ಟೀಸರ್‌ | ವಿಜಯ್ ದೇವರಕೊಂಡ, ರಶ್ಮಿಕಾ ‘ಗೀತ ಗೋವಿಂದಂ’ ತೆಲುಗು ಸಿನಿಮಾ

ಗ್ರಾಮೀಣ ಹಿನ್ನೆಲೆಯ ಚಿತ್ರಣದೊಂದಿಗೆ ಆರಂಭವಾಗುವ ‘ಗೀತ ಗೋವಿಂದಂ’ ತೆಲುಗು ಸಿನಿಮಾ ಟೀಸರ್‌ ಕುತೂಹಲ ತೆರೆದಿಡುತ್ತದೆ. ವಿಜಯ್ ದೇವರಕೊಂಡ ಜೊತೆ ಕನ್ನಡದ ನಟಿ ರಶ್ಮಿಕಾ ಮಂದಣ್ಣ ನಟಿಸಿರುವ ಈ ಲವ್‌ ಸ್ಟೋರಿ ಆಗಸ್ಟ್ ಎರಡನೇ ವಾರದಲ್ಲಿ ತೆರೆಕಾಣುವ ಸೂಚನೆ ಇದೆ

‘ಅರ್ಜುನ್‌ ರೆಡ್ಡಿ’ ಸಿನಿಮಾ ಖ್ಯಾತಿಯ ವಿಜಯ್ ದೇವರಕೊಂಡ ಅತಿ ಕಡಿಮೆ ಅವಧಿಯಲ್ಲೇ ದಕ್ಷಿಣ ಭಾರತಾದ್ಯಂತ ಜನಪ್ರಿಯತೆ ಗಳಿಸಿದ ನಟ. ಈ ಚಿತ್ರದ ನಂತರ ವಿಜಯ್ ನಟಿಸಿದ್ದ ‘ಮಹಾನಟಿ’ ತೆರೆಕಂಡಿತ್ತು. ‘ಮಹಾನಟಿ’ಯಲ್ಲಿನ ಸಮಂತಾ ಜೊತೆಗಿನ ಅವರ ಪ್ರೇಮ ಸನ್ನಿವೇಶಗಳನ್ನು ಯುವ ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ಇದೀಗ ಅವರ ‘ಗೀತ ಗೋವಿಂದಂ’ ತೆಲುಗು ಸಿನಿಮಾ ತೆರೆಗೆ ಸಿದ್ಧವಾಗಿದೆ. ‘ಚಲೋ’ ಚಿತ್ರದೊಂದಿಗೆ ಟಾಲಿವುಡ್‌ಗೆ ಪದಾರ್ಪಣೆ ಮಾಡಿದ್ದ ಕನ್ನಡತಿ ರಶ್ಮಿಕಾ ಮಂದಣ್ಣ ಅವರ ಎರಡನೇ ತೆಲುಗು ಚಿತ್ರವಿದು. ಕಳೆದ ವಾರ ‘ಗೀತ ಗೋವಿಂದಂ’ ಲಿರಿಕಲ್ ಹಾಡು ಬಂದಿತ್ತು. ಇದೀಗ ಟೀಸರ್ ಬಿಡುಗಡೆಯಾಗಿದೆ.

ಈ ರೊಮ್ಯಾಂಟಿಕ್ ಕಾಮಿಡಿಯಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಪ್ರೇಮಿಗಳಂತೆ ಕಾಣಿಸುತ್ತಾರೆ. ಕನಸಿನ ಸನ್ನಿವೇಶದ ಜೊತೆ ಫ್ಲ್ಯಾಶ್‌ಬ್ಯಾಕ್‌ ಇರುವಂತಿದೆ. ಹಳ್ಳಿಯ ಹಿನ್ನೆಲೆಯೊಂದಿಗೆ ಆರಂಭವಾಗುವ ಟೀಸರ್‌ನಲ್ಲಿ ರಶ್ಮಿಕಾ ಸಾಂಪ್ರದಾಯಿಕ ಉಡುಪಿನಲ್ಲಿ ಗೋಚರಿಸುತ್ತಾರೆ. ಹಿನ್ನೆಲೆಯಲ್ಲಿ ‘ಪೂಜಾ’ ತೆಲುಗು ಸಿನಿಮಾದ ರೊಮ್ಯಾಂಟಿಕ್‌ ಹಾಡು ಕೇಳಿಸುತ್ತದೆ. ‘ಎರಡು ಕನಸು’ ಸಿನಿಮಾದ ರೀಮೇಕ್‌ ಚಿತ್ರ ‘ಪೂಜಾ.’ ಸೂಪರ್‌ಹಿಟ್‌ ‘ಎಂದೆಂದೂ ನಿನ್ನನು ಮರೆತು’ ಟ್ಯೂನ್‌ ಹಿತವಾಗಿದೆ. ಇಲ್ಲಿ ರಶ್ಮಿಕಾ ತನ್ನ ಹುಡುಗನನ್ನು ಹದ್ದುಬಸ್ತಿನಲ್ಲಿಡುವ ಯುವತಿ. ಟೀಸರ್‌ನಲ್ಲಿ ಇಬ್ಬರ ಕೋಳಿಜಗಳದ ಸನ್ನಿವೇಶಗಳೂ ಇವೆ. ಪರಶುರಾಮ್‌ ನಿರ್ದೇಶನದ ಸಿನಿಮಾದ ಬಿಡುಗಡೆ ದಿನಾಂಕವಿನ್ನೂ ನಿಗದಿಯಾಗಿಲ್ಲ. ಆಗಸ್ಟ್ ಎರಡನೇ ವಾರದಲ್ಲಿ ತೆರೆಕಾಣುವ ಸೂಚನೆ ಇದೆ.

ಇದನ್ನೂ ಓದಿ : ಜನುಮದಿನ | ಶಾಟ್‌ ಓಕೆ ಆಗುತ್ತಿದ್ದಂತೆ ಹಂಡೆಯಿಂದ ಹೊರಜಿಗಿದ ಹಾಸ್ಯಚಕ್ರವರ್ತಿ

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ‘ಡಿಯರ್ ಕಾಮ್ರೇಡ್‌’ ತೆಲುಗು ಚಿತ್ರದಲ್ಲೂ ಜೋಡಿಯಾಗಿ ನಟಿಸುತ್ತಿದ್ದು, ಸದ್ಯ ಇದು ಚಿತ್ರೀಕರಣದಲ್ಲಿದೆ. ವಿಜಯ್‌ ಅಭಿನಯದ ಸೂಪರ್‌ನ್ಯಾಚುರಲ್‌ ಥ್ರಿಲ್ಲರ್ ‘ಟ್ಯಾಕ್ಸಿವಾಲಾ’ ತೆಲುಗು ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ರಾಹುಲ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಚಿತ್ರದಲ್ಲಿ ವಿಜಯ್ ಕ್ಯಾಬ್ ಚಾಲಕ. ‘ನೋಟಾ’ ತಮಿಳು ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ. ಮತ್ತೊಂದೆಡೆ, ನಟಿ ರಶ್ಮಿಕಾ ಕೂಡ ಟಾಲಿವುಡ್‌ನಲ್ಲಿ ಅವಕಾಶಗಳನ್ನು ಪಡೆಯುತ್ತಿದ್ದಾರೆ. ‘ದೇವದಾಸ್‌’ ತೆಲುಗು ಚಿತ್ರದಲ್ಲಿ ನಟ ನಾನಿಗೆ ಅವರು ಜೋಡಿಯಾಗಿದ್ದು, ಚಿತ್ರದ ಪ್ರಮುಖ ಪಾತ್ರದಲ್ಲಿ ನಾಗಾರ್ಜುನ ಇದ್ದಾರೆ. ಕನ್ನಡದಲ್ಲಿ ದರ್ಶನ್‌ ಜೊತೆಗಿನ ಅವರ ‘ಯಜಮಾನ’ ಚಿತ್ರೀಕರಣದಲ್ಲಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More