ಜನುಮದಿನ | ಶಾಟ್‌ ಓಕೆ ಆಗುತ್ತಿದ್ದಂತೆ ಹಂಡೆಯಿಂದ ಹೊರಜಿಗಿದ ಹಾಸ್ಯಚಕ್ರವರ್ತಿ

ಜನಪ್ರಿಯ ಹಾಸ್ಯನಟ ನರಸಿಂಹರಾಜು ಅವರ 95ನೇ ಜನ್ಮದಿನವಿಂದು (ಜು 24). ಹಿರಿಯ ನಟಿ ಆರ್ ಟಿ ರಮಾ ಅವರು ನರಸಿಂಹರಾಜು ಅವರೊಂದಿಗಿನ ಚಿತ್ರೀಕರಣದ ಎರಡು ಸಂದರ್ಭಗಳನ್ನು ಸ್ಮರಿಸಿಕೊಂಡಿದ್ದಾರೆ. ಶ್ರೇಷ್ಠ ನಟನ ಕುರಿತ ಸಾಕ್ಷ್ಯಚಿತ್ರ, ಅವರ ಸಿನಿಮಾಗಳ ವಿಡಿಯೋ ತುಣುಕು ಇಲ್ಲಿವೆ

ನರಸಿಂಹರಾಜು ನನ್ನ ನೆಚ್ಚಿನ ಹಾಸ್ಯನಟ. ಅಪ್ಪಟ ಹೃದಯವಂತ ವ್ಯಕ್ತಿ. ತೆರೆ ಮೇಲೆ ಮಾತ್ರವಲ್ಲ, ತೆರೆಯಾಚೆಗೂ ಅವರೊಂದಿಗೆ ಕಾಲ ಕಳೆದ ಕ್ಷಣಗಳು ಮಧುರವೆನಿಸಿವೆ. ‘ಕನ್ಯಕಾಪರಮೇಶ್ವರಿ’ ಸಿನಿಮಾ ಚಿತ್ರೀಕರಣದ ಒಂದು ಸನ್ನಿವೇಶ. ನರಸಿಂಹರಾಜು ನನ್ನ ಪತಿ ಹಾಗೂ ನಟಿ ರಮಾದೇವಿ ನನ್ನ ಅಮ್ಮನಾಗಿ ನಟಿಸುತ್ತಿದ್ದರು. ನನ್ನಮ್ಮನಿಗೆ ಅಳಿಯ ನರಸಿಂಹರಾಜು ಅವರನ್ನು ಕಂಡರಾಗದು. ಆಕೆ ಇಲ್ಲದ ವೇಳೆ ನೋಡಿಕೊಂಡು ನರಸಿಂಹರಾಜು ನಮ್ಮ ಮನೆಗೆ ಬರುತ್ತಾರೆ. ಅಷ್ಟರಲ್ಲಿ ಹೊರಗೆ ಹೋಗಿದ್ದ ಅಮ್ಮ, ಬೆಕ್ಕು ಅಡ್ಡ ಬಂದು ಅಪಶಕುನವಾಯ್ತೆಂದು ಮರಳಿ ಮನೆಗೆ ಬರುತ್ತಾಳೆ. ನಾನು ಅವಸರಕ್ಕೆ ಪತಿ ನರಸಿಂಹರಾಜು ಅವರನ್ನು ದೊಡ್ಡ ನೀರಿನ ಹಂಡೆಯಲ್ಲಿ ಮುಚ್ಚಿಡುತ್ತೇನೆ.

ಬೆಕ್ಕು ಅಡ್ಡ ಬಂದು ಮೈಲಿಗೆಯಾಗಿದೆ ಎಂದು ಅಮ್ಮ ಸ್ನಾನ ಮಾಡಲು ಅಣಿಯಾಗುತ್ತಾಳೆ. ನಾನು ನೀರಿನ ಹಂಡೆಯನ್ನು ಒಲೆ ಮೇಲಿಟ್ಟು ಬೆಂಕಿ ಹಾಕಬೇಕು. ಹಂಡೆ ಒಳಗೆ ನರಸಿಂಹರಾಜು! ಎರಡು ಟೇಕ್‌ನಲ್ಲೂ ಓಕೆಯಾಗದ್ದರಿಂದ ಹಿತ್ತಾಳೆಯ ಹಂಡೆ ಸಿಕ್ಕಾಪಟ್ಟೆ ಬಿಸಿಯಾಗಿತ್ತು. ಒಳಗಿದ್ದ ನರಸಿಂಹರಾಜು ಕೂಗು ಹಾಕತೊಡಗಿದ್ದರು. ಶಾಟ್ ಓಕೆಯಾಗುತ್ತಿದ್ದಂತೆಯೇ ನರಸಿಂಹರಾಜು ಒಮ್ಮೆಗೇ ಹಂಡೆಯಿಂದ ಹೊರಜಿಗಿದದದ್ದು ಈಗಲೂ ಕಣ್ಣಿಗೆ ಕಟ್ಟಿದಂತಿದೆ!

ನರಸಿಂಹರಾಜು ಕುರಿತ ಸಾಕ್ಷ್ಯಚಿತ್ರ

ಕಾಪಾಡಿ ಕಾಪಾಡಿ!: ನರಸಿಂಹರಾಜು ಅವರೊಂದಿಗಿನ ಚಿತ್ರವೊಂದರಲ್ಲಿ ಮತ್ತೊಂದು ಪಜೀತಿ ಎದುರಾಗಿತ್ತು. ಶ್ರೀರಂಗಪಟ್ಟಣದ ಬಳಿಯ ಪಶ್ಚಿಮವಾಹಿನಿ ಹೊಳೆಯಲ್ಲಿ ಚಿತ್ರೀಕರಣ ನಡೆಸುತ್ತಿದ್ದರು. ಹೊಳೆಯಲ್ಲಿ ಬಿದ್ದ ನರಸಿಂಹರಾಜು ಅವರನ್ನು ನಾನು ಕಾಪಾಡುವ ಸನ್ನಿವೇಶ. ಹೊಳೆಯಲ್ಲಿ ನೀರು ಹರಿಯುತ್ತಿದ್ದು ಸೆಳವು ಕೊಂಚ ಹೆಚ್ಚಾಗಿಯೇ ಇತ್ತು. ನರಸಿಂಹರಾಜು ಅವರಿಗೇನೋ ಈಜು ಬರುತ್ತಿತ್ತು. ಅವರನ್ನು ಕಾಪಾಡಬೇಕಿದ್ದ ಈಜಲು ಬಾರದ ನಾನು ಭಯದಿಂದ ನಡುಗತೊಡಗಿದೆ!

ನನ್ನ ಪಡಿಪಾಟಲು ನೋಡಿ ನಿರ್ದೇಶಕರು ಹೊಳೆಯಲ್ಲಿ ಮೂರಡಿ ಆಳವಿದ್ದ ಪ್ರದೇಶದಲ್ಲಿ ಶೂಟಿಂಗ್ ನಡೆಸಲು ಸಜ್ಜಾದರು. ನರಸಿಂಹರಾಜು ಅವರೇನೋ ಸಲೀಸಾಗಿ ಹೊಳೆ ಮಧ್ಯೆ ಹೋಗಿ ನಿಂತು, ನಿರ್ದೇಶಕರ ಅಣತಿಯಂತೆ ‘ಕಾಪಾಡಿ ಕಾಪಾಡಿ’ ಎಂದು ಕೂಗು ಹಾಕಿದರು. ಅವರನ್ನು ಕಾಪಾಡಬೇಕಿದ್ದ ನಾನು ನೀರಿಗಿಳಿದು ಕೊಂಚ ದೂರ ಹೋಗುತ್ತಿದ್ದಂತೆ ಕೂಗತೊಡಗಿದೆ! ಕೊನೆಗೆ ನರಸಿಂಹರಾಜು ಅವರೇ ನನ್ನ ಬಳಿ ಬಂದರು. ನೀರೊಳಗೇ ನನ್ನ ಕೈ ಹಿಡಿದುಕೊಂಡು, ತಾವೇ ಮುಳುಗುತ್ತಿರುವಂತೆ ‘ಆ್ಯಕ್ಷನ್’ ಮಾಡಿದರು. ನಾನು ಧೈರ್ಯ ಮಾಡಿ ಅವರನ್ನು ಕಾಪಾಡುವವಳಂತೆ ನಟಿಸಿದೆ(!). ಅಂತೂ ಇಂತೂ ನಿರ್ದೇಶಕರು ಶಾಟ್ ಓಕೆ ಮಾಡಿದರು. ಇಲ್ಲಿ ಯಾರನ್ನು ಯಾರು ಕಾಪಾಡಿದರು ಎನ್ನುವ ಗೊಂದಲದಿಂದ ನರಸಿಂಹರಾಜು ಮತ್ತು ನಾನು ಇಬ್ಬರೂ ಮನಸಾರೆ ನಕ್ಕೆವು.

ಇದನ್ನೂ ಓದಿ : ಗೋಪಿ ಮನದ ಮಾತು | ಹೆಚ್ಚು ಮಾತಿಲ್ಲದೆ ಜನರನ್ನು ನಗಿಸೋದೇ ನಿಜವಾದ ಹಾಸ್ಯ

ನರಸಿಂಹರಾಜು ಅಭಿನಯದ ಕೆಲವು ಸಿನಿಮಾಗಳ ವಿಡಿಯೋ ತುಣುಕುಗಳು

ಶ್ರೀ ಕೃಷ್ಣದೇವರಾಯ

ಹಸಿರು ತೋರಣ

ಪ್ರತಿಜ್ಞೆ

ವೀರಕೇಸರಿ

ಕಸ್ತೂರಿ ನಿವಾಸ

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More