‘ಯೂ ಟರ್ನ್’ ತೆಲುಗು ಸಿನಿಮಾ‌ ಫಸ್ಟ್‌ ಲುಕ್‌ ಟ್ವೀಟ್ ಮಾಡಿದ ಸಮಂತಾ

ಸೂಪರ್‌ಹಿಟ್‌ ಕನ್ನಡ ಸಿನಿಮಾ ‘ಯೂ ಟರ್ನ್‌’ ತೆಲುಗು-ತಮಿಳು ಅವತರಣಿಕೆ ತೆರೆಗೆ ಸಿದ್ಧವಾಗಿದೆ. ಮುಖ್ಯಪಾತ್ರದಲ್ಲಿ ನಟಿಸಿರುವ ಸಮಂತಾ, ಚಿತ್ರದ ಫಸ್ಟ್ ಲುಕ್ ಟ್ವೀಟ್ ಮಾಡಿದ್ದಾರೆ. ಪವನ್‌ ಕುಮಾರ್ ನಿರ್ದೇಶನದ ತೆಲುಗು-ತಮಿಳು ಅವತರಣಿಕೆಗಳು ಸೆಪ್ಟೆಂಬರ್‌ 13ರಂದು ತೆರೆಕಾಣಲಿವೆ

ಪವನ್ ಕುಮಾರ್ ನಿರ್ದೇಶನದಲ್ಲಿ ಎರಡು ವರ್ಷಗಳ ಹಿಂದೆ ತೆರೆಕಂಡ ‘ಯೂ ಟರ್ನ್‌’ ಕನ್ನಡ ಸಿನಿಮಾ ದೊಡ್ಡ ಯಶಸ್ಸು ಕಂಡಿತ್ತು. ಸಾಮಾಜಿಕ ಸಂದೇಶವೊಂದನ್ನು ಥ್ರಿಲ್ಲರ್ ಕಥಾಹಂದರದ ಹಿನ್ನೆಲೆಯಲ್ಲಿ ನಿರ್ದೇಶಕ ಪವನ್‌ ಪರಿಣಾಮಕಾರಿಯಾಗಿ ಹೇಳಿದ್ದರು. ಸಿನಿಮಾ ಬಾಕ್ಸ್ ಅಫೀಸ್‌ನಲ್ಲೂ ಯಶಸ್ವಿಯಾಗುತ್ತಿದ್ದಂತೆ ತೆಲುಗು, ತಮಿಳಿನಲ್ಲೂ ನಿರ್ದೇಶಿಸಲು ಪವನ್‌ಗೆ ಕರೆಬಂದಿತ್ತು. ಎರಡೂ ಅವತರಣಿಕೆಗಳಲ್ಲಿ ಸಮಂತಾ ನಟಿಸುವುದೆಂದು ನಿಗದಿಯಾದರೂ ಚಿತ್ರ ಸೆಟ್ಟೇರುವುದು ತಡವಾಯ್ತು. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ತಮಿಳು, ತೆಲುಗು ಅವತರಣಿಕೆಗಳು ಈ ವೇಳೆಗಾಗಲೇ ಬರಬೇಕಿತ್ತು. ಸಮಂತಾರ ಇತರ ಸಿನಿಮಾ ಹಾಗೂ ನಟ ನಾಗಚೈತನ್ಯ ಜೊತೆಗಿನ ನಟಿಯ ಮದುವೆ ಸಮಾರಂಭದಿಂದಾಗಿ ಸಿನಿಮಾ ತಡವಾಯ್ತು.

ಇಂದು ನಟಿ ಸಮಂತಾ ತಾವು ನಟಿಸುತ್ತಿರುವ ತೆಲುಗು, ತಮಿಳು ದ್ವಿಭಾಷಾ ಸಿನಿಮಾದ ಫಸ್ಟ್‌ ಲುಕ್ ಟ್ವೀಟ್ ಮಾಡಿದ್ದಾರೆ. ಬಿಡುಗಡೆ ದಿನಾಂಕ ಸೆಪ್ಟೆಂಬರ್‌ 13 ಎಂದು ಪೋಸ್ಟರ್‌ನಲ್ಲಿ ನಮೂದಾಗಿದೆ. “ಇದು ನನ್ನ ಅತ್ಯಂತ ಪ್ರೀತಿಯ ಸಿನಿಮಾ. ಸೆಪ್ಟೆಂಬರ್‌ 13ರಂದು ಬಿಡುಗಡೆಯಾಗುವ ಚಿತ್ರ ನೋಡಿದ ನಂತರ ನಿಮ್ಮ ಅಭಿಪ್ರಾಯವೂ ಇದೇ ಆಗಿರಲಿದೆ,” ಎಂದು ಸಮಂತಾ ಟ್ವಿಟರ್‌ ಸಂದೇಶ ಹಾಕಿದ್ದಾರೆ. ರಸ್ತೆ ಹಾಗೂ ಕಟ್ಟಡಗಳ ಹಿನ್ನೆಲೆಯಲ್ಲಿ ಕುತೂಹಲದಿಂದ ದಿಟ್ಟಿಸುವ ಸಮಂತಾರ ಲುಕ್ ಮೊದಲ ನೋಟದಲ್ಲೇ ಗಮನ ಸೆಳೆಯುವಂತಿದೆ. ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಭೂಮಿಕಾ, ರಾಹುಲ್ ರವೀಂದ್ರನ್‌, ಆದಿ ಪಿನಿಸೆಟ್ಟಿ ನಟಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಪವನ್‌ ಕುಮಾರ್ ನಿರ್ದೇಶನದಲ್ಲಿ ತೆರೆಕಂಡ ‘ಯೂ ಟರ್ನ್‌’ ಕನ್ನಡ ಸಿನಿಮಾದ ಮುಖ್ಯಪಾತ್ರದಲ್ಲಿ ಶ್ರದ್ಧಾ ಶ್ರೀನಾಥ್ ನಟಿಸಿದ್ದರು. ರಾಧಿಕಾ ಚೇತನ್‌, ರೋಜರ್ ನಾರಾಯಣ್‌, ದಿಲೀಪ್ ರಾಜ್ ಇತರ ಪಾತ್ರಗಳಲ್ಲಿದ್ದರು. “ತಮಿಳು, ತೆಲುಗು ಎರಡೂ ಭಾಷೆಗಳಲ್ಲಿ ಪ್ರತ್ಯೇಕವಾಗಿ ಸಿನಿಮಾ ಮಾಡಿದ್ದೇವೆ. ಒಟ್ಟು ನಲವತ್ತೊಂಬತ್ತು ದಿನಗಳ ಕಾಲ ಚಿತ್ರೀಕರಣ ಮಾಡಿದ್ದು, ಹೈದರಾಬಾದ್‌ ಮತ್ತು ನಗರದ ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ. ಅಲ್ಲಿಗೆ ಕತೆ ಮತ್ತು ಕ್ಲೈಮ್ಯಾಕ್ಸ್‌ನಲ್ಲಿ ಕೊಂಚ ಮಾರ್ಪಾಟು ಮಾಡಿಕೊಂಡಿದ್ದೇವೆ,” ಎನ್ನುತ್ತಾರೆ ನಿರ್ದೇಶಕ ಪವನ್‌. ಕನ್ನಡ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದ ಪೂರ್ಣಚಂದ್ರ ತೇಜಸ್ವಿ ಅವರೇ ಅಲ್ಲಿಯೂ ಸಂಗೀತ ಮಾಡಿದ್ದಾರೆ. ಉಳಿದಂತೆ ಇತರ ತಾಂತ್ರಿಕ ವಿಭಾಗಗಳಲ್ಲಿ ಅಲ್ಲಿನವರೇ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ : ಗೋಪಿ ಮನದ ಮಾತು | ಹೆಚ್ಚು ಮಾತಿಲ್ಲದೆ ಜನರನ್ನು ನಗಿಸೋದೇ ನಿಜವಾದ ಹಾಸ್ಯ

“ಭಾಷೆಯ ತೊಡಕಾಗಲಿಲ್ಲ. ನನ್ನ ತಾಯಿ ತೆಲುಗಿನವರು. ಹಾಗಾಗಿ ನನಗೆ ತೆಲುಗು ಗೊತ್ತಿತ್ತು. ಸಹಾಯಕರ ನೆರವು ಇತ್ತಾದ್ದರಿಂದ ತಮಿಳು ಹೆಚ್ಚೇನೂ ಕಷ್ಟವೆನಿಸಲಿಲ್ಲ,” ಎನ್ನುವ ಪವನ್ ಅವರೀಗ ಬೆಂಗಳೂರಿನಲ್ಲೇ ಸಿನಿಮಾದ ಎಡಿಟಿಂಗ್‌ ನಡೆಸುತ್ತಿದ್ದಾರೆ. ವಿಶೇಷವೆಂದರೆ, ‘ಯೂ ಟರ್ನ್‌’ ದ್ವಿಭಾಷಾ ಸಿನಿಮಾ ತೆರೆಕಾಣುತ್ತಿರುವ ದಿನಾಂಕದಂದೇ ಸಮಂತಾ ಅವರೇ ನಾಯಕಿಯಾಗಿ ನಟಿಸಿರುವ ‘ಸೀಮಾ ರಾಜಾ’ ತಮಿಳು ಚಿತ್ರವೂ ತೆರೆಕಾಣುತ್ತಿದೆ. ಶಿವಕಾರ್ತಿಕೇಯನ್ ಈ ಚಿತ್ರದ ಹೀರೋ. ‘ರಂಗಸ್ಥಳಂ’, ‘ಇರುಂಬು ತಿರೈ’, ‘ಮಹಾನಟಿ’ ಸಿನಿಮಾಗಳ ಯಶಸ್ಸಿನ ಅಲೆಯಲ್ಲಿರುವ ಸಮಂತಾ, ‘ಯೂ ಟರ್ನ್‌’ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

‘ಯೂ ಟರ್ನ್‌’ ಕನ್ನಡ ಚಿತ್ರದ ಟ್ರೈಲರ್‌

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More