ಪ್ರಾದೇಶಿಕ ಸೆನ್ಸಾರ್ ಮಂಡಳಿ ವಿರುದ್ಧ ನಿರ್ಮಾಪಕ, ನಿರ್ದೇಶಕರ ಪ್ರತಿಭಟನೆ

ನೀತಿ, ನಿಯಮಗಳನ್ನು ಅನುಸರಿಸದೆ ಸೆನ್ಸಾರ್ ಮಂಡಳಿ ಚಿತ್ರಗಳನ್ನು ಸರ್ಟಿಫೈ ಮಾಡುತ್ತಿದೆ ಎಂದು ಕನ್ನಡದ ನಿರ್ಮಾಪಕರು, ನಿರ್ದೇಶಕರು ಇಂದು ಪ್ರತಿಭಟನೆ ನಡೆಸಿದ್ದಾರೆ. ಸೆನ್ಸಾರ್‌ ಮಂಡಳಿ ಅಧ್ಯಕ್ಷರ ಧೋರಣೆ ಹಾಗೂ ಅವರ ಕಾರ್ಯವೈಖರಿ ಕುರಿತಂತೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ

ಬಿಡುಗಡೆಗೆ ಸಿದ್ಧವಾಗಿರುವ ಹತ್ತಾರು ಕನ್ನಡ ಸಿನಿಮಾಗಳ ನಿರ್ದೇಶಕರು ಹಾಗೂ ನಿರ್ಮಾಪಕರು ಪ್ರಾದೇಶಿಕ ಸೆನ್ಸಾರ್ ಮಂಡಳಿ ವಿರುದ್ಧ ಇಂದು ಪ್ರತಿಭಟನೆ ನಡೆಸಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಅವರು ಸೆನ್ಸಾರ್ ಮಂಡಳಿ ನೀತಿ, ನಿಯಮಗಳು ಹಾಗೂ ಸೆನ್ಸಾರ್ ಮಂಡಳಿ ಅಧ್ಯಕ್ಷರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೆನ್ಸಾರ್‌ ಮಂಡಳಿ ನಿಯಮಗಳನ್ನು ಗಾಳಿಗೆ ತೂರಿದೆ, ಅಧ್ಯಕ್ಷರ ಏಕಚಕ್ರಾಧಿಪತ್ಯದ ನಡೆಯಿಂದಾಗಿ ಕನ್ನಡ ಚಿತ್ರಗಳಿಗೆ ಅನ್ಯಾಯವಾಗುತ್ತಿದೆ ಎನ್ನುವುದು ಅವರ ದೂರು. ಈ ಬಗ್ಗೆ ವಾಣಿಜ್ಯ ಮಂಡಳಿಗೆ ಮನವಿ ಕೊಟ್ಟಿರುವ ಅವರು ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಬಿಡುಗಡೆಗೆ ಸಿದ್ಧವಾಗಿರುವ ‘ಆರೋಹಣ’ ಸಿನಿಮಾದ ನಟ, ನಿರ್ದೇಶಕ ಸುಶೀಲ್‌ ಕುಮಾರ್‌ ಈ ಬಗ್ಗೆ ಮಾತನಾಡಿ, “ನಾವೊಂದು ಕಾನ್ಸೆಪ್ಟ್‌ನೊಂದಿಗೆ ಸಿನಿಮಾ ಮಾಡಿದ್ದೇವೆ. ಸೆನ್ಸಾರ್ ಮಂಡಳಿಯವರು ಇಡಿಯಾಗಿ ಚಿತ್ರದ ಕಾನ್ಸೆಪ್ಟ್ ಗ್ರಹಿಸದೆ ಕ್ಷುಲ್ಲಕ ಕಾರಣ ನೀಡಿ ಎ ಸರ್ಟಿಫಿಕೇಟ್ ನೀಡಿದ್ದಾರೆ. ಈ ಬಗ್ಗೆ ಸೂಕ್ತ ವಿವರಣೆಯೂ ಅವರಿಂದ ಸಿಗುವುದಿಲ್ಲ. ಇಲ್ಲದ ಕಾರಣ ನೀಡಿ ಹೊಸ ಸಿನಿಮಾಗಳಿಗೆ ತೊಂದರೆ ಕೊಡುತ್ತಿದ್ದಾರೆ” ಎನ್ನುತ್ತಾರೆ. ಸೆನ್ಸಾರ್ ಮಂಡಳಿ ಅಧ್ಯಕ್ಷ ಸೀನಪ್ಪನವರು ಕಚೇರಿಯಲ್ಲಿ ತಮಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುವುದೂ ಇಲ್ಲ ಎಂದು ದೂರುವ ಅವರು ಸೆನ್ಸಾರ್‌ ನೀತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಇದನ್ನೂ ಓದಿ : ಕಾಡು ನುಂಗಿದ ಕಳ್ಳ ಊರಿನಲ್ಲಿ ನಡೆಯುತ್ತದೆ ‘ಒಂದಲ್ಲಾ ಎರಡಲ್ಲಾ’ ಕತೆ

“ಸೆನ್ಸಾರ್ ಮಂಡಳಿ ಅಧ್ಯಕ್ಷರಿಗೆ ಸಿನಿಮಾ ನೋಡುವ ಮಾದರಿಯೇ ಗೊತ್ತಿಲ್ಲ. ಅವರದ್ದು ಏಕಚಕ್ರಾಧಿಪತ್ಯ ಧೋರಣೆ. ಈ ಬೆಳವಣಿಗೆಯಿಂದಾಗಿ ಸ್ಯಾಂಡಲ್‌ವುಡ್‌ನ ಹೊಸ ನಿರ್ಮಾಪಕರು, ನಿರ್ದೇಶಕರು ತೊಂದರೆ ಅನುಭವಿಸುವಂತಾಗಿದೆ” ಎನ್ನುವುದು ‘ಆದಿ ಪುರಾಣ’ ಚಿತ್ರದ ನಿರ್ಮಾಪಕ ಶಮಂತ್ ರಾವ್‌ ಅವರ ದೂರು. ಸೆನ್ಸಾರ್ ಮಂಡಳಿಯ ಕಟು ಧೋರಣೆಯಿಂದಾಗಿ ಕಳೆದ ವರ್ಷ ಹಲವಾರು ಸಿನಿಮಾಗಳು ಎ ಸರ್ಟಿಫಿಕೇಟ್‌ ಪಡೆಯುವಂತಾಗಿದೆ ಎಂದು ಅವರು ಅಂಕಿ-ಅಂಶ ನೀಡುತ್ತಾರೆ. “ಪ್ರಭಾವಿ ನಿರ್ಮಾಪಕರು, ನಿರ್ದೇಶಕರು ಹಾಗೂ ನಟರ ಸಿನಿಮಾಗಳಿಗೆ ಯು/ಎ ದಯಪಾಲಿಸುವ ಸೆನ್ಸಾರ್ ಮಂಡಳಿ ಹೊಸಬರೊಂದಿಗೆ ಚೆಲ್ಲಾಟವಾಡುತ್ತಿದೆ. ‘ಕುಮಾರಿ 21f’ ತೆಲುಗು ಸಿನಿಮಾಗೆ ಅಲ್ಲಿ ‘ಎ’ ಸರ್ಟಿಫಿಕೇಟ್ ಕೊಟ್ಟಿದ್ದರು. ಇದರ ಕನ್ನಡ ರೀಮೇಕ್‌ಗೆ ಯು/ಎ ಕೊಟ್ಟಿದ್ದಾರೆ. ಸೆನ್ಸಾರ್ ಮಂಡಳಿಯ ಇತರೆ ಸದಸ್ಯರು ನಮ್ಮ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರೂ ಅಧ್ಯಕ್ಷರದ್ದು ಉದಾಸೀನ ನಿಲುವು” ಎಂದು ಶಮಂತ್‌ ಬೇಸರ ವ್ಯಕ್ತಪಡಿಸುತ್ತಾರೆ.

ಚಿಕ್ಕ, ಪುಟ್ಟ ಕಾರಣಗಳೊಂದಿಗೆ ಎ ಸರ್ಟಿಫಿಕೇಟ್‌ ನೀಡುವ ಸೆನ್ಸಾರ್ ಅಧ್ಯಕ್ಷರು ‌ಚಿತ್ರವನ್ನು ಹಗುರವಾಗಿ ಪರಿಗಣಿಸುತ್ತಿದ್ದಾರೆ ಎನ್ನುವುದು ಹಲವರ ಅಸಮಾಧಾನ. “ಸೆನ್ಸಾರ್ ಕಮಿಟಿ ನಮ್ಮ ಸಿನಿಮಾ ವೀಕ್ಷಿಸುತ್ತಿದ್ದಾಗ ಆಕಸ್ಮಾತಾಗಿ ನಮ್ಮ ಹುಡುಗನೊಬ್ಬ ಅಲ್ಲಿಗೆ ಹೋಗಿದ್ದ. ಚಿತ್ರ ಪ್ರದರ್ಶನಗೊಳ್ಳುತ್ತಿದ್ದರೆ, ಇಬ್ಬರು ಸದಸ್ಯರು ತಮ್ಮ ಪಾಡಿಗೆ ಮೊಬೈಲ್‌ನಲ್ಲಿ ತಲ್ಲೀನರಾಗಿದ್ದರಂತೆ. ವರ್ಷಗಟ್ಟಲೆ ಶ್ರಮಪಟ್ಟು ಸಿನಿಮಾ ಮಾಡಿರುತ್ತೇವೆ. ಇವರು ಗಂಭೀರವಾಗಿ ಪರಿಗಣಿಸಿದೆ ನಮ್ಮಲ್ಲಿ ನಿರಾಸೆ ಮೂಡಿಸುತ್ತಿದ್ದಾರೆ. ವಿನಾಕಾರಣ ಎ ಸರ್ಟಿಫಿಕೇಟ್ ದಯಪಾಲಿಸಿದರೆ ಸಿನಿಮಾಗಳ ಮಾರುಕಟ್ಟೆ ಮೇಲೆ ಹೊಡೆತ ಬೀಳುತ್ತದೆ. ಎ ಸರ್ಟಿಫಿಕೇಟ್ ಚಿತ್ರಗಳನ್ನು ವಿತರಿಸಲು ವಿತರಕರು ಹಿಂಜರಿಯುತ್ತಾರೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಸ್ಲಾಟ್‌ ಸಿಗೋಲ್ಲ, ಸಬ್ಸಿಡಿಗೆ ತೊಂದರೆಯಾಗುತ್ತದೆ” ಎನ್ನುತ್ತಾರೆ ‘ಆರೋಹಣ’ ಸಿನಿಮಾದ ನಟ, ನಿರ್ದೇಶಕ ಸುಶೀಲ್‌ ಕುಮಾರ್. ರಿವೈಸಿಂಗ್ ಕಮಿಟಿಯಲ್ಲೂ ಇದೇ ರೀತಿ ಆಗುವುದರಿಂದ ತಾವು ಟ್ರಿಬ್ಯೂನಲ್ (ದಿಲ್ಲಿ) ಮೊರೆ‌ ಹೋಗುವುದಾಗಿ ಹೇಳುತ್ತಾರೆ ನಿರ್ಮಾಪಕ ಶಮಂತ್‌.

ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷ ಚಿನ್ನೇಗೌಡರು ಮಾತನಾಡಿ, “ನಾನು ಕಾರ್ಯನಿಮಿತ್ತ ಪ್ರವಾಸದಲ್ಲಿದ್ದೇನೆ. ನಿರ್ಮಾಪಕರು ಹಾಗೂ ನಿರ್ದೇಶಕರು ಸೆನ್ಸಾರ್ ಮಂಡಳಿ ಕ್ರಮ ಖಂಡಿಸಿ ಪ್ರತಿಭಟಿಸಿರುವುದು ನನ್ನ ಗಮನಕ್ಕೆ ಬಂದಿದೆ. ಕಚೇರಿಯಲ್ಲಿ ಸಂಬಂಧಿಸಿದವರು ಮನವಿ ಪತ್ರ ಸ್ವೀಕರಿಸಿದ್ದಾರೆ. ಬೆಂಗಳೂರಿಗೆ ಮರಳಿದ ನಂತರ ಈ ಬಗ್ಗೆ ಏನು ಮಾಡಬಹುದು ಎಂದು ನೋಡುತ್ತೇನೆ” ಎನ್ನುತ್ತಾರೆ. ಈ ಬೆಳವಣಿಗೆಗಳ ಕುರಿತಾಗಿ ಸೆನ್ಸಾರ್ ಮಂಡಳಿ ಅಧ್ಯಕ್ಷರ ಪ್ರತಿಕ್ರಿಯೆಗೆ ‘ದಿ ಸ್ಟೇಟ್‌’ ಪ್ರಯತ್ನಿಸಿದಾಗ, ಅವರು ಸಂಪರ್ಕಕಕ್ಕೆ ಸಿಗಲಿಲ್ಲ. ಸೆನ್ಸಾರ್ ವಿರುದ್ಧದ ನಡೆ ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲೇನಲ್ಲ. ಈ ಬಾರಿ ಮುಂದೆ ಏನೆಲ್ಲಾ ಬೆಳವಣಿಗೆಗಳಾಗಲಿವೆ ಎಂದು ನೋಡಬೇಕು.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More