ಶೀತಲ್ ಶೆಟ್ಟಿ ಮನದ ಮಾತು | ಬದುಕು ಹರಿವ ನದಿಯಂತೆಯೇ ಸಾಗಿದೆ

ಕಿರುತೆರೆ ನಿರೂಪಕಿ ಶೀತಲ್ ಶೆಟ್ಟಿ ‘ಉಳಿದವರು ಕಂಡಂತೆ’ ಚಿತ್ರದೊಂದಿಗೆ ಬೆಳ್ಳಿತೆರೆ ಪ್ರವೇಶಿಸಿದರು. ಇದೀಗ ಶೀತಲ್ ಅಭಿನಯದ ‘ಪತಿ ಬೇಕು.ಕಾಂ’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಈ ಹಿನ್ನೆಲೆಯಲ್ಲಿ, ನಿರೂಪಣೆ, ಸಿನಿಮಾ ನಟನೆ, ನಿರ್ದೇಶನದ ಬಗೆಗಿನ ಶೀತಲ್ ಮನದ ಮಾತು ಇಲ್ಲಿದೆ

ನಿರೂಪಣೆಯಿಂದ ಕನ್ನಡಿಗರಿಗೆ ಪರಿಚಿತರಾಗಿರುವ ಶೀತಲ್‌, ಈಗ ಸಿನಿಮಾ ನಟಿ. ವಿಶ್ಲೇಷಕರ ಮೆಚ್ಚುಗೆಗೆ ಪಾತ್ರವಾದ ‘ಉಳಿದವರು ಕಂಡಂತೆ’ ಅವರ ಮೊದಲ ಸಿನಿಮಾ. ಇದಾದ ನಂತರ ‘ಅರ್ಜುನ’, ‘ಕೆಂಡಸಂಪಿಗೆ’, ‘ಪ್ರೇಮಗೀಮ ಜಾನೆದೋ’ ಚಿತ್ರಗಳಲ್ಲಿ ನಟಿಸಿದ ಅವರಿಗೆ ‘ಪತಿಬೇಕು.ಕಾಂ’ನಲ್ಲಿ ವಿಶಿಷ್ಟ ಪಾತ್ರವಿದೆ. ನಾಯಕಿಪ್ರಧಾನ ಕಥಾವಸ್ತು ಇರುವ ಈ ಚಿತ್ರ ತೆರೆಗೆ ಬರಲು ಸಿದ್ಧವಾಗಿದ್ದು, ಮೊನ್ನೆಯಷ್ಟೇ ಟೀಸರ್ ಬಿಡುಗಡೆಯಾಗಿದೆ. ಬದುಕಿನ ಸೂಕ್ಷ್ಮಗಳನ್ನು ತಿಳಿಹಾಸ್ಯದ ಧಾಟಿಯಲ್ಲಿ ಹೇಳುವ ಕತೆ ಇದು. ನಿರೂಪಣೆ, ಸಿನಿಮಾ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಅವರಿಲ್ಲಿ ಮಾತನಾಡಿದ್ದಾರೆ.

ನಿರೂಪಣೆಯನ್ನು ಬಿಟ್ಟಿದ್ದೇಕೆ?

ನಾನೆಂದೂ ನಿರೂಪಣೆಯನ್ನು ಬಿಟ್ಟಿಲ್ಲ. ನಿರೂಪಣೆಯಿಂದಲೇ ನಾನು ಕನ್ನಡಿಗರಿಗೆ ಪರಿಚಿತಳಾದೆ. ಜನರನ್ನು ರಂಜಿಸುವ, ಸದಭಿರುಚಿಯ ಕಾರ್ಯಕ್ರಮಗಳ ಸಾರಥ್ಯ ವಹಿಸಲು ನಾನು ಇಂದಿಗೂ ಸಿದ್ಧ. ಆದರೆ, ಯಾವುದಕ್ಕೂ ಜೋತುಬೀಳುವ ಜಾಯಮಾನ ನನ್ನದಲ್ಲ. ನಿರೂಪಣೆಯಿಂದಾಚೆಗೆ ಮೌನದಲ್ಲೇ ಉಳಿದುಹೋಗಿದ್ದ ನನ್ನಂತರಾಳದ ಮಾತುಗಳಿಗೆ ಇಂದು ದನಿಯಾಗಿದ್ದೇನೆಂಬ ಸಾರ್ಥಕತೆ ನನ್ನಲ್ಲಿದೆ.

‘ಪತಿಬೇಕು.ಕಾಂ’ ಚಿತ್ರದಲ್ಲಿ ನಿಮ್ಮ ಪಾತ್ರವೇನು?

‘ಪತಿಬೇಕು.ಕಾಂ’ ನಾಯಕಿ ಪ್ರಧಾನ ಚಿತ್ರ. ಮದುವೆಯ ಪ್ರಾಯವಾದರೂ ವರನ ಹುಡುಕಾಟದಲ್ಲಿರುವ, ಎಲ್ಲರಿಂದಲೂ ನಿರಾಕರಣೆಗೊಳಗಾಗುವ, ಮತ್ತೆ-ಮತ್ತೆ ವೈವಾಹಿಕ ಬದುಕಿಗಾಗಿ ಹಾತೊರೆಯುವ ಸಾಮಾನ್ಯ ಹುಡುಗಿಯ ಪಾತ್ರ ನನ್ನದು. ಹೆಣ್ಣುಮಕ್ಕಳು ಬೆಳೆದು ಮದುವೆಯ ಪ್ರಾಯಕ್ಕೆ ಬಂದು ನಿಂತಾಗ ಸಹಜವಾಗಿ ಪೋಷಕರನ್ನು ಕಾಡುವ ವರದಕ್ಷಿಣೆ ಕುರಿತ ಪ್ರಸ್ತಾಪವೂ ಇಲ್ಲಿದೆ. ಹಲವು ಸೂಕ್ಷ್ಮತೆಗಳಿಗೆ ತಿಳಿಹಾಸ್ಯ ಬೆರೆಸಿ ನಗೆಯೊಂದಿಗೆ ಸಂದೇಶ ರವಾನಿಸುವ ಪ್ರಯತ್ನವಿದು.

‘ಬಿಗ್ ಬಾಸ್’ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡ ನಂತರ ನಿಮ್ಮ ಬದುಕು ಹೇಗಿದೆ?

‘ಬಿಗ್ ಬಾಸ್’ ನಂತರ ಜನ ನನ್ನನ್ನು ನಿರೂಪಣೆಯಿಂದಾಚೆಗೂ ನೋಡಬಯಸುತ್ತಿರುವುದು ವೈಯಕ್ತಿಕವಾಗಿ ಖುಷಿ ತಂದಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ನಾಯಕಿ ಪ್ರಧಾನ ಚಿತ್ರಗಳು ಅರಸಿ ಬರುತ್ತಿವೆ. ‘ಬಿಗ್ ಬಾಸ್’ ನಂತರ ನನ್ನ ಕನಸುಗಳಿಗೆ ರೆಕ್ಕೆ ಮೂಡಿದೆ.

ನೀವು ನಿರ್ದೇಶಿಸುತ್ತಿರುವ ‘ಸಂಗಾತಿ’ ಕಿರುಚಿತ್ರದ ಬಗ್ಗೆ ಹೇಳಿ...

‘ಸಂಗಾತಿ’ ಕಿರುಚಿತ್ರ ನನ್ನ ನಿರ್ದೇಶನದ ಮೊದಲ ಪ್ರಯತ್ನ. ಕ್ಲಾಸ್, ಮಾಸ್, ಇಮೇಜ್... ಈ ಎಲ್ಲವುಗಳ ಹೊರತಾಗಿ ಸಹಜವಾದ ಒಂದು ಕತೆಯನ್ನು ಹೇಳಲು ಹೊರಟಿದ್ದೇನೆ. ಚಿತ್ರೀಕರಣ ಪೂರ್ಣಗೊಂಡಿದೆ. ಚಿತ್ರೋತ್ಸವಗಳಲ್ಲಿ ಪ್ರದರ್ಶಿಸುವ ಯೋಚನೆಯಲ್ಲಿದ್ದೇನೆ.

ಇದನ್ನೂ ಓದಿ : ಆರ್‌ಜೆ ನೇತ್ರಾ ಮನದ ಮಾತು | ಸುಂದರ ಬದುಕಿಗೆ ಕೃತಜ್ಞತೆ ಹೇಳಲು ಬಯಸುತ್ತೇನೆ

ನಟನೆ, ನಿರೂಪಣೆ, ನಿರ್ದೇಶನ ಈ ಮೂರರಲ್ಲಿ ನಿಮ್ಮನ್ನು ಬಹುವಾಗಿ ಸೆಳೆಯುವುದು ಯಾವುದು?

ನಿರೂಪಣೆ ಎಂದಾಗ ಸಹಜವಾಗಿ ಬರಹಗಾರನ ಮಾತುಗಳಿಗೆ ದನಿಯಾಗುತ್ತ ತುಸು ತರಲೆ ಮಾಡುತ್ತ ಪ್ರೇಕ್ಷಕರನ್ನು ಹಿಡಿದಿಡುವ ಪ್ರಯತ್ನದಲ್ಲೇ ಉಳಿದುಹೋಗುತ್ತೇವೆ. ಇನ್ನು ನಟನೆ, ನಿಮ್ಮ ಆಯ್ಕೆಗೆ ಬಿಟ್ಟಿದ್ದು. ನಿಮ್ಮನ್ನು ಅರಸಿ ಬರುವ ಪಾತ್ರಗಳಿಗೆ ನೀವೇ ಏಕೆ ಬೇಕು ಎಂಬುದು ಮುಖ್ಯವಾಗುತ್ತದೆ. ಆ ಪಾತ್ರಕ್ಕೆ ಜೀವ ತುಂಬುವ ಮೂಲಕ ಸಮಾಜಕ್ಕೆ ನೀವು ಕೊಡುವ ಸಂದೇಶವೇನೆಂಬುದು ಕೂಡ ಅಷ್ಟೇ ಮುಖ್ಯ. ನಿರ್ದೇಶನ ಎಂದಾಗ ನಿರ್ದೇಶಕನ ಕಲ್ಪನೆ ಮತ್ತು  ಆತನ ಜಾಣ್ಮೆ ತುಂಬಾ ಮುಖ್ಯವಾಗುತ್ತದೆ. ತಾನು ಹುಟ್ಟುಹಾಕುವ ಪ್ರತಿಯೊಂದು ಪಾತ್ರ ಹಾಗೂ ಕತೆಯ ಮೂಲಕ ಆತನ ನಿಲುವುಗಳನ್ನು ಅನಿಸಿಕೆ, ಅಭಿಪ್ರಾಯ, ನಿರ್ಧಾರಗಳನ್ನು ಹೇಳಹೊರಡುತ್ತಾನೆ. ಸೋಲು, ಗೆಲುವು ಸರ್ವೇಸಾಮಾನ್ಯ. ಆದರೆ, ಸದಭಿರುಚಿಯ ಸಿನಿಮಾಗಳನ್ನು ಕೊಟ್ಟಾಗ ಪ್ರೇಕ್ಷಕರ ಬೆಂಬಲ ಇದ್ದೇ ಇರುತ್ತದೆ.

ಶೀತಲ್ ಅಭಿನಯದ ‘ಪ್ರೇಮಗೀಮ ಜಾನೆದೋ’ ಚಿತ್ರದ ಟ್ರೈಲರ್‌

ನಿಮ್ಮ ನೆಚ್ಚಿನ ನಟಿಯರಾರು?

ಕಂಗನಾ ರನೌತ್, ವಿದ್ಯಾ ಬಾಲನ್ ನನಗೆ ಬಲು ಇಷ್ಟವಾಗುತ್ತಾರೆ. ಅವರು ಕತೆಯನ್ನು ಒಪ್ಪಿಕೊಳ್ಳುವ, ಒಪ್ಪಿಕೊಂಡ ಪಾತ್ರಗಳಲ್ಲಿ ಜೀವಿಸುವ ಬಗೆ ನನಗೆ ಇಷ್ಟವಾಗುತ್ತದೆ.

‘ಪತಿಬೇಕು.ಕಾಂ’ ಟೈಟಲ್ ಬಂದಿದ್ದು ಹೇಗೆ?

ಚಿತ್ರದ ಕತೆ ಕೇಳಿದಾಗ ಕತೆಯ ವಿಭಿನ್ನತೆ ಪಾತ್ರದ ಜೀವಂತಿಕೆಗೆ ಬೆರಗಾದೆ. ತಲೆದೂಗಿ ನಟಿಸಲು ಒಪ್ಪಿಕೊಂಡೆ. ನಂತರ ಚಿತ್ರದ ಶೀರ್ಷಿಕೆಯ ಹುಡುಕಾಟದಲ್ಲಿದ್ದ ಚಿತ್ರತಂಡದ ಜೊತೆ ಚರ್ಚೆಗೆ ಕುಳಿತಾಗ ಮೂರ್ನಾಲ್ಕು ಟೈಟಲ್‌ಗಳನ್ನು ಸೂಚಿಸಿದ್ದೆ. ಅದರಲ್ಲಿ ‘ಪತಿಬೇಕು.ಕಾಂ’ ಒಂದು. ನಿರ್ದೇಶಕ ರಾಕೇಶ್ ಅವರಿಗೆ ಟೈಟಲ್ ಇಷ್ಟವಾಗಿ ಅದೇ ಅಂತಿಮವಾಯ್ತು.

ಬಿಡುವಿನ ಸಮಯದಲ್ಲಿ ಏನು ಮಾಡುತ್ತೀರಿ?

ನಾನು ಮೊದಲಿನಿಂದಲೂ ನನ್ನ ವೈಯಕ್ತಿಕ ಬದುಕಿಗೆ ಹೆಚ್ಚು ಒತ್ತು ಕೊಡುತ್ತೇನೆ. ನನ್ನೊಟ್ಟಿಗೆ ನಾನು ಕಾಲ ಕಳೆಯುತ್ತೇನೆ. ಬಿಡುವಾದಾಗಲೆಲ್ಲ ಸ್ನೇಹಿತರ ಹಿಂಡು ಕಟ್ಟಿಕೊಂಡು ನೆಮ್ಮದಿಯ ತಾಣಗಳತ್ತ ಹೆಜ್ಜೆ ಹಾಕುತ್ತೇನೆ. ಸದಭಿರುಚಿಯ ಸಿನಿಮಾಗಳನ್ನು ನೋಡುತ್ತ ಪ್ರಪಂಚವನ್ನೇ ಮರೆಯುತ್ತೇನೆ. ಹೀಗೆ ಬದುಕು ಹರಿವ ನದಿಯಂತೆ ಸಾಗುತ್ತಲಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More