ಜನುಮದಿನ ವಿಶೇಷ | ಶೂಟಿಂಗ್‌ನಲ್ಲಿ ವಿಲನ್‌ಗೆ ಡ್ಯೂಪ್ ಆದ ಶಿವ ರಾಜಕುಮಾರ್!

ನಟ ಶಿವ ರಾಜಕುಮಾರ್‌ಗೆ ಇಂದು (ಜು.12) ಐವತ್ತಾರು ವರ್ಷ ತುಂಬಿದೆ. ಅವರೀಗ 115 ಸಿನಿಮಾಗಳ ಹೀರೋ. ಜನ್ಮದಿನದ ಈ ಸಂದರ್ಭದಲ್ಲಿ ನಟ, ನಿರ್ದೇಶಕ ಚಿ ಗುರುದತ್‌ ತಮ್ಮ ಆತ್ಮೀಯ ಸ್ನೇಹಿತ ಶಿವರಾಜ್ ಜೊತೆಗಿನ ಚಿತ್ರೀಕರಣದ ಅಪೂರ್ವ ಅನುಭವಗಳನ್ನು ನೆನಪು ಮಾಡಿಕೊಂಡಿದ್ದಾರೆ

ಬಾಲ್ಯದಲ್ಲಿ ಒಟ್ಟಿಗೇ ಆಡಿಕೊಂಡು ಬೆಳೆದ ಶಿವಣ್ಣ ಮತ್ತು ನಾನು, ‘ಆನಂದ್’ (1986) ಚಿತ್ರದೊಂದಿಗೆ ಒಟ್ಟಿಗೇ ಬಣ್ಣ ಹಚ್ಚಿದವರು. ‘ಆನಂದ್’ ಚಿತ್ರಕ್ಕಾಗಿ ನನಗೆ ಅವರೇ ಒಂದು ತಿಂಗಳು ಕಾರು ಡ್ರೈವಿಂಗ್ ಹೇಳಿಕೊಟ್ಟಿದ್ದರು. ಚಿತ್ರೀಕರಣದಲ್ಲಿ ಡ್ರೈವಿಂಗ್ ಕೈಕೊಟ್ಟಾಗ ಅಲ್ಲಿಯೂ ಶಿವಣ್ಣನ ನೆರವು ಬೇಕಾಗುತ್ತಿತ್ತು. ಮುಂದೆ ಕೂಡ ನನ್ನ ಸಿನಿಮಾ ಬದುಕಿನ ಪ್ರಮುಖ ಹಂತಗಳಲ್ಲಿ ಅವರ ನೆರವು ಒದಗಿಬಂದಿತು. ನನ್ನನ್ನು ನಿರ್ಮಾಪಕನನ್ನಾಗಿ (‘ಆನಂದಜ್ಯೋತಿ’) ಮತ್ತು ನಿರ್ದೇಶಕನನ್ನಾಗಿ (‘ಸಮರ’) ಮಾಡಿದ್ದು ಕೂಡ ಶಿವಣ್ಣನೇ.

ನಾನು, ಅವರು ಮತ್ತು ಬಾಲು (ಬಾಲರಾಜ್) ನಾಯಕರಾಗಿ ನಟಿಸಿದ ‘ಸಂಯುಕ್ತ’ ಆಗ ಕನ್ನಡದಲ್ಲೊಂದು ಉತ್ತಮ ಥ್ರಿಲ್ಲರ್ ಸಿನಿಮಾ. ಕಾಕೋಳು ಸರೋಜಾ ರಾವ್ ಅವರ ಕಾದಂಬರಿ ಆಧರಿಸಿ ಮಾಡಿದ ಈ ಸಿನಿಮಾದ ನಿರ್ದೇಶಕರು ಚಂದ್ರಶೇಖರ ಶರ್ಮಾ. ಹಾಗೆ ನೋಡಿದರೆ, ಇದು ನಾನು ಮತ್ತು ಬಾಲರಾಜ್ ನಟಿಸಬೇಕೆಂದಿದ್ದ ಸಿನಿಮಾ. ಅಂತಿಮ ಹಂತದಲ್ಲಿ ಶಿವ ರಾಜಕುಮಾರ್ ತಂಡಕ್ಕೆ ಸೇರಿಕೊಂಡರು. ಆಗ ಹ್ಯಾಟ್ರಿಕ್ ಹೀರೋ (‘ಆನಂದ್’, ‘ರಥಸಪ್ತಮಿ’ ಮತ್ತು ‘ಮನಮೆಚ್ಚಿದ ಹುಡುಗಿ’) ಆಗಿದ್ದ ಶಿವ ರಾಜಕುಮಾರ್‌ಗೆ ಇದು ನಾಲ್ಕನೇ ಸಿನಿಮಾ. ದೊಡ್ಡ ಯಶಸ್ಸು ಕಂಡ ಹೀರೋ ಎನ್ನುವ ಯಾವುದೇ ಸಣ್ಣ ಹಿಂಜರಿಕೆಯೂ ಇಲ್ಲದೆ ಖುಷಿಯಿಂದ ನಮಗೆ ಜೊತೆಯಾದರು. ನಮ್ಮಿಬ್ಬರ ಸಿನಿಮಾ ಬದುಕಿಗೆ ನೆರವಾಗುತ್ತದೆ ಎನ್ನುವ ದೃಷ್ಟಿಯಿಂದ ಯೋಜನೆಗೆ ಕೈಜೋಡಿಸಿದರು. ಮೊದಲು ಚಿಕ್ಕ ಪ್ರಾಜೆಕ್ಟ್‌ ಎಂದುಕೊಂಡಿದ್ದ ಇದು, ಶಿವರಾಜ್ ಸೇರ್ಪಡೆಯಿಂದ ದೊಡ್ಡ ಸಿನಿಮಾ ಆಗಿ ಯಶಸ್ಸು ಕಂಡಿತು.

‘ಸಂಯುಕ್ತ’ ಸಿನಿಮಾದಲ್ಲಿ ಶಿವರಾಜ್‌, ಚಿ ಗುರುದತ್, ಬಾಲರಾಜ್‌

ಸದಾ ಚಟುವಟಿಕೆಯಿಂದಿರುವ ಶಿವರಾಜ್ ಶೂಟಿಂಗ್ ಸೆಟ್‌ನಲ್ಲಿದ್ದರೆ ಒಂದು ರೀತಿ ಉತ್ಸಾಹ. ದಿನೇಶ್‌ ಬಾಬು ನಿರ್ದೇಶನದ ‘ಇನ್ಸ್‌ಪೆಕ್ಟರ್‌ ವಿಕ್ರಂ’ ಶೂಟಿಂಗ್ ಸಂದರ್ಭವೊಂದು ನನಗೆ ನೆನಪಾಗುತ್ತದೆ. ಶಿವಣ್ಣ ಹೀರೋ ಆಗಿ ನಟಿಸಿದ್ದ ಚಿತ್ರದಲ್ಲಿ ನನಗೊಂದು ಪ್ರಮುಖ ಪಾತ್ರವಿತ್ತು. ಕೆಮ್ಮಣ್ಣುಗುಂಡಿಯಲ್ಲಿ ನಡೆಯುತ್ತಿದ್ದ ಚಿತ್ರೀಕರಣದಲ್ಲಿ ನಾವೆಲ್ಲರೂ ಪಾಲ್ಗೊಂಡಿದ್ದೆವು. ನಿರ್ದೇಶಕ ದಿನೇಶ್ ಬಾಬು ಅವರ ಆತ್ಮೀಯರೂ ಆಗಿದ್ದ ತಮಿಳು ನಟ ನಾರಾಯಣ್ ಚಿತ್ರದ ಖಳಪಾತ್ರದಲ್ಲಿ ನಟಿಸುತ್ತಿದ್ದರು. ಸನ್ನಿವೇಶವೊಂದರಲ್ಲಿ ನಾರಾಯಣ್ ವೇಗವಾಗಿ ಕಾರು ಓಡಿಸಿಕೊಂಡು ಬಂದು ಒಮ್ಮೆಗೇ ಬ್ರೇಕ್ ಹಾಕಿ ಕಾರನ್ನು ತಿರುಗಿಸಿ ನಿಲ್ಲಿಸಬೇಕಿತ್ತು. ನಾಲ್ಕೈದು ಟೇಕ್‌ಗಳಾದರೂ ಶಾಟ್ ಓಕೆ ಆಗಲಿಲ್ಲ. ಕೊನೆಗೆ, ನಾರಾಯಣ್‌ಗೆ ತಾವು ಡ್ಯೂಪ್ ಆಗುವುದಾಗಿ ಶಿವಣ್ಣ ಎದ್ದುನಿಂತರು! ಅದು ರಿಸ್ಕೀ ಶಾಟ್ ಆದ್ದರಿಂದ ಎಲ್ಲರೂ ಬೇಡವೆಂದೆವು. ನಮ್ಮ ಮಾತು ಕೇಳದ ಶಿವಣ್ಣ, ನಾರಾಯಣ್‌ರ ಷರ್ಟ್ ಹಾಕಿಕೊಂಡು ಕಾರು ಹತ್ತಿದರು. ಡ್ರೈವಿಂಗ್ ಎಕ್ಸ್‌ಪರ್ಟ್ ಆಗಿದ್ದರಿಂದ ಅವರಿಗೊಂದಿಷ್ಟು ಟೆಕ್ನಿಕ್‌ಗಳು ಗೊತ್ತಿದ್ದವು. ನಿರ್ದೇಶಕರ ಕಲ್ಪನೆಗೆ ತಕ್ಕಂತೆ ಒಂದೇ ಟೇಕ್‌ಗೆ ರಿಸ್ಕೀ ಶಾಟ್ ಓಕೆ ಮಾಡಿದರು. ಕೊಂಚ ಎಡವಟ್ಟಾಗಿದ್ದರೂ ಕಾರು ಪಲ್ಟಿಯಾಗುವ ಸಾಧ್ಯತೆಗಳಿದ್ದವು. ಹೆದರದ ಶಿವಣ್ಣ ವಿಲನ್‌ಗೆ ‘ಡ್ಯೂಪ್’ ಆಗಿ ಎಲ್ಲರಿಂದಲೂ ಚಪ್ಪಾಳೆ ಗಿಟ್ಟಿಸಿದರು!

‘ಇನ್‌ಸ್ಪೆಕ್ಟರ್ ವಿಕ್ರಂ’ ಚಿತ್ರದ ಹಾಡು

ನೃತ್ಯ ಸಂಯೋಜಕ ಶಿವಣ್ಣ: ಶಿವರಾಜ್ ಪ್ರೋತ್ಸಾಹದ ಮೇರೆಗೆ ‘ಸಮರ’ ಚಿತ್ರದ ಮೂಲಕ ನಾನು ನಿರ್ದೇಶಕನ ಹ್ಯಾಟ್‌ ಧರಿಸುವಂತಾಯ್ತು. ಶಿವ ರಾಜಕುಮಾರ್ ಮತ್ತು ಸುಧಾರಾಣಿ ಚಿತ್ರದ ಹೀರೋ-ಹಿರೋಯಿನ್. ಸಿಂಗಾಪುರದಲ್ಲಿ ಚಿತ್ರದ ಎರಡು ಹಾಡುಗಳನ್ನು ಚಿತ್ರಿಸುವುದೆಂದು ನಿರ್ಧರಿಸಿದ್ದೆವು. ಅಂದುಕೊಂಡಂತೆಯೇ ಬೆಂಗಳೂರಿನಿಂದ ನಮ್ಮದೊಂದು ಚಿಕ್ಕ ತಂಡದೊಂದಿಗೆ ಸಿಂಗಾಪುರಕ್ಕೆ ಹೋದೆವು. ನೃತ್ಯ ನಿರ್ದೇಶಕ ಜಾನ್ ಬಾಲು ಚೆನ್ನೈನಿಂದ ಬಂದು ನಮ್ಮನ್ನು ಕೂಡಿಕೊಳ್ಳಬೇಕಿತ್ತು. ಕಾರಣಾಂತರಗಳಿಂದಾಗಿ ಅವರು ಚೆನ್ನೈನಲ್ಲೇ ಉಳಿಯುವಂತಾದಾಗ ನಾವು ಕಂಗಾಲಾದೆವು.

ನಮಗೆ ಅಲ್ಲಿ ಚಿತ್ರಿಸಲು ಅನುಮತಿ ಸಿಕ್ಕಿದ್ದು ನಾಲ್ಕು ದಿನವಷ್ಟೇ. ನಿರ್ದೇಶಕನಾದ ನಾನು ತಲೆ ಮೇಲೆ ಕೈಹೊತ್ತು ಕುಳಿತಿದ್ದರೆ, ಶಿವಣ್ಣ ತಾವೇ ‘ನೃತ್ಯ ನಿರ್ದೇಶಕ’ನಾಗುವುದಾಗಿ ಹೇಳಿದರು! ಸಂಪೂರ್ಣ ವಿಫಲವಾಗಬೇಕಿದ್ದ ಸಿಂಗಾಪುರ ಟೂರ್‌ಗೆ ಮತ್ತೆ ಜೀವ ಬಂದಂತಾಯಿತು. ನಾನು ಮೇಕಪ್-ಟಚ್‌ಅಪ್, ಟ್ರ್ಯಾಲಿ ಹ್ಯಾಂಡ್ಲಿಂಗ್‌ ನೋಡಿಕೊಂಡರೆ ಹೀರೋ ಶಿವಣ್ಣ ನೃತ್ಯ ನಿರ್ದೇಶಕರಾದರು. ನೃತ್ಯದಲ್ಲಿ ಅಪಾರ ಪರಿಣತಿಯಿರುವ ಶಿವಣ್ಣ, ಚಿತ್ರದ ಎರಡು ಹಾಡುಗಳಿಗೆ ನೃತ್ಯ ಸಂಯೋಜಿಸಿದರು. ತಮ್ಮ ನೃತ್ಯ ಸಂಯೋಜನೆಗೆ ತಾವೇ ಹೆಜ್ಜೆ ಹಾಕುತ್ತ ಸಿಂಗಾಪುರ ಪ್ರವಾಸವನ್ನು ಯಶಸ್ವಿಗೊಳಿಸಿದರು.

ಶಿವ ರಾಜಕುಮಾರ್‌ ಸಿನಿಮಾ ಹಾಡುಗಳ ವಿಡಿಯೋ ಗುಚ್ಛ

ಆನಂದ್‌

ರಥಸಪ್ತಮಿ

ಮನಮೆಚ್ಚಿದ ಹುಡುಗಿ

ಚಿಗುರಿದ ಕನಸು

ಭಜರಂಗಿ

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More