ಹತ್ತು ವರ್ಷದ ನಂತರವೂ ‘ಸುಬ್ರಹ್ಮಣ್ಯಪುರಂ’ ಎಲ್ಲರನ್ನೂ ಸೆಳೆಯುತ್ತಿರುವುದೇಕೆ?

ಹೊಸ ಟ್ರೆಂಡ್‌ ಸೃಷ್ಟಿಸಿದ ‘ಸುಬ್ರಹ್ಮಣ್ಯಪುರಂ’ ತಮಿಳು ಸಿನಿಮಾ ತೆರೆಕಂಡು ಹತ್ತು ವರ್ಷ. ದಕ್ಷಿಣ ಭಾರತದ ಚಿತ್ರರಂಗವಷ್ಟೇ ಅಲ್ಲ, ಬಾಲಿವುಡ್‌ವರೆಗೂ ಹೊಸ ಟ್ರೆಂಡ್ ಸೃಷ್ಟಿಸಿದ ಹೆಚ್ಚುಗಾರಿಕೆ ಈ ಸಿನಿಮಾದ್ದು. ರೂಢಿಗತ ಕ್ರಮವನ್ನು ಮುರಿದು ಕಟ್ಟಿ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡ ಗೆಲುವು ದಾಖಲಿಸಿತ್ತು

ಈ ಸಿನಿಮಾ ಬಿಡುಗಡೆಯಾಗಿ ಈ ಜುಲೈಗೆ ಹತ್ತು ವರ್ಷಗಳು ತುಂಬುತ್ತಿವೆ. ದಕ್ಷಿಣ ಭಾರತದ ಚಿತ್ರಗಳಿಗೆ ಒಂದಿಲ್ಲೊಂದು ರೀತಿಯಲ್ಲಿ ಈ ಚಿತ್ರ ಪ್ರೇರಣೆಯಾಯಿತು ಎಂಬ ಮಾತುಗಳು ಈ ಸಿನಿಮಾ ಕುರಿತ ಹಲವು ಚರ್ಚೆಯ ಸಂದರ್ಭಗಳಲ್ಲಿ ಪ್ರಸ್ತಾಪವಾಗಿದ್ದಿದೆ. 10 ವರ್ಷ ತುಂಬಿದ ಈ ಸಂದರ್ಭದಲ್ಲಿ ಬಾಲಿವುಡ್‌ನ ಹೊಸಚಿಂತನೆಯ ನಿರ್ದೇಶಕರಲ್ಲೊಬ್ಬರಾದ ಅನುರಾಗ್ ಕಶ್ಯಪ್ ಈ ಸಿನಿಮಾ ತಮ್ಮ ‘ಗ್ಯಾಂಗ್‌ ಆಫ್ ವಾಸ್ಸೆಪುರ್’ ಚಿತ್ರಕ್ಕೆ ಪ್ರೇರಣೆಯಾಗಿದ್ದನ್ನು ತಮ್ಮ ಟ್ವಿಟರ್‌ನಲ್ಲಿ ದಾಖಲಿಸಿದ್ದಾರೆ. ಅಲ್ಲದೆ, ಈ ಚಿತ್ರವನ್ನು ತಮ್ಮ ಹತ್ತು ವರ್ಷಗಳ ಅವಧಿಯಲ್ಲಿನ ಫೇವರಿಟ್ ಸಿನಿಮಾ ಎಂದು ಕರೆದುಕೊಂಡಿದ್ದಾರೆ. ಆ ಮೂಲಕ, ಕೇವಲ ದಕ್ಷಿಣ ಭಾರತದ ಚಿತ್ರರಂಗವಷ್ಟೇ ಅಲ್ಲ, ಬಾಲಿವುಡ್‌ವರೆಗೂ ಹೊಸ ಟ್ರೆಂಡ್ ಸೃಷ್ಟಿಸಿದ ಹೆಚ್ಚುಗಾರಿಕೆ ಈ ಸಿನಿಮಾದ್ದು.

2008 ಜು.4ರಂದು ಬಿಡುಗಡೆ ಕಂಡ ತಮಿಳು ಚಿತ್ರ ‘ಸುಬ್ರಹ್ಮಣ್ಯಪುರಂ’ ನಿರ್ದೇಶಕ ಎಂ ಸಸಿಕುಮಾರ್ ಜೊತೆಗೆ ತಮಿಳಿನ ಇನ್ನಿಬ್ಬರು ಮುಖ್ಯ ನಿರ್ದೇಶಕರಾದ ಬಾಲಾ ಹಾಗೂ ಅಮೀರ್ ಸುಲ್ತಾನ್‌ ಅವರನ್ನೂ ಅನುರಾಗ್ ಕಶ್ಯಪ್ ತಮ್ಮ ‘ಗ್ಯಾಂಗ್ ಆಫ್ ವಾಸ್ಸೆಪುರ್(2012) ಸಿನಿಮಾದಲ್ಲಿ ಸ್ಮರಿಸಿದ್ದಾರೆ. ತಮ್ಮ ಸಿನಿಮಾ ಚಿಂತನೆಗಳನ್ನು ಪ್ರಭಾವಿಸಿದ ನಿರ್ದೇಶಕರು ಇವರೆಂದು ದಾಖಲಿಸಿದ್ದಾರೆ. ‘ಸುಬ್ರಹ್ಮಣ್ಯಂಪುರಂ’ನಂತಹ ಟ್ರೆಂಡ್‌ಸೆಟ್ಟರ್‌ ಚಿತ್ರದ ನಿರ್ದೇಶಕ ಎಂ ಸಸಿಕುಮಾರ್ ಅವರಿಗೂ ಬಾಲಾ ಹಾಗೂ ಅಮೀರ್ ಸುಲ್ತಾನ್‌ರಿಗೂ ಸಂಬಂಧವಿರುವುದರಿಂದ ಅನುರಾಗ್ ಕಶ್ಯಪ್‌ರ ಈ ಉಲ್ಲೇಖ ಮುಖ್ಯವೆನಿಸುತ್ತದೆ. ‘ಸುಬ್ರಹ್ಮಣ್ಯಪುರಂ’ ನಿರ್ದೇಶನಕ್ಕೆ ಇಳಿಯುವ ಮುಂಚೆ ಸಸಿಕುಮಾರ್, ಬಾಲಾ ಹಾಗೂ ಅಮೀರ್ ಸುಲ್ತಾನ್‌ ಚಿತ್ರಗಳಿಗೆ ಸಹಾಯಕ ನಿರ್ದೇಶಕಾಗಿ ಕೆಲಸ ಮಾಡಿದ್ದರು. ಬಾಲಾ ಹಾಗೂ ಅಮೀರ್ ಸುಲ್ತಾನ್‌ರ ನೈಜತೆಗೆ ಒತ್ತುನೀಡುವ ಕಥಾನಕಗಳ ಪಟ್ಟನ್ನು ಅವರು ಅಲ್ಲಿಂದಲೇ ಕಲಿತಿದ್ದರು.

‘ಸುಬ್ರಹ್ಮಣ್ಯಪುರಂ’ ಕಳೆದ ದಶಕದಲ್ಲಿ ಬಂದ ಅತ್ಯುತ್ತಮ ಚಿತ್ರಗಳಲ್ಲೊಂದು, ಹೊಸ ಬಗೆಯ ಚಿತ್ರಸರಣಿಗಳಿಗೆ ಪ್ರೇರಣೆಯಾದ ಚಿತ್ರವೆಂದು ಗುರುತಿಸುವುದಕ್ಕೆ ಅದರದ್ದೇ ಆದ ಕೆಲವು ಕಾರಣಗಳಿವೆ. ಈ ಸಿನಿಮಾವನ್ನು ಭಾರತೀಯ ಚಿತ್ರರಂಗದ ಕಳೆದ ಒಂದು ದಶಕದ ಉತ್ಕೃಷ್ಟ ಚಿತ್ರವೆಂದು ಬಿಂಬಿಸುವುದು ಈ ಬರಹದ ಉದ್ದೇಶವೇನೂ ಅಲ್ಲ. ಬದಲಿಗೆ, ಸಿನಿಮಾ ವ್ಯಾಕರಣಗಳನ್ನು ಮುರಿದು ಕಟ್ಟಿದ, ಹೊಸ ತಲೆಮಾರಿಗೆ ಮತ್ತೊಂದು ಸಿನಿಮಾ ಚಿಂತನಾ ಕ್ರಮವನ್ನು ರೂಢಿಸಿದ ಕಾರಣಕ್ಕೆ ‘ಸುಬ್ರಹ್ಮಣ್ಯಪುರಂ’ ಚಿತ್ರ ಮುಖ್ಯವೆಂದು ಹೇಳುವುದು ಇಲ್ಲಿನ ಉದ್ದೇಶ. ರೂಢಿಗತ ಕ್ರಮವನ್ನು ಮುರಿದು ಕಟ್ಟಿ, ಬಾಕ್ಸ್‌ ಆಫೀಸ್‌ನಲ್ಲಿ ಹಿಟ್ ಆಗುವುದರ ಮೂಲಕ ಬಹುವರ್ಗದ ಪ್ರೇಕ್ಷಕನನ್ನು ತಲುಪಿದ ಕಾರಣಕ್ಕೆ ‘ಸುಬ್ರಹ್ಮಣ್ಯಪುರಂ’ ಕಳೆದ ಒಂದು ದಶಕದ ಮುಖ್ಯಚಿತ್ರಗಳ ಮೊದಲ ಸಾಲಿನಲ್ಲಿ ನಿಲ್ಲುತ್ತದೆ.

‘ಸುಬ್ರಹ್ಮಣ್ಯಪುರಂ’ ಚಿತ್ರದ ಮುಖ್ಯ ತಿರುಳು, ಅಮಾಯಕ, ಅನಕ್ಷರಸ್ಥ ಯುವ ತಲೆಮಾರೊಂದು ಭೂಗತಲೋಕದ ಪಾತಕಗಳಲ್ಲಿ ಭಾಗಿಯಾಗುತ್ತ ಹೋಗಿ ದುರಂತಕ್ಕೀಡಾಗುವುದು. ಇಷ್ಟು ಸರಳರೇಖೆಯ ಕತೆ ತಮಿಳು ಚಿತ್ರರಂಗಕ್ಕೆ ಅದಕ್ಕೂ ಮುಂಚೆ ಹೊಸದೇನೂ ಆಗಿರಲಿಲ್ಲ. ಆದರೆ, ಈ ಕಥನವನ್ನು ಸಸಿಕುಮಾರ್ ಮಂಡಿಸಿದ್ದು ನೈಜ ನೆಲೆಗಟ್ಟಿನ ಭಿನ್ನ ನಿರೂಪಣೆಯ ವಿಧಾನದ ಮೂಲಕ. ಅದಕ್ಕೆ ಅವರು ಆಯ್ದುಕೊಂಡ ಕಾಲಘಟ್ಟದ ಚಿತ್ರಣ 80ರ ದಶಕದ್ದು. ಒಂದು ರೀತಿಯಲ್ಲಿ ‘ಸುಬ್ರಹ್ಮಣ್ಯಪುರಂ’ ಎಲ್ಲ ಬಗೆಯ ಸೇಡಿನ ಕಥಾನಕಗಳ ಮಾದರಿಯದ್ದೇ ಆದರೂ, ಅಲ್ಲಿ ಕಾಣಿಸುವ ಪಾತ್ರಗಳ ಮಾನವೀಯ, ಅಮಾನವೀಯ ವರ್ತನೆಗಳಿಗೆ ಅವುಗಳದ್ದೇ ಆದ ತರ್ಕಗಳಿವೆ. ಈ ತರ್ಕಗಳ ಮೂಲಕ ಕಟ್ಟಿದ ಚಿತ್ರಕತೆ ಪಡೆಯುವ ತಿರುವುಗಳು ಪ್ರೇಕ್ಷಕನನ್ನು ಹಿಡಿದಿಡುವ, ಕುತೂಹಲಕ್ಕೀಡು ಮಾಡುವ ಸಹಜ ಮೆಲೋಡ್ರಾಮವನ್ನು ಉಳಿಸಿಕೊಂಡಿವೆ. ಈ ಕುತೂಹಲಕಾರಿ ಕಥನಗಳಲ್ಲಿಯೇ ಅಡಗಿರುವ ಕ್ರೌರ್ಯದ ಮುಖಗಳು ಬೆಚ್ಚಿಬೀಳಿಸುವಂತಿವೆ. ಸಿನಿಮಾದ ಪಾತ್ರಗಳು ಕೆಲವೊಮ್ಮೆ ರಷ್ಯಾದ ಶ್ರೇಷ್ಠ ಕಾದಂಬರಿಕಾರ ದಾಸ್ತೋವಸ್ಕಿಯ ಅಪರಾಧ ಜಗತ್ತಿನ ಕೆಲವು ಕಥನಗಳನ್ನು ನೆನಪಿಸುವುದು ಈ ಕಾರಣಕ್ಕಾಗಿಯೇ.

ಸುಬ್ರಹ್ಮಣ್ಯಪುರಂ ಗೆಲುವಿಗೆ ಮತ್ತೊಂದು ಕಾರಣವಾಗಿದ್ದು ನಿರ್ದೇಶಕ ಆಯ್ದುಕೊಂಡಿರುವ 80ರ ದಶಕದ ಚಿತ್ರಣದ ಮರುರೂಪ. ಆ ಕಾಲಘಟ್ಟದ ಮದುರೈ ಬೀದಿಗಳು, ಸೈಕಲ್, ಗ್ರಾಮಾಫೋನ್, ಮೈಕು, ಉಡುಪು, ಕೇಶವಿನ್ಯಾಸ ಎಲ್ಲವುಗಳ ಸಹಜ ಮರುಸೃಷ್ಟಿ ಅಂದಿನ ದಿನಗಳನ್ನು ಕಣ್ಣಿಗೆ ಕಟ್ಟುವಂತಿರುವುದು. ಇದರೊಂದಿಗೆ ಸಸಿಕುಮಾರ್ ಚಿತ್ರಕಥೆಯ ವಿವರಗಳನ್ನು ತೆರೆಗೆ ತರುವಾಗ ಅಳವಡಿಸಿಕೊಂಡಿರುವ ಲಾಂಗ್ ಶಾಟ್‌ಗಳ ಭಿನ್ನ ದೃಷ್ಟಿಕೋನ ಚಿತ್ರದ ಹೊಸ ತಾಂತ್ರಿಕ ವ್ಯಾಕರಣ ಪರಿಚಯಿಸುವಂತಿದೆ. ಇವೆಲ್ಲವುಗಳಿಗಿಂತಲೂ ಈ ಸಿನಿಮಾದ ಚರ್ಚೆಯಲ್ಲಿ ಮುಖ್ಯವೆನ್ನಿಸುವುದು, ನಿರ್ದೇಶಕರು ಪಾತ್ರಗಳಿಗೆ ಒದಗಿಸಿರುವ ಘನತೆ. ಚಿತ್ರದಲ್ಲಿ ಯಾರೂ ನಾಯಕರಲ್ಲ, ಯಾರೂ ಖಳನಾಯಕರಲ್ಲ. ಚಿತ್ರದ ಹಿರೋಯಿನ್ ಕೂಡ ನಾಯಕಿಯೂ ಅಲ್ಲ, ಖಳನಾಯಕಿಯೂ ಅಲ್ಲ! ಹಾಗೆಯೇ, ಚಿತ್ರದ ಪಾತ್ರಗಳಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ. ಹಾಗಾಗಿಯೇ ಚಿತ್ರದಲ್ಲಿ ಬರುವ ಕುಂಟನೊಬ್ಬನ ಪಾತ್ರಕ್ಕೂ ತನ್ನದೇ ವಿಶಿಷ್ಟತೆ ಇದೆ.

ಇದನ್ನೂ ಓದಿ : ‘ಸಂಜು’ ಸಿನಿಮಾ; ಸ್ನೇಹಿತ ದತ್‌ ಬಗ್ಗೆ ನಿರ್ದೇಶಕ ಹಿರಾನಿ ಮೃದುಧೋರಣೆ?

ಹಲವು ಹೊಸತುಗಳಿಗೆ ಪ್ರೇರಣೆಯಾದ ‘ಸುಬ್ರಹ್ಮಣ್ಯಪುರಂ’

ಸಸಿಕುಮಾರ್ ನಿರ್ದೇಶನದ ಹೊಸ ಪರಿಭಾಷೆಯ ‘ಸುಬ್ರಹ್ಮಣ್ಯಪುರಂ’ನ ಕಮರ್ಷಿಯಲ್ ಗೆಲುವು ಮುಂದಿನ ಅನೇಕ ದಕ್ಷಿಣ ಭಾರತದ ಸಿನಿಮಾಗಳಿಗೆ ಹಲವು ರೀತಿಯಲ್ಲಿ ಪ್ರೇರಣೆಯಾಗಿದ್ದು ನಿಜ. ಈ ಪ್ರೇರಣೆಯನ್ನು ನಾಲ್ಕು ಬಗೆಯಲ್ಲಿ ಗುರುತಿಸಬಹುದು.

  1. ನೈಜ ನೆಲೆಗಟ್ಟಿನ ಕತೆಗಳನ್ನು ಆಯ್ದುಕೊಂಡು, ಕಡಿಮೆ ಬಜೆಟ್‌ನಲ್ಲಿ, ಸೂಪರ್ ಸ್ಟಾರ್‌ಗಳ ಹಂಗು ತೊರೆದು ಚಿತ್ರ ಮಾಡುವ ಹೊಸ ನಿರ್ದೇಶಕರು ರೂಪು ತಳೆಯಲು ಪ್ರೇರಣೆ ಒದಗಿಸಿದ್ದು.
  2. ಮುಖ್ಯವಾಹಿನಿಯ ಕಮರ್ಷಿಯಲ್ ಸಿನಿಮಾಗಳು ತಿರಸ್ಕಾರದಿಂದ ನೋಡುತ್ತಿದ್ದ ಸಾಮಾನ್ಯ ರೂಪಿನ ನಟರು ಈ ಚಿತ್ರದ ನಂತರ ಕೀಳರಿಮೆ ತೊಡೆದುಕೊಂಡು ನಾಯಕನಟರಾಗಿ ಆತ್ಮವಿಶ್ವಾಸ ಗಳಿಸಿಕೊಂಡಿದ್ದು. ಸಾಮಾನ್ಯರೂಪಿನ, ಆಜಾನುಬಾಹುಗಳಲ್ಲದ, ಚಾಕೊಲೋಟ್, ಪ್ಲೇಬಾಯ್‌ಗಳಲ್ಲದ ಹೀರೋಗಳು ಯಶಸ್ವಿಯಾದ ಚರಿತ್ರೆ ತಮಿಳು ಸಿನಿಮಾರಂಗಕ್ಕೆ ಹೊಸದೇನೂ ಅಲ್ಲ. ರಜನೀಕಾಂತ್, ವಿಜಯಕಾಂತ್, ಟಿ ರಾಜೇಂದ್ರನ್, ಕೆ ಭಾಗ್ಯರಾಜ್, ಪಾರ್ಥಿಬನ್‌ರಂತಹ ಸಾಮಾನ್ಯ ರೂಪಿನ ನಟರನ್ನು ಅವರ ಪ್ರತಿಭೆಯ ಕಾರಣಕ್ಕೆ ತಮಿಳಿನ ಪ್ರೇಕ್ಷಕವರ್ಗ ಅದಾಗಲೇ ಮೆಚ್ಚಿಕೊಂಡಿದ್ದರೂ ಅಂತಹ ಮತ್ತೊಂದು ಪೀಳಿಗೆಯ ನಟರಿಗೆ ‘ಸುಬ್ರಹ್ಮಣ್ಯಪುರಂ’ ಪ್ರೇರಣೆ ಒದಗಿಸಿತು ಎನ್ನಬಹುದು.
  3. ಒಬ್ಬ ನಾಯಕನಟನ ವೈಭವೀಕರಣಕ್ಕೆ ಬದಲಾಗಿ ಬಹುನಾಯಕರ ಮಲ್ಟಿಸ್ಟಾರ್‌ಗಳ ಹೊಸ ಮಾದರಿಯೊಂದನ್ನು ಈ ಸಿನಿಮಾ ಹುಟ್ಟುಹಾಕಿದ್ದು.
  4. ಒಂದು ರೀತಿಯಲ್ಲಿ ಕಲಾತ್ಮಕ ಚಿತ್ರಗಳಿಗೆ ಸೀಮಿತವಾದಂತಿದ್ದ ಪೀರಿಯಾಡಿಕಲ್ ಕತೆಯನ್ನು ಕಮರ್ಷಿಯಲ್ ಚಿತ್ರಗಳಿಗೂ ವಿಸ್ತರಿಸಲು ಪ್ರೇರಣೆಯಾಗಿದ್ದು.

ಈ ಉತ್ತೇಜನಗಳ ಬೆಳವಣಿಗೆಯನ್ನು ಹೀಗೆ ವಿವರಿಸಬಹುದು

  1. ಚಿತ್ರಗಳಲ್ಲಿ ನೈಜತೆ, ಸಹಜತೆಗೆ ಪ್ರಾಮುಖ್ಯತೆ ನೀಡಿದ ಕೆ ಬಾಲಚಂದರ್, ಬಾಲುಮಹೇಂದ್ರ, ಭಾರತೀರಾಜಾ, ಮಣಿರತ್ನಂ, ಸಂತಾನಭಾರತಿ, ಬಾಲಾ, ತಂಗರ್ ಬಚ್ಚನ್ ಮುಂತಾದ ನಿರ್ದೇಶಕರ ಪರಂಪರೆಯನ್ನು ಹೊಸ ತಲೆಮಾರಿನ ಸಂದರ್ಭದಲ್ಲಿ ‘ಸುಬ್ರಹ್ಮಣ್ಯಪುರಂ’ ನಿರ್ದೇಶಕ ಸಸಿಕುಮಾರ್ ವಿಸ್ತರಿಸಿದರು. ಅಂತಹ ನಿರ್ದೇಶಕರಲ್ಲಿ ಸಮುದ್ರಖನಿ, ಸುಸೀಂದ್ರನ್, ಪನೀರ್ ಸೆಲ್ವಂ, ಗೌತಮ್, ವಿಜಯ್ ಮಿಲ್ಟನ್, ಸರಗುಣಂ, ಸುಬ್ರಹ್ಮಣ್ಯ ಶಿವ, ಅಂಜನಾ ಆಲಿಖಾನ್, ಬಾಲಾಜಿ ಧರಣೀಧರನ್, ನಳನ್ ಕುಮಾರಸ್ವಾಮಿ, ಬಾಲಾಜಿ, ಪಾಂಡಿರಾಜ್, ಕಾರ್ತಿಕ್ ಸುಬ್ಬರಾಜ್ ಮುಂತಾದವರು ಪ್ರಮುಖರು. ಇಂತಹ ನಿರ್ದೇಶಕರು ಕಟ್ಟಿಕೊಟ್ಟ ‘ನಾಡೋಡಿಗಳ್’, ‘ಪೋರಾಳಿ’, ‘ವೆನ್ನಿಲಾ ಕಬಡ್ಡಿ ಕುಳು’, ‘ಕುಳ್ಳನರಿ ಕೂಟ್ಟಂ’, ‘ಯೋಗಿ’, ‘ತೂಂಗಾನಗರಂ’, ‘ರೇಣಿಗುಂಟ’, ‘ಗೋಲಿ ಸೋಡಾ’, ‘ಕೂದು ಸವ್ವುಂ’, ‘ಪಸಂಗ’, ‘ಅಳಗರ್‌ಸಾಮಿಯಿನ್ ಕುದುರೈ’, ‘ಜಿಗರ್‌ಥಂಡಾ’, ‘ಇರೈವಿ’, ‘ನಡುವಲ ಕೊಂಜಂ ಪಕ್ಕದ ಕಾಣೋಂ’ ಇಂತಹ ಹಲವಾರು ಚಿತ್ರಗಳು ಕಳೆದ ಒಂದು ದಶಕದಿಂದಲೂ ತಮಿಳು ಚಿತ್ರರಂಗದಲ್ಲಿ ಹೊಸ ಸಂವೇದನೆಯನ್ನು ಕಟ್ಟಿಕೊಡುತ್ತಾ ಬಂದಿವೆ.
  2. ಹೀರೋತನದ ಯಾವ ಚಹರೆಗಳೂ ಇಲ್ಲದ ಪ್ರತಿಭಾವಂತ ನಟರ ಹೊಸ ತಲೆಮಾರು ಸೃಷ್ಟಿಯಾದದ್ದು ಕೂಡ ಒಂದು ರೀತಿಯಲ್ಲಿ ‘ಸುಬ್ರಹ್ಮಣ್ಯಪುರಂ’ನ ಪ್ರೇರಣೆಯಿಂದಲೇ ಎನ್ನಬಹುದು. ಹಾಗೆ ಬೆಳೆದ ಹೊಸತಲೆಮಾರಿನ ನಟರಲ್ಲಿ ವಿಜಯ್ ಸೇತುಪತಿ, ಜೈ, ಸಮುದ್ರಖನಿ, ಶಿವ ಕಾರ್ತಿಕೇಯನ್, ವಿಜಯ್ ವಸಂತ್, ಆಟ್ಟಕ್ಕತ್ತಿ ದಿನೇಶ್, ವಿಷ್ಣು ವಿಶಾಲ್ ಮುಂತಾದವರು ಪ್ರಮುಖರು.
  3. ಮಲ್ಟಿಸ್ಟಾರ್ ಟ್ರೆಂಡ್‌ನ ಹೊಸ ರುಚಿ ಹತ್ತಿದ್ದು ಕೂಡ ‘ಸುಬ್ರಹ್ಮಣ್ಯಪುರಂ’ನ ಸಕ್ಸಸ್ ನಂತರವೇ. ಹಾಗಾಗಿಯೇ ‘ನಾಡೋಡಿಗಳ್’, ‘ತೂಂಗಾನಗರಂ’, ‘ಕುಳ್ಳನರಿ ಕೂಟ್ಟಂ’, ‘ರೇಣಿಗುಂಟ’, ‘ಗೋಲಿಸೋಡಾ’ದಂತಹ ಚಿತ್ರಗಳು ಯಶಸ್ಸು ಕಂಡವು.
  4. ಸಸಿಕುಮಾರ್ 80ರ ದಶಕವನ್ನು ಕಟ್ಟಿಕೊಟ್ಟ ಪ್ರೇರಣೆಯೋ ಏನೋ ಮುಂದೆ ತಮಿಳಿನ ಬ್ರಿಡ್‌ಜ್‌ ಮೂವಿಗಳು ಕೂಡ ಇಂತಹ ಪೀರಿಯಾಡಿಕಲ್ ಕತೆಗಳ ಮೊರೆಹೋದವು. ಅವುಗಳಲ್ಲಿ ಚೇರನ್ ಅವರ ‘ಪೊಕ್ಕಿಶಂ’, ಎ ಸರಗುಣಂ ಅವರ ‘ವಾಗೈ ಸೂಡಾ ವಾ’ ಸಿನಿಮಾಗಳು ಗಮನಾರ್ಹ.

ಈ ಮೇಲಿನ ವಿಶ್ಲೇಷಣೆಗಳು ‘ಸುಬ್ರಹ್ಮಣ್ಯಪುರಂ’ ಮಾತ್ರ ಕಳೆದ ಒಂದು ದಶಕದ ಏಕಮಾತ್ರ ಟ್ರೆಂಡ್ ಸೆಟ್ಟರ್ ಸಿನಿಮಾ ಎಂಬ ಬಿಡುಬೀಸು ಹೇಳಿಕೆಯಂತೆ ಮೇಲ್ನೋಟಕ್ಕೆ ಕಾಣಬಹುದೇನೋ? ಆದರೆ, 2008ರ ನಂತರ ಬಂದ ತಮಿಳಿನ ಹೊಸಮಾದರಿಯ ಒಂದಲ್ಲ ಒಂದು ಸಿನಿಮಾದಲ್ಲಿ ಈ ಚಿತ್ರದ ಪ್ರಭಾವ ಇರುವುದನ್ನು ಅಲ್ಲಗಳೆಯುವಂತಿಲ್ಲ.

ಸಸಿಯ ಮುಂದಿನ ದಾರಿಯೇನು?: ಇಂತಹ ಒಂದು ಕ್ಲಾಸಿಕ್ ಚಿತ್ರ ಕೊಟ್ಟ ನಿರ್ದೇಶಕ ಸಸಿಕುಮಾರ್ ಅವರ ಸದ್ಯದ ನಡೆ ಒಂದು ರೀತಿಯಲ್ಲಿ ಅವರ ಹೊಸ ನಿರ್ದೇಶನದ ಚಿತ್ರವನ್ನು ನಿರೀಕ್ಷಿಸುತ್ತಿರುವ ಅಭಿಮಾನಿಗಳಲ್ಲಿ ನಿರಾಶೆಯನ್ನೇ ಹುಟ್ಟಿಸುವಂತಿದೆ. ‘ಸುಬ್ರಹ್ಮಣ್ಯಪುರಂ’ ನಂತರ ಸಸಿ ನಿರ್ದೇಶಿಸಿದ್ದು ಒಂದೇ ಸಿನಿಮಾ (‘ಈಸನ್’). ‘ಈಸನ್’ ನಿರೀಕ್ಷಿತ ಯಶಸ್ಸು ತಂದುಕೊಡದ್ದಕ್ಕೋ ಏನೋ ಸಸಿಕುಮಾರ್ ಹೆಚ್ಚು ಗಮನ ನೀಡತೊಡಗಿದ್ದು ನಟನೆಯತ್ತ. ‘ನಾಡೋಡಿಗಳ್’, ‘ಪೋರಾಳಿ’, ‘ಸುಂದರಪಾಂಡಿಯನ್’ ಸಿನಿಮಾಗಳ ಭರ್ಜರಿ ಸಕ್ಸಸ್ ನಂತರ ಒಂದಾದ ಮೇಲೊಂದು ಸಿನಿಮಾ ಮಾಡುತ್ತಲೇ ಇರುವ ಸಸಿ ಸಿನಿಮಾ ನಿರ್ದೇಶನವನ್ನು ಮತ್ತೆ ಧ್ಯಾನಿಸಿದಂತೆ ಕಾಣಿಸುತ್ತಿಲ್ಲ. ಇತ್ತೀಚೆಗೆ ತೆರೆಕಂಡ ಅವರ ‘ಅಸುರವಧಂ’ ಬಿಟ್ಟರೆ, ಹಿಂದಿನ ಅವರ ಅಭಿನಯದ ಬಹುತೇಕ ಚಿತ್ರಗಳು ಸಾಮಾನ್ಯ ದರ್ಜೆಯವು. ‘ಸುಬ್ರಹ್ಮಣ್ಯಪುರಂ’ ಬಳಿಕ ತನ್ನೊಳಗಿನ ನಿರ್ದೇಶನದ ಪ್ರತಿಭೆಯನ್ನು ಮತ್ತೊಮ್ಮೆ ಒರೆಗೆ ಹಚ್ಚಲು ಆತ ಮನಸ್ಸು ಮಾಡದಿರುವುದು ಆಶ್ಚರ್ಯಕರವಾಗಿ ಕಾಣುತ್ತಿದೆ. ಅದಷ್ಟೇ ಅಲ್ಲ, ಸತತ ಸೋಲುಗಳ ನಂತರ ಸಸಿಕುಮಾರ್-ಸಮುದ್ರಖನಿ ಜೋಡಿ ಅದೇ ಹಳೆಯ ಗೆದ್ದ ಎತ್ತು ‘ನಾಡೋಡಿಗಳ್-2’ ಚಿತ್ರದ ಬಾಲದತ್ತ ಆಸಕ್ತಿ ತೋರುತ್ತಿರುವುದು ವೈಚಿತ್ರ್ಯದಂತೆಯೂ ಕಾಣುತ್ತಿದೆ.

ಸಸಿಕುಮಾರ್ ಅಭಿನಯದ ‘ಅಸುರವಧಂ’ ತಮಿಳು ಸಿನಿಮಾದ ಟ್ರೈಲರ್‌

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More