ಗೋಪಿ ಮನದ ಮಾತು | ಹೆಚ್ಚು ಮಾತಿಲ್ಲದೆ ಜನರನ್ನು ನಗಿಸೋದೇ ನಿಜವಾದ ಹಾಸ್ಯ

ಏಳೆಂಟು ವರ್ಷದ ಚಿಕ್ಕಮಕ್ಕಳು ಕೂಡ ಗೋಪಿ ಅವರನ್ನು ‘ಕಾಮಿಡಿ ಅಂಕಲ್’ ಎಂದೇ ಗುರುತಿಸಿ ಮಾತನಾಡಿಸುತ್ತಾರೆ. ಅವರೀಗ ಕನ್ನಡ ನಾಡಿನ ಜನಪ್ರಿಯ ಮಿಮಿಕ್ರಿ ಕಲಾವಿದ. ಎರಡು ಸಾವಿರಕ್ಕೂ ಹೆಚ್ಚು ಹಾಸ್ಯ ಕಾರ್ಯಕ್ರಮಗಳನ್ನು ನೀಡಿರುವ ಗೋಪಿ ಅವರ ಮನದ ಮಾತು ಇಲ್ಲಿದೆ

ಕೊಳ್ಳೇಗಾಲ ಸಮೀಪದ ಕುನಗಳ್ಳಿ ಗೋಪಿ ಅವರ ಹುಟ್ಟೂರು. ರೈತ ದಂಪತಿಯ ಮೂವರು ಗಂಡುಮಕ್ಕಳಲ್ಲಿ ಗೋಪಿ ಕೊನೆಯವರು. ಚಿಕ್ಕಂದಿನಲ್ಲೇ ಸಿನಿಮಾ ಬಗ್ಗೆ ಆಕರ್ಷಣೆ. ಸಿನಿಮಾ ನೋಡಲು ಅವರು ಹೂ ಕಟ್ಟಿ, ಗದ್ದೆ ಕೆಲಸ ಮಾಡಿ ಹಣ ಹೊಂದಿಸಿಕೊಳ್ಳುತ್ತಿದ್ದರಂತೆ. ಸಿನಿಮಾ ನೋಡಿಬಂದು, ಆ ಕತೆಯನ್ನು ಸ್ನೇಹಿತರಿಗೆ ಕಣ್ಣಿಗೆ ಕಟ್ಟುವಂತೆ ಬಣ್ಣಿಸುವುದು ಗೋಪಿಗೆ ಇಷ್ಟವಾದ ಹವ್ಯಾಸ. ಅಪ್ಪನಿಂದ ಹಾಗೂ ಶಾಲೆಯಲ್ಲಿ ಶಿಕ್ಷಕರಿಂದ ಬೆತ್ತದ ರುಚಿ ಬಿದ್ದ ನಂತರವೂ ಅವರ ಸಿನಿಮಾ ಪ್ರೀತಿ ಕಡಿಮೆ ಆಗಿರಲಿಲ್ಲ. ಈ ಸಿನಿಮಾ ವ್ಯಾಮೋಹವೇ ಅವರನ್ನೀಗ ಮಿಮಿಕ್ರಿ ಕಲಾವಿದನನ್ನಾಗಿ ರೂಪಿಸಿದೆ.

ಸಿನಿಮಾಗಾಗಿ ಶಾಲೆಗೆ ಚಕ್ಕರ್ ಹಾಕುತ್ತಿದ್ದ ಗೋಪಿ ಓದಿನಲ್ಲೇನೂ ಹಿಂದುಳಿಯಲಿಲ್ಲ. ಕೊಳ್ಳೇಗಾಲದಲ್ಲಿ ಪಿಯುಸಿ ಮುಗಿಸಿ ಮೈಸೂರಿನಲ್ಲಿ ಎಂಎಸ್‌ಸಿ (ಗಣಿತ) ಪದವಿ ಪಡೆದರು. ಬೆಂಗಳೂರಿನ ಜಯನಗರದ ಜೆಎಸ್‌ಎಸ್ ಕಾಲೇಜ್‌ನಲ್ಲಿ ಕೆಲಕಾಲ ಅವರು ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದೂ ಇದೆ. ಪಾಠ ಹೇಳುತ್ತಲೇ ಕಾಮಿಡಿ ಶೋಗಳು, ಸಿನಿಮಾ ಶೂಟಿಂಗ್‌ಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಕಳೆದ ಮೂರು ವರ್ಷಗಳಿಂದ ಅವರು ಸಂಪೂರ್ಣವಾಗಿ ತಮ್ಮನ್ನು ಹಾಸ್ಯ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಕನ್ನಡ ಸುದ್ದಿವಾಹಿನಿಯೊಂದರಲ್ಲಿ ಮೂಡಿಬರುತ್ತಿರುವ ಅವರ ‘ಸಿಲ್ಲಿ ಪಾಯಿಂಟ್‌’ ಬಹು ಜನಪ್ರಿಯವಾಗಿದೆ.

ನೀವು ಮಿಮಿಕ್ರಿ ಕಲಾವಿದರಾಗಿದ್ದು ಹೇಗೆ?

ಹೈಸ್ಕೂಲ್ ಓದುತ್ತಿದ್ದಾಗಲೇ ಪ್ರಾಣಿ, ಪಕ್ಷಿ ಹಾಗೂ ಇತರ ಶಬ್ದಗಳನ್ನು ಅನುಕರಿಸುತ್ತಿದ್ದೆ. ಸಿನಿಮಾ ನೋಡಿಬಂದು ಆಕರ್ಷಕವಾಗಿ ಅದರ ಕತೆ ಹೇಳುತ್ತಿದ್ದೆ. ಸ್ನೇಹಿತರು ಚಪ್ಪಾಳೆ ಹೊಡೆದಿದ್ದರಿಂದ ನನ್ನಲ್ಲಿನ ಆಸಕ್ತಿ ಚಿಗುರಿತು. ಮುಂದೆ ಆರ್ಕೆಸ್ಟ್ರಾಗಳ ವೇದಿಕೆಗಳಲ್ಲಿ ಮಿಮಿಕ್ರಿ ಮಾಡಲು ಆರಂಭಿಸಿದೆ. ಕಾಲೇಜು ಓದಿನೊಂದಿಗೆ ಹಾಸ್ಯವೂ ಜಾರಿಯಲ್ಲಿತ್ತು. ಹತ್ತಾರು ವರ್ಷಗಳ ಸತತ ಪರಿಶ್ರಮ, ಅನುಭವ ನನ್ನನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ. ಮಿಮಿಕ್ರಿ ದಯಾನಂದ್, ಮಹೇಶ್, ತಬಲಾ ನಾಣಿ, ನಾಗರಾಜ್ ಕೋಟೆ ಸೇರಿದಂತೆ ಹಲವು ಹಿರಿಯ ಕಲಾವಿದರು ನನ್ನ ಬೆಳವಣಿಗೆಗೆ ನೆರವಾಗಿದ್ದಾರೆ.

‘ಕಾಮಿಡಿ ಸರ್ಕಲ್’ ‌ನಿಮ್ಮ ವೃತ್ತಿಬದುಕಿಗೆ ತಿರುವು ನೀಡಿತು...

ಹೌದು, ಕಾಮಿಡಿ ಶೋಗಳಿಗೆಂದು ವಿವಿಧೆಡೆ ಹೋದಾಗ ಜನರು ಈಗಲೂ ‘ಕಾಮಿಡಿ ಸರ್ಕಲ್‌’ನೊಂದಿಗೆ ಗುರುತಿಸುತ್ತಾರೆ. ಅಲ್ಲಿ ಪ್ರತಿ ಸಂಚಿಕೆಯಲ್ಲೂ ಭಿನ್ನ ಕಾನ್ಸೆಪ್ಟ್‌ಗಳನ್ನು ಮಾಡುತ್ತಿದ್ದೆವು. ಹಿರಿಯ ಹಾಸ್ಯ ಕಲಾವಿದರೂ ನನ್ನೊಂದಿಗೆ ಕಾಣಿಸಿಕೊಳ್ಳುತ್ತಿದ್ದುದು ಪ್ಲಸ್ ಪಾಯಿಂಟ್‌. ಹಾಗಾಗಿ, ವೀಕ್ಷಕರಿಗೆ ಶೋನ ಯಾವ ಹಂತದಲ್ಲೂ ಬೇಸರವಾಗುತ್ತಿರಲಿಲ್ಲ. ‘ಕಾಮಿಡಿ ಸರ್ಕಲ್’ ಕ್ಕಿಕ್ಕಾಗಲು ನಿರ್ದೇಶಕ ವಿಜಯಪ್ರಸಾದ್ ಅವರ ಐಡಿಯಾಗಳು ಪ್ರಮುಖ ಕಾರಣ.

ಇದನ್ನೂ ಓದಿ : ವಿಡಿಯೋ | ಕೆಸಿಸಿ‌ಯಲ್ಲಿ ಆಡಲಿದ್ದಾರೆ ಸೆಹ್ವಾಗ್, ದಿಲ್ಶಾನ್, ಗಿಲ್‌ಕ್ರಿಸ್ಟ್!

ಹಾಸ್ಯಕ್ಕೆ ನಿಮಗೆ ಪ್ರೇರಣೆ ಯಾರು?

ಕನ್ನಡ ಚಿತ್ರರಂಗದ ಶ್ರೇಷ್ಠ ಹಾಸ್ಯ ಕಲಾವಿದರಾದ ಬಾಲಕೃಷ್ಣ, ನರಸಿಂಹರಾಜು ಅವರೇ ನನಗೆ ಪ್ರೇರಣೆ. ಮಾತಿಲ್ಲದೆ ನಗಿಸುವ ಚಾರ್ಲಿ ಚಾಪ್ಲಿನ್ ಅಂದರೆ ನನಗೆ ಬಲು ಇಷ್ಟ. ಶಾಲೆಯಲ್ಲಿ ನಾನು ಮಿಮಿಕ್ರಿ ಮಾಡುತ್ತಿದ್ದರೆ, ನನ್ನನ್ನು ದ್ವೇಷಿಸುವ ಹುಡುಗರೂ ನಗುತ್ತಿದ್ದರು! ಆಗ ತುಂಬಾ ಖುಷಿಯಾಗುತ್ತಿತ್ತು. ಹಾಸ್ಯಕ್ಕಿರುವ ಈ ಶಕ್ತಿಯೇ ಸ್ಫೂರ್ತಿಯಾಯ್ತು ಎನಿಸುತ್ತದೆ.

ನಿಮ್ಮ ಪ್ರಕಾರ ಹಾಸ್ಯವೆಂದರೆ...

ಮೈ-ಕೈ ಆಡಿಸುತ್ತಾ, ಜೋರು ದನಿಯಲ್ಲಿ ಮಾತನಾಡುವ ಹಾಸ್ಯ ಎಲ್ಲರಿಗೂ ರುಚಿಸದು. ಅಶ್ಲೀಲ ಸಂಭಾಷಣೆ ಕೂಡ ಅಭಿರುಚಿ ಹಾಳು ಮಾಡುತ್ತದೆ. ವಿಷಯವೊಂದನ್ನು ಉತ್ತಮ ಟೈಮಿಂಗ್‌ನೊಂದಿಗೆ ದಾಟಿಸಿದಾಗ ನೋಡಿಗರನ್ನು ಮೆಚ್ಚಿಸಬಹುದು. ಇದರ ಜೊತೆಗೆ ಬಾಡಿ ಲಾಗ್ವೇಜ್, ಫೇಷಿಯಲ್ ಎಕ್ಸ್‌ಪ್ರೆಶನ್‌ ಕೂಡ ಹೊಂದಾಣಿಕೆಯಾದರೆ ಹಾಸ್ಯ ಗೆದ್ದಂತೆ. ಮೌನದಲ್ಲಿಯೂ ಹಾಸ್ಯ ಸೃಷ್ಟಿಸಬಹುದು. ಮಾತಿಲ್ಲದೆ ಜನರನ್ನು ನಗಿಸೋದೇ ನಿಜವಾದ ಹಾಸ್ಯ.

ತುಂಬಾ ಚಾಲೆಂಜಿಂಗ್ ಎನಿಸಿದ ಶೋ?

ಕತಾರ್‌ನಲ್ಲಿ ಹಾಸ್ಯ ಕಾರ್ಯಕ್ರಮವೊಂದು ಏರ್ಪಾಡಾಗಿತ್ತು. ನಾನು ವಿವಿಧ ರಾಜಕಾರಣಿಗಳ ಧ್ವನಿ ಅನುಕರಣೆ ಮಾಡುತ್ತಿದ್ದೆ. ಅಲ್ಲಿದ್ದ ಪ್ರೇಕ್ಷಕರು ನೇರವಾಗಿ ನನ್ನನ್ನು ಮಾತನಾಡಿಸತೊಡಗಿದರು. ನಾನು ವಿವಿಧ ರಾಜಕಾರಣಿಗಳ ಧ್ವನಿ, ಹಾವಭಾವಗಳೊಂದಿಗೇ ಅವರಿಗೆ ಉತ್ತರ ನೀಡಬೇಕಿತ್ತು. ನಿಜಕ್ಕೂ ಅದು ಚಾಲೆಂಜಿಂಗ್ ಟಾಸ್ಕ್. ಹಲವೆಡೆ ಶೋಗಳನ್ನು ಕೊಡುವಾಗ ಜನರು ಸಿನಿಮಾ ನಟರ ಧ್ವನಿ ಅನುಕರಿಸುವಂತೆ ಕೋರುತ್ತಾರೆ. ಆಗ ನಾವು ತತ್ತಕ್ಷಣಕ್ಕೆ ಸಂಭಾಷಣೆ ಹೊಂದಿಸಿಕೊಂಡು ತಯಾರಾಗಬೇಕಾಗುತ್ತದೆ.

ಸಿನಿಮಾ?

ಕಾಮಿಡಿ ಶೋಗಳ ಜನಪ್ರಿಯತೆ ಸಿನಿಮಾದಲ್ಲಿ ಅವಕಾಶಗಳನ್ನು ಸೃಷ್ಟಿಸಿತು. ‘ಸೂಪರ್’ ಸಿನಿಮಾದೊಂದಿಗೆ ನಾನು ಬೆಳ್ಳಿತೆರೆಗೆ ಪರಿಚಯವಾದೆ. ಇಪ್ಪತ್ತೈದಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು, ‘ಚಿತ್ರಮಂದಿರದಲ್ಲಿ’ ಸಿನಿಮಾದಲ್ಲಿನ ಪಾತ್ರ ಹೆಸರು ತಂದುಕೊಟ್ಟಿತು. ನಾನು ಅಭಿನಯಿಸಿರುವ ನಾಲ್ಕೈದು ಸಿನಿಮಾಗಳು ತೆರೆಗೆ ಬರಲು ಸಿದ್ಧವಾಗಿವೆ. ಅವಕಾಶ ನೀಡುವ ನಿಟ್ಟಿನಲ್ಲಿ ಸಿನಿಮಾ ಹಾಗೂ ಕಿರುತೆರೆ ಮಾಧ್ಯಮದ ಹಲವರು ನನ್ನ ಮೇಲೆ ಪ್ರೀತಿ ತೋರಿಸಿದ್ದಾರೆ. ನಾನು ಕೂಡ ನಿರ್ದೇಶಕರು ನನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಪಾತ್ರ ನಿರ್ವಹಿಸಿದ್ದೇನೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More