ಕಾಡು ನುಂಗಿದ ಕಳ್ಳ ಊರಿನಲ್ಲಿ ನಡೆಯುತ್ತದೆ ‘ಒಂದಲ್ಲಾ ಎರಡಲ್ಲಾ’ ಕತೆ

ಟೀಸರ್‌ನಲ್ಲಿ ಗಮನ ಸೆಳೆದಿದ್ದ ‘ಒಂದಲ್ಲಾ ಎರಡಲ್ಲಾ’ ಚಿತ್ರತಂಡವೀಗ ವಿಭಿನ್ನ ಪ್ರಚಾರ ತಂತ್ರದಿಂದಲೂ ಸುದ್ದಿಯಾಗುತ್ತಿದೆ. ‘ರಾಮಾ ರಾಮಾ ರೇ’ನಂತಹ ಅಪ್ಪಟ ನೆಲದ ಸಿನಿಮಾ ನಿರ್ದೇಶಿಸಿದ್ದ ಡಿ ಸತ್ಯಪ್ರಕಾಶ್ ಅವರ ಈ ಚಿತ್ರ ಉದ್ಯಮದಲ್ಲಿ ಭರವಸೆ ಮೂಡಿಸಿದ್ದು, ಆಗಸ್ಟ್‌ ತಿಂಗಳಿನಲ್ಲಿ ತೆರೆಕಾಣಲಿದೆ

ತಮ್ಮದೇ ಒಂದು ಕಲಾವಿದರ ಬಳಗ ಕಟ್ಟಿಕೊಂಡು ‘ರಾಮಾ ರಾಮಾ ರೇ’ ನಿರ್ದೇಶಿಸಿದ್ದ ಸತ್ಯಪ್ರಕಾಶ್‌, ಚಿತ್ರರಂಗದ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೊಂದು ಅಪ್ಪಟ ನೆಲದ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಎರಡು ವರ್ಷಗಳ ನಂತರ ವಿಶಿಷ್ಟ ಶೀರ್ಷಿಕೆಯ ‘ಒಂದಲ್ಲಾ ಎರಡಲ್ಲಾ’ ಚಿತ್ರದೊಂದಿಗೆ ಬರುತ್ತಿದ್ದಾರೆ. ಟೀಸರ್‌ನಲ್ಲಿ ಕುತೂಹಲ ಮೂಡಿಸಿದ್ದ ಸತ್ಯಪ್ರಕಾಶ್‌, ಭಿನ್ನ ಪ್ರಚಾರತಂತ್ರಕ್ಕೆ ಮೊರೆಹೋಗಿದ್ದಾರೆ. ಅಪರೂಪದ ಮತ್ತು ಸಂಗ್ರಹಯೋಗ್ಯ ಮಾಹಿತಿ, ಅಂಕಿ-ಅಂಶಗಳೊಂದಿಗೆ ಅವರು ತಮ್ಮ ಸಿನಿಮಾ ಪ್ರೊಮೋಟ್ ಮಾಡುತ್ತಿದ್ದು, ಉದ್ಯಮದವರಿಗೂ ಈ ಮಾದರಿ ಇಷ್ಟವಾಗಿದೆ.

ಇದ್ದಕ್ಕಿದ್ದಂತೆ ಕಾಣೆಯಾಗುವ ಮುಗ್ಧ ಬಾಲಕ ಸಮೀರ. ಕಾಡು ನುಂಗಿದ ಕಳ್ಳ ಊರು, ಮುಗ್ಧ ಬಾಲಕನಿಂದ ಪೇಚಿಗೆ ಸಿಲುಕುವ ಊರಿನ ಜನ ಹೀಗೆ ಚಿತ್ರದ ಕತೆ ಮುಗ್ಧ ಬಾಲಕನ ಸುತ್ತ ಆವರಿಸಿಕೊಳ್ಳುತ್ತದಂತೆ. “ಮುಗ್ಧ ಬಾಲಕನಿಂದ ಪೇಚಿಗೆ ಸಿಲುಕುವ ಊರಜನ ಕೊನೆಗೊಮ್ಮೆ ಆತನ ಮುಗ್ಧತೆಯಿಂದಲೇ ಬದುಕನ್ನು ಪ್ರೀತಿಸುವುದನ್ನು ಕಲಿಯುತ್ತಾರೆ. ಬದುಕು ಬವಣೆಗಳ ಜಂಜಾಟದಲ್ಲಿ ಮುಳುಗಿರುವ ಸಮಾಜಕ್ಕೆ ಚಿತ್ರದಲ್ಲಿ ಒಂದೊಳ್ಳೆ ಸಂದೇಶವಿದೆ,” ಎನ್ನುತ್ತಾರೆ ನಿರ್ದೇಶಕ ಸತ್ಯಪ್ರಕಾಶ್‌.

ಇದನ್ನೂ ಓದಿ : ಜನುಮದಿನ | ಶಾಟ್‌ ಓಕೆ ಆಗುತ್ತಿದ್ದಂತೆ ಹಂಡೆಯಿಂದ ಹೊರಜಿಗಿದ ಹಾಸ್ಯಚಕ್ರವರ್ತಿ

ಚಿತ್ರಕ್ಕೆ ಬಣ್ಣ ಹಚ್ಚಿರುವವರಲ್ಲಿ ಬಹುತೇಕರು ರಂಗಭೂಮಿ ಕಲಾವಿದರೇ ಆಗಿದ್ದಾರೆ. ಚಿತ್ರದಲ್ಲಿ ನಾಲ್ಕು ಗೀತೆಗಳಿದ್ದು, ವಾಸುಕಿ ವೈಭವ್ ಮತ್ತು ನೊಬಿನ್ ಪೌಲ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡುವ ಹಾಡೊಂದಕ್ಕೆ ಅದಿತಿ ಮತ್ತು ಸುನಿದಿ ಇಬ್ಬರು ಪುಟಾಣಿಗಳು ಧ್ವನಿಯಾಗಿದ್ದಾರಂತೆ. ಉಳಿದ ಮೂರು ಗೀತೆಗಳು ಚಿತ್ರದ ಸನ್ನಿವೇಶಗಳನ್ನಾಧರಿಸಿದ್ದು, ವಾಸುಕಿ ದನಿಯಾಗಿದ್ದಾರೆ. ಯಶಸ್ವಿ ‘ಹೆಬ್ಬುಲಿ’ ಸಿನಿಮಾ ನಿರ್ಮಿಸಿದ್ದ ಉಮಾಪತಿ ಚಿತ್ರ ನಿರ್ಮಿಸಿದ್ದಾರೆ. ಮಾಸ್ಟರ್ ಪಿ ವಿ ರೋಹಿತ್ ಮುಖ್ಯ ಪಾತ್ರಧಾರಿ. ಸಾಯಿ ಕೃಷ್ಣ ಕುಡ್ಲ,  ಎಂ ಕೆ ಮಠ, ಮುತ್ತು, ಪ್ರಭುದೇವ್‌ ಹೊಸದುರ್ಗ ಮತ್ತಿರರರು ನಟಿಸಿದ್ದು, ಆಗಸ್ಟ್‌ನಲ್ಲಿ ಚಿತ್ರ ತೆರೆಕಾಣಲಿದೆ.

‘ಒಂದಲ್ಲಾ ಎರಡಲ್ಲಾ’ ಪ್ರೊಮೋಷನಲ್ ವಿಡಿಯೋ

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More