‘ನಾಗರಹಾವು’ ಮರುಬಿಡುಗಡೆ ವೇಳೆ ಮೂಲ ತಂತ್ರಜ್ಞರ ಕಡೆಗಣನೆ, ಅಸಮಾಧಾನ

ಕನ್ನಡದ ಹಿರಿಯ ಸಿನಿಮಾ ಛಾಯಾಗ್ರಾಹಕ ಬಿ ಎಸ್ ಬಸವರಾಜ್‌ ’ನಾಗರಹಾವು’ ಸಿನಿಮಾ ರೀರಿಲೀಸ್‌ ಆಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ, ಈ ಚಿತ್ರದಲ್ಲಿ ಕಾರ್ಯನಿರ್ವಹಿಸಿರುವ ತಂತ್ರಜ್ಞರನ್ನು ನೆನಪು ಮಾಡಿಕೊಳ್ಳುತ್ತಿಲ್ಲ ಎನ್ನುವ ಅಸಮಾಧಾನ ಅವರದು

ನಲವತ್ತೈದು ವರ್ಷಗಳ ಹಿಂದೆ ತೆರೆಕಂಡಿದ್ದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ನಾಗರಹಾವು’ ಚಿತ್ರ ನೂತನ ತಂತ್ರಜ್ಞಾನದೊಂದಿಗೆ ಮತ್ತೆ ತೆರೆಕಾಣುತ್ತಿದೆ. ಈ ಸಿನಿಮಾ ಮುಂದಿನ ಶುಕ್ರವಾರದಂದು (ಜು.20) ರಾಜ್ಯದಲ್ಲಿ ತೆರೆಕಾಣುತ್ತಿದ್ದು, ಈ ಬಗ್ಗೆ ಹಲವೆಡೆ ಸುದ್ದಿಯಾಗುತ್ತಿದೆ. ಪುಟ್ಟಣ್ಣನವರ ಸಿನಿಮಾಗಳಿಗೆ ಛಾಯಾಗ್ರಹಣ ಮಾಡಿರುವ ಹಿರಿಯ ಛಾಯಾಗ್ರಾಹಕ ಬಿ ಎಸ್ ಬಸವರಾಜ್‌, ಚಿತ್ರದ ಮರುಬಿಡುಗಡೆ ಬಗ್ಗೆ ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಚಿತ್ರದಲ್ಲಿ ಕಾರ್ಯನಿರ್ವಹಿಸಿರುವ ಮೇರು ತಂತ್ರಜ್ಞರನ್ನು ನೆನಪು ಮಾಡಿಕೊಳ್ಳುತ್ತಿಲ್ಲ ಎನ್ನುವ ಅಸಮಾಧಾನ ಅವರದು.

“ಮೈಲುಗಲ್ಲು ಸೃಷ್ಟಿಸಿದ ಈ ಸಿನಿಮಾ ಮತ್ತೆ ತೆರೆಕಾಣುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಈ ಮೂಲಕ ನಮ್ಮ ಯುವ ಪೀಳಿಗೆಗೆ ಅಂದಿನ ಶ್ರೇಷ್ಠ ಪ್ರಯೋಗಗಳನ್ನು ಪರಿಚಯಿಸಿದಂತಾಗುತ್ತದೆ. ಇಂಥದ್ದೊಂದು ಕೆಲಸಕ್ಕೆ ಸಜ್ಜಾಗಿರುವ ನಿರ್ಮಾಪಕರಿಗೆ ಅಭಿನಂದನೆಗಳು. ಇದೇ ವೇಳೆ, ನಾವು ಚಿತ್ರದ ತಂತ್ರಜ್ಞರನ್ನು ಸ್ಮರಿಸುವುದನ್ನು ಮರೆಯಬಾರದು. ಚಿತ್ರಕ್ಕೆ ಕೆಲಸ ಮಾಡಿದ ಛಾಯಾಗ್ರಾಹಕ ಚಿಟ್ಟಿಬಾಬು, ಸಂಕಲನಕಾರ ಭಕ್ತವತ್ಸಲಂ, ಚಿತ್ರಸಾಹಿತಿ ಚಿ ಉದಯಶಂಕರ್‌ ಅವರನ್ನು ಯಾರೂ ಸ್ಮರಿಸುತ್ತಿಲ್ಲ,” ಎಂದು ಖೇದ ವ್ಯಕ್ತಪಡಿಸುತ್ತಾರೆ ಬಸವರಾಜ್‌.

‘ನಾಗರಹಾವು’ ಚಿತ್ರದ ದೊಡ್ಡ ಯಶಸ್ಸಿನಲ್ಲಿ ತಂತ್ರಜ್ಞರ ಪಾಲು ಬಹುದೊಡ್ಡದು. ಕಲಾವಿದರ ಜೊತೆಜೊತೆಗೆ ತಂತ್ರಜ್ಞರಿಗೂ ಮನ್ನಣೆ ಸಲ್ಲಬೇಕು ಎನ್ನುವುದು ಬಸವರಾಜ್‌ ಅವರ ಮಾತು. “ಚಿತ್ರದಲ್ಲಾಗಿದ್ದ ಸ್ಲೋ ಮೋಷನ್ ಪ್ರಯೋಗ ಭಾರತೀಯ ಚಿತ್ರರಂಗದಲ್ಲೇ ಹೊಸತು. ಮಿಚೆಲ್‌ ಕ್ಯಾಮೆರಾದಲ್ಲೇ ಛಾಯಾಗ್ರಾಹಕ ಚಿಟ್ಟಿಬಾಬು ಈ ಪ್ರಯೋಗ ನಡೆಸಿದ್ದರು. ಅಲ್ಲದೆ, ಆಗಿನ ಕಾಲಕ್ಕೆ ಚಿತ್ರದುರ್ಗದ ಬೆಟ್ಟದ ಮೇಲೆ ಚಿತ್ರಿಸುವುದು ಪ್ರಯಾಸದ ಕೆಲಸ. ಪುಟ್ಟಣ್ಣನವರ ವಿಷನ್‌, ಕ್ರಿಯಾಶೀಲತೆಗೆ ಚಿಟ್ಟಿಬಾಬು ಸೂಕ್ತ ರೀತಿಯಲ್ಲಿ ನೆರವು ನೀಡಿದರು. ಪುಟ್ಟಣ್ಣ ಮತ್ತು ಚಿಟ್ಟಿಬಾಬು ಇಬ್ಬರ ಕ್ರಿಯಾಶೀಲತೆಯಿಂದಾಗಿ ಛಾಯಾಗ್ರಹಣ ಆಕರ್ಷಕವಾಗಿ ಮೂಡಿಬರಲು ಸಾಧ್ಯವಾಯ್ತು. ಮತ್ತೊಂದೆಡೆ, ಸಂಕಲನ ಮಾಡಿದ ಭಕ್ತವತ್ಸಲಂ ಅವರ ಕೆಲಸ ಗಮನಾರ್ಹ. ಚುರುಕಿನ, ಮನಮುಟ್ಟುವ ಸಂಭಾಷಣೆ ಬರೆದ ಚಿ ಉದಯಶಂಕರ್ ಅವರನ್ನೂ ನಾವು ಸ್ಮರಿಸಿಕೊಳ್ಳಬೇಕಿದೆ,” ಎನ್ನುವ ಬಸವರಾಜ್ ಅವರು, ಪುಟ್ಟಣ್ಣ ಕಣಗಾಲ್ ನಿರ್ದೇಶನದ ಮೂರು ಸಿನಿಮಾಗಳಿಗೆ ಛಾಯಾಗ್ರಹಣ ಮಾಡಿದ್ದಾರೆ. ಪುಟ್ಟಣ್ಣನವರ ‘ಅಮೃತ ಘಳಿಗೆ’, ‘ಧರಣಿ ಮಂಡಲ ಮಧ್ಯದೊಳಗೆ’ ಮತ್ತು ‘ಮಾನಸ ಸರೋವರ’ ಚಿತ್ರಗಳಿಗೆ ಬಸವರಾಜ್‌ ಛಾಯಾಗ್ರಹಣ ಮಾಡಿದ್ದಾರೆ. ‘ಅಮೃತ ಘಳಿಗೆ’ ಛಾಯಾಗ್ರಹಣಕ್ಕೆ ಅವರಿಗೆ ರಾಜ್ಯ ಪ್ರಶಸ್ತಿ ಗೌರವ ಸಂದಿದೆ.

ಇದನ್ನೂ ಓದಿ : ವಿಡಿಯೋ | ‘ಚೋರಿ ಚೋರಿ’ ಹಿಂದಿ ಸಿನಿಮಾದಲ್ಲಿ ನರ್ಗಿಸ್ ಜೊತೆ ನರಸಿಂಹರಾಜು

‘ನಾಗರ ಹಾವು’ ರೀರಿಲೀಸ್‌ ಸುದ್ದಿಗೋಷ್ಠಿ ಸಂದರ್ಭದ ಫೋಟೋ ದೃಶ್ಯಾವಳಿ

ಟೀಸರ್‌: ‘ನಾಗರಹಾವು’ ನಿರ್ಮಾಪಕ ವೀರಾಸ್ವಾಮಿ ಅವರ ಎರಡನೇ ಪುತ್ರ, ನಟ ಬಾಲಾಜಿ ಚಿತ್ರವನ್ನು ಮತ್ತೆ ತೆರೆಗೆ ತರುವ ಜವಾಬ್ದಾರಿ ಹೊತ್ತಿದ್ದಾರೆ. ನೂತನ ತಂತ್ರಜ್ಞಾನದ ಅಳವಡಿಕೆಯೊಂದಿಗೆ ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ. ಹದಿನೈದು ದಿನಗಳ ಹಿಂದೆ ಟೀಸರ್ ಬಿಡುಗಡೆಯಾಗಿತ್ತು. “ರೀರಿಲೀಸ್‌ಗಾಗಿ ಎರಡು ವರ್ಷ ಕೆಲಸ ಮಾಡಿದ್ದೇವೆ. ಪ್ರಮುಖವಾಗಿ ಸಿನಿಮಾಸ್ಕೋಪ್ ಮತ್ತು ಡಿಟಿಎಸ್‌ ಅಳವಡಿಕೆಯಾಗಿದೆ. ಟೀಸರ್‌ಗಾಗಿಯೇ ಇಪ್ಪತ್ತೊಂದು ದಿನ ಕೆಲಸ ಮಾಡಿದ್ದೇವೆ,” ಎನ್ನುತ್ತಾರೆ ಬಾಲಾಜಿ.

“ಚಿತ್ರಕ್ಕೆ ಲೈವ್ ಮ್ಯೂಸಿಕ್ ಮಿಕ್ಸ್ ಮಾಡಿದ್ದೇವೆ. ಇದಕ್ಕೆ ಎರಡೂವರೆ ತಿಂಗಳು ಕೆಲಸ ನಡೆದಿತ್ತು. ಮೂಲ ಚಿತ್ರದ ತಾಜಾತನ ಮತ್ತು ಫೀಲ್‌ ಸಿಗಬೇಕೆಂದು ವಾದ್ಯಗಾರರಿಂದ ಲೈವ್‌ ರೆಕಾರ್ಡಿಂಗ್ ಮಾಡಿಸಿದ್ದೇವೆ. ಚೆನ್ನೈ, ಮುಂಬೈ ಮತ್ತು ಬೆಂಗಳೂರಿನ ಸ್ಟುಡಿಯೋಗಳಲ್ಲಿ ಕೆಲಸ ನಡೆದಿತ್ತು. ಇದಕ್ಕಾಗಿ ದೊಡ್ಡ ಮೊತ್ತದ ಹಣ ಖರ್ಚಾಗಿದೆ. ನಮಗೆ ಹಣಕ್ಕಿಂತ ಗುಣಮಟ್ಟ ತುಂಬಾ ಮುಖ್ಯ. ಈ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕರೆ ಮುಂದಿನ ದಿನಗಳಲ್ಲಿ ನಮ್ಮ ಬ್ಯಾನರ್‌ನ ಇತರ ಪ್ರಮುಖ ಸಿನಿಮಾಗಳನ್ನೂ ಹೊಸ ವರ್ಷನ್‌ನಲ್ಲಿ ಬಿಡುಗಡೆ ಮಾಡುವ ಯೋಜನೆ ಇದೆ,” ಎನ್ನುತ್ತಾರೆ ಬಾಲಾಜಿ.

ಭಾವುಕರಾದ ಕಲಾವಿದರು: ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ನಾಗರಹಾವು’ ಹಲವು ಪ್ರಯೋಗಗಳಿಗೆ ಸಾಕ್ಷಿಯಾಗಿದ್ದ ಸಿನಿಮಾ. ಹಲವು ಕಲಾವಿದರ ವೃತ್ತಿಬದುಕಿಗೆ ತಿರುವು ನೀಡಿದ್ದ ಚಿತ್ರವಿದು. ಚಿತ್ರದಲ್ಲಿ ಅಭಿನಯಿಸಿದ್ದ ಲೀಲಾವತಿ, ಅಂಬರೀಶ್‌, ಲೋಕನಾಥ್‌, ಕಲ್ಪನಾ, ಶಿವರಾಂ, ‘ನಾಗರಹಾವು’ ರೀರಿಲೀಸ್‌ ಆಗುತ್ತಿರುವ ಈ ಸಂದರ್ಭದಲ್ಲಿ ಹಳೆಯ ದಿನಗಳನ್ನು ನೆನಪು ಮಾಡಿಕೊಂಡು ಭಾವುಕರಾಗುತ್ತಾರೆ. “ಈ ಸಿನಿಮಾ ಕನ್ನಡ ಚಿತ್ರರಂಗದ ಮಾಸ್ಟರ್‌ಪೀಸ್‌. ಪಾತ್ರಗಳ ಚಿತ್ರಣ, ಆಕರ್ಷಕ ಮೇಕಿಂಗ್, ಪ್ರತೀ ಫ್ರೇಂ ಕೂಡ ಸಿನಿಮಾ ವಿದ್ಯಾರ್ಥಿಗಳಿಗೆ ಪಾಠವಾಗುತ್ತದೆ. ಪುಟ್ಟಣ್ಣನಂಥ ನಿರ್ದೇಶಕ, ವೀರಾಸ್ವಾಮಿ ಅವರಂಥ ನಿರ್ಮಾಪಕರಿಂದ ಮಾತ್ರ ಇಂತಹ ಸಿನಿಮಾ ಮಾಡಲು ಸಾಧ್ಯ. ಅವರೊಂದಿಗೆ ಕೆಲಸ ಮಾಡಿರುವ ನಾವು ಧನ್ಯರು,” ಎಂದು ಹಿರಿಯ ನಟ ಅಂಬರೀಶ್‌ ತಮ್ಮ ಗುರು ಪುಟ್ಟಣ್ಣನವರಿಗೆ ಕೃತಜ್ಞತೆ ಅರ್ಪಿಸುತ್ತಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More