ಚಿತ್ರ ವಿಮರ್ಶೆ | ವಾಚ್ಯ ಎನಿಸಿದರೂ ಭಿನ್ನ ಕತೆಯಿಂದ ಸೆಳೆಯುವ ‘ಎಂಎಂಸಿಎಚ್‌’

ಮುಸ್ಸಂಜೆ ಮಹೇಶ್‌ ನಿರ್ದೇಶನದ ‘ಎಂಎಂಸಿಎಚ್’ಗೆ ನೈಜ ಘಟನೆಯೊಂದು ಪ್ರೇರಣೆ. ಸಂದೇಶ ಹೇಳುವ ಭರದಲ್ಲಿ ಅತಿ ಮಾತುಗಳಿಂದ ಸಿನಿಮಾ ವಾಚ್ಯ ಎನಿಸಿದರೂ ಒಂದೊಳ್ಳೆ ಪ್ರಯೋಗವಾಗಿ ಗಮನ ಸೆಳೆಯುತ್ತದೆ. ಪೊಲೀಸ್ ಅಧಿಕಾರಿಯಾಗಿ ರಾಗಿಣಿ ಚಟುವಟಿಕೆಯಿಂದ ನಟಿಸಿದ್ದಾರೆ

ಬಹುಹಿಂದೆ ತಮ್ಮ ಗಮನಕ್ಕೆ ಬಂದಿದ್ದ ನೈಜ ಘಟನೆಯೊಂದು ‘ಎಂಎಂಸಿಎಚ್‌’ ಚಿತ್ರಕ್ಕೆ ಪ್ರೇರಣೆ ಎಂದು ಹೇಳಿಕೊಂಡಿದ್ದರು ನಿರ್ದೇಶಕ ಮುಸ್ಸಂಜೆ ಮಹೇಶ್‌. ಹಾಗಾಗಿ ಇದು ಅವರ ಈ ಹಿಂದಿನ ಸಿನಿಮಾಗಳ ಕತೆಗಳಿಗಿಂತ ಭಿನ್ನವಾಗಿದೆ. ಮರ್ಡರ್‌ ಮಿಸ್ಟರಿಯ ನೈಜ ಘಟನೆಗೆ ಸ್ನೇಹ, ಪ್ರೀತಿಯ ಸನ್ನಿವೇಶಗಳನ್ನು ಹೆಣೆದು ಸಮಾಜಕ್ಕೆ ಸಂದೇಶವೊಂದನ್ನು ಹೇಳುವುದು ಅವರ ಉದ್ದೇಶ. ಈ ನಿಟ್ಟಿನಲ್ಲಿ ಅವರ ಪ್ರಯತ್ನ ಶ್ಲಾಘನಾರ್ಹ. ನಾಲ್ವರು ನಾಯಕಿಯರು, ವಿಶೇಷ ಪಾತ್ರದಲ್ಲಿ ನಟಿ ರಾಗಿಣಿ ದ್ವಿವೇದಿ ನಟಿಸಿರುವ ಸಿನಿಮಾ ಕೆಲವೆಡೆ ವಾಚ್ಯ ಎನಿಸುತ್ತದೆ. ಮಾತುಗಳನ್ನು ಕಡಿಮೆ ಮಾಡಿ ನಿರೂಪಣೆಯಲ್ಲಿ ಇನ್ನಷ್ಟು ವೇಗ ತಂದಿದ್ದರೆ ಸಿನಿಮಾ ಕಳೆಗಟ್ಟುತ್ತಿತ್ತು. ಕಳೆದ ವರ್ಷ ಅವರ ನಿರ್ದೇಶನದ ‘ಜಿಂದಾ’ ಸಿನಿಮಾ ಆಕ್ಷೇಪಾರ್ಹ ಸಂಭಾಷಣೆಗಳ ಕಾರಣಕ್ಕೆ ವಿವಾದಕ್ಕೆ ಗುರಿಯಾಗಿತ್ತು. ‘ಎಂಎಂಸಿಎಚ್‌’ನಲ್ಲೂ ನಿರ್ದೇಶಕರು ಅಂತಹ ಕೆಲವು ಸಂಭಾಷಣೆಗಳನ್ನು ಬಳಕೆ ಮಾಡಿರುವಂತಿದೆ. ಸಂಭಾಷಣೆಗಳ ಮಧ್ಯೆ ಅಲ್ಲಲ್ಲಿ ಸೆನ್ಸಾರ್‌ನವರ ಮ್ಯೂಟ್‌ ಸೌಂಡ್‌ ಕೇಳಿಸುತ್ತದೆ. ಇಂತಹ ಕೆಲವು ಮಿತಿಗಳ ಮಧ್ಯೆ ಸಿನಿಮಾ ಒಂದು ವಿಶಿಷ್ಟ ಪ್ರಯತ್ನವಾಗಿ ನಿಲ್ಲುತ್ತದೆ.

ನಾಲ್ವರು ನಾಯಕಿಯರ ಪಾತ್ರಗಳ ಹೆಸರುಗಳ ಮೊದಲಕ್ಷರಗಳು- ಎಂಎಂಸಿಎಚ್. ಮೇಘ, ಮಾಲಾ, ಛಾಯಾ, ಹರ್ಷಿತಾ ಕಾಲೇಜಿನಲ್ಲಿ ಜೊತೆಯಾಗುವ ನಾಲ್ವರು ಸ್ನೇಹಿತೆಯರು. ರಾಜ್ಯದ ವಿವಿಧೆಡೆಯಿಂದ ಬೆಂಗಳೂರಿಗೆ ಓದಲು ಬರುತ್ತಾರೆ. ನಾಲ್ವರ ಪೈಕಿ ಒಬ್ಬಳು ಕಾಲೇಜು ಪಕ್ಕದ ಬೇಕರಿ ಯುವಕನ ಪ್ರೀತಿಗೆ ಸಿಲುಕುತ್ತಾಳೆ. ಈ ವಿಫಲ ಪ್ರೀತಿ, ಮೋಸ ಮಾಡುವ ಯುವಕ, ನಾಲ್ವರು ಯುವತಿಯರ ಬದುಕಿಗೆ ಎರವಾಗುವ ಈ ಘಟನೆಯ ಸುತ್ತ ಸಿನಿಮಾ ಸಾಗುತ್ತದೆ. ಮತ್ತೊಂದು ಟ್ರ್ಯಾಕ್‌ನಲ್ಲಿ ಮೇಘಳ ಪ್ರೀತಿಯ ಕತೆಯನ್ನು ಹೇಳುತ್ತಾರೆ ನಿರ್ದೇಶಕರು. ಎರಡು ಲವ್‌ ಟ್ರ್ಯಾಕ್‌ ಜೊತೆಗೆ ಕುತೂಹಲಕಾರಿ ಮರ್ಡರ್ ಮಿಸ್ಟರಿ ಎಳೆಯೂ ಇರುವುದರಿಂದ ಸಿನಿಮಾ ಬೇಸರ ಮೂಡಿಸದೆ ಪ್ರೇಕ್ಷಕರನ್ನು ಒಳಗೊಳ್ಳುತ್ತದೆ. ಸಿನಿಮಾ ಮುಗಿಯಿತು ಎನ್ನುವ ಹೊತ್ತಿಗೆ ಹಾಡೊಂದನ್ನು ಸೇರಿಸಿರುವುದು ಸಿನಿಮಾದ ಓಘವನ್ನು ಕುಂಠಿತಗೊಳಿಸುತ್ತದೆ.

ಇದನ್ನೂ ಓದಿ : ‘ನಾಗರಹಾವು’ ಮರುಬಿಡುಗಡೆ ವೇಳೆ ಮೂಲ ತಂತ್ರಜ್ಞರ ಕಡೆಗಣನೆ, ಅಸಮಾಧಾನ

ಚಿತ್ರದ ಮೊದಲಾರ್ಧದ ತುಂಬಾ ನಟಿ ರಾಗಿಣಿ ದ್ವಿವೇದಿ ಇದ್ದಾರೆ. ತೂಕ ಕಡಿಮೆ ಮಾಡಿಕೊಂಡು ಸಣ್ಣಗಾಗಿರುವ ಅವರಿಲ್ಲಿ ಪೊಲೀಸ್‌ ಅಧಿಕಾರಿ. ಉತ್ತರ ಕರ್ನಾಟಕದ ಜವಾರಿ ಭಾಷೆ ಮಾತನಾಡುತ್ತ ಚಟುವಟಿಕೆಯಿಂದ ನಟಿಸಿದ್ದಾರೆ. ನಿರ್ದೇಶಕರು ಅವರಿಗೆಂದೇ ಎರಡು ಭರ್ಜರಿ ಫೈಟಿಂಗ್ ಸನ್ನಿವೇಶಗಳನ್ನು ಸೃಷ್ಟಿಸಿದ್ದಾರೆ. ನಂಜನಗೂಡಿಗೆ ಟೈಲರ್‌ ಹುಡುಕಿಕೊಂಡು ಹೋಗುವ ರಾಗಿಣಿ ಪಾತ್ರಕ್ಕೆ ಅಲ್ಲೊಂದು ಫೈಟ್‌ ಸೃಷ್ಟಿಸುವ ಅಗತ್ಯವೇನೂ ಇರಲಿಲ್ಲ. ಉತ್ತಮ ಕತೆಯೊಂದನ್ನು ಆಯ್ಕೆ ಮಾಡಿಕೊಂಡಿರುವ ನಿರ್ದೇಶಕ ಮಹೇಶ್ ಇಂತಹ ತಪ್ಪುಗಳನ್ನು ಮಾಡುವುದೇಕೋ? ಕಾಲೇಜು ವಿದ್ಯಾರ್ಥಿನಿಯರಾಗಿ ನಟಿಸಿರುವ ಮೇಘನಾ ರಾಜ್‌, ಸಂಯುಕ್ತ, ನಕ್ಷತ್ರ, ಪ್ರಥಮ ತಮ್ಮ ಪಾತ್ರಗಳ ಔಚಿತ್ಯ ಅರಿತು ನಟಿಸಿದ್ದಾರೆ. ಶ್ರೀಧರ್‌ ವಿ ಸಂಭ್ರಮ್ ಸಂಗೀತ ಸಂಯೋಜನೆ ಹಿತಮಿತವಾಗಿದ್ದು, ಕೈಲಾಶ್‌ ಖೇರ್ ಹಾಡಿರುವ ಗೀತೆ ಗುನುಗುವಂತಿದೆ. ಸಂದೇಶ ಹೇಳುವ ಭರದಲ್ಲಿ ಅತಿ ಮಾತುಗಳಿಂದ ಸಿನಿಮಾ ವಾಚ್ಯ ಎನಿಸಿದರೂ ಒಂದೊಳ್ಳೆ ಪ್ರಯೋಗವಾಗಿ ಗಮನ ಸೆಳೆಯುತ್ತದೆ.

ನಿರ್ದೇಶನ: ಮುಸ್ಸಂಜೆ ಮಹೇಶ್‌‌‌ | ನಿರ್ಮಾಣ: ಎಸ್‌ ಶಂಕರ್‌‌‌ | ಸಂಗೀತ: ಶ್ರೀಧರ್ ವಿ ಸಂಭ್ರಮ್‌‌ | ತಾರಾಗಣ: ರಾಗಿಣಿ ದ್ವಿವೇದಿ, ಮೇಘನಾ ರಾಜ್‌, ಸಂಯುಕ್ತ ಹೊರನಾಡು, ನಕ್ಷತ್ರ, ಪ್ರಥಮಾ ಪ್ರಸಾದ್, ಸುಂದರ್‌ ರಾಜ್‌‌, ಪದ್ಮಾ ವಾಸಂತಿ ಮತ್ತಿತರರು

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More