ವಿಡಿಯೋ | ಚಿತ್ರದಲ್ಲಿ ಯುವಜನತೆಗೆ ಉತ್ತಮ ಸಂದೇಶವಿದೆ ಎಂದ ನಿರ್ಮಾಪಕ ಎಚ್‌ಡಿಕೆ

ಪುತ್ರ ನಿಖಿಲ್‌‌ಗಾಗಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು ನಿರ್ಮಿಸುತ್ತಿರುವ ‘ಸೀತಾರಾಮ ಕಲ್ಯಾಣ’ ಸಿನಿಮಾದ ಶೇ.70ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಇದೊಂದು ಫ್ಯಾಮಿಲಿ ಎಂಟರ್‌ಟೇನರ್ ಚಿತ್ರವಾಗಿದ್ದು, ಯುವಜನತೆಗೆ ಉತ್ತಮ ಸಂದೇಶವಿರಲಿದೆ ಎನ್ನುತ್ತಾರೆ ಎಚ್‌ಡಿಕೆ

“ನಮ್ಮ ನಿರ್ಮಾಣದಲ್ಲಿ ತಯಾರಾಗುತ್ತಿರುವ ‘ಸೀತಾರಾಮ ಕಲ್ಯಾಣ’ ಚಿತ್ರದಲ್ಲಿ ಯುವಜನತೆಗೆ ಒಂದೊಳ್ಳೆಯ ಸಂದೇಶ ಹೇಳುತ್ತಿದ್ದೇವೆ. ಇದು ಕುಟುಂಬದ ಎಲ್ಲರೂ ಒಟ್ಟಿಗೆ ಕುಳಿತು ವೀಕ್ಷಿಸುವಂತಹ ಚಿತ್ರವಾಗಲಿದೆ,” ಎಂದು ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ತಾವು ನಿರ್ಮಿಸುತ್ತಿರುವ ‘ಸೀತಾರಾಮ ಕಲ್ಯಾಣ’ ಚಿತ್ರದ ಬಗ್ಗೆ ಹೇಳುತ್ತಾರೆ. ಚಿತ್ರೀಕರಣ ಆರಂಭಿಸಿದ ನಂತರ ಇದು ಚಿತ್ರದ ಮೊದಲ ಸುದ್ದಿಗೋಷ್ಠಿ.

ಎಚ್‌ಡಿಕೆ ಅವರು ವಿಧಾನಸಭೆ ಚುನಾವಣೆ ಪ್ರಚಾರದ ಭರಾಟೆಯಲ್ಲಿದ್ದಾಗ ಚಿತ್ರದ ಮುಹೂರ್ತ ನೆರವೇರಿತ್ತು. ಈಗ ಸಿನಿಮಾದ ಶೇ.70ರಷ್ಟು ಚಿತ್ರೀಕರಣ ಮುಗಿದಿದೆ. ಸುದ್ದಿಗೋಷ್ಠಿಯಲ್ಲಿ ತಮ್ಮ ಸಿನಿಮಾದ ಬಗ್ಗೆ ಮಾತನಾಡಿದ ಅವರು, ಯೋಜಿತ ಚಿತ್ರನಗರಿ, ಚಲನಚಿತ್ರ ವಿಶ್ವವಿದ್ಯಾಲಯದ ಕುರಿತೂ ಪ್ರಸ್ತಾಪಿಸಿದರು. “ಹಂಚಿಕೆದಾರ, ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದ ನನಗೆ ಸಿನಿಮಾರಂಗದ ನಂಟು ಹಳೆಯದು. ಚಿತ್ರವೊಂದರ ಪೋಸ್ಟರ್‌, ಕೆಲವು ದೃಶ್ಯಗಳನ್ನು ನೋಡಿಯೇ ನಾನು ಆ ಸಿನಿಮಾದ ಗುಣಮಟ್ಟ ಅಳೆಯಬಲ್ಲೆ. ಈ ಅನುಭವದ ಹಿನ್ನೆಲೆಯಲ್ಲಿ ಹೇಳುವುದಾದರೆ, ‘ಸೀತಾರಾಮ ಕಲ್ಯಾಣ’ ಕನ್ನಡ ಚಿತ್ರರಂಗಕ್ಕೆ ಒಂದೊಳ್ಳೆಯ ಚಿತ್ರವಾಗಲಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜುಲೈ 31ಕ್ಕೆ ಟೀಸರ್: ಇದೇ ತಿಂಗಳ 31ರಂದು ಚಿತ್ರದ ಮೊದಲ ಟೀಸರ್ ಬಿಡುಗಡೆ ಮಾಡಲು ನಿರ್ಮಾಪಕ ಎಚ್‌ಡಿಕೆ ನಿರ್ಧರಿಸಿದ್ದಾರೆ. ರಾಮನಗರದಲ್ಲಿ ನಡೆಯುವ ಕರಗ ಮಹೋತ್ಸವದ ಸಂದರ್ಭದಲ್ಲಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಟೀಸರ್ ಬಿಡುಗಡೆಗೊಳಿಸುವುದು ಅವರ ಯೋಜನೆ. “ರಾಮನಗರದ ಕರಗ ಮಹೋತ್ಸವದ ಬಗ್ಗೆ ನಮಗೆ ವಿಶೇ‍ಷ ಭಕ್ತಿ. ಅಂದು ಲಕ್ಷಾಂತರ ಜನರ ಸಮ್ಮುಖದಲ್ಲಿ ಟೀಸರ್ ಬಿಡುಗಡೆ ಆಗಲಿದೆ. ನಿಖಿಲ್‌ ಅಭಿನಯದ ಮೊದಲ ಚಿತ್ರ ‘ಜಾಗ್ವಾರ್‌’ನಲ್ಲಿ ನಗರಪ್ರದೇಶದ ಕಥಾಹಂದರವಿತ್ತು. ಹಿಂದೆ ನಮ್ಮ ಬ್ಯಾನರ್‌ನಲ್ಲಿ ತಯಾರಾಗಿದ್ದ ಕೆಲವು ಯಶಸ್ವಿ ಸಿನಿಮಾಗಳು ಗ್ರಾಮೀಣ ಹಿನ್ನೆಲೆಯ ಕಥಾವಸ್ತುವಿನಿಂದಾಗಿ ಪ್ರೇಕ್ಷಕರಿಗೆ ಇಷ್ಟವಾಗಿದ್ದವು. ‘ಜಾಗ್ವಾರ್’ ನೋಡಿದ ಹಲವರು ಈ ಬಗ್ಗೆ ಚಕಾರ ಎತ್ತಿದ್ದರು. ಹಾಗಾಗಿ ಈ ಬಾರಿ ನಿಖಿಲ್‌ಗೆ ಎಚ್ಚರಿಕೆಯಿಂದ ಕತೆ ಆಯ್ಕೆ ಮಾಡಿದ್ದೇವೆ. ‘ಸೀತಾರಾಮ ಕಲ್ಯಾಣ’ ಚಿತ್ರದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ ಹಿನ್ನೆಲೆಯ ಕಥಾಹಂದರವಿದೆ. ಕೂಡುಕುಟುಂಬದ ಒಳಿತು, ಅಲ್ಲಿನ ಬಾಂಧವ್ಯದ ಆಕರ್ಷಕ ನಿರೂಪಣೆ ಇರಲಿದೆ,” ಎನ್ನುತ್ತಾರೆ ಕುಮಾರಸ್ವಾಮಿ.‌

ಇದನ್ನೂ ಓದಿ : ಜನುಮದಿನ | ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ಮನದ ಮಾತು

ಇದು ರೀಮೇಕಲ್ಲ: ಯುವನಟ ನಿಖಿಲ್ ಕುಮಾರ್‌ಗೆ ‘ಸೀತಾರಾಮ ಕಲ್ಯಾಣ’ ಮೂರನೇ ಸಿನಿಮಾ. ‘ಜಾಗ್ವಾರ್‌’ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ ನಿಖಿಲ್‌, ಮುನಿರತ್ನ ನಿರ್ಮಾಣದ ‘ಕುರುಕ್ಷೇತ್ರ’ ಪೌರಾಣಿಕ ಚಿತ್ರದಲ್ಲಿ ಅಭಿಮನ್ಯು ಪಾತ್ರದಲ್ಲಿ ನಟಿಸಿದ್ದಾರೆ. ‘ಸೀತಾರಾಮ ಕಲ್ಯಾಣ’ ಸಿನಿಮಾ ತೆಲುಗು ಚಿತ್ರದ ರೀಮೇಕ್‌ ಎಂದು ಸುದ್ದಿಯಾಗಿತ್ತು. ಆದರೆ, ಇದು ಕನ್ನಡದ ಕತೆ, ಸ್ವಮೇಕ್‌ ಎಂದು ಸ್ವತಃ ನಿಖಿಲ್‌ ಸ್ಪಷ್ಟಪಡಿಸುತ್ತಾರೆ. “ಸೋಷಿಯಲ್ ಮೀಡಿಯಾ, ಎಲೆಕ್ಟ್ರಾನಿಕ್ ಮೀಡಿಯಾಗಳಲ್ಲಿ ಇದು ರೀಮೇಕ್‌ ಎಂದು ಹೇಳಳಾಗಿತ್ತು. ಇದೊಂದು ಅಪ್ಪಟ ಸ್ವಮೇಕ್‌ ಚಿತ್ರವಾಗಿದ್ದು, ಚಿತ್ರಕತೆಗಾಗಿ ಐದಾರು ತಿಂಗಳು ಕೆಲಸ ಮಾಡಿದ್ದೇವೆ. 31ರಂದು ಬಿಡುಗಡೆಯಾಗುವ ಟೀಸರ್‌ನಲ್ಲಿ ಅಕ್ಷನ್‌ ಸನ್ನಿವೇಶಗಳು ಹೆಚ್ಚಾಗಿ ಕಾಣಿಸಲಿವೆ. ಹಾಗೆಂದು, ಇಲ್ಲಿ ಆಕ್ಷನ್‌ಗೆ ಪ್ರಾಧಾನ್ಯತೆ ಇಲ್ಲ. ಸೆಂಟಿಮೆಂಟ್‌, ಕಾಮಿಡಿ, ರೊಮ್ಯಾನ್ಸ್‌, ಲವ್‌ ಪ್ಯಾಕೇಜ್‌,” ಎನ್ನುತ್ತಾರೆ ನಿಖಿಲ್‌.

ನೃತ್ಯನಿರ್ದೇಶನದಿಂದ ನಿರ್ದೇಶಕರಾಗಿ ಬಡ್ತಿ ಹೊಂದಿದ ಹರ್ಷ ಅವರಿಗೆ ‘ಸೀತಾರಾಮ ಕಲ್ಯಾಣ’ ದೊಡ್ಡ ಪ್ರಾಜೆಕ್ಟ್‌. ಈಗಾಗಲೇ ಮಾತಿನ ಭಾಗದ ಸನ್ನಿವೇಶಗಳನ್ನು ಅವರು ಪೂರ್ಣಗೊಳಿಸಿದ್ದಾರೆ. ಶೀಘ್ರ ಚಿತ್ರೀಕರಣ ಮುಗಿಸಿ ದಸರಾ ಹಬ್ಬಕ್ಕೆ ಸಿನಿಮಾ ಬಿಡುಗಡೆಗೊಳಿಸುವುದು ಅವರ ಯೋಜನೆ. ರಚಿತಾ ರಾಮ್‌ ನಾಯಕಿಯಾಗಿ ಅಭಿನಯಿಸುತ್ತಿದ್ದು, ಉಳಿದಂತೆ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸುತ್ತಿದ್ದು, ಸ್ವಾಮಿ ಛಾಯಾಗ್ರಹಣ ಮಾಡಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More