದರು. ಮುಂಬೈನಲ್ಲಿ ಈ ದಂಪತಿಗೆ ಚಿತ್ರರಂಗದ ಪ್ರತಿಷ್ಠಿತರ ಪರಿಚಯವಾಯ್ತು. ಗುರುದತ್‌ರ ‘ಬಾಜಿ’ (1951) ಸೇರಿದಂತೆ ಕೆಲವು ಚಿತ್ರಗಳಿಗೆ ಜೊಹ್ರಾ ನೃತ್ಯ ಸಂಯೋಜಿಸಿದ್ದರು. ರಾಜ್‌ಕಪೂರ್‌ ನಿರ್ದೇಶನದ ‘ಆವಾರಾ’ ಚಿತ್ರದಲ್ಲಿನ ಡ್ರೀಮ್ ಸೀಕ್ವೆನ್ಸ್‌ ಹಾಡಿಗೆ ಜೊಹ್ರಾ ನೃತ್ಯ ಸಂಯೋಜನೆ ಸಾಕಷ್ಟು ಪ್ರಶಂಸೆಗೊಳಗಾಗಿತ್ತು. ಕಾಮೇಶ್ವರ್ ಸಿನಿಮಾ ಕಲಾನಿರ್ದೇಶಕರಾಗಿ ನಂತರ ನಿರ್ದೇಶಕರಾಗಿ ಚಿತ್ರರಂಗದಲ್ಲಿ ತೊಡಗಿಸಿಕೊಂಡರು. 1959ರಲ್ಲಿ ಪತಿಯ ನಿಧನದ ನಂತರ ಜೊಹ್ರಾ, ದಿಲ್ಲಿಯ ನಾಟ್ಯ ಅಕಾಡೆಮಿ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದರು. ಮುಂದೆ 1962ರಲ್ಲಿ ಸ್ಕಾಲರ್‌ಶಿಪ್‌ ಪಡೆದು ಲಂಡನ್‌ಗೆ ತೆರಳಿದರು. ಅಲ್ಲಿನ ಚೆಲ್ಸಿಯಾ ಡ್ಯಾನ್ಸ್‌ ಸ್ಕೂಲ್‌ನಲ್ಲಿ ‘ಉದಯ ಶಂಕರ್ ಶೈಲಿ’ಯ ನೃತ್ಯ ಶಿಕ್ಷಕಿಯಾಗಿ ಜನಪ್ರಿಯರಾದರು. 1964ರಲ್ಲಿ ಜೊಹ್ರಾ ಬಿಬಿಸಿಯ ‘ದಿ ರೆಸ್ಕ್ಯೂ ಆಫ್ ಪ್ಲಫಲ್ಸ್‌‌’ನಲ್ಲಿ ನಟಿಸಿದರು ಬಿಬಿಸಿಯ 26 ಸಂಚಿಕೆಗಳಿಗೆ ನಿರೂಪಕಿಯಾಗಿಯೂ ಗಮನ ಸೆಳೆದರು.

ಲಂಡನ್‌ನಲ್ಲಿ ಜೊಹ್ರಾ ಅವರು ಮರ್ಚೆಂಟ್‌ಸ್‌ ಐವರಿ ಪ್ರೊಡಕ್ಷನ್ಸ್‌ನ‌ ಚಿತ್ರದೊಂದಿಗೆ ಮತ್ತೆ ಬೆಳ್ಳಿತೆರೆ ಪ್ರವೇಶಿಸಿದರು. ಜೇಮ್ಸ್ ಐವರಿ ನಿರ್ದೇಶನದ ‘ದಿ ಕಾರ್ಟಿಸಾನ್‌ಸ್‌ ಆಫ್ ಬಾಂಬೆ’ ಅವರ ಸಿನಿಮಾ ಬದುಕಿಗೆ ಮಹತ್ವದ ತಿರುವು. ಈ ಚಿತ್ರದ ನಂತರ ಜೊಹ್ರಾ ಕೆಲವು ಸಿನಿಮಾ ಹಾಗೂ ಟಿವಿ ಸರಣಿಗಳಲ್ಲಿ ನಟಿಸಿದರು. 90ರ ದಶಕದ ಮಧ್ಯದಲ್ಲಿ ಅವರು ಭಾರತಕ್ಕೆ ಹಿಂದಿರುಗಿ ಇಲ್ಲಿನ ಸಿನಿಮಾ ಮತ್ತು ಟೀವಿ ಮಾಧ್ಯಮದಲ್ಲಿ ತೊಡಗಿಸಿಕೊಂಡರು. ಸಿನಿಮಾ ಜೊತೆಗೆ ಅವರು ರಂಗಭೂಮಿ ನಂಟು ಬಿಡಲಿಲ್ಲ. ‘ಕಲ್ ಹೋ ನಾ ಹೋ’, ‘ಚೀನಿ ಕಮ್’, ‘ವೀರ್-ಝರಾ’, ‘ಸಾವರಿಯಾ’ ಜೊಹ್ರಾ ಅವರ ಕೊನೆಗಾಲದ ಚಿತ್ರಗಳು. 2014ರ ಜುಲೈ 10ರಂದು ಅಗಲಿದಾಗ ಅವರಿಗೆ 102 ವರ್ಷ. 2001ರಲ್ಲಿ ಕಾಳಿದಾಸ್ ಸನ್ಮಾನ್‌, 2004ರಲ್ಲಿ ಸಂಗೀತ ನಾಟಕ ಅಕಾಡೆಮಿ ಗೌರವಕ್ಕೆ ಜೊಹ್ರಾ (1912, ಏಪ್ರಿಲ್‌ 27- 2014, ಜುಲೈ 10) ಪಾತ್ರರಾಗಿದ್ದರು. ಅವರಿಗೆ ಪದ್ಮಶ್ರೀ (1998), ಪದ್ಮವಿಭೂಷಣ (2010) ಪುರಸ್ಕಾರಗಳು ಸಂದಿವೆ.

ಜೊಹ್ರಾ ಕುರಿತ ಸಾಕ್ಷ್ಯಚಿತ್ರ

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More