ನೆನಪು | ಭಾರತೀಯ ಸಿನಿಮಾರಂಗದ ಒರಿಜಿನಲ್ ಹೀಮ್ಯಾನ್‌ ದಾರಾ ಸಿಂಗ್‌

ಅಂತಾರಾಷ್ಟ್ರೀಯ ಖ್ಯಾತಿಯ ಕುಸ್ತಿಪಟು ದಾರಾ ಸಿಂಗ್‌ ಸ್ವಪರಿಶ್ರಮದಿಂದ ಬಾಲಿವುಡ್‌ನಲ್ಲಿ ಅವಕಾಶ ಪಡೆದ ನಟ. ಜನಪ್ರಿಯ ಪೌರಾಣಿಕ ಹಿಂದಿ ಧಾರಾವಾಹಿ ‘ರಾಮಾಯಣ’ದ ಹನುಮಾನ್‌ ಪಾತ್ರದಲ್ಲಿ ಭಾರತೀಯರಿಗೆ ಚಿರಪರಿಚಿತರಾದವರು. ಅವರು ಅಗಲಿ ಇಂದಿಗೆ (ಜು.12) ಆರು ವರ್ಷ

ಅರವತ್ತು, ಎಪ್ಪತ್ತರ ದಶಕಗಳಲ್ಲಿ ಹಿಂದಿ ಆ್ಯಕ್ಷನ್ ಸಿನಿಮಾಗಳ ರಾಜ ಎಂದೇ ಕರೆಸಿಕೊಂಡಿದ್ದವರು ದಾರಾ ಸಿಂಗ್‌. ಪಂಜಾಬ್‌ನ ಗ್ರಾಮವೊಂದರ ಯುವಕ ಸಿನಿಮಾ ಹೀರೋ ಆಗುವುದು ಸುಲಭವಿರಲಿಲ್ಲ. ಬೆಳ್ಳಿತೆರೆ ಪ್ರವೇಶಿಸುವ ಮುನ್ನ ಅವರು ಕುಸ್ತಿಪಟುವಾಗಿ ಹೆಸರಾಗಿದ್ದರು. ಅಂತಾರಾಷ್ಟ್ರೀಯ ಕುಸ್ತಿ ಪಂದ್ಯಗಳಲ್ಲಿ ದೇಶ-ವಿದೇಶಗಳ ಕುಸ್ತಿಪಟುಗಳನ್ನು ಮಣಿಸಿದ್ದರು. ಕುಸ್ತಿ ಅಖಾಡದಲ್ಲಿ ಹೆಸರು ಮಾಡಿದ ಅವರು ಛಲ, ಕಠಿಣ ಪರಿಶ್ರಮದಿಂದ ಭಾರತೀಯ ಚಿತ್ರರಂಗದ ಒರಿಜಿನಲ್ ಹೀಮ್ಯಾನ್‌ ಎಂದು ಕರೆಸಿಕೊಂಡರು. ಬಹುಭಾಯ್ ಮಿಸ್ತ್ರಿ ನಿರ್ಮಾಣದ ‘ಕಿಂಗ್‌ಕಾಂಗ್‌’ (1962) ಸಿನಿಮಾ ಧಾರಾಗೆ ಚಿತ್ರರಂಗದಲ್ಲಿ ಸ್ಥಾನ ಕಲ್ಪಿಸಿತು. ದುರದೃಷ್ಟವತಾಶ್ ಅವರು, ಬಿ-ಕ್ಲಾಸ್‌ನ ಚಿಕ್ಕ ಬಜೆಟ್ ಸಿನಿಮಾಗಳಿಗಷ್ಟೇ ಸೀಮಿತರಾದರು. ಸ್ಟಾರ್ ನಾಯಕಿಯರೊಂದಿಗೆ ನಟಿಸುವ ಅವಕಾಶ ಅವರಿಗೆ ಒದಗಿಬರಲಿಲ್ಲ. ಇದಕ್ಕೆ ನಟಿ ಮುಮ್ತಾಜ್‌ ಹೊರತಾಗಿದ್ದರು ಎನ್ನುವುದು ವಿಶೇಷ. ತಮ್ಮ ಸಿನಿಮಾ ಜೀವನದ ಆರಂಭದಲ್ಲಿ ಆಕೆ ಧಾರಾ ಸಿಂಗ್‌ರ 16 ಚಿತ್ರಗಳಲ್ಲಿ ನಾಯಕಿಯಾಗಿದ್ದರು!

‘ರಾಮಾಯಣ’ ಹಿಂದಿ ಧಾರಾವಾಹಿ ದೃಶ್ಯ

ಎಂಬತ್ತರ ದಶಕದ ನಂತರ ದಾರಾ ಸಿಂಗ್ ಬೆಳ್ಳಿತೆರೆಯಿಂದ ಕಿರುತೆರೆಯತ್ತ ಹೊರಳಿದರು. ಭಾರತೀಯ ಕಿರುತೆರೆಯ ಮಹತ್ವದ ಪ್ರಯೋಗ ‘ರಾಮಾಯಣ’ದಲ್ಲಿ ಅವರು ಹನುಮಂತನ ಪಾತ್ರದಲ್ಲಿ ಕಾಣಿಸಿಕೊಂಡರು. ಬೆಳ್ಳಿತೆರೆಯಲ್ಲಿ ಸಿಗದ ಜನಪ್ರಿಯತೆ ಮತ್ತು ಖ್ಯಾತಿ ಅವರಿಗೆ ಕಿರುತೆರೆಯಲ್ಲಿ ಸಿಕ್ಕಿತು. 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ದಾರಾ, ರಾಷ್ಟ್ರಪ್ರಶಸ್ತಿ ಪುರಸ್ಕೃತ ‘ಮೇ ಮಾ ಪಂಜಾಬ್ ದೀ’ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ಪೋಷಿಸಿದ್ದರು. ‘ಹದ್ ಕರ್ ದಿ’ ಸೇರಿದಂತೆ ಕೆಲವು ಕಿರುತೆರೆ ಪ್ರಯೋಗಗಳು ಅವರಿಗೆ ಹೆಸರು ತಂದುಕೊಟ್ಟವು. ದಾರಾ ಅವರ ಆರಂಭದ ಆ್ಯಕ್ಷನ್ ಚಿತ್ರಗಳಾದ ‘ಸ್ಯಾಮ್ಸನ್’, ‘ಹಮ್ ಏಕ್ ಹೈ’, ‘ರುಸ್ತುಂ’, ‘ಶೆರ್ದಿಲ್’, ‘ಜಾಲ್‌ಸಾಜ್’, ‘ತೂಫಾನ್’, ‘ಶೇರ್-ಎ-ವತನ್’ ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡ ಗೆಲುವು ದಾಖಲಿಸಿದ್ದವು. ದಾರಾ ಕೆಲವು ಪೌರಾಣಿಕ, ಐತಿಹಾಸಿಕ ಚಿತ್ರಗಳಲ್ಲೂ ನಟಿಸಿದ್ದಾರೆ. ‘ಸಿಕಂದರ್-ಎ-ಆಜಾಮ್’, ‘ಹರ್ ಹರ್ ಮಹದೇವ್’, ‘ವೀರ್ ಭೀಮ್‌ಸೇನ್‌’, ‘ವೀರ್ ಬಜರಂಗಿ’, ‘ಮಹಾಭಾರತ್’ ಈ ಮಾದರಿಯಲ್ಲಿ ಅವರ ಜನಪ್ರಿಯ ಸಿನಿಮಾಗಳು.

ಇದನ್ನೂ ಓದಿ : ಜನುಮದಿನ ವಿಶೇಷ | ಶೂಟಿಂಗ್‌ನಲ್ಲಿ ವಿಲನ್‌ಗೆ ಡ್ಯೂಪ್ ಆದ ಶಿವ ರಾಜಕುಮಾರ್!

‘ಸಿಕಂದರ್ ಎ ಅಜಾಮ್‌’ ಹಿಂದಿ ಚಿತ್ರದಲ್ಲಿ ಮುಮ್ತಾಜ್‌ ಜೊತೆ

ದಾರಾ ಸಿಂಗ್ ನಿರ್ದೇಶಕರೂ ಹೌದು. ‘ಉಂಖಿಲಿ ಮುಟ್ಟಿಯಾರ್’ (1983), ‘ರುಸ್ತುಂ’ (1982), ‘ಭಕ್ತಿ ಮೇ ಶಕ್ತಿ’ (1978), ‘ಧ್ಯಾನು ಭಗತ್’ (1978), ‘ಸವಾ ಲಕ್ ಸೆ ಏಕ್ ಲಡಾನ್’ (1976), ‘ಭಗತ್ ಧನ್ನಾ ಜಟ್’ (1974), ‘ಮೇರಾ ದೇಶ್ ಮೇರಾ ಧರ್ಮ್’ (1973), ‘ನಾನಕ್ ದುಖಿಯಾ ಸಬ್ ಸನ್ಸಾರ್‌’ (1970) ಅವರು ನಿರ್ದೇಶಿಸಿದ ಚಿತ್ರಗಳು. ‘ಕರಣ್’ (1990) ಅವರ ನಿರ್ಮಾಣದ ಸಿನಿಮಾ. 1983ರಲ್ಲಿ ದಾರಾ ಕುಸ್ತಿಯಿಂದ ನಿವೃತ್ತರಾಗಿದ್ದರು. 2003-09ರ ಅವಧಿಯಲ್ಲಿ ದಾರಾ ಅವರಿಗೆ ರಾಜ್ಯಸಭಾ ಸದಸ್ಯತ್ವದ ಗೌರವ ಸಿಕ್ಕಿತ್ತು. ಭಾರತೀಯರಿಗೆ ಹನುಮಾನ್‌ ಆಗಿ ಸ್ಮರಣೀಯರಾಗಿರುವ ದಾರಾ (1928 ನ.19 - 2012, ಜು.12) ಅಗಲಿ ಇಂದಿಗೆ ಆರು ವರ್ಷ.

‘ಇನ್ಸಾಫ್‌’ ಸಿನಿಮಾದ ಹಾಡು

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More